ಲಗಾಟಿ ಹೊಡೆದ ಲಾಲ್ ಸಲಾಂ ; ರಜಿನಿ ಇಮೇಜ್ ಡ್ಯಾಮೇಜ್ ಮಾಡಲು ಮುತ್ತಿನಂತ ಮಕ್ಕಳು ಸಾಕು..!
ನೋ ಡೌಟ್.. ರಜನಿಕಾಂತ್ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್. ದೇಶ ಮಾತ್ರ ಅಲ್ಲ ವಿದೇಶದಲ್ಲೂ ಕೂಡ ಇವರನ್ನ ಆರಾಧಿಸುವ ಅಭಿಮಾನಿಗಳಿದ್ದಾರೆ. ಇವರ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆದರೆ, ವಿಪರ್ಯಾಸ ಕೆಲವೊಮ್ಮೆ ಈ ಜನಪ್ರಿಯತೆ ಗೊತ್ತಿಲ್ಲದಂತೆ ಮುಳುವಾಗುತ್ತೆ.ರಜಿನಿ ವಿಚಾರದಲ್ಲಿ ಇದು ಸದ್ಯಕ್ಕೆ ಅಕ್ಷರಶಃ ನಿಜಾ ಆಗಿದೆ
ಹೌದು. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮ ವಿಭೂಷಣ, ಎನ್‌ಟಿಆರ್ ರಾಷ್ಟ್ರೀಯ ಪ್ರಶಸ್ತಿ, ಪದ್ಮ ಭೂಷಣ ಹೀಗೆ ಹತ್ತಾರು ಪ್ರಶಸ್ತಿ ಪಡೆದು, ತಲೈವಾ, ತಲೈವರ್. ಸೂಪರ್ ಸ್ಟಾರ್ ಇತ್ಯಾದಿ ಬಿರುದು ಬಾವಲಿ ಪಡೆದ ರಜನಿಕಾಂತ್ ಇತ್ತೀಚಿಗೆ ಲಾಲ್ ಸಲಾಂ ಎಂಬ ಸಿನಿಮಾವನ್ನ ಮಾಡಿದ್ದರು.

ದುರಂತ ಆ ಚಿತ್ರವನ್ನ ಬೇರೆ ಯಾರು ಅಲ್ಲ ಬದಲಿಗೆ ರಜಿನಿ ಪುತ್ರಿ ಐಶ್ವರ್ಯ ನಿರ್ದೇಶಿಸಿದ್ದರು. ಆದರೆ ಕ್ರಿಕೆಟ್ಟೂ ಹಾಗೂ ಮತೀಯ ಗಲಭೆ ಸುತ್ತ ಸುತ್ತಲಾಗಿದ್ದ ಲಾಲ್ ಸಲಾಂ ಚಿತ್ರವನ್ನ ಪ್ರೇಕ್ಷಕರು ತಿರುಗಿಯೂ ನೋಡಲಿಲ್ಲ. ರಜಿನಿಕಾಂತ್ ಎಂಬ ಬ್ರ್ಯಾಂಡ್ ನ ಇಟ್ಕೊಂಡು ನಾನಾ ರೀತಿಯ ಪ್ರಚಾರ ಮಾಡಿದರು ಚಿತ್ರದ ಮೊದಲ ದಿನದ ಗಳಿಕೆ ಐದು ಕೋಟಿ ಗಡಿಯನ್ನು ದಾಟಲಿಲ್ಲ.
ನಿಮಗೆ ಗೊತ್ತಿರಲಿ. ರಜಿನಿಕಾಂತ್ ಗೆ ಈಗ 73ರ ಪ್ರಾಯ. ಇಲ್ಲಿಯವರೆಗೆ ಹತ್ತು ಹಲವು ಏರಿಳಿತವನ್ನ ಈ ಸೂಪರ್ ಸ್ಟಾರ್ ಕಂಡಿದ್ದಾರೆ. ಸೋಲು ಗೆಲುವನ್ನ ನೋಡಿದ್ದಾರೆ. ಆದರೆ, ಬಾಬಾ ಚಿತ್ರವನ್ನ ಹೊರತು ಪಡಿಸಿ, ರಜಿನಿಯ ಹೆಸರಿನಲ್ಲಿ ಬಂದ ಯಾವ ಚಿತ್ರವೂ ಕೂಡ ಇಷ್ಟೊಂದು ಕಳಪೆ ಪ್ರದರ್ಶನವನ್ನ ಕಂಡಿರಲಿಲ್ಲ.

ಯಾಕೆಂದರೆ ರಜಿನಿಯ ಫೇಸ್ ವ್ಯಾಲ್ಯೂ ಅಂಥಹದ್ದು. ರಜಿನಿ ಹೀಗೆ ಬಂದು ಹಾಗೇ ಹೋದರೆ ಸಾಕು ಕೋಟಿ ಮಳೆಯಾಗುತ್ತೆ ಅನ್ನುವ ಮಾತು ಇದೆ. ಅಂಥದ್ದರಲ್ಲಿ ಲಾಲ್ ಸಲಾಂ ಇಲ್ಲಿಯವರೆಗೆ ಕೇವಲ 15 ಕೋಟಿಯನ್ನಷ್ಟೇ ಗಳಿಸಿದೆ. ಇದಕ್ಕಿಂತ ದುರಂತ ಇನ್ನೆಲ್ಲಿದೆ.
ಈ ಕಾರಣಕ್ಕೆ ರಜಿನಿಕಾಂತ್ ನೆಮ್ಮದಿಗೆ ಕೊಳ್ಳಿ ಇಡಲು, ಹೊರಗಿನವರು ಬೇಕಿಲ್ಲ. ಅವರ ಇಬ್ಬರು ಮಕ್ಕಳೇ ಸಾಕು ಎಂಬ ಮಾತು ಇದೀಗ ಪಕ್ಕದ ಚೆನೈನಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಮನೆಯವರ ಈ ಆಟಾಟೋಪವನ್ನ ಸಹಿಸಲಾಗದೇ ರಜಿನಿ, ಆಗಾಗ ಹಿಮಾಲಯಕ್ಕೆ ತೆರಳಿ ತಲೆ ಮರೆಸಿಕೊಂಡು, ನೆಮ್ಮದಿಯನ್ನ ಕಂಡುಕೊಳ್ಳುವ ಪ್ರಯತ್ನವನ್ನ ಮಾಡ್ತಾರೆ ಎಂದು ಅನೇಕರು ವ್ಯಂಗ್ಯವನ್ನೂ ಮಾಡುತ್ತಿದ್ದಾರೆ.

ಕೊಚ್ಚಾಡಿಯನ್ ಎಂಬ ಬೊಂಬೆ ಸಿನಿಮಾ ಮಾಡಿದ್ದರು ಸೌಂದರ್ಯ.
ಲಾಲ್ ಸಲಾಂ ಚಿತ್ರದ ಮೂಲಕ ತಂದೆಯ ಇಮೇಜ್ ನ ಐಶ್ವರ್ಯ ಈಗ ಡ್ಯಾಮೇಜ್ ಮಾಡಿದ್ದರೆ, ರಜಿನಿಯ ಕಿರಿಯ ಪುತ್ರಿ ಸೌಂದರ್ಯ 2014ರಲ್ಲಿಯೇ ಈ ಮಹತ್ಕಾರ್ಯ ಮಾಡಿದ್ದರು. ಇಡೀ ಸಿನಿಮಾಗೆ ಕಲಾವಿದರನ್ನ ಬಳಿಸಿಕೊಂಡು ಚಿತ್ರೀಕರಿಸಿ ಅದನ್ನ ಆನಿಮೇಷನ್ ರೂಪಕ್ಕೆ ಬದಲಿಸಿದ್ದರು.
ಇದಕ್ಕೆ 125 ಕೋಟಿ ಹಣವನ್ನೂ ಸುರಿದಿದ್ದರು. ಆದರೆ ಚಿತ್ರ ನೋಡಿದವರು ಇದು ಬೊಂಬೆಯಾಟವಯ್ಯ ಎಂದರು. ಪರಿಣಾಮ ನೆಗೆಟಿವ್ ರಿವ್ಯೂವ್ ಮಳೆಯಲ್ಲಿ ಕೊಚ್ಚಾಡಿಯನ್ ಕೊಚ್ಚಿಕೊಂಡು ಹೋಯಿತು. ಆ ನಂತರ ಮತ್ತೆ ಮೈ ಕೊಡವಿ ಎದ್ದೇಳಲು ರಜಿನಿಗೆ ಎರಡು ವರ್ಷವೇ ಬೇಕಾಯಿತು.

ಈಗ ಲಾಲ್ ಸಲಾಂ ಚಿತ್ರದ ಮೂಲಕ ಐಶ್ವರ್ಯ ಮತ್ತೆ ರಜಿನಿಕಾಂತ್ ಹೆಸರಿಗೆ ಧಕ್ಕೆ ತಂದಿದ್ದಾರೆ. ಜೈಲರ್ ಚಿತ್ರದ ಮೂಲಕ ರಜಿನಿಕಾಂತ್ ಪುಟಿದೆದ್ದಿದ್ದರು. ಇಳಯ ದಳಪತಿ ವಿಜಯ್ ಅಭಿನಯದ ಲಿಯೋ ಚಿತ್ರಕ್ಕೆ ಸೆಡ್ಡು ಹೊಡೆದು ಚರಿತ್ರೆಯನ್ನ ಸೃಷ್ಟಿಸಿದ್ದರು. ರಜಿನಿ ಇನ್ನೂ ಜೈಲರ್ ಗುಂಗಿನಿಂದ ಆಚೆ ಬಂದಿಲ್ಲ. ಅಷ್ಟರಲ್ಲಿ ಪುತ್ರಿಯಿಂದ ರಜಿನಿಗೆ ಸೋಲಿನ ಆಘಾತ ಉಂಟಾಗಿದೆ.
ಈ ಕಾರಣಕ್ಕೆ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಸಾಮ್ರಾಜ್ಯವನ್ನ ಮುಳುಗಿಸಲು, ಹೆಸರನ್ನ ಅಳಿಸಲು, ಅದೃಷ್ಟವನ್ನ ಹಾಳು ಮಾಡಲು ಬೇರೆ ಯಾರು ಬೇಡ ಅವರ ಇಬ್ಬರು ಪುತ್ರಿಯರೇ ಸಾಕು ಎಂಬ ಮಾತು ಈಗ ತಮಿಳುನಾಡಿನಲ್ಲಿ ಕೇಳಿ ಬರುತ್ತಿದೆ. ಲಾಲ್ ಸಲಾಂ ಚಿತ್ರದ ಗಳಿಕೆಯನ್ನ ನೋಡಿ ಅಲ್ಲಿನ ಸ್ಟಾರ್ ಗಳು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ ಎಂಬ ಸುದ್ದಿ ಕೂಡ ಗಾಳಿಯಲ್ಲಿ ತೇಲುತ್ತಿದೆ


Click it and Unblock the Notifications











