Rajinikanth: ಥೇಟ್ ಸೂಪರ್ ಸ್ಟಾರ್ ರಜನಿಕಾಂತ್ ರೀತಿ ಕಾಣುವ ಈ ವ್ಯಕ್ತಿ ಯಾರು? ಆತನ ಹಿನ್ನೆಲೆ ಏನು?
ಪ್ರಪಂಚದಲ್ಲಿ ಒಬ್ಬರ ರೀತಿ 7 ಜನ ಇರ್ತಾರೆ ಎಂದು ಕೆಲವರು ಹೇಳುತ್ತಿರುತ್ತಾರೆ. ಅದು ಎಷ್ಟು ನಿಜ, ಎಷ್ಟು ಸುಳ್ಳು ಅನ್ನೋದು ಗೊತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾ ಜಮಾನದಲ್ಲಿ ಒಬ್ಬರನ್ನು ಹೋಲುವ ಮತ್ತೊಬ್ಬರ ವಿಡಿಯೋ, ಫೋಟೊ ವೈರಲ್ ಆಗುತ್ತಿರುತ್ತದೆ. ಅದರಲ್ಲೂ ಸೆಲೆಬ್ರೆಟಿಗಳನ್ನು ಹೋಲುವಂತಹ ವ್ಯಕ್ತಿಗಳು ಎಲ್ಲರ ಗಮನ ಸೆಳೆಯುತ್ತಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿ ಬಳಗ ಎಷ್ಟು ದೊಡ್ಡದು ಅನ್ನೋದು ಗೊತ್ತೆಯಿದೆ. ತಮ್ಮ ವಿಭಿನ್ನ ಸ್ಟೈಲ್, ಮ್ಯಾನರಿಸಂನಿಂದಲೇ ತಲೈವಾ ಅಭಿಮಾನಿಗಳ ಮನ ಗೆದ್ದಿದ್ದಾರೆ. ಆದರೆ ರಜನಿ ಸ್ಟೈಲ್ ಏನಿದ್ದರೂ ತೆರೆಮೇಲೆ ಮಾತ್ರ. ನಿಜ ಜೀವನದಲ್ಲಿ ಶಿವಾಜಿರಾವ್ ಗಾಯಕ್ ವಾಡ್ ಸೀದಾ ಸಾದಾ ಆಸಾಮಿ. ಬಕ್ಕತಲೆ, ಸಣಕಲು ದೇಹದ ರಜನಿಕಾಂತ್ ತಮ್ಮ ಸರಳ ಜೀವನ ಶೈಲಿಯಿಂದ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ರಜನಿಕಾಂತ್ ಸಿನಿಮಾಗಳು ರಿಲೀಸ್ ಆದಾಗ ಅಭಿಮಾನಿಗಳು ತಲೈವಾ ಸ್ಟೈಲ್‌ನಲ್ಲಿ ಥಿಯೇಟರ್‌ಗಳ ಮುಂದೆ ಕಾಣಿಸಿಕೊಳ್ಳುತ್ತಾರೆ. ಅವರೆಲ್ಲಾ ಸಾಧ್ಯವಾದಷ್ಟು ರಜನಿಕಾಂತ್ ರೀತಿ ಲುಕ್ ಬದಲಿಸಿಕೊಂಡು ದರ್ಶನ ಕೊಡುತ್ತಾರೆ. ಆದರೆ ಕೇರಳದ ವ್ಯಕ್ತಿಯೊಬ್ಬರು ಥೇಟ್ ರಜನಿಕಾಂತ್ ರೀತಿ ಕಾಣುತ್ತಾರೆ. ಕಳೆದೆರಡು ದಿನಗಳಿಂದ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ತಲೈವಾ ರೀತಿಯಲ್ಲೇ ಗಡ್ಡ.. ತಲೆ ಕೂದಲು.. ಸಣಕಲು ದೇಹ. ಕನ್ನಡಕ.. ದೂರದಿಂದ ನೋಡಿದರೆ ರಜನಿಕಾಂತ್ ಅಂತ್ಲೇ ಹೇಳಬೇಕು. ಅಷ್ಟರಮಟ್ಟಿಗೆ ಅವರು ಸೂಪರ್ ಸ್ಟಾರ್‌ನ ಹೋಲುತ್ತಾರೆ. ಇದೇ ಕಾರಣಕ್ಕೆ ಕೇರಳದ ಕೊಚ್ಚಿನ ಈ ವ್ಯಕ್ತಿ ಎಲ್ಲರ ಗಮನ ಸೆಳೆಯುತ್ತಾರೆ. ಅಂದಹಾಗೆ ಈ ವ್ಯಕ್ತಿಯ ಹೆಸರು ಸುಧಾಕರ್ ಪ್ರಭು. ಕೊಚ್ಚಿನ ಟೀ ಅಂಗಡಿ ಇಟ್ಟುಕೊಂಡಿದ್ದಾರೆ. ಮಲಯಾಳಂ ಸಿನಿಮಾ ನಿರ್ದೇಶಕ ನಾದಿರ್ಷಾ ಇತ್ತೀಚೆಗೆ ರಜನಿ ರೀತಿ ಕಾಣುವ ಸುಧಾಕರ್ ಪ್ರಭು ಜೊತೆ ಫೋಟೊ ಕ್ಲಿಕ್ಕಿಸಿಕೊಂಡು ಶೇರ್ ಮಾಡಿದ್ದರು.
ಆ ಫೋಟೊಗಳು ವೈರಲ್ ಆಗುತ್ತಿದ್ದಂತೆ 'ಬಿಹೈಂಡ್‌ವುಡ್ ಐಸ್' ಯೂಟ್ಯೂಬ್ ಚಾನಲ್, ಸುಧಾಕರ್ ಪ್ರಭು ಸಂದರ್ಶನ ಮಾಡಿದೆ. ಸ್ವಲ್ಪ ರಜನಿಕಾಂತ್ ರೀತಿ ಕಾಣುತ್ತಿದ್ದ ಸುಧಾಕರ್ ಅವರನ್ನು ಸಲೂನ್‌ಗೆ ಕರೆದುಕೊಂಡು ಕಂಪ್ಲೀಟ್ ಮೇಕ್ ಓವರ್ ಮಾಡಿಸಿದ್ದಾರೆ. ಬಳಿಕ ಮೂವರು ಬಾಡಿಗಾರ್ಡ್‌ಗಳ ಜೊತೆ ಸುಧಾಕರ್ ಅವರನ್ನು ಕೊಚ್ಚಿಯಲ್ಲಿ ಸುತ್ತಾಡಿಸಿದ್ದಾರೆ. ಸಾರ್ವಜನಿಕರಲ್ಲಿ ಕೆಲವರು ರಜನಿಕಾಂತ್ ಬಂದರು ಎಂದು ಅಚ್ಚರಿಗೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲೂ ಅದನ್ನು ನೋಡಬಹುದು.
ಕೆಲವರು ಜೂಮ್ ಮಾಡಿ ನೋಡಿ ಅದು ರಜನಿಕಾಂತ್ ಹೌದೋ ಅಲ್ವೋ ಎಂದು ಪರೀಕ್ಷಿಸಿಕೊಳ್ಳುತ್ತಿದ್ದಾರೆ. ತಲೈವಾ ರೀತಿಯಲ್ಲಿ ಅರ್ಧಬರ್ಧ ಕೆದರಿದ ಕೂದಲು, ಕನ್ನಡಕ, ನೀಲಿ ಬಣ್ಣದ ಶರ್ಟು, ಶಾರ್ಟ್ಸ್, ಅವಾಯ್ ಚಪ್ಪಲಿಯಲ್ಲಿ ಬಾಡಿಗಾರ್ಡ್‌ಗಳ ಜೊತೆ ಸುಧಾಕರ್ ಪ್ರಭು ಮಾತನಾಡುತ್ತಾ ನಿಂತ ವಿಡಿಯೋ ವೈರಲ್ ಆಗುತ್ತಿದೆ. ಇನ್ನು ವಿಡಿಯೋದಲ್ಲಿ ಸುಧಾಕರ್ ಪ್ರಭು ಬಾಡಿ ಲಾಂಗ್ವೇಜ್ ಕೂಡ ಸೂಪರ್ ಸ್ಟಾರ್‌ನ ನೆನಪಿಸುವಂತಿದೆ.
ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ರಜನಿಕಾಂತ್ 'ಜೈಲರ್' ಸಕ್ಸಸ್ ಸಂಭ್ರಮದಲ್ಲಿದ್ದಾರೆ. ನೆಲ್ಸನ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ಇದೀಗ ಮಗಳು ಐಶ್ವರ್ಯ ನಿರ್ದೇಶನದ 'ಲಾಲ್ ಸಲಾಂ' ಚಿತ್ರದ ವಿಶೇಷ ಪಾತ್ರದಲ್ಲಿ ರಜನಿಕಾಂತ್ ನಟಿಸಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಖ್ಯಾತ ಕ್ರಿಕೆಟಿಗ ಕಪಿಲ್ ದೇವ್ ಕೂಡ ತಲೈವಾ ಜೊತೆ ತೆರೆ ಹಂಚಿಕೊಂಡಿದ್ದಾರೆ.
'ಲಾಲ್ ಸಲಾಂ' ಬಳಿಕ ಜ್ಞಾನವೇಲ್ ನಿರ್ದೇಶನದ ಚಿತ್ರದಲ್ಲಿ ತಲೈವಾ ನಟಿಸುತ್ತಿದ್ದಾರೆ. ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಕೂಡ ನಡೀತಿದೆ. ಇತ್ತೀಚೆಗೆ ಕೇರಳದಲ್ಲಿ ಈ ಸಿನಿಮಾ ಚಿತ್ರೀಕರಣ ನಡೆದಿತ್ತು. ರಜನಿಕಾಂತ್ ಕೇರಳಗೆ ಬಂದಿದ್ದರು ಅಲ್ಲಿದ್ದವರಿಗೆ ಗೊತ್ತಿತ್ತು. ಇದೇ ವೇಳೆ ತಲೈವಾ ರೀತಿ ಕಾಣುವ ಸುಧಾಕರ್ ಪ್ರಭು ನೋಡಿ ಕೆಲವರು ದಂಗಾಗಿದ್ದಾರೆ. ರಜನಿಕಾಂತ್ ರಸ್ತೆ ಬದಿಯಲ್ಲಿ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರಾ? ಅಂತ ಅಚ್ಚರಿಗೊಂಡಿದ್ದರು.
ಜ್ಞಾನವೇಲ್ ಸಿನಿಮಾ ಬಳಿಕ ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರಕ್ಕೆ ತಲೈವಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣ ಮಾಡಲಿದ್ದು ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. 'ಕೈದಿ', 'ವಿಕ್ರಂ' ಬಳಿಕ ಲೋಕೇಶ್ 'ಲಿಯೋ' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಇದೀಗ ರಜನಿ- ಲೋಕೇಶ್ ಕೈಜೋಡಿಸಿರುವುದು ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.


Click it and Unblock the Notifications











