Rajinikanth: ಲೋಕೇಶ್ ಕನಕರಾಜ್ ಐಡಿಯಾ ಕದ್ದುಬಿಟ್ರಾ ಸೂಪರ್ ಸ್ಟಾರ್? ತಲೈವರ್171 ಚಿತ್ರ ನಿಂತೇ ಹೋಯ್ತಾ?
ಸೋಶಿಯಲ್ ಮೀಡಿಯಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ದಳಪತಿ ವಿಜಯ್ ಫ್ಯಾನ್ಸ್ ವಾರ್ ತಾರಕ್ಕಕ್ಕೇರಿದೆ. ಸೂಪರ್ ಸ್ಟಾರ್ ಟೈಟಲ್ ವಿಚಾರವಾಗಿ ಕೆಲ ದಿನಗಳಿಂದ ಫ್ಯಾನ್ಸ್ ನಡುವೆ ಕೆಸರೆರಚಾಟ ನಡೀತಿದೆ. 'ಜೈಲರ್' ಆಡಿಯೋ ಲಾಂಚ್ ವೇದಿಕೆಯಲ್ಲಿ ತಲೈವಾ ಹೇಳಿದ ಗರುಡ- ಕಾಗೆ ಕತೆ ಅದಕ್ಕೆ ತುಪ್ಪ ಸುರಿದಂತಾಗಿತ್ತು. ಅಲ್ಲೇ ರಜನಿ ಸ್ಪಷ್ಟನೆ ಕೊಟ್ಟರೂ ಪ್ರಯೋಜನವಾಗಲಿಲ್ಲ.
ಕಳೆದೆರಡು ದಿನಗಳಿಂದ ಟ್ವಿಟ್ಟರ್‌ನಲ್ಲಿ ಹೊಸ ಚರ್ಚೆ ಶುರುವಾಗಿದೆ. ತಲೈವರ್171 ಸಿನಿಮಾ ವಿಚಾರವಾಗಿ ಭಾರೀ ಗೊಂದಲ ಶುರುವಾಗಿದೆ. 'ಜೈಲರ್' ಬಳಿಕ ರಜನಿಕಾಂತ್ 'ಲಾಲ್ ಸಲಾಂ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ನಂತರ ಜ್ಞಾನವೇಲ್ ನಿರ್ದೇಶನದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಎರಡೂ ಸಿನಿಮಾಗಳು ಮುಗಿದ ಬಳಿಕ ಕಾಲಿವುಡ್ ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ತಲೈವಾ ನಟಿಸೋಕೆ ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ.

ಈಗಾಗಲೇ ರಜನಿಗೆ ಲೋಕೇಶ್ ಕತೆ ಕೂಡ ಹೇಳಿದ್ದು ಅದು ತಲೈವಾ ನಟನೆಯ 171ನೇ ಸಿನಿಮಾ ಆಗಲಿದೆಯಂತೆ. ತಲೈವರ್171 ಸಿನಿಮಾ ಶೀಘ್ರದಲ್ಲೇ ಅಧಿಕೃತವಾಗಿ ಘೋಷಣೆ ಆಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ದಿಢೀರನೆ ಈ ಸಿನಿಮಾ ನಿಂತು ಹೋಯಿತು, ಅದಕ್ಕೆ ಸ್ವತಃ ರಜನಿಕಾಂತ್ ಕಾರಣ ಎನ್ನುವ ಸುಳ್ಳು ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ತೇಲಿಬಿಡಲಾಗುತ್ತಿದೆ. ದಳಪತಿ ವಿಜಯ್ ಫ್ಯಾನ್ಸ್ ಈ ರೀತಿ ಕ್ಯಾತೆ ತೆಗೆದಿದ್ದಾರೆ ಎಂದು ಸೂಪರ್ ಸ್ಟಾರ್ ಫ್ಯಾನ್ಸ್ ಆರೋಪಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ಈಗ ಹಾಟ್ ಟಾಪಿಕ್ ಆಗಿದೆ.
ಫೇಕ್ ಅಕೌಂಟ್‌ಗಳನ್ನು ಕ್ರಿಯೇಟ್ ಮಾಡಿ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅದನ್ನು ನಂಬಿ ಅಭಿಮಾನಿಗಳು ಕೆಸರೆರಚಾಟ ನಡೆಸುವಂತಾಗಿದೆ. ಬಹಳ ಹಿಂದೆಯೇ ರಜನಿಕಾಂತ್‌ಗೆ ಲೋಕೇಶ್ ಕನಕರಾಜ್ ಕಥೆ ಹೇಳಿದ್ದರು. ಅದನ್ನು ಒಪ್ಪಿ ಫೈನಲ್ ಮಾಡಲಾಗಿತ್ತು. ಕತೆ ಹೇಳುವಾಗ ಲೋಕೇಶ್ ಸ್ನಿಪರ್ ಸೀಕ್ವೆನ್ಸ್ ಐಸಿಯಾ ಹೇಳಿದ್ದರಂತೆ. ಆದರೆ ಅದೇ ಸನ್ನಿವೇಶ 'ಜೈಲರ್' ಚಿತ್ರದಲ್ಲಿದೆ. ಸ್ವತಃ ರಜನಿ ಇದನ್ನು ನೆಲ್ಸನ್‌ಗೆ ಹೇಳಿ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ತೇಲಿ ಬಿಡಲಾಗಿದೆ. ಇನ್ನು 'ಜೈಲರ್' ಕತೆಗೂ ತಾನು ಮಾಡಿಕೊಂಡ ಕತೆಗೂ ಬಹಳ ಸಾಮ್ಯತೆಯಿದೆ ಎಂದು ಲೋಕೇಶ್ ಈ ಚಿತ್ರದಿಂದ ಹೊರನಡೆದಿದ್ದಾರೆ ಎನ್ನುವ ಅರ್ಥವಿಲ್ಲದ ವದಂತಿಗಳನ್ನು ಹಬ್ಬಿಸಲಾಗಿದೆ. ಈ ವಿಚಾರ ರಜನಿ- ವಿಜಯ್ ಫ್ಯಾನ್ಸ್ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ.

ನಿನ್ನೆ(ಸೆಪ್ಟೆಂಬರ್ 10) ಇಡೀ ದಿನ ಇದೇ ಟಾಪಿಕ್ ಟ್ವಿಟ್ಟರ್‌ನಲ್ಲಿ ಭಾರೀ ಸದ್ದು ಮಾಡಿತ್ತು. ಪರ ವಿರೋಧ ಚರ್ಚೆಗಳು ನಡೀತು. ಇದೆಲ್ಲದರ ನಡುವೆ ವಿಜಯ್ - ಲೋಕೇಶ್ ಜೋಡಿಯ 'ಲಿಯೋ' ಸಿನಿಮಾ ಬಗ್ಗೆಯೂ ಇಂತದ್ದೇ ಗಾಳಿಸುದ್ದಿ ಹರಿದಾಡುತ್ತಿದೆ. 'ಲಿಯೋ' ಔಟ್‌ಫುಟ್ ನೋಡಿ ಖುದ್ದು ಲೋಕೇಶ್ ಬೇಸರಗೊಂಡಿದ್ದಾರೆ. ಅದೇ ಕಾರಣಕ್ಕೆ ಈ ಸಿನಿಮಾ ಸಹವಾಸ ಸಾಕು ಎಂದು ತಲೈವರ್171 ಸಿನಿಮಾ ಕಡೆ ಮುಖ ಮಾಡಿದ್ದಾರೆ ಎನ್ನುವ ಟಾಪಿಕ್ ಚರ್ಚೆಗೆ ಬಂದಿದೆ. ರಜನಿಕಾಂತ್ ಅಭಿಮಾನಿಗಳು ಯಾವುದನ್ನು ಒಪ್ಪಲು ಸಿದ್ಧರಿಲ್ಲ. ಫೆಬ್ರವರಿಯಲ್ಲಿ ತಲೈವರ್171 ಸಿನಿಮಾ ಶುರುವಾಗುತ್ತದೆ. ಮುಂದಿನ ವರ್ಷ ದೀಪಾವಳಿಗೆ ರಿಲೀಸ್ ಆಗುತ್ತೆ ಎಂದು ವಾದಿಸುತ್ತಿದ್ದಾರೆ.
ರಜನಿಕಾಂತ್ ಯಾವತ್ತು ಒಬ್ಬರು ಕೇಳಿದ ಕತೆ, ಐಡಿಯಾವನ್ನು ಮತ್ತೊಬ್ಬರಿಗೆ ಹೇಳಿ ಸಿನಿಮಾ ಮಾಡಿಸಲ್ಲ. ಅಂತಹ ಕೀಳು ಮನಸ್ಥಿತಿ ಅವರದ್ದಲ್ಲ ಎಂದು ಎಲ್ಲರೂ ಹೇಳುತ್ತಿದ್ದಾರೆ. ಇಂತಹ ಸ್ನಿಪರ್ ಸೀನ್ಸ್ ಸಾಕಷ್ಟು ಸಿನಿಮಾಗಳಲ್ಲಿ ಬಂದು ಹೋಗಿದೆ. ಲೋಕೇಶ್ ಐಡಿಯಾವನ್ನು ನೆಲ್ಸನ್ ಕದಿಯಬೇಕಿಲ್ಲ. ರಜನಿಕಾಂತ್ ಅದನ್ನು ನೆಲ್ಸನ್‌ಗೆ ಹೇಳಿ ಮಾಡಿಸಬೇಕಿಲ್ಲ. ತಲೈವಾ ಬರೀ ಸಿನಿಮಾಗಳಿಂದ ಸೂಪರ್ ಸ್ಟಾರ್ ಪಟ್ಟಕ್ಕೇರಿಲ್ಲ. ತಮ್ಮ ಸರಳ, ಸಜ್ಜನ ನಡೆ ನುಡಿಯಿಂದಲೂ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಫ್ಯಾನ್ಸ್ ಹೆಸರಿನಲ್ಲಿ ಕೆಲವರ ಹುಚ್ಚಾಟಕ್ಕೆ ಸುಖಾಸುಮ್ಮನೆ ಅಭಿಮಾನಿಗಳ ನಡುವೆ ಇಂತಹ ಕೆಸರೆರಚಾಟ, ತಿಕ್ಕಾಟ ನಡೀತಿದೆ. ಸಿನಿರಸಿಕರು ರಜನಿಕಾಂತ್- ಲೋಕೇಶ್ ಕನಕರಾಜ್ ಕಾಂಬಿನೇಷನ್ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.
'ಕೈದಿ', 'ಮಾಸ್ಟರ್', 'ವಿಕ್ರಂ' ಸಿನಿಮಾಗಳಿಂದ ಲೋಕೇಶ್ ಕನಕರಾಜ್ ಕಮಾಲ್ ಮಾಡಿದ್ದಾರೆ. ರಜನಿಕಾಂತ್ ಜೊತೆ ಲೋಕೇಶ್ ಸಿನಿಮಾ ಮಾಡಿದರೆ ಸಿನಿರಸಿಕರಿಗೆ ಹಬ್ಬವೇ ಸರಿ. ಸದ್ಯ 'ಜೈಲರ್' ಸಕ್ಸಸ್ ಸಂಭ್ರಮದಲ್ಲಿ ಅಭಿಮಾನಿಗಳು ತೇಲುತ್ತಿದ್ದಾರೆ. ಇನ್ನು ದಸರಾ ಸಂಭ್ರಮದಲ್ಲಿ 'ಲಿಯೋ' ಚಿತ್ರಕ್ಕಾಗಿ ದಳಪತಿ ವಿಜಯ್ ಫ್ಯಾನ್ಸ್ ಕಾಯುತ್ತಿದ್ದಾರೆ. ತಲೈವರ್171 ಚಿತ್ರದಿಂದ ಲೋಕೇಶ್ ಹೊರಬಂದಿದ್ದಾರೆ ಎನ್ನುವ ವದಂತಿ ಬಗ್ಗೆ ಅಧಿಕೃವಾಗಿ ಯಾರಾದರೂ ಪ್ರತಿಕ್ರಿಯಿಸಬೇಕಿದೆ. ಒಟ್ನಲ್ಲಿ ಇನ್ನು ಅಧಿಕೃತವಾಗಿ ಘೋಷಣೆಯಾಗದ ಸಿನಿಮಾ ಬಗ್ಗೆ ಇಂತಾದೊಂದು ಚರ್ಚೆ ನಡೆಯುತ್ತಿರುವುದು ವಿಪರ್ಯಾಸವೇ ಸರಿ.


Click it and Unblock the Notifications











