ಶಾರುಖ್ ಖಾನ್ ಬರಲಿಲ್ಲ, ಶಿವಣ್ಣ, ಮೋಹನ್ ಲಾಲ್ ಮರೀಲಿಲ್ಲ; ಕೇಕ್ ಕತ್ತರಿಸಿದ 'ಜೈಲರ್' ರಜನಿಕಾಂತ್
ನೆಲ್ಸನ್ ನಿರ್ದೇಶನದ 'ಜೈಲರ್'-2 ಈ ವರ್ಷ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ರಜನಿಕಾಂತ್ ಮತ್ತೊಮ್ಮೆ ಮುತ್ತುವೇಲ್ ಪಾಂಡಿಯನ್ ಆಗಿ ಅಬ್ಬರಿಸಿದ್ದಾರೆ. ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆದಿದೆ ಚಿತ್ರತಂಡ. ಶಾರುಖ್ ಖಾನ್ ಹಾಗೂ ಬಾಲಕೃಷ್ಣ ಕೊನೆಗೂ ಚಿತ್ರದಲ್ಲಿ ನಟಿಸ್ಲೇ ಇಲ್ಲ.
ಮೂರು ವರ್ಷಗಳ ಹಿಂದೆ ಬಂದಿದ್ದ 'ಜೈಲರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅದರ ಬೆನ್ನಲ್ಲೇ ಸೀಕ್ವೆಲ್ ಬಗ್ಗೆ ಚರ್ಚೆ ನಡೆದಿತ್ತು. ನೆಲ್ಸನ್, ರಜನಿಕಾಂತ್ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್‌ಗೆ ಒಂದೊಂದು ಕಾರ್ ಉಡುಗೊರೆ ಕೊಟ್ಟು ಲಾಭದಲ್ಲಿ ಒಂದು ಪಾಲು ತಲುಪಿಸಿ ಮತ್ತೊಂದು ಚಿತ್ರ ಮಾಡಲು ಒಪ್ಪಂದ ಮಾಡಿಕೊಂಡಿದ್ದರು. ಈ ಕ್ರೇಜಿ ಕಾಂಬಿನೇಷನ್‌ನಲ್ಲಿ ಮತ್ತೊಮ್ಮೆ ಸನ್ ಪಿಕ್ಚರ್ಸ್ ಸಂಸ್ಥೆ ಸಿನಿಮಾ ಮಾಡಿ ಮುಗಿಸಿದೆ. ಸಿನಿಮಾ ಬಿಡುಗಡೆ ಯಾವಾಗ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಕಳೆದ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ 'ಜೈಲರ್'-2 ಸಿನಿಮಾ ಘೋಷಣೆ ಆಗಿತ್ತು. ಇದೀಗ ಚಿತ್ರೀಕರಣ ಮುಗಿಸಿರುವುದಾಗಿ ಅಧಿಕೃತವಾಗಿ ಚಿತ್ರತಂಡ ಮಾಹಿತಿ ನೀಡಿದೆ. ತಂಡದ ಜೊತೆ ರಜನಿಕಾಂತ್ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗುತ್ತಿದೆ. 'ಜೈಲರ್' ಚಿತ್ರದಲ್ಲಿ ಶಿವರಾಜ್‌ಕುಮಾರ್, ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ಅಬ್ಬರಿಸಿದ್ದರು. ಇವರಿಬ್ಬರ ಪ್ರಸೆನ್ಸ್ ಚಿತ್ರಕ್ಕೆ ಆನೆ ಬಲ ತುಂಬಿತ್ತು.
ನರಸಿಂಹ ಆಗಿ ಎರಡು ಸನ್ನಿವೇಶಗಳಲ್ಲಿ ಶಿವಣ್ಣನ ಆರ್ಭಟ ನೋಡಿದವರು ದಂಗಾಗಿದ್ದರು. ಸೀಕ್ವೆಲ್‌ನಲ್ಲಿ ಕೂಡ ಇವರಿಬ್ಬರು ತಮ್ಮ ತಮ್ಮ ಪಾತ್ರಗಳನ್ನು ಮುಂದುವರೆಸಲಿದ್ದಾರೆ. ಈ ಬಾರಿ ಕೊಂಚ ಹೆಚ್ಚು ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಬಾಲಕೃಷ್ಣ, ಶಾರುಖ್ ಖಾನ್ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಊಹಾಪೋಹಗಳಿಗೆ ಈಗ ಬ್ರೇಕ್ ಬಿದ್ದಿದೆ. 'ಜೈಲರ್' ಚಿತ್ರದಲ್ಲೇ ಬಾಲಯ್ಯನನ್ನು ತೋರಿಸಲು ನೆಲ್ಸನ್ ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಆದರೆ ಸೀಕ್ವೆಲ್‌ನಲ್ಲಿ ಅವರು ನಟಿಸಬಹುದು ಎನ್ನುವ ಚರ್ಚೆ ನಡೆದಿತ್ತು. ಅದು ಈಗ ಸುಳ್ಳಾಗಿದೆ.

ಹಿಂದಿ ಪ್ರೇಕ್ಷಕರನ್ನು ಸೆಳೆಯಲು ಶಾರುಖ್ ಖಾನ್ ಅವರನ್ನು ನೆಲ್ಸನ್ ಕರೆತರ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಈ ಹಿಂದೆ 'ರಾ-ವನ್' ಚಿತ್ರದಲ್ಲಿ ರಜನಿಕಾಂತ್ ರೊಬೊ ಆಗಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಅದು ಚಿತ್ರಕ್ಕೆ ಪ್ಲಸ್ ಆಗಿತ್ತು. ಅದೇ ಪ್ರೀತಿಯಿಂದ ಶಾರುಖ್ ಖಾನ್ 'ಜೈಲರ್'-2 ಚಿತ್ರದಲ್ಲಿ ನಟಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಈ ಬಗ್ಗೆ ಅವರನ್ನು ಸಂಪರ್ಕಿಸಿದ್ದರಂತೆ. ಆದರೆ 'ಕಿಂಗ್' ಸಿನಿಮಾದಲ್ಲಿ ಬ್ಯುಸಿ ಇರುವುದರಿಂದ ಶಾರೂಖ್ ಒಪ್ಪಲಿಲ್ಲ ಎನ್ನಲಾಗ್ತಿದೆ.
'ಜೈಲರ್'-2 ಚಿತ್ರದಲ್ಲಿ ನೆಲ್ಸನ್ ಹೊಸ ಕಥೆ ಹೇಳುತ್ತಿದ್ದಾರೆ. ಮುಂದಿನ ಕಥೆ ಜೊತೆಗೆ ಮುತ್ತುವೇಲ್ ಪಾಂಡಿಯನ್ ಹಿಂದಿನ ಕಥೆಯ ಮೇಲೆ ಬೆಳಕು ಚೆಲ್ಲಲಿದ್ದಾರೆ. ಹಾಗಾಗಿ ಮ್ಯಾಥ್ಯೂ ಹಾಗೂ ನರಸಿಂಹನ ಹಿನ್ನೆಲೆಯ ಕಥೆ ಕೂಡ ಇರಲಿದೆ. ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬರಲಿದೆ. ಶಿವಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವುದರಿಂದ ಕನ್ನಡ ಚಿತ್ರರಂಗದಲ್ಲಿ ಕೂಡ ಕುತೂಹಲ ಮೂಡಿದೆ.
ಆಕ್ಷನ್ ಜೊತೆಗೆ ಕಾಮಿಡಿ ಸೇರಿಸಿ ನೆಲ್ಸನ್ ಸಿನಿಮಾಗಳನ್ನು ಕಟ್ಟಿಕೊಡುತ್ತಾರೆ. ಆ ಪ್ರಯತ್ನ ಯಶಸ್ವಿ ಆಗುತ್ತಿದೆ. ಮುಂದೆ 'ಜೈಲರ್'-2 ಚಿತ್ರದಲ್ಲಿ ಕೂಡ ಅದನ್ನೇ ನಿರೀಕ್ಷಿಸಲಾಗುತ್ತಿದೆ. ಇನ್ನು ಪ್ರೀಕ್ವೆಲ್‌ನಲ್ಲಿ ತಮನ್ನಾ ಸ್ಪೆಷಲ್ ಸಾಂಗ್ ಹೈಲೆಟ್ ಆಗಿತ್ತು. ಆದರೆ 2ನೇ ಭಾಗದಲ್ಲಿ ಅಂತಹ ಪ್ರಯತ್ನ ಮಾಡಿಲ್ಲ. ಈ ಸಿನಿಮಾ ಬಳಿಕ ಕಮಲ್ ಹಾಗೂ ರಜನಿಕಾಂತ್ ನಟನೆಯ ಚಿತ್ರವನ್ನು ನೆಲ್ಸನ್ ನಿರ್ದೇಶನ ಮಾಡಲಿದ್ದಾರೆ. ಅಧಿಕೃತವಾಗಿ ಸಿನಿಮಾ ಘೋಷಣೆ ಆಗಿದೆ. ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೂ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.


Click it and Unblock the Notifications