'ಸೂಪರ್ ಸ್ಟಾರ್' ಟೈಟಲ್‌ಗಾಗಿ ಕಾಲಿವುಡ್‌ನಲ್ಲಿ ಕಿರಿಕ್: ತಲೈವಾ ಏಟಿಗೆ ತಿರುಗೇಟು ಕೊಡ್ತಾರಾ ವಿಜಯ್?
ಕಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಯಾರು? ಎನ್ನುವ ಚರ್ಚೆ ಕಳೆದೊಂದು ವರ್ಷದಿಂದ ಭಾರೀ ಸದ್ದು ಮಾಡ್ತಿದೆ. ಇತ್ತೀಚೆಗೆ 'ಜೈಲರ್' ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ರಜನಿಕಾಂತ್ ಕಾಗೆ ಹಾಗೂ ಹದ್ದಿನ ಕಥೆ ಹೇಳಿ ವಿಜಯ್‌ಗೆ ಟಾಂಗ್ ಕೊಟ್ಟಿದ್ದಾರೆ ಎನ್ನುವುದು ಕೆಲವರ ವಾದ. ಈ ಹಿನ್ನೆಲೆಯಲ್ಲಿ ಮತ್ತೆ ಸೂಪರ್ ಸ್ಟಾರ್ ಯಾರು ಎನ್ನುವ ಚರ್ಚೆ ಮುನ್ನೆಲೆಗೆ ಬಂದಿದೆ.
ತಮಿಳು ಚಿತ್ರರಂಗದ ನಂಬರ್ ವನ್ ನಟ ಯಾರು ಎಂದರೆ ಇತ್ತೀಚೆಗೆ ದಳಪತಿ ವಿಜಯ್ ಹೆಸರು ಕೇಳಿ ಬರುತ್ತಿದೆ. ಸಿನಿಮಾ ಕಲೆಕ್ಷನ್ ಹಾಗೂ ಸಂಭಾವನೆ ವಿಚಾರದಲ್ಲಿ ರಜನಿಕಾಂತ್‌ನ ವಿಜಯ್ ಹಿಂದಿಕ್ಕಿದ್ದಾರೆ. ಅದೇ ಕಾರಣಕ್ಕೆ ಸೂಪರ್ ಸ್ಟಾರ್ ಬಿರುದು ವಿಜಯ್‌ಗೆ ಕೊಡಬೇಕು ಎಂದು ಕೆಲ ಅಭಿಮಾನಿ ಬೇಡಿಕೆ ಇಡುತ್ತಿದ್ದಾರೆ. ಆದರೆ ಇದನ್ನು ಒಪ್ಪಲು ಯಾರು ಸಿದ್ಧರಿಲ್ಲ. ಬ್ಲೂ ಸಟ್ಟೈ ಮಾರನ್ ಎಂಬ ಯೂಟ್ಯೂಬರ್ ರಜನಿಕಾಂತ್ ವಿರುದ್ಧ ಮಾತನಾಡುತ್ತಲೇ ಬರುತ್ತಿದ್ದಾರೆ. ರಜನಿ ಹೇಳಿದ ಹದ್ದು, ಕಾಗೆ ಕಥೆಗೂ ತಿರುಗೇಟು ನೀಡದ್ದರು.

ಸದ್ಯ ದಳಪತಿ ವಿಜಯ್ ರಾಜಕೀಯರಂಗ ಸೇರುವ ಸುಳಿವು ಸಿಗುತ್ತಿದೆ. ಅದಕ್ಕಾಗಿ ಈಗಾಗಲೇ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ. ತಲೈವಾ ಹೊಸ ಪಕ್ಷ ಕಟ್ಟಿ ಜನಸೇವೆಗೆ ಮನಸ್ಸು ಮಾಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಆರೋಗ್ಯದ ನೆಪವೊಡ್ಡಿ ಹಿಂದೆ ಸರಿದಿದ್ದರು. ಆದರೆ ವಿಜಯ್ ತಮಿಳುನಾಡು ರಾಜಕೀಯದಲ್ಲಿ ಬದಲಾವಣೆ ತರಲು ಮನಸ್ಸು ಮಾಡಿದ್ದಾರಂತೆ. ಇಂತಹ ಹೊತ್ತಲ್ಲಿ ಸೂಪರ್ ಸ್ಟಾರ್ ಟೈಟಲ್ ವಿಚಾರ ಮತ್ತಷ್ಟು ಮಹತ್ವ ಪಡೆದಿದೆ.
'ಜೈಲರ್' ತಲೈವಾ ಟಾಂಗ್ ಕೊಟ್ರಾ?
ಕಾಲಿವುಡ್‌ನಲ್ಲಿ ವಿಜಯ್ ಸೂಪರ್ ಸ್ಟಾರ್ ಎಂದು ಬಿಂಬಿಸಲು ಕೆಲವರು ಪ್ರಯತ್ನ ಪಡುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ 'ಜೈಲರ್' ಆಡಿಯೋ ಲಾಂಚ್‌ನಲ್ಲಿ ತಲೈವಾ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. "ಹುಕುಂ' ಸಾಂಗ್ ಕೇಳಿದಾಗ ನಾನು ಶಾಕ್ ಆಗಿದ್ದೆ. ಸೂಪರ್ ಸ್ಟಾರ್ ಪದವನ್ನು ತೆಗೆದುಹಾಕಲು ಕೇಳಿದ್ದೆ. ಸೂಪರ್ ಸ್ಟಾರ್ ಟೈಟಲ್ ನನಗೆ ಸದಾ ಕಷ್ಟ ಎನಿಸುತ್ತದೆ. ಸಣ್ಣದೊಂದು ಕಥೆ ಹೇಳ್ತೀನಿ ಒಂದು ಕಾಡಲ್ಲಿ ಹದ್ದು ಹಾಗೂ ಕಾಗೆ ಇರುತ್ತವೆ. ಕಾಗೆ ಯಾವಾಗಲೂ ಹದ್ದಿಗಿಂತ ಎತ್ತರದಲ್ಲಿ ಹಾರಲು ಪ್ರಯತ್ನಿಸುತ್ತದೆ. ಆದರೆ ಯಾವತ್ತಿಗೂ ಅದು ಸಾಧ್ಯವಿಲ್ಲ" ಎಂದಿದ್ದರು. ಸೂಪರ್ ಸ್ಟಾರ್ ಟೈಟಲ್ ಕೇಳುತ್ತಿರುವವರಿಗೆ ರಜನಿ ಪರೋಕ್ಷವಾಗಿ ಈ ರೀತಿ ಹೇಳಿದ್ದಾರೆ ಅನ್ನೋ ಚರ್ಚೆ ನಡೀತಿದೆ.
ಒಬ್ಬರೇ ಸೂಪರ್ ಸ್ಟಾರ್ ಎಂದ ಉಪ್ಪಿ
ದಶಕಗಳ ಹಿಂದೆಯೇ ಸ್ಯಾಂಡಲ್‌ವುಡ್‌ನಲ್ಲಿ ಉಪೇಂದ್ರಗೆ 'ಸೂಪರ್ ಸ್ಟಾರ್' ಬಿರುದು ಸಿಕ್ಕಿತ್ತು. ಬಳಿಕ ರಿಯಲಿಸ್ಟಿಕ್ ಸಿನಿಮಾಗಳನ್ನು ಮಾಡಿದ ಕಾರಣಕ್ಕೆ ರಿಯಲ್ ಸ್ಟಾರ್ ಟೈಟಲ್ ಕೂಡ ಅವರ ಹೆಸರಿನ ಜೊತೆ ಸೇರಿಕೊಂಡಿತ್ತು. ನಂತರ ಸೂಪರ್ ಸ್ಟಾರ್ ಎನ್ನುವ ಸಿನಿಮಾದಲ್ಲೂ ಉಪ್ಪಿ ನಟಿಸಿದರು. ಆದರೆ ಸ್ವತಃ ಉಪ್ಪಿ ಭಾರತೀಯ ಚಿತ್ರರಂಗಕ್ಕೆ ರಜನಿಕಾಂತ್ ಒಬ್ಬರೇ ಸೂಪರ್ ಸ್ಟಾರ್ ಎನ್ನುತ್ತಾರೆ. ಇತ್ತೀಚೆಗೆ 'ಕಬ್ಜ' ಪ್ರಚಾರದ ವೇಳೆ ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲೂ ಇದೇ ಮಾತು ಪುನರುಚ್ಚರಿಸಿದ್ದರು.

ಸ್ಟಾರ್‌ಗಳೇ ಒಪ್ಪಿದ ಸೂಪರ್ ಸ್ಟಾರ್
ಉಪೇಂದ್ರ ಒಬ್ಬರೇ ಅಲ್ಲ, ಡಾ. ರಾಜ್‌ಕುಮಾರ್ ಸೇರಿದಂತೆ ಎಲ್ಲಾ ಚಿತ್ರರಂಗದ ಟಾಪ್ ಹೀರೋಗಳು ಕೂಡ ರಜನಿಕಾಂತ್ ಅಭಿಮಾನಿಗಳೇ ಆಗಿದ್ದಾರೆ. ಬಾಲಿವುಡ್‌ನಲ್ಲಿ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ತೆಲುಗಿನಲ್ಲಿ ಚಿರಂಜೀವಿ, ಮಹೇಶ್ ಬಾಬು, ಮಾಲಿವುಡ್‌ನಲ್ಲಿ ಮೋಹನ್ ಲಾಲ್, ಮಮ್ಮುಟ್ಟಿ ಎಲ್ಲರೂ ಆಯಾ ಚಿತ್ರರಂಗದಲ್ಲಿ ಸೂಪರ್ ಸ್ಟಾರ್‌ಗಳೇ. ಆದರೆ ಅವರೆಲ್ಲರೂ ಕೂಡ ರಜನಿಕಾಂತ್ ಒಬ್ಬರೇ ಸೂಪರ್ ಸ್ಟಾರ್ ಎನ್ನುತ್ತಾರೆ.
ತಲೈವಾಗೆ ತಿರುಗೇಟು ಕೊಡ್ತಾರಾ ವಿಜಯ್?
ಸದ್ಯ ದಳಪತಿ ವಿಜಯ್ 'ಲಿಯೋ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಲೋಕೇಶ್ ಕನಕರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಒಂದೊಂದೇ ಸಾಂಗ್ ರಿಲೀಸ್ ಆಗ್ತಿದೆ. ಸಾಮಾನ್ಯವಾಗಿ ವಿಜಯ್ ಹೆಚ್ಚಾಗಿ ಸಿನಿಮಾ ಪ್ರಚಾರ ಮಾಡಲ್ಲ. ಆದರೆ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ವೇದಿಕೆ ಏರಿ ಮಾತನಾಡುತ್ತಾರೆ. ಅಕ್ಟೋಬರ್ 19ಕ್ಕೆ 'ಲಿಯೋ' ಸಿನಿಮಾ ತೆರೆಗಪ್ಪಳಿಸಲಿದೆ. ಅದಕ್ಕೂ ಮುನ್ನ ನಡೆಯುವ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ತಲೈವಾಗೆ ವಿಜಯ್ ತಿರುಗೇಟು ಕೊಡುತ್ತಾರೆ ಅನ್ನೋದು ಕೆಲವರ ವಾದ.


Click it and Unblock the Notifications











