'ಜೈಲರ್- 2' ಚಿತ್ರೀಕರಣಕ್ಕೆ ಶಿವಣ್ಣ ಹಾಜರ್; ಈ ಬಾರಿ ನರಸಿಂಹನ ಲುಕ್ ಹೇಗಿದೆ ಗೊತ್ತಾ?
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಎರಡು ವರ್ಷಗಳ ಹಿಂದೆ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಚಿತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಹಾಗೂ ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದರು. ಕ್ಲೈಮ್ಯಾಕ್ಸ್‌ನಲ್ಲಿ ನರಸಿಂಹನಾಗಿ ಶಿವಣ್ಣನ ಎಂಟ್ರಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು.
ಸದ್ಯ 'ಜೈಲರ್'-2 ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಚೆನ್ನೈನಲ್ಲಿ ಸದ್ಯ ಚಿತ್ರದ ಪ್ರಮುಖ ಸನ್ನಿವೇಶಗಳನ್ನು ಸೆರೆಹಿಡಿಯಲಾಗುತ್ತಿದೆ. ವಿಶೇಷ ಅಂದ್ರೆ ಇದೀಗ ಶಿವಣ್ಣ ಕೂಡ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಸೆಟ್‌ನಲ್ಲಿ ಅಭಿಮಾನಿಗಳ ಜೊತೆ ಸೆಂಚುರಿ ಸ್ಟಾರ್ ಫೋಟೊ ಕ್ಲಿಕ್ಕಿಸಿಕೊಂಡಿರುವುದು ವೈರಲ್ ಆಗ್ತಿದೆ. ನೆಲ್ಸನ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

'ಜೈಲರ್' ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಆಗುತ್ತಿದ್ದಂತೆ ಸೀಕ್ವೆಲ್ ಬಗ್ಗೆ ಚರ್ಚೆ ಶುರುವಾಗಿತ್ತು. ರಜನಿಕಾಂತ್, ನೆಲ್ಸನ್ ಹಾಗೂ ಅನಿರುದ್ದ್ ರವಿಚಂದರ್‌ಗೆ ನಿರ್ಮಾಪಕ ಕಲೈನಿಧಿ ಮಾರನ್ ಕಾರುಗಳನ್ನು ಉಡುಗೊರೆ ನೀಡಿ ಲಾಭದಲ್ಲಿ ಪಾಲು ನೀಡಿ ಮತ್ತೊಂದು ಚಿತ್ರಕ್ಕೆ ಒಪ್ಪಿಸಿದ್ದರು. ಈ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ಟೀಸರ್ ರಿಲೀಸ್ ಮಾಡಿ 'ಜೈಲರ್- 2' ಸಿನಿಮಾ ಘೋಷಿಸಿದ್ದರು. ಬಳಿಕ ಕೇರಳದಲ್ಲಿ ಚಿತ್ರೀಕರಣ ಆರಂಭಿಸಿದ್ದರು.
ಮೊದಲ ಶೆಡ್ಯೂಲ್‌ನಲ್ಲಿ ರಜನಿಕಾಂತ್ ಜೊತೆ ರಮ್ಯಾಕೃಷ್ಣನ್ ಭಾಗವಹಿಸಿದ್ದರು. 'ಜೈಲರ್' ಚಿತ್ರಕ್ಕೆ ಕೆಲಸ ಮಾಡಿದ್ದ ತಂಡವೇ ಸೀಕ್ವೆಲ್‌ಗೂ ಕೈಜೋಡಿಸಿದೆ. ಮತ್ತೊಮ್ಮೆ ಮಾಜಿ ಡಾನ್ ನರಸಿಂಹನ ಅವತಾರದಲ್ಲಿ ಶಿವಣ್ಣ ಬಣ್ಣ ಹಚ್ಚಿದ್ದಾರೆ. ಮ್ಯಾಥ್ಯೂ ಆಗಿ ಮೋಹನ್ ಲಾಲ್ ಅಬ್ಬರಿಸಲಿದ್ದಾರೆ.
ಈ ಬಾರಿ ಇವರಿಬ್ಬರ ಜೊತೆಗೆ ತೆಲುಗು ನಟ ಬಾಲಕೃಷ್ಣ ಕೂಡ ಅತಿಥಿ ಪಾತ್ರದಲ್ಲಿ ನಟಿಸೋ ಸಾಧ್ಯತೆಯಿದೆ. ಮತ್ತೊಮ್ಮೆ ನಿವೃತ್ತ ಜೈಲರ್ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಸೂಪರ್ ಸ್ಟಾರ್ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. ಆಗಸ್ಟ್ 14ಕ್ಕೆ ತೆರೆಗೆ ಬಂದಿದ್ದ 'ಕೂಲಿ' ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಲೋಕೇಶ್ ಕನಕರಾಜ್ ನಿರ್ದೇಶದ ಚಿತ್ರದಲ್ಲಿ ಉಪೇಂದ್ರ, ಆಮೀರ್ ಖಾನ್ ಸೇರಿ ಘಟಾನುಘಟಿ ಕಲಾವಿದರು ನಟಿಸಿದ್ದರೂ ಪ್ರಯೋಜನವಾಗಲಿಲ್ಲ. ಮುಂದಿನ ವಾರ 'ಕೂಲಿ' ಸಿನಿಮಾ ಓಟಿಟಿಗೆ ಬರಲಿದೆ.
'ಜೈಲರ್' ಸಿನಿಮಾ 600 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಆದರೆ 'ಕೂಲಿ' ಸಿನಿಮಾ ನಿರಾಸೆ ಮೂಡಿಸಿದೆ. ಹಾಗಾಗಿ ಮತ್ತೆ 'ಜೈಲರ್'-2 ಮೇಲೆ ನಿರೀಕ್ಷೆ ಹೆಚ್ಚಿದೆ. ತಲೈವಾಗೆ ವಯಸ್ಸಾಗುತ್ತಿದೆ. ಹಾಗಾಗಿ ಸಾಧ್ಯವಾದಷ್ಟು ಬೇಗ ಮತ್ತಷ್ಟು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸೋ ಪ್ರಯತ್ನ ಮಾಡುತ್ತಿದ್ದಾರೆ. ತಮ್ಮ ಸ್ಟೈಲ್ ಹಾಗೂ ಮ್ಯಾನರಿಸಂ ಮೂಲಕವೇ ಚಿತ್ರಗಳನ್ನು ಗೆಲ್ಲಿಸೋ ಸಾಹಸ ಮಾಡುತ್ತಿದ್ದಾರೆ.
'ಜೈಲರ್'-2 ಚಿತ್ರದಲ್ಲಿ ಎಸ್. ಜೆ ಸೂರ್ಯ, ಸೂರಜ್ ವೆಂಜಾರಮೂಡು, ಮಿರ್ನಾ ಹಾಗೂ ಅನ್ನಾ ರಾಜನ್ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಕೂಡ ಚಿತ್ರದಲ್ಲಿದ್ದಾರೆ. ಮುಂದಿನ ವರ್ಷ ಮಾರ್ಚ್‌ನಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ಚಿತ್ರಕ್ಕಿದೆ.
ಮೊದಲ ಭಾಗದಲ್ಲಿ ಶಿವಣ್ಣ ಮಾಡಿದ್ದ ನರಸಿಂಹ ಪಾತ್ರ ಮ್ಯಾಜಿಕ್ ಕ್ರಿಯೇಟ್ ಮಾಡಿತ್ತು. ಕೊನೆಯಲ್ಲಿ ಸುಮ್ಮನೆ ಸಿಗರೇಟ್ ಸೇದುತ್ತಾ ನಡೆದು ಬಂದು ಖಡಕ್ ಲುಕ್‌ನಲ್ಲಿ ದರ್ಶನ ಕೊಟ್ಟು ಸೆಂಚುರಿ ಸ್ಟಾರ್ ಮ್ಯಾಜಿಕ್ ಮಾಡಿದ್ದರು. ಈ ಬಾರಿ ಆ ಪಾತ್ರವನ್ನು ನೆಲ್ಸನ್ ಯಾವ ರೀತಿ ಬಳಸಿಕೊಳ್ಳುತ್ತಾರೆ ಕಾದು ನೋಡಬೇಕಿದೆ.


Click it and Unblock the Notifications











