ಸಂಕ್ರಾಂತಿಗೆ ಸೂಪರ್ ಸ್ಟಾರ್ ಸರ್‌ಪ್ರೈಸ್; ಶಿವಣ್ಣನ ಫ್ಯಾನ್ಸ್‌ಗೂ ಕಾದಿದೆ ಟ್ರೀಟ್
ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ 'ಕೂಲಿ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಲೋಕೇಶ್ ಕನಕರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ನಟ ಉಪೇಂದ್ರ ನಟಿಸುತ್ತಿದ್ದಾರೆ. ರಚಿತಾ ರಾಮ್ ಕೂಡ ಬಣ್ಣಹಚ್ಚಿದ್ದಾರೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆ 'ಜೈಲರ್'-2 ಸಿನಿಮಾ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಿದೆ.
ರಜನಿಕಾಂತ್ ಹುಟ್ಟುಹಬ್ಬದ ದಿನವೇ 'ಜೈಲರ್'-2 ಸಿನಿಮಾ ಘೋಷಣೆ ಆಗುತ್ತದೆ ಎಂದು ಭಾವಿಸಲಾಗಿತ್ತು. ಅದಕ್ಕಾಗಿ ಪ್ರೋಮೊ ಶೂಟ್ ಕೂಡ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ಯಾಕೋ ತಲೈವಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ಸಿಗಲಿಲ್ಲ. ಆದರೆ ಸಂಕ್ರಾಂತಿಗೆ ಭರ್ಜರಿ ಟ್ರೀಟ್ ಸಿದ್ಧವಾಗಿದೆ.

ಸುಗ್ಗಿ ಸಂಭ್ರಮದಲ್ಲಿ 'ಜೈಲರ್'-2 ಸಿನಿಮಾ ಘೋಷಣೆ ಆಗುತ್ತಿದೆ. 2 ನಿಮಿಷ 23 ಸೆಕೆಂಡ್‌ಗಳ ಪ್ರೋಮೊವನ್ನು ಚಿತ್ರತಂಡ ಸಿದ್ಧಪಡಿಸಿದೆ. 4 ನಿಮಿಷ 3 ಸೆಕೆಂಡ್‌ಗಳ ಮತ್ತೊಂದು ಪ್ರೋಮೊ ಕೂಡ ಸೆನ್ಸಾರ್ ಆಗಿದೆ. ಹಾಗಾಗಿ ಅಭಿಮಾನಿಗಳಿಗೆ ಡಬಲ್ ಧಮಾಕ. ನೆಲ್ಸನ್ ನಿರ್ದೇಶನದಲ್ಲಿ ಮತ್ತೊಮ್ಮೆ ಜೈಲರ್ ಮುತ್ತುವೇಲ್ ಪಾಂಡಿಯನ್ ಆಗಿ ಸೂಪರ್ ಸ್ಟಾರ್ ಅಬ್ಬರಿಸುವುದು ಪಕ್ಕಾ ಆಗಿದೆ. ಈಗಾಗಳೇ ಪ್ರೋಮೊ ಸೆನ್ಸಾರ್ ಮುಗಿಸಿದೆ. ಆಯ್ದ ಚಿತ್ರಮಂದಿರಗಳಲ್ಲಿ 'ಜೈಲರ್'-2 ಅನೌನ್ಸ್‌ಮೆಂಟ್ ಪ್ರೋಮೊ ಪ್ರದರ್ಶನಗೊಳ್ಳಲಿದೆ.
ಒಂದೂವರೆ ವರ್ಷದ ಹಿಂದೆ ಬಂದಿದ್ದ 'ಜೈಲರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ರಜನಿಕಾಂತ್ ಜೊತೆ ಕನ್ನಡ ನಟ ಶಿವರಾಜ್‌ಕುಮಾರ್, ಮಲಯಾಳಂ ನಟ ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ನರಸಿಂಹ ಆಗಿ ಶಿವಣ್ಣನ ಆರ್ಭಟಕ್ಕೆ ಸಿನಿರಸಿಕರು ಫಿದಾ ಆಗಿದ್ದರು. ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕೆ ಬಲ ತುಂಬಿತ್ತು.
ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ 'ಜೈಲರ್' ಸಿನಿಮಾ ನಿರ್ಮಾಣವಾಗಿತ್ತು. ಸಿನಿಮಾ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಚಿತ್ರದಿಂದ ಬಂದ ಲಾಭದಲ್ಲಿ ರಜನಿಕಾಂತ್, ನೆಲ್ಸನ್ ಹಾಗೂ ಅನಿರುದ್ದ್‌ಗೆ ನಿರ್ಮಾಪಕರು ಕಾರು ಗಿಫ್ಟ್ ಕೊಟ್ಟಿದ್ದರು. ಲಾಭದಲ್ಲಿ ಪಾಲು ಹಂಚಿದ್ದರು. ಜೊತೆಗೆ ಸೀಕ್ವೆಲ್ ಬಗ್ಗೆ ಚರ್ಚಿಸಿ ಅಡ್ವಾನ್ಸ್ ಸಹ ಕೊಟ್ಟಿದ್ದರು. ಇದೀಗ ಸೀಕ್ವೆಲ್ ಸಿನಿಮಾ ಅಧಿಕೃತವಾಗಿ ಘೋಷಣೆ ಆಗುತ್ತಿದೆ.
ಮೊದಲಿಗೆ 'ಜೈಲರ್' ಪ್ರೀಕ್ವೆಲ್ ಬರುತ್ತದೆ ಎನ್ನಲಾಗಿತ್ತು. ಆದರೆ ಸೀಕ್ವೆಲ್ ಶುರುವಾಗುತ್ತಿದೆ. ಇದೇ ಚಿತ್ರದಲ್ಲಿ ಮುತ್ತುವೇಲ್ ಪಾಂಡಿಯನ್ ಹಿನ್ನೆಲೆಯ ಕಥೆಯನ್ನು ಕಟ್ಟಿಕೊಡುವ ಸಾಧ್ಯತೆಯಿದೆ. ಈ ಬಾರಿ ಕೂಡ ನರಸಿಂಹ ಹಾಗೂ ಮ್ಯಾಥ್ಯು ಪಾತ್ರ ಇರುವ ಸಾಧ್ಯತೆಯಿದೆ.
ಸಂಕ್ರಾಂತಿ ಸಂಭ್ರಮದಲ್ಲಿ ಜನವರಿ 14ರ ಸಂಜೆ 6 ಗಂಟೆಗೆ 'ಜೈಲರ್'-2 ಅನೌನ್ಸ್‌ಮೆಂಟ್ ಪ್ರೋಮೊ ಹೊರಬೀಳಲಿದೆ. ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಕೂಡ ಅಭಿಮಾನಿಗಳು ಝಲಕ್ ನೋಡಿ ಎಂಜಾಯ್ ಮಾಡಬಹುದು. ನಟ ಶಿವರಾಜ್‌ಕುಮಾರ್ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿಸಿದ್ದಾರೆ. ಸರ್ಜರಿ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ. ಜನವರಿ 26ರಂದು ಬೆಂಗಳೂರಿಗೆ ಮರಳಿ ಬರಲಿದ್ದಾರೆ. 'ಜೈಲರ್'-2 ಪ್ರೋಮೊದಲ್ಲಿ ನರಸಿಂಹ ಪಾತ್ರದ ಬಗ್ಗೆಯೂ ಸುಳಿವು ಸಿಗುವ ಸಾಧ್ಯತೆಯಿದೆ.
ಸಣ್ಣ ಟೀಸರ್ ಶೂಟ್ ಮಾಡಿ 'ಜೈಲರ್' ಚಿತ್ರವನ್ನು ಕೂಡ ಘೋಷಿಸಲಾಗಿತ್ತು. ಬಹಳ ದಿನಗಳ ಬಳಿಕ ಒಂದು ಮಾಸ್ ಚಿತ್ರದ ಮೂಲಕ ರಜನಿಕಾಂತ್ ಪ್ರೇಕ್ಷಕರನ್ನು ರಂಜಿಸಿದ್ದರು. ಬಳಿಕ ಬಂದ 'ವೆಟ್ಟೆಯಾನ್' ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ 'ಕೂಲಿ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ 70%ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ ಎಂದು ಸ್ವತಃ ರಜನಿಕಾಂತ್ ಹೇಳಿದ್ದಾರೆ.
'ಕೂಲಿ' ಚಿತ್ರದಲ್ಲಿ ಬಾಲಿವುಡ್ ನಟ ಆಮೀರ್ ಖಾನ್ ಕೂಡ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಮೇ 1ರಂದು ಕಾರ್ಮಿಕರ ದಿನಾಚರಣೆ ವಿಶೇಷವಾಗಿ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ.


Click it and Unblock the Notifications











