Jailer: 10 ದಿನಕ್ಕೆ ₹500 ಕೋಟಿ ಗಳಿಕೆ: ಈ ಸಾಧನೆ ಮಾಡಿದ 3ನೇ ತಮಿಳು ಚಿತ್ರ 'ಜೈಲರ್'.. ಇನ್ನೆರಡು ಸಿನಿಮಾ ಯಾವ್ದು?
ಬಾಕ್ಸಾಫೀಸ್‌ನಲ್ಲಿ 'ಜೈಲರ್' ನಾಗಾಲೋಟ ಮುಂದುವರೆದಿದೆ. 10 ದಿನಕ್ಕೆ ಸಿನಿಮಾ ಗಳಿಕೆ 500 ಕೋಟಿ ರೂ. ಗಡಿ ದಾಟಿದೆ. ನೆಲ್ಸನ್ ನಿರ್ದೇಶನ, ರಜನಿಕಾಂತ್ ಆರ್ಭಟಕ್ಕೆ ಕಾಲಿವುಡ್ ಬಾಕ್ಸಾಫೀಸ್ ದಾಖಲೆಗಳು ಧೂಳಿಪಟವಾಗಿದೆ. ಸೆಕೆಂಡ್ ವೀಕೆಂಡ್‌ನಲ್ಲೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ತಲೈವಾ ದರ್ಬಾರ್ ನೋಡುತ್ತಿದ್ದರೆ ಸಿನಿಮಾ 1000 ಕೋಟಿ ರೂ. ಕ್ಲಬ್ ಸೇರುವ ನಿರೀಕ್ಷೆಯಿದೆ.
ಆಗಸ್ಟ್ 10ರಂದು ಆಕ್ಷನ್ ಎಂಟರ್‌ಟೈನರ್ 'ಜೈಲರ್' ಸಿನಿಮಾ ರಿಲೀಸ್ ಆಗಿತ್ತು. ಮೊದಲ ಶೋನಿಂದಲೇ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡ ಸಿನಿಮಾ ಬಳಿಕ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯಲು ಆರಂಭಿಸಿತು. ಕರ್ನಾಟಕದಲ್ಲೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಈಗಾಗಲೇ ಕರ್ನಾಟಕದಲ್ಲೇ 40 ಕೋಟಿ ರೂ. ಅಧಿಕ ಗಳಿಕೆ ಕಂಡು ಸಿನಿಮಾ ಎಲ್ಲರ ಹುಬ್ಬೇರಿಸಿದೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಗೆಸ್ಟ್ ಅಪಿಯರೆನ್ಸ್ ಚಿತ್ರಕ್ಕೆ ಪ್ಲಸ್ ಆಗಿದೆ.

ಸನ್ ಪಿಕ್ಚರ್ಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ 'ಜೈಲರ್' ಸಿನಿಮಾ ನಿರ್ಮಾಣ ಮಾಡಿತ್ತು. ಮೇಕಿಂಗ್‌ಗಿಂತ ಕಲಾವಿದರು ಸಂಭಾವನೆ ರೂಪದಲ್ಲಿ ಭಾರೀ ಮೊತ್ತವನ್ನಯ ವ್ಯಯಿಸಲಾಗಿದೆ. ರಮ್ಯಾಕೃಷ್ಣ, ಜಾಕೀಶ್ರಾಫ್, ಮೋಹನ್ ಲಾಲ್, ತಮನ್ನಾ ಸೇರಿದಂತೆ ದೊಡ್ಡ ತಾರಾಗಣ 'ಜೈಲರ್' ಚಿತ್ರದಲ್ಲಿದೆ. ಹಳೇ ಕಥೆಯನ್ನೇ ಹೊಸ ರೂಪದಲ್ಲಿ ಕಟ್ಟಿಕೊಟ್ಟು ನೆಲ್ಸನ್ ಗೆದ್ದಿದ್ದಾರೆ. ಅಭಿಮಾನಿಗಳನ್ನು ರಂಜಿಸುವುದರ ಜೊತೆಗೆ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಸಿನಿಮಾ ಮಾಡಿ ತಂಡ ಗೆಲುವಿನ ನಗೆ ಬೀರಿದೆ.
ಮೊದಲ ದಿನವೇ 95 ಕೋಟಿ ರೂ. ಕಲೆಕ್ಷನ್ ಮಾಡಿದ್ದ 'ಜೈಲರ್' ಸಿನಿಮಾ 2ನೇ ದಿನ 52 ಕೋಟಿ ಬಾಚಿತ್ತು. 3ನೇ ದಿನ 69 ಕೋಟಿ, 4ನೇ ದಿನ 82 ಕೋಟಿ ಹೀಗೆ ಫಸ್ಟ್ ವೀಕೆಂಡ್‌ನಲ್ಲೇ ಆಕ್ಷನ್ ಥ್ರಿಲ್ಲರ್ ಸಿನಿಮಾ ಗಳಿಕೆ 300 ಕೋಟಿ ರೂ. ಗಡಿ ದಾಟಿತ್ತು. ಇನ್ನು 7ನೇ ದಿನಕ್ಕೆ 400 ಕೋಟಿ ಕಲೆಕ್ಷನ್ ಮಾಡಿದ್ದ ಸಿನಿಮಾ 200 ಕೋಟಿ ರೂ.ಗೂ ಅಧಿಕ ಶೇರ್ ತಂದುಕೊಟ್ಟಿತ್ತು. ಇದೀಗ 10 ದಿನಕ್ಕೆ 500 ಕೋಟಿ ರೂ. ಕ್ಲಬ್ ಸೇರಿದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಕೊಟ್ಟಿದ್ದಾರೆ.

ತಮಿಳು ಚಿತ್ರರಂಗದಲ್ಲಿ ಈವೆರೆಗೆ ಯಾವುದೇ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡಿಲ್ಲ. ಈ ಹಿಂದೆ 2 ಸಿನಿಮಾ ಮಾತ್ರ 500 ಕೋಟಿ ರೂ. ಗಡಿ ದಾಟಿತ್ತು. ಆ ಸಾಲಿಗೆ 3ನೇ ಸಿನಿಮಾ ಆಗಿ 'ಜೈಲರ್' ಎಂಟ್ರಿ ಕೊಟ್ಟಿದೆ. ಈ ಹಿಂದೆ ರಜನಿಕಾಂತ್ ನಟನೆಯ ರೋಬೊ '2.O' ಸಿನಿಮಾ ಈ ಸಾಧನೆ ಮಾಡಿತ್ತು. ಬಳಿಕ ಕಳೆದ ವರ್ಷ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್- 1' ಸಿನಿಮಾ ಈ ಸಾಲಿಗೆ ಸೇರಿಕೊಂಡಿತ್ತು.
'ಜೈಲರ್' ಸಿನಿಮಾ 10 ದಿನಕ್ಕೆ 500 ಕೋ ಟಿ ರೂ. ದೋಚಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಗಳಿಕೆ ಮಾಡುವ ಸಾಧ್ಯತೆಯಿದೆ. 2ನೇ ಭಾನುವಾರ ಭರ್ಜರಿಯಾಗಿ ಸೌಂಡ್ ಮಾಡುವ ನಿರೀಕ್ಷೆಯಿದೆ. ರಜನಿಕಾಂತ್ ನಟನೆಯ '2.O' ತಮಿಳಿನಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ ಎನಿಸಿಕೊಂಡಿದೆ. 'ಜೈಲರ್' ಆ ದಾಖಲೆ ಮುರಿಯುವ ಸುಳಿವು ಸಿಗುತ್ತಿದೆ.
ತಂದೆ- ಮಗನ ಸಿಂಪಲ್ ಕಥೆಯನ್ನು ನೆಲ್ಸನ್ ತಮ್ಮ ವಿಭಿನ್ನ ಟ್ರೀಟ್‌ಮೆಂಟ್‌ನಿಂದ ಗೆಲ್ಲಿಸಿಬಿಟ್ಟಿದ್ದಾರೆ. ಬಹಳ ದಿನಗಳಿಂದ ರಜನಿಕಾಂತ್ ಒಂದೊಳ್ಳೆ ಬ್ರೇಕ್‌ಗಾಗಿ ಕಾಯುತ್ತಿದ್ದರು. 'ಜೈಲರ್' ಆಗಿ ತಲೈವಾ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಇನ್ನು ಚಿತ್ರಕ್ಕಾಗಿ ಭಾರೀ ಮೊತ್ತದ ಸಂಭಾವನೆಯನ್ನು ಕಲಾವಿದರು ಜೇಬಿಗಿಳಿಸಿದ್ದಾರೆ.
ಸನ್ ಪಿಕ್ಚರ್ಸ್ ಸಂಸ್ಥೆ ತಮ್ಮದೇ ಸನ್ ನೆಕ್ಸ್ಟ್‌ನಲ್ಲಿ ಸಿನಿಮಾವನ್ನು ಡಿಜಿಟಲ್ ಫ್ಲಾಟ್‌ಪಾರ್ಮ್‌ಗೆ ತರಲಿದೆ. ಸೆಪ್ಟೆಂಬರ್ 7ಕ್ಕೆ ಸಿನಿಮಾ ಓಟಿಟಿಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ. ಒಟ್ನಲ್ಲಿ ಬಹಳ ದಿನಗಳಿಂದ ಒಂದೊಳ್ಳೆ ಸಿನಿಮಾಗಾಗಿ ಕಾಯುತ್ತಿದ್ದ ಪ್ರೇಕ್ಷಕರಿಗೆ 'ಜೈಲರ್' ಭರ್ಜರಿ ಮನರಂಜನೆ ಉಣಬಡಿಸಿದೆ.


Click it and Unblock the Notifications











