ಕೊರೊನಾ ಭೀಕರತೆ ನಡುವೆಯೂ 'ಅಣ್ಣಾತೆ' ಚಿತ್ರೀಕರಣ ಮುಗಿಸಿದ ರಜನಿಕಾಂತ್
ಕೊರೊನಾ ಹಟ್ಟಹಾಸಕ್ಕೆ ಇಡೀ ದೇಶವೇ ತತ್ತರಿಸಿ ಹೋಗಿದೆ. ಸಾವಿರಾರು ಮಂದಿ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಕೊರೊನಾ ಭೀಕರತೆಯ ಕಾರಣ ಸಿನಿಮಾ ಕೆಲಸಗಳು ಸ್ಥಗಿತಗೊಂಡಿದೆ. ಆದರೆ ಸೂಪರ್ ಸ್ಟಾರ್ ರಜನಿಕಾಂತ್ ಕೊರೊನಾ ನಡುವೆಯೂ ಚಿತ್ರೀಕರಣ ಮಾಡಿದ್ದಾರೆ. ಹೈದರಾಬಾದ್ ಚಿತ್ರೀಕರಣವನ್ನು ಮುಕ್ತಾಯಗೊಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಚಿತ್ರೀಕರಣ ಪ್ರಾರಂಭ ಮಾಡಿದ್ದ ಅಣ್ಣಾತೆ ತಂಡಕ್ಕೆ ಕೊರೊನಾ ಶಾಕ್ ನೀಡಿತ್ತು. ಚಿತ್ರತಂಡದ ಅನೇಕ ಮಂದಿಗೆ ಕೊರೊನಾ ಪಾಸಿಟಿವ್ ಬಂದ ಬಳಿಕ ಚಿತ್ರೀಕರಣ ಸ್ಥಗಿತಗೊಳಿಸಿದ್ದರು. ಆ ನಂತರ ರಜನಿಕಾಂತ್ ಕೂಡ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿತ್ತು.
ಆದರೆ ಬಳಿಕ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಿತ್ತು ಚಿತ್ರತಂಡ. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಕೊರೊನಾ ಮುನ್ನೆಚ್ಚರಿಕೆಯೊಂದಿಗೆ ಚಿತ್ರೀಕರಣ ಮಾಡುತ್ತಿದ್ದ ಸಿನಿಮಾತಂಡ ಈಗ ಯಶಸ್ವಿಯಾಗಿ ಚಿತರೀಕರಣ ಮಾಡಿ ಮುಗಿಸಿದ್ದಾರೆ.

ಅನೇಕ ಕಾರಣಗಳಿಂದ ತಡವಾಗುತ್ತಲೇ ಬಂದಿರುವ ಅಣ್ಣಾತೆ ಚಿತ್ರೀಕರಣ ಕೊನೆಗೂ ಮುಗಿಸಿ ಸೂಪರ್ ಸ್ಟಾರ್ ರಜನಿಕಾಂತ್ ಇಂದು ಚೆನ್ನೈಗೆ ವಾಪಸ್ ಆಗುತ್ತಿದ್ದಾರೆ. ಸುಮಾರು 30 ದಿನಗಳ ಕಾಲ ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಇತ್ತೀಚಿಗಷ್ಟೆ ಚಿತ್ರದ ನಾಯಕಿ ನಯನತಾರಾ ಕೂಡ ಹೈದರಾಬಾದ್‌ಗೆ ಆಗಮಿಸಿ, ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇದೀಗ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ್ದಾರೆ.
ಸಾಂಕ್ರಾಮಿಕ ರೋಗದ ತೀವ್ರತೆಯ ನಡುವೆಯೂ ಶೂಟಿಂಗ್ ಮುಗಿಸಿದ ರಜನಿಕಾಂತ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಣ್ಣಾತೆ ನಿರ್ದೇಶಕ ಸಿರುಥೈ ಶಿವ ಸಾರಥ್ಯದಲ್ಲಿ ಮೂಡಿಬರುತ್ತಿದೆ. ಚಿತ್ರದಲ್ಲಿ ಹಿರಿಯ ನಟಿಯರಾದ ಮೀನಾ ಮತ್ತು ಖುಷ್ಬೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಟಿ ಕೀರ್ತಿ ಸುರೇಶ್ ಮತ್ತು ನಯನತಾರಾ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.
ಅಣ್ಣಾತೆ ಸಿನಿಮಾ ತಮಿಳಿನ ಜೊತೆಗೆ ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ. ಸನ್ ಪಿಕ್ಚರ್ಸ್ ಬಂಡವಾಳ ಹೂಡಿದೆ. ಬಹುನಿರೀಕ್ಷೆಯ ಚಿತ್ರವನ್ನು ದೀಪಾವಳಿಗೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅನೌನ್ಸ್ ಮಾಡಿದೆ. ಆದರೆ ಕೊರೊನಾ ಹಾವಳಿಯಿಂದ ಸಿನಿಮಾದವರ ಲೆಕ್ಕಾಚಾರ ತಲೆಕೆಳಗಾಗಿದ್ದು, ಅಣ್ಣಾತೆ ಕೂಡ ಅಂದುಕೊಂಡ ದಿನಕ್ಕೆ ಬಿಡುಗಡೆಯಾಗುತ್ತಾ ಎಂದು ಕಾದುನೋಡಬೇಕು.


Click it and Unblock the Notifications











