ನನ್ನ ತಂದೆ ಸಂಘಿಯಲ್ಲ : ಪಾ.ರಂಜಿತ್ ಗೆ ರಜಿನಿ ಪುತ್ರಿ ತಿರುಗೇಟು
No Doubt.. ರಜಿನಿಕಾಂತ್ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್. ಇವತ್ತು ಭಾರತೀಯ ಸಿನಿಮಾಗಳ ಲೆಕ್ಕಾಚಾರದ್ದು ಒಂದು ತೂಕವಾದ್ರೆ, ರಜಿನಿಕಾಂತ್ ಸಿನಿಮಾದ ಲೆಕ್ಕಾಚಾರದ್ದೇ ಮತ್ತೊಂದು ತೂಕ. ರಜಿನಿಕಾಂತ್ ಜೊತೆಗೆ ಹೋಲಿಕೆ ಮಾಡೋದಕ್ಕೆ ಬೇರಾವುದೇ ಸ್ಟಾರ್ ಗಳಿಗಿರಲಿ ಬೇರೆ ಚಿತ್ರೋದ್ಯಮಗಳಿಗೂ ಆಗೋದಿಲ್ಲ. ಒಂದು ಸಿನಿಮಾ ಇಂಡಸ್ಟ್ರಿ ಒಂದು ವರ್ಷವಿಡಿ ದುಡಿಯೋದನ್ನ ರಜಿನಿ ನಾಮಬಲದ ಒಂದೇ ಒಂದು ಸಿನಿಮಾ ದುಡಿಯುತ್ವೆ. ಅದು, ರಜಿನಿ ಎಂಬ ಹೆಸರಿಗಿರುವ ಶಕ್ತಿ. ಇನ್ನೂ ರಜಿನಿ ಚಿತ್ರರಂಗಕ್ಕೆ ಬಂದು ನಲವತ್ತೈದಕ್ಕೂ ಅಧಿಕ ವಸಂತಗಳೇ ಕಳೆದಿವೆ. ವಯಸ್ಸು ಈಗ 70ರ ಗಡಿಯನ್ನ ದಾಟಿದೆ. ಆದರೂ ರಜಿನಿಯ ಬೇಡಿಕೆ ಕಡಿಮೆಯಾಗಿಲ್ಲ. ಇವತ್ತು ಕೂಡ ರಜಿನಿ ಬಿಡುವಿರದ ನಟನಾಗಿಯೇ ಗುರುತಿಸಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ಎಲ್ಲವನ್ನೂ ಭೇದಿಸಿ ಸಾಧಿಸಿರುವ ರಜಿನಿ, ರಾಜಕೀಯದ ಚಕ್ರವ್ಯೂಹ ಭೇದಿಸಲು ಸಾಧ್ಯ ಆಗಲಿಲ್ಲ. ಅದಕ್ಕೆ ನಾನಾ ಕಾರಣಗಳಿವೆಯಾದ್ರೂ, ಅನೇಕರು ರಜಿನಿ ಬಿ.ಜೆ.ಪಿಯ ಬಿ-ಟೀಮ್ ನ ಪ್ರಮುಖ ನಾಯಕ ಎಂದೇ ಅಂದುಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ರಜಿನಿ ಮೊನ್ನೆ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ್ ಪಡೆದ ಮೇಲೆ ಅನೇಕರು ರಜಿನಿ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಆ ಪೈಕಿ ರಜಿನಿಯ ಎರಡು ಚಿತ್ರಗಳನ್ನ ನಿರ್ದೇಶಿಸಿದ್ದ ಪಾ.ರಂಜಿತ್ ಕೂಡ ಒಬ್ಬರು.

ಮೊನ್ನೆಯಷ್ಟೇ ರಜನಿ ಕುರಿತಂತೆ ಮಾತನಾಡಿದ್ದ ಪಾ.ರಂಜಿತ್, 'ರಜನಿಕಾಂತ್ ಅಯೋಧ್ಯೆಗೆ ಹೋಗಿದ್ದು, ರಾಮನ ದರ್ಶನ ಪಡೆದದ್ದು ತಪ್ಪಲ್ಲ. ಆದರೆ, 500 ವರ್ಷಗಳ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಹೇಳದ್ದನ್ನು ನಾನು ಒಪ್ಪಲಾರೆ. ಇದರ ಹಿಂದಿನ ರಾಜಕಾರಣವನ್ನು ಪ್ರಶ್ನೆ ಮಾಡಬೇಕು. ಸಮಸ್ಯೆ ಮತ್ತು ಪರಿಹಾರ ಎನ್ನುವುದನ್ನು ನಾನು ಟೀಕಿಸುತ್ತೇನೆ' ಎಂದಿದ್ದರು.
ಈಗ ಪಾ.ರಂಜಿತ್ ಅವರ ಈ ಹೇಳಿಕೆಗೆ ರಜಿನಿ ಪುತ್ರಿ ಐಶ್ವರ್ಯ ಉತ್ತರವನ್ನ ಕೊಟ್ಟಿದ್ದಾರೆ. ನನ್ನ ತಂದೆ ಸಂಘಿಯಲ್ಲ ಎಂದು ಗುಡುಗಿದ್ದಾರೆ. ಹೌದು. ಐಶ್ವರ್ಯ ನಿರ್ದೇಶನದ ಲಾಲ್ ಸಲಾಂ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ಪ್ರಚಾರಕ್ಕೆ ಚಾಲನೆಯನ್ನೂ ನೀಡಲಾಗಿದೆ. ಇದರ ಮೊದಲ ಭಾಗವೆಂಬಂತೆ ನಿನ್ನೆ ಚೆನ್ನೈನ ಶ್ರೀ ಸಾಯಿರಾಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಲಾಲ್ ಸಲಾಂ ಚಿತ್ರದ ಅದ್ದೂರಿ ಆಡಿಯೋ ಬಿಡುಗಡೆ ಸಮಾರಂಭ ನೆರವೇರಿದೆ.

ಇದೇ ಸಮಾರಂಭದಲ್ಲಿ ಮಾತನಾಡಿರುವ ಐಶ್ವರ್ಯ, ಸಾಮಾನ್ಯವಾಗಿ ನಾನು ಸಾಮಾಜಿಕ ಜಾಲತಾಣದಿಂದ ದೂರ ಉಳಿಯುತ್ತೇನೆ. ಆದರೆ ನನ್ನ ತಂಡದವರು ಏನಾಗುತ್ತಿದೆ ಎನ್ನುವುದರ ಬಗ್ಗೆ ನನಗೆ ಪ್ರತಿ ಕ್ಷಣ ಮಾಹಿತಿ ನೀಡುತ್ತಾನೇ ಇರುತ್ತಾರೆ. ಇದನ್ನೆಲ್ಲ ನೋಡಿ ನನಗೆ ನಿಜವಾಗಿಯೂ ಸಿಟ್ಟು ಬರುತ್ತದೆ. ನಾವು ಮನುಷ್ಯರು. ಇತ್ತೀಚಿನ ದಿನಗಳಲ್ಲಿ ಅನೇಕರು ನನ್ನ ತಂದೆಯನ್ನ ಸಂಘಿ ಎಂದು ಕರೆಯುತ್ತಿದ್ದಾರೆ. ಅದರ ಅರ್ಥವೇನೆಂದು ನನಗೆ ತಿಳಿದಿರಲಿಲ್ಲ. ನಂತರ ನಾನು ಸಂಘಿ ಎಂದರೆ ಏನು ಎಂದು ಕೇಳಿದೆ. ಆಗ ನಿರ್ದಿಷ್ಟ ರಾಜಕೀಯ ಪಕ್ಷವನ್ನ ಬೆಂಬಲಿಸುವವರನ್ನ ಸಂಘಿ ಎಂದು ಕರೆಯುತ್ತಾರೆ ಎಂಬ ಉತ್ತರ ನನಗೆ ಸಿಕ್ಕಿತು. ಈ ವೇದಿಕೆಯ ಮೂಲಕ ನಾನು ಇಲ್ಲಿ ಸ್ಪಷ್ಟ ಪಡಿಸಲು ಬಯಸುತ್ತೇನೆ. ರಜಿನಿಕಾಂತ್ ಒಬ್ಬ ಸಂಘಿ ಅಲ್ಲ. ಅವರು ಸಂಘಿ ಆಗಿದ್ದರೆ ನನ್ನ ಲಾಲ್ ಸಲಾಂ ಸಿನಿಮಾ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಲಾಲ್ ಸಲಾಂ ಸಿನಿಮಾ ಬಗ್ಗೆ
ಲಾಲ್ ಸಲಾಂ ಚಿತ್ರಕ್ಕೆ ಐಶ್ವರ್ಯ ರಜಿನಿಕಾಂತ್ ನಿರ್ದೇಶನವಿದೆ. ವಿಷ್ಣು ವಿಶಾಲ್, ವಿಕ್ರಾಂತ್ ಜೊತೆ ಚಿತ್ರದಲ್ಲಿ ರಜಿನಿಕಾಂತ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಫೆಬ್ರುವರಿ 09ರಂದು ಚಿತ್ರ ತೆರೆಗೆ ಬರ್ತಿದ್ದು, ಲಾಲ್ ಸಲಾಂ ಸಿನಿಮಾ ಗೆಲ್ಲುತ್ತೆ ಅನ್ನುವ ವಿಶ್ವಾಸ ಕಾಲಿವುಡ್ ಪಂಡಿತರಿಗಿದೆ.


Click it and Unblock the Notifications











