Jailer Booking: ಬೆಂಗಳೂರಿನಲ್ಲಿ 'ಜೈಲರ್' ಬುಲ್ಡೋಜರ್.. 480 ತಮಿಳು, 1 ಕನ್ನಡ ಶೋ ಬುಕ್ಕಿಂಗ್ ಶುರು
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಕರ್ನಾಟಕದಲ್ಲೂ ದೊಡ್ಡಮಟ್ಟದಲ್ಲಿ ತೆರೆಗಪ್ಪಳಿಸುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಪ್ರೇಕ್ಷಕರು ಟಿಕೆಟ್ ಕಾಯ್ದಿರಿಸಲು ಮುಗಿಬಿದ್ದಿದ್ದಾರೆ. ಕರ್ನಾಟಕದಲ್ಲೂ ರಜನಿಕಾಂತ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ. ಇಲ್ಲೂ ಸಿಕ್ಕಾಪಟ್ಟೆ ಗ್ರ್ಯಾಂಡ್ ಆಗಿ ಸಿನಿಮಾ ರಿಲೀಸ್ ಆಗಲಿದೆ. ಕನ್ನಡ ಸಿನಿಮಾಗಳು ಬರದೇ ಇರುವ ಲಾಭವನ್ನು 'ಜೈಲರ್' ಪಡೆದುಕೊಳ್ತಿದ್ದಾನೆ.
ಆಕ್ಷನ್ ಎಂಟರ್‌ಟೈನರ್ 'ಜೈಲರ್' ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡ ನಟ ಶಿವರಾಜ್‌ಕುಮಾರ್, ಮಲಯಾಳಂ ನಟ ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ನಟಿಸಿರುವುದು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ರಮ್ಯಾಕೃಷ್ಣ, ತಮನ್ನಾ, ಜಾಕಿಶ್ರಾಫ್ ಹೀಗೆ ಬಹುಬೇಡಿಕೆಯ ಕಲಾವಿದರು ಸಿನಿಮಾದಲ್ಲಿದ್ದಾರೆ. ಈಗಾಗಲೇ ಸಿನಿಮಾ ಸಾಂಗ್ಸ್ ಮತ್ತು ಟ್ರೈಲರ್ ರಿಲೀಸ್ ಆಗಿ ಹಿಟ್ ಆಗಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಹೈಪ್ ಕ್ರಿಯೇಟ್ ಮಾಡ್ತಿದೆ.

ಸನ್ ಪಿಕ್ಚರ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ 'ಜೈಲರ್' ಸಿನಿಮಾ ನಿರ್ಮಾಣ ಮಾಡಿದೆ. ಆಗಸ್ಟ್ 10ಕ್ಕೆ ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ರಜನಿಕಾಂತ್ ಆರ್ಭಟ ಶುರುವಾಗಲಿದೆ. ಕ್ರೇಜ್‌ಗೆ ತಕ್ಕಂತೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. ಜಯಣ್ಣ ಫಿಲ್ಮ್ಸ್ ಮೂಲಕ ಎವಿ ಮೀಡಿಯಾ ಕನ್ಸಲ್ಟೆನ್ಸಿ ಚಿತ್ರವನ್ನು ಕರ್ನಾಟದಲ್ಲಿ ರಿಲೀಸ್ ಮಾಡ್ತಿದೆ.
ಬೆಂಗಳೂರಿನಲ್ಲಿ ಬುಕ್ಕಿಂಗ್ ಶುರು
4 ದಿನ ಮೊದ್ಲೆ ಬೆಂಗಳೂರಿನಲ್ಲಿ 'ಜೈಲರ್' ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಹಾಟ್ ಕೇಕ್ ರೀತಿ ಟಿಕೆಟ್ ಬಿಕರಿಯಾಗುತ್ತಿದೆ. ಈಗಾಗಲೇ 48 ತಮಿಳು ಹಾಗೂ 1 ಕನ್ನಡ ಶೋ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಶಿವಣ್ಣ ಚಿತ್ರದಲ್ಲಿ ನಟಿಸಿರುವುದರಿಂದ ಚಿತ್ರವನ್ನು ಕನ್ನಡಕ್ಕೂ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಆರಂಭದಲ್ಲಿ ಅಷ್ಟೇನು ಸದ್ದು ಮಾಡದ ಸಿನಿಮಾ ಕಾವಾಲ ಸಾಂಗ್ ಮತ್ತು ಆಕ್ಷನ್ ಪ್ಯಾಕ್ಡ್ ಟ್ರೈಲರ್‌ನಿಂದ ಕುತೂಹಲ ಮೂಡಿಸಿದೆ.

'ಜೈಲರ್' ಬುಲ್ಡೋಜರ್
ಕನ್ನಡದಲ್ಲಿ ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್ ಆಗದೇ ಇರುವುದು 'ಜೈಲರ್' ಚಿತ್ರಕ್ಕೆ ಪ್ಲಸ್ ಆಗಿದೆ. ಈಗಾಗಲೇ ರಿಲೀಸ್ ಆಗಿರುವ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ', 'ಕೌಸಲ್ಯ ಸುಪ್ರಜಾ ರಾಮ' ಹಾಗೂ 'ಆಚಾರ್ ಅಂಡ್ ಕೋ' ಸಿನಿಮಾಗಳ ಆರ್ಭಟ ಕೊಂಚ ಕಮ್ಮಿ ಆಗುತ್ತಿದ್ದು, 'ಟೋಬಿ' ಬರೋಕು ಮುನ್ನ 'ಜೈಲರ್' ಬಾಕ್ಸಾಫೀಸ್ ದೋಚುವ ಸುಳಿವು ಸಿಗುತ್ತಿದೆ. ಒಟ್ನಲ್ಲಿ ಕರ್ನಾಟಕ ಬಾಕ್ಸಾಫೀಸ್ ಮೇಲೆ 'ಜೈಲರ್' ಸಿನಿಮಾ ಬುಲ್ಡೋಜರ್ ರೀತಿ ಬಂದೆರಗುತ್ತಿದೆ.
ಕನ್ನಡ 1 ಶೋ
'ಜೈಲರ್' ಸಿನಿಮಾ ಕನ್ನಡಕ್ಕೆ ಡಬ್ ಆಗಿದ್ದರು ಸದ್ಯಕ್ಕೆ ಬೆಂಗಳೂರಿನಲ್ಲಿ ಒಂದು ಶೋ ಬುಕ್ಕಿಂಗ್ ಮಾತ್ರ ಓಪನ್ ಮಾಡಿದ್ದಾರೆ. ಬೇಡಿಕೆ ನೋಡಿಕೊಂಡು ಶೋ ಸಂಖ್ಯೆ ಹೆಚ್ಚಿಸುವ ಲೆಕ್ಕಾಚಾರ ನಡೀತಿದೆ. ಆದರೆ 483 ತಮಿಳು ಶೋಗಳ ಮುಂದೆ ಒಂದೇ ಒಂದು ಕನ್ನಡ ಶೋ ಸಾಕಾ? ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ.
'ಕಾವಾಲ' 10 ಕೋಟಿ ವೀವ್ಸ್
ಅಂದಹಾಗೆ ಅನಿರುದ್ಧ್ ರವಿಚಂದರ್ ಮ್ಯೂಸಿಕ್‌ನಲ್ಲಿ ಮೂಡಿ ಬಂದಿರುವ 'ಜೈಲರ್' ಚಿತ್ರದ 'ಕಾವಾಲ' ಸಾಂಗ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಸದ್ಯ ಸಾಂಗ್ 10 ಕೋಟಿಗೂ ಅಧಿಕ ವೀವ್ಸ್ ಸಾಧಿಸಿ ಮುನ್ನುಗ್ಗುತ್ತಿದೆ. ಇನ್ನು ಇನ್‌ಸ್ಟಾ ರೀಲ್ಸ್‌ನಲ್ಲೂ ದಾಖಲೆ ಬರೆದಿದೆ. ಶಿಲ್ಪಾ ರಾವ್ ಹಾಡಿರುವ ಹಾಡಿಗೆ ತಮನ್ನಾ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ಅದರಲ್ಲೂ ಹುಕ್ ಸ್ಟೆಪ್ ಸಖತ್ ವೈರಲ್ ಆಗಿದೆ.


Click it and Unblock the Notifications











