Vettaiyan Weekend Box office; ಬಾಕ್ಸಾಫೀಸ್‌ನಲ್ಲಿ 'ವೆಟ್ಟೆಯಾನ್' ಕಲೆಕ್ಷನ್ ಬೇಟೆ; ತಲೈವಾ ಮ್ಯಾಜಿಕ್
ದಸರಾ ಸಂಭ್ರಮದಲ್ಲಿ ತೆರೆಗೆ ಬಂದ 'ವೆಟ್ಟೆಯಾನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ನಾಗಾಲೋಟ ಮುಂದುವರೆಸಿದೆ. ಫಸ್ಟ್ ವೀಕೆಂಡ್‌ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಬಾಕ್ಸಾಫೀಸ್‌ನಲ್ಲಿ ರಜನಿಕಾಂತ್ ಹಾಗೂ ಅಮಿತಾಬ್ ಬಚ್ಚನ್ ಖದರ್ ಏನು? ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಜ್ಞಾನವೇಲ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ವೆಟ್ಟೆಯಾನ್' ಸಿನಿಮಾ ಅಕ್ಟೋಬರ್ 10ಕ್ಕೆ(ಗುರುವಾರ) ತೆರೆಗೆ ಬಂದಿತ್ತು. ಮೊದಲ ದಿನವೇ ಸಿನಿಂಆ 60 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗಿತ್ತು. ಇನ್ನು ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು, ಹಿಂದಿ ಭಾಷೆಗಳಿಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗಿದೆ. ಹಿಂದಿ ವರ್ಷನ್‌ಗೆ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಇನ್ನುಳಿದಂತೆ ದೇಶ ವಿದೇಶಗಳಲ್ಲಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಎನ್‌ಕೌಂಟರ್ ಸರಿನಾ? ತಪ್ಪಾ? ಎನ್ನುವ ಚರ್ಚೆಯ ಸುತ್ತಾ 'ವೆಟ್ಟೆಯಾನ್' ಸಿನಿಮಾ ಕಥೆ ಸಾಗುತ್ತದೆ. ಶರಣ್ಯ ಎನ್ನುವ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಮೇಲ್ನೋಟಕ್ಕೆ ಆರೋಪಿಯಂತೆ ಕಾಣುವ ಗುಣ ಎಂಬಾತನನ್ನು ಎಸ್‌ಪಿ ಅಥಿಯಾನ್(ರಜನಿಕಾಂತ್) ಎನ್‌ಕೌಂಟರ್ ಮಾಡುತ್ತಾನೆ. ಬಳಿಕ ಆತ ತಪ್ಪಿತಸ್ಥ ಎನ್ನುವುದು ಗೊತ್ತಾಗುತ್ತದೆ. ತನ್ನ ತಪ್ಪಿನ ಅರಿವಾಗಿ ಅಥಿಯಾನ್ ಆ ಪ್ರಕರಣದ ಮರು ತನಿಖೆ ಆರಂಭಿಸುತ್ತಾನೆ. ಮುಂದೇನಾಗುತ್ತದೆ ಎನ್ನುವುದು 'ವೆಟ್ಟೆಯಾನ್' ಕಥೆ.
ಒಂದೊಳ್ಳೆ ಕತೆಯ ಜೊತೆಗೆ ರಜನಿಕಾಂತ್ ಅಭಿಮಾನಿಗಳು ಕೇಳುವ ಮನರಂಜನೆ ಅಂಶಗಳನ್ನು ಸೇರಿಸಿ ಜ್ಞಾನವೇಲ್ 'ವೆಟ್ಟೆಯಾನ್' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಅನಿರುದ್ಧ ರವಿಚಂದರ್ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿದೆ. ವಿಶೇಷ ನ್ಯಾಯಾಧೀಶನಾಗಿ ಬಿಗ್‌ಬಿ ನಟಿಸಿದ್ದಾರೆ. ವಿಲನ್ ಆಗಿ ರಾಣಾ ದಗ್ಗುಬಾಟಿ ಅಬ್ಬರಿಸಿದ್ದರೆ ಪೊಲೀಸ್ ಇನ್‌ಫಾರ್ಮರ್ ಆಗಿ ಫಹಾದ್ ಫಾಸಿಲ್ ಗಮನ ಸೆಳೆದಿದ್ದಾರೆ.
'ವೆಟ್ಟೆಯಾನ್' ಚಿತ್ರಕ್ಕೆ ದಸರಾ ರಜೆ ವರದಾನವಾಗಿದೆ. ಚಿತ್ರ ಕರ್ನಾಟಕದಲ್ಲಿ ಕೂಡ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಮೊದಲ 4 ದಿನಕ್ಕೆ ತಮಿಳುನಾಡಿನಲ್ಲೇ ಸಿನಿಮಾ 80 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ. ವಿಶ್ವದಾದ್ಯಂತ ಫಸ್ಟ್ ವೀಕೆಂಡ್ ಸಿನಿಮಾ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ಭಾರತದಲ್ಲೇ ಸಿನಿಮಾ ಒಟ್ಟು 100 ಕೋಟಿ ರೂ. ಗಳಿಕೆ ಕಂಡಿರುವ ಲೆಕ್ಕಾಚಾರ ಇದೆ.

ಮತ್ತೊಂದು ವಾದದ ಪ್ರಕಾರ 'ವೆಟ್ಟೆಯಾನ್' ಸಿನಿಮಾ ಮೊದಲ 4 ದಿನಕ್ಕೆ 160 ಕೋಟಿ ರೂ. ಬಾಚಿರುವ ಅಂದಾಜಿದೆ. ಟಿಕೆಟ್ ದರ ಹೆಚ್ಚಿಸಿರುವುದು ಕೂಡ ಸಿನಿಮಾ ಗಳಿಕೆಗೆ ವರದಾನವಾಗಿದೆ. ಕಲೆಕ್ಷನ್ ಸಂಖ್ಯೆ ವಿಚಾರದಲ್ಲಿ ಹೆಚ್ಚು ಕಮ್ಮಿ ಇದ್ದರೂ ಸಿನಿಮಾ ಭರ್ಜರಿ ಯಶಸ್ಸು ಗಳಿಸಿರುವುದು ನಿಜ. ಆಕ್ಷನ್ ಥ್ರಿಲ್ಲರ್ ಸಿನಿಮಾ ಫ್ಯಾಮಿಲಿ ಆಡಿಯನ್ಸ್‌ನ ಚಿತ್ರಮಂದಿರಗಳಿಗೆ ಸೆಳೆಯುತ್ತಿದೆ. ಇದೇ ಒಂದು ಚಿತ್ರದ ನಿಜವಾದ ಸಕ್ಸಸ್. ಮಹಿಳಾ ಪ್ರೇಕ್ಷಕರು ಕೂಡ ಸಿನಿಮಾ ನೋಡಿ ಕೊಂಡಾಡುತ್ತಿದ್ದಾರೆ.
ಒಂದೊಳ್ಳೆ ಮೆಸೇಜ್ ಜೊತೆಗೆ ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುವಂತ ಸಿನಿಮಾ ಕಟ್ಟಿಕೊಟ್ಟು ಜ್ಞಾನವೇಲ್ ಗೆದ್ದಿದ್ದಾರೆ. ದಸರಾ ರಜೆ ಮುಗಿದು ಸೋಮವಾರ ಸಿನಿಮಾ ಪ್ರದರ್ಶನ ನಡೆಯುತ್ತಿದೆ. ಮೊದಲ ವೀಕೆಂಡ್ ಬಳಿಕ ಬರುವ ಸೋಮವಾರ ಯಾವುದೇ ಸಿನಿಮಾ ಸೋಲು ಗೆಲುವಿಗೆ ದಿಕ್ಸೂಚಿ ಆಗುತ್ತದೆ. 'ವೆಟ್ಟೆಯಾನ್' 5ನೇ ದಿನ ಯಾವ ರೀತಿ ಸದ್ದು ಮಾಡ್ತಾನೆ ಎಂದು ಕಾದು ನೋಡಬೇಕಿದೆ.
ಸತತ ಸೋಲುಗಳಿಂದ ಕಂಗೆಟ್ಟಿದ್ದ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಗೆ 'ವೆಟ್ಟೆಯಾನ್' ಗೆಲುವು ಸಂತಸ ತಂದಿದೆ. ಇದಕ್ಕೂ ಮುನ್ನ ರಜನಿಕಾಂತ್ ನಟಿಸಿದ 'ಲಾಲ್ ಸಲಾಂ' ಚಿತ್ರವನ್ನು ಇದೇ ಸಂಸ್ಥೆ ನಿರ್ಮಿಸಿತ್ತು. ಆ ಸ್ಪೋರ್ಟ್ಸ್, ಆಕ್ಷನ್ ಡ್ರಾಮಾ ಸೋತಿತ್ತು. ಬಳಿಕ ಕಮಲ್ ಹಾಸನ್ ನಟಿಸಿದ 'ಇಂಡಿಯನ್-2' ಸಿನಿಮಾ ಭಾರೀ ನಷ್ಟ ತಂದೊಡ್ಡಿತ್ತು.


Click it and Unblock the Notifications











