ನ್ಯೂಯಾರ್ಕ್‌ನಲ್ಲಿ ರಜನಿಕಾಂತ್ ತಲೆ ನುಣ್ಣಗೆ ಬೋಳಿಸಿದ್ದು ಯಾರು?
ಸೂಪರ್ ಸ್ಟಾರ್ ಅಂದ್ರೆ ಸ್ಟೈಲ್.. ಸ್ಟೈಲ್ ಅಂದ್ರೆ ಸೂಪರ್ ಸ್ಟಾರ್.. ತಮಿಳು ನಟ ರಜನಿಕಾಂತ್ ಸ್ಟೈಲ್ ಕ್ರೇಜ್ ಬಗ್ಗೆ ಹೊಸದಾಗಿ ಮಾತನಾಡುವುದು ಬೇಕಿಲ್ಲ. ತಲೈವಾ ಸ್ಟೈಲ್ ನೋಡಿ ಅಭಿಮಾನಿಗಳು ಸ್ಟೈಲ್ ಕಿಂಗ್ ಎಂದೇ ಬಿರುದು ಕೊಟ್ಟುಬಿಟ್ಟಿದ್ದಾರೆ. ರಜನಿಕಾಂತ್ ವಾಕಿಂಗ್ ಸ್ಟೈಲ್, ಸಿಗರೇಟ್ ಸೇದುವ ಸ್ಟೈಲ್. ಎಲ್ಲಕ್ಕಿಂತ ಮುಖ್ಯವಾಗಿ ಹೇರ್‌ಸ್ಟೈಲ್ ಒಂದ್ಕಾಲದಲ್ಲಿ ಟ್ರೆಂಡ್ ಆಗಿತ್ತು.
ಚಿಕ್ಕಿಂದಿನಿಂದಲೂ ರಜನಿಕಾಂತ್ ಅವರಿಗೆ ಹೇರ್‌ಸ್ಟೈಲ್ ಬಗ್ಗೆ ಬಹಳ ಕಾಳಜಿ. ಕಂಡೆಕ್ಟರ್ ಆಗಿದ್ದ ಸಮಯದಿಂದಲೂ ತಲೆಯ ಮುಂದೆ ಉದ್ದವಾಗಿ ಕೂದಲು ಬಿಟ್ಟು ಅದನ್ನು ಪದೇ ಪದೇ ತಮ್ಮ ಕೈಯಿಂದ ಪಕ್ಕಕ್ಕೆ ಸರಿಸಿಕೊಳ್ಳುವುದೇ ಒಂದೇ ಸ್ಟೈಲ್. ಚಿತ್ರರಂಗಕ್ಕೆ ಬಂದ ಮೇಲೆ ಕೂಡ ಅಂತಹ ಸ್ಟೈಲ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಬಳಿಕ ಕೂದಲು ಉದುರಿ ಬೋಳುತಲೆಯಾದ ಮೇಲೆ ವಿಗ್ ಧರಿಸಿ ಸ್ಟೈಲ್ ಮುಂದುವರೆಸಿದ್ದರು. ಹೀಗೆ ಒಮ್ಮೆ ಹೇರ್‌ಸ್ಟೈಲ್ ಮಾಡಿಸೋಕೆ ಹೋಗಿ ಮೋಸ ಹೋಗಿದ್ದೆ ಎಂದು ರಜನಿಕಾಂತ್ ಹೇಳಿರುವ ವೀಡಿಯೋ ವೈರಲ್ ಆಗ್ತಿದೆ.

1996ರಲ್ಲಿ ನಟ ರಜನಿಕಾಂತ್ ಅವರಿಗೆ 'ಸಿನಿಮಾ ಎಕ್ಸ್‌ಪ್ರೆಸ್' ಪ್ರಶಸ್ತಿ ಸಿಕ್ಕಿತ್ತು. ಅಂದು ಕಾರ್ಯಕ್ರಮದಲ್ಲಿ ತಲೈವಾನನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದರು. ಸದಾ ಉದ್ದನೆಯ ಕೂದಲು ಬಿಟ್ಟು ಮೋಡಿ ಮಾಡುತ್ತಿದ್ದ ರಜನಿಕಾಂತ್ ಅಂದು ಸಂಪೂರ್ಣವಾಗಿ ತಲೆ ಬೋಳಿಸಿಕೊಂಡು ಬಂದಿದ್ದರು. ಅವರ ಈ ಲುಕ್ ಕಾರ್ಯಕ್ರಮದಲ್ಲಿ ನೆರೆದವರಿಗೂ ಅಚ್ಚರಿ ತಂದಿತ್ತು. ದಿಢೀರನೆ ಹೀಗೆ ಕಾಣಿಸಿಕೊಳ್ಳಲು ಕಾರಣ ಏನು ಎನ್ನುವುದನ್ನು ಸ್ವತಃ ರಜನಿಕಾಂತ್ ವೇದಿಕೆಯಲ್ಲಿ ಮಾತನಾಡುತ್ತಾ ತಮಾಷೆಯಾಗಿ ಹೇಳಿಕೊಂಡಿದ್ದರು. ಆ ವೀಡಿಯೋ ಈಗ ವೈರಲ್ ಆಗುತ್ತಿದೆ.
'ಸಿನಿಮಾ ಎಕ್ಸ್‌ಪ್ರೆಸ್' ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೂ ವಾರದ ಮುನ್ನ ರಜನಿಕಾಂತ್ ನ್ಯೂಯಾರ್ಕ್‌ಗೆ ಹೋಗಿ ಬಂದಿದ್ದರು. ಮೊದಲೇ ಹೇರ್‌ಸ್ಟೈಲ್ ಬಗ್ಗೆ ಬಹಳ ಆಸಕ್ತಿ ಇದ್ದ ರಜನಿಕಾಂತ್ ನ್ಯೂಯಾರ್ಕ್‌ನಲ್ಲಿ ಒಂದು ಸ್ಪೆಷಲ್ ಹೇರ್‌ಸ್ಟೈಲ್ ಬಗ್ಗೆ ಜಾಹೀರಾತು ನೋಡಿ ಮೋಸ ಹೋಗಿದ್ದರಂತೆ. ಅದನ್ನು ತಮ್ಮದೇ ಶೈಲಿಯಲ್ಲಿ ಅವರು ವೇದಿಕೆ ಮೇಲೆ ವಿವರಿಸಿದ್ದರು. ಇದನ್ನು ಕೇಳಿ ನೆರೆದಿದ್ದವರು ಬಿದ್ದು ಬಿದ್ದು ನಕ್ಕಿದ್ದಾರೆ.
"ನಾನು ಇಲ್ಲಿಗೆ ಬಂದಿದ್ದರೆ ಬಗ್ಗೆ ಯಾರು ಕೇಳಲಿಲ್ಲ. ಬಂದ ಕೂಡಲೇ ಎಲ್ಲರೂ ಯಾಕೆ ತಲೆ ಬೋಳಿಸಿಕೊಂಡ್ರಿ ಎಂದು ಕೇಳಿದ್ರು. ಅದನ್ನು ಹೇಳಿಬಿಡ್ತೀನಿ. ನ್ಯೂಯಾರ್ಕ್‌ಗೆ ಹೋದಾಗ ಪೇಪರ್‌ನಲ್ಲಿ ಒಂದು ಜಾಹೀರಾತು ನೋಡ್ದೆ. ಸ್ಪೆಷಲ್ ಹೇರ್‌ಸ್ಟೈಲ್, ಲೇಟೆಸ್ಟ್ ಸ್ಟೈಲ್ ಬೇಕಾ ಈ ನಂಬರ್‌ಗೆ ಕರೆ ಮಾಡಿ ಅಂತ ಇತ್ತು. ನಾನು ಕೂಡ ಬಹಳ ದಿನ ಆಯ್ತು ಹೇರ್‌ಸ್ಟೈಲ್ ಚೇಂಜ್ ಮಾಡಿ, ಈ ಮಾಡ್ಸೋಣ, ಏನೋ ಲೇಟೆಸ್ಟ್ ನ್ಯೂಯಾರ್ಕ್ ಸ್ಟೈಲ್ ಅಂತಾರೆ ಅಂತ ನಾನು ಕರೆ ಮಾಡಿ ಮಾತನಾಡಿ ಹೋದೆ" ಎಂದು ಆ ಘಟನೆಯನ್ನು ನೆನಪಿಸಿಕೊಂಡಿದ್ದರು.
ಬಳಿಕ ಏನಾಯ್ತು ಎನ್ನುವುದನ್ನು ಕೂಡ ರಜನಿಕಾಂತ್ ಹೇಳಿದ್ದರು. "ಹೋಗ ಕೂಡಲೇ ಕೂರಿಸಿ ಹೇರ್ ಮಸಾಜ್ ಮಾಡಿಸಿದ್ರು.. ನಿಮಗೆ ಆ ನ್ಯೂಯಾರ್ಕ್ ಹೇರ್‌ಸ್ಟೈಲ್ ಮಾಡಬೇಕಲ್ಲ, ಸರಿ ಮಾಡೋಣ ಅಂತ ರಿಲ್ಯಾಕ್ಸ್ ಆಗೋಕೆ ಹೇಳಿದ್ರು. ನಾನು ಹಾಗೆ ಮಲಗಿ ನಿದ್ದೆ ಮಾಡಿಬಿಟ್ಟೆ. ಎದ್ದು ನೋಡಿದ್ರೆ, ನನ್ನ ತಲೆಯನ್ನು ಸಂಪೂರ್ಣವಾಗಿ ಬೋಳಿಸಿದ್ರು. ಹೇಗಿದೆ ಸಾರ್ ಲುಕ್, ಅಂದ್ರು. ಸೂಪರ್ ಸ್ಟಾರ್, ಇಂಡಿಯಾದಲ್ಲಿ ಯಾರು ಇದನ್ನ ಮಾಡಲ್ಲ ಎಂದೆ. ಬಿಲ್ ಎಷ್ಟು ಅಂದಾಗ 120 ಡಾಲರ್ ಅಂದ್ರು. ಅಂದ್ರೆ 4 ಸಾವಿರ ರೂಪಾಯಿ. ತಮಿಳುನಾಡಿನಲ್ಲಿ ತಮಿಳು ಜನ ನನ್ನ ತಲೆ ಬೋಳಿಸಲ್ಲ, ಅದಕ್ಕೆ ನ್ಯೂಯಾರ್ಕ್‌ನಲ್ಲಿ ದೇವರು ನನ್ನ ತಲೆ ಬೋಳಿಸುವಂತೆ ಮಾಡ್ದ ಅನ್ಸತ್ತೆ" ಎಂದು ರಜನಿಕಾಂತ್ ಸ್ವಾರಸ್ಯಕರವಾಗಿ ವಿವರಿಸಿದ್ದರು.
ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಆಗಸ್ಟ್ 14ಕ್ಕೆ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರದಲ್ಲಿ ನಾಗಾರ್ಜುನ, ಉಪೇಂದ್ರ, ಆಮೀರ್ ಖಾನ್ ಸೇರಿ ದೊಡ್ಡ ತಾರಾಗಣವಿದೆ.


Click it and Unblock the Notifications











