"ನಮ್ಮಮ್ಮ 2ನೇ ಮಗುವಿನ ಗರ್ಭಿಣಿ ಅಂತೆ.. ಪ್ಲೀಜ್ ಆಕೆಯನ್ನು ನೆಮ್ಮದಿಯಾಗಿ ಬಿಟ್ಟುಬಿಡಿ ": ಮೀನಾ ಮಗಳ ಮಾತಿಗೆ ತಲೈವಾ ಕಣ್ಣೀರು
ಬಹುಭಾಷಾ ನಟಿ ಮೀನಾ ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ್ದಾರೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದು ಮುಂದೆ ಪಂಚಭಾಷಾ ತಾರೆಯಾಗಿ ಮೆರೆದರು. ಕಳೆದ ವರ್ಷ ಪತಿಯ ಅಗಲಿಕೆಯಿಂದ ನಟಿ ಮೀನಾ ಖಿನ್ನತೆಗೆ ಒಳಗಾಗಿದ್ದರು. ನಿಧಾನವಾಗಿ ಚೇತರಿಸಿಕೊಂಡ ನಟಿ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಮೀನಾ ಚಿತ್ರರಂಗದಲ್ಲಿ 4 ದಶಕ ಪೂರೈಸಿದ್ದಕ್ಕೆ ಅದ್ಧೂರಿ ಕಾರ್ಯಕ್ರಮ ನಡೀತು.
ನಟಿ ಮೀನಾ ರಜನಿಕಾಂತ್, ಚಿರಂಜೀವಿ, ನಾಗಾರ್ಜುನ, ವೆಂಕಟೇಶ್, ಮೋಹನ್ ಲಾಲ್, ವಿಷ್ಣುವರ್ಧನ್, ಕಮಲ್ ಹಾಸನ್, ಸುದೀಪ್‌ರಂತಹ ಸೂಪರ್ ಸ್ಟಾರ್‌ಗಳ ಜೊತೆ ಬಣ್ಣ ಹಚ್ಚಿ ಗೆದ್ದಿದ್ದಾರೆ. 2009ರಲ್ಲಿ ಮೀನಾ ಬೆಂಗಳೂರು ಮೂಲದ ವಿದ್ಯಾಸಾಗರ್ ಎಂಬುವವರ ಕೈ ಹಿಡಿದಿದ್ದರು. ದಂಪತಿಗೆ ನೈನಿಕಾ ಎಂಬ ಮಗಳು ಇದ್ದಾಳೆ. ನೈನಿಕ ಕೂಡ ಬಾಲ ನಟಿಯಾಗಿ ಸಿನಿಮಾದಲ್ಲಿ ನಟಿಸಿದ್ದಾಳೆ. ದಳಪತಿ ವಿಜಯ್ ನಟನೆಯ ಸೂಪರ್ ಹಿಟ್ 'ತೇರಿ' ಚಿತ್ರದಲ್ಲಿ ಈಕೆಯ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ಪತಿಯ ಅಗಲಿಕೆಯ ನಂತರ ಸಾಕಷ್ಟು ವದಂತಿಗಳು ಹರಿದಾಡಿತ್ತು. ವಿದ್ಯಾಸಾಗರ್ ಶ್ವಾಸಕೋಶ ಸಂಬಂಧಿತ ಕಾಯಿಲೆಯಿಂದ ಕಳೆದ ವರ್ಷ ಜೂನ್ 22ಕ್ಕೆ ನಿಧನರಾದರು. ಆ ನಂತರ ಅವರ ಮರಣ ಹಾಗೂ ಮೀನಾ ಬಗ್ಗೆ ಸಾಕಷ್ಟು ಸುಳ್ಳು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಡಲು ಪ್ರಾರಂಭವಾಯಿತು. ಮೀನಾ 2ನೇ ಮದುವೆಗೂ ಸಿದ್ಧರಾಗಿದ್ದಾರಂತೆ, ಮೀನಾ ಮತ್ತೆ ಗರ್ಭಿಣಿ ಅಂತೆ ಹೀಗೆ ಚಿತ್ರವಿಚಿತ್ರ ಸುದ್ದಿಗಳು ವೈರಲ್ ಆಗಿತ್ತು. ಆದರೆ ಇದನ್ನೆಲ್ಲಾ ಆಕೆಯ ಆಪ್ತರು ಖಂಡಿಸಿದ್ದರು.
ಮೀನಾ ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ಹಿನ್ನೆಲೆ ಅದ್ಧೂರಿ ಕಾರ್ಯಕ್ರಮದಲ್ಲಿ ಆಕೆಯನ್ನು ಸನ್ಮಾನಿಸಲಾಯಿತು. ಸೂಪರ್ ರಜನಿಕಾಂತ್, ಪ್ರಭುದೇವಾ ಸೇರಿದಂತೆ ಹಲವರು ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ವೇದಿಕೆಯಲ್ಲಿ ತಾಯಿ ಬಗ್ಗೆ ಮಗಳು ನೈನಿಕಾ ಮಾತನಾಡಿರುವ ವಿಡಿಯೋ ಬೈಟ್ ಪ್ಲೇ ಮಾಡಲಾಯಿತು. ತಂದೆ ತಾಯಿ ಬಗ್ಗೆ 12 ವರ್ಷ ವಯಸ್ಸಿನ ನೈನಿಕಾ ಮಾತುಗಳನ್ನು ಕೇಳುತ್ತಿದ್ದವರು ಭಾವುಕರಾದರು. ರಜನಿಕಾಂತ್ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿತ್ತು.
"'ಅಮ್ಮ ನೀನು ಈ ಸ್ಥಾನಕ್ಕೆ ಎಷ್ಟೋ ಕಷ್ಟಪಟ್ಟು ಬಂದಿದ್ದೀಯಾ. ನಟಿಯಾಗಿ ಯಾವಾಗಲೂ ಕಷ್ಟಪಡುತ್ತಲೇ ಇರುತ್ತೀಯ. ಆದರೆ ಆ ಕಷ್ಟವನ್ನು ಮನೆಯಲ್ಲಿ ಯಾವಾಗಲೂ ತೋರಿಸಲಿಲ್ಲ. ನನ್ನನ್ನು ಪ್ರತಿ ಕ್ಷಣ ಬಹಳ ಎಚ್ಚರಿಕೆಯಿಂದ ನೋಡಿಕೊಂಡಿದ್ದೀಯ. ಚಿಕ್ಕಂದಿನಲ್ಲಿ ನಾನು ನಿನಗೆತುಂಬಾ ತೊಂದರೆ ಕೊಟ್ಟಿದ್ಧೇನೆ. ಇನ್ನು ಮೇಲೆ ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ತಂದೆ ಮರಣದ ನಂತರ ಜೀವನ ಕತ್ತಲಾಗಿ ಹೋಗಿತ್ತು. ನೀನು ಮಾನಸಿಕವಾಗಿ ಕುಗ್ಗಿ ಹೋಗಿದ್ದು ನನಗೆ ಗೊತ್ತು. ಆದರೆ ಕೆಲವು ಮಾಧ್ಯಮಗಳು ನಮ್ಮ ತಾಯಿ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದವು"

"ನಮ್ಮಮ್ಮ 2ನೇ ಮಗುವಿನ ಗರ್ಭಿಣಿ ಆಗಿದ್ದಾರೆ ಎನ್ನುವ ಸುಳ್ಳು ಸುದ್ದಿಯನ್ನು ಮರೆಯೋಕ್ಕಾಗಲ್ಲ. ನನಗೆ ಇದು ತಮಾಷೆ ಅನ್ನಿಸಿತು. ದಯವಿಟ್ಟು ನನಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಬಿಡಿ. ಅಮ್ಮ ಹೀರೊಯಿನ್ ಆಗಿರಬಹುದು. ಆದರೆ ನಿಮ್ಮಂತೆಯೇ ಮನುಷ್ಯಳು. ಅವರಿಗೂ ಭಾವನೆಗಳು ಇರುತ್ತದೆ. ದಯವಿಟ್ಟು ಈ ರೀತಿ ಮಾಡಬೇಡಿ, ನಿಮಗೆ ಯಾರಾದರೂ ಮಾಡಿದರೆ ನಿಮಗೆ ಕಷ್ಟ ಆಗುತ್ತಲ್ವಾ? ಹಾಗಾಗಿ ಇಂತಹ ಸುಳ್ಳು ಸುದ್ದಿ ಹಬ್ಬಿಸಬೇಡಿ" ಎಂದು ನೈನಿಕಾ ಮಾತನಾಡಿದ್ಧಾಳೆ. ಆಕೆಯ ಮಾತುಗಳನ್ನು ಕೇಳುತ್ತಾ ತಲೈವಾ ಸಹ ಭಾವುಕರಾದರು. ಈ ವೀಡಿಯೋ ವೈರಲ್ ಆಗ್ತಿದೆ.
"ನಮ್ಮ ತಾಯಿ ನಟಿಸಿದ 'ಮುತ್ತು' ಚಿತ್ರವನ್ನು ಸಾಕಷ್ಟು ಬಾರಿ ನೋಡಿದ್ದೇನೆ. ರಜನಿಕಾಂತ್ ಅಂಕಲ್ ಹಾಗೂ ನಮ್ಮ ತಾಯಿ ಜೋಡಿ ತೆರೆಮೇಲೆ ಸೂಪರ್ ಆಗಿ ಇರುತ್ತದೆ. ನಿಜ ಜೀವನದಲ್ಲಿ ನಮ್ಮಪ್ಪ, ನಮ್ಮಮ್ಮರದ್ದು ಬೆಸ್ಟ್ ಜೋಡಿ" ಎಂದು ನೈನಿಕಾ ಹೇಳಿದ್ದಾಳೆ. 'ಪುಟ್ನಂಜ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಮೀನಾ ಮುಂದೆ 'ಚೆಲುವ', 'ಶ್ರೀಮಂಜುನಾಥ', 'ಗ್ರಾಮ ದೇವತೆ', 'ಸಿಂಹಾದ್ರಿಯ ಸಿಂಹ', 'ಸ್ವಾತಿ ಮುತ್ತು' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು.


Click it and Unblock the Notifications











