ಮನೆ ಕೆಲಸದಾಕೆಗೆ ಸಾರ್ವಜನಿಕವಾಗಿ ಅವಮಾನ ಮಾಡಿದ್ರಾ ರಜನಿಕಾಂತ್? ವಿಡಿಯೋ ವೈರಲ್
ಹೇಳಿಕೇಳಿ ಇದು ಸೋಶಿಯಲ್ ಮೀಡಿಯಾ ಜಮಾನ. ಪ್ರತಿಯೊಬ್ಬರು ಜೇಬಿನಲ್ಲಿ ಕ್ಯಾಮರಾ(ಮೊಬೈಲ್) ಇಟ್ಕೊಂಡು ಓಡಾಡುತ್ತಿದ್ದಾರೆ. ಅದರಲ್ಲೂ ಸಾರ್ವಜನಿಕವಾಗಿ ಸೆಲೆಬ್ರೆಟಿಗಳ ಪ್ರತಿ ಕದಲಿಕೆ ಕೂಡ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗುತ್ತಿರುತ್ತದೆ. ಇನ್ನು ಹೀಗೆ ಸೆರೆಯಾಹುವ ಫೋಟೊ, ವಿಡಿಯೋಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತದೆ.
ಸೂಪರ್ ಸ್ಟಾರ್ ರಜನಿಕಾಂತ್ ಸರಳತೆ ಬಗ್ಗೆ ಗೊತ್ತೇಯಿದೆ. ಬೆಂಗಳೂರಿನಲ್ಲಿ ಬಸ್ ಕಂಡೆಕ್ಟರ್ ಆಗಿದ್ದ ರಜನಿಕಾಂತ್ ಇವತ್ತು ಸೂಪರ್ ಸ್ಟಾರ್ ಆಗಿ ಮರೆಯುತ್ತಿದ್ದಾರೆ. ಎಷ್ಟೇ ಎತ್ತರಕ್ಕೆ ಏರಿದರೂ ಅಭಿಮಾನಿಗಳ ಪ್ರೀತಿಯ ಪಡೆಯಪ್ಪ ತಮ್ಮ ಸರಳತೆ, ಸಜ್ಜನಿಕೆಯಿಂದ ಹೆಚ್ಚು ಆಪ್ತ ಎನಿಸುತ್ತಾರೆ. ತಲೈವಾ ಸಿಂಪ್ಲಿಸಿಟಿ ಸಾಕಷ್ಟು ಸಂದರ್ಭಗಳಲ್ಲಿ ಜಗಜ್ಜಾಹೀರಾಗಿದೆ. ಬಂದ ದಾರಿಯನ್ನು ಮರೆಯದ ತಲೈವಾ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಎಲ್ಲರೊಂದಿಗೂ ಬೆರೆಯುತ್ತಾರೆ.

'ಜೈಲರ್' ಸಕ್ಸಸ್ ಬಳಿಕ ಮತ್ತೆ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಸದ್ಯ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆ ಪೂರ್ವ ಸಮಾರಂಭದಲ್ಲಿ ರಜನಿಕಾಂತ್ ಪತ್ನಿ ಹಾಹೂ ಪತ್ನಿ ಜೊತೆ ಭಾಗಿ ಆಗಿದ್ದಾರೆ. ಗುಜರಾತಿನ ಜಾಮ್‌ನಗರದಲ್ಲಿ 3 ದಿನಗಳಿಂದ ಬಹಳ ಅದ್ಧೂರಿಯಾಗಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಸಡಗರ ಕಳೆ ಕಟ್ಟಿದೆ. ದೇಶ ವಿದೇಶದ ಉದ್ಯಮಿಗಳು, ಸೆಲೆಬ್ರೆಟಿಗಳು ಈ ವಿವಾಹ ಮಹೋತ್ಸವದ ಸಂಭ್ರಮ ಹೆಚ್ಚಿಸಿದ್ದಾರೆ.
ಬಾಲಿವುಡ್ ಖಾನ್‌ತ್ರಯರ ಜೊತೆ ಸಾಕಷ್ಟು ಕಲಾವಿದರು ಈ ಅದ್ಧೂರಿ ಸಮಾರಂಭಕ್ಕೆ ಹಾಜರಾಗಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಿಂದ ರಜನಿಕಾಂತ್ ಹಾಗೂ ರಾಮ್‌ಚರಣ್ ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದೆ. ಪತ್ನಿ ಲತಾ ಹಾಗೂ ಪುತ್ರ ಐಶ್ವರ್ಯ ಜೊತೆಗೆ ಮದುವೆಗೆ ಹಾಜರಾಗಲು ರಜನಿಕಾಂತ್ ಜಾಮ್‌ನಗರಕ್ಕೆ ಹೋಗಿ ಇಳಿದಿದ್ದಾರೆ. ಈ ವೇಳೆ ಅವರ ಮನೆ ಕೆಲಸದಾಕೆಯನ್ನು ಕೂಡ ತಮ್ಮೊಟ್ಟಿಗೆ ಸಹಾಯಕ್ಕೆ ಕರೆದೊಯ್ದಿದ್ದಾರೆ.
ಅನಂತ್ ಅಂಬಾನಿ ಮದುವೆ ಸಮಾರಂಭ ನಡೆಯುತ್ತಿರುವ ಸ್ಥಳಕ್ಕೆ ರಜನಿಕಾಂತ್ ತೆರಳುತ್ತಿದ್ದಂತೆ ಮಾಧ್ಯಮಗಳ ಕ್ಯಾಮರಾಗಳು ಫೋಟೊ, ವಿಡಿಯೋ ಸೆರೆ ಹಿಡಿಯಲು ಮುಗಿಬಿದ್ದಿವೆ. ರಜನಿಕಾಂತ್, ಪತ್ನಿ ಹಾಗೂ ಮಗಳನ್ನು ಒಟ್ಟಿಗೆ ನಿಲ್ಲುವಂತೆ ಛಾಯಾಗ್ರಾಹಕರು ಕೇಳಿಕೊಂಡಿದ್ದಾರೆ. ಈ ವೇಳೆ ಜೊತೆಯಲ್ಲಿ ಹೋಗಿದ್ದ ಮನೆ ಕೆಲಸದಾಕೆ ಕೂಡ ಫೋಟೊಗೆ ನಿಲ್ಲಲು ಹೋದಾಗ ತಲೈವಾ ಬೇಡ ದೂರು ಇರು ಎನ್ನುವಂತೆ ಸನ್ನೆ ಮಾಡಿ ಪತ್ನಿ ಹಾಗೂ ಮಗಳೊಟ್ಟಿಗೆ ನಿಂತು ಪೋಸ್ ನೀಡಿದ್ದಾರೆ. ಅಷ್ಟೊಟ್ಟಿಗೆ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ರಜನಿಕಾಂತ್ ಮನೆ ಕೆಲಸದಾಕೆಯನ್ನು ದೂರ ಕರೆದು ನಿಲ್ಲಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗ್ತಿದೆ.
ರಜನಿಕಾಂತ್ ತಮ್ಮ ಫ್ಯಾಮಿಲಿ ಜೊತೆಗೆ ಸಹಾಯಕ್ಕೆ ಕರೆದುಕೊಂಡು ಹೋಗಿರುವ ಕೆಲಸದಾಕೆಯನ್ನು ದೂರ ಕಳುಹಿಸಿದ್ಯಾಕೆ? ಇಂದೆಂಥ ಆಟಿಟ್ಯೂಡ್? ಆಕೆ ಕೂಡ ಫೋಟೊಗೆ ಒಟ್ಟಿಗೆ ನಿಂತಿದ್ದರೆ ಏನಾಗುತ್ತಿತ್ತು? ಇದೇನಾ ತಲೈವಾ ಸಿಂಪ್ಲಿಸಿಟಿ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಸಾಕಷ್ಟು ಜನ ರಜನಿಕಾಂತ್ ಅವರನ್ನು ಬೆಂಬಲಿಸುತ್ತಿದ್ದಾರೆ.
ಅದು ಫ್ಯಾಮಿಲಿ ಫೋಟೊ. ಸಾಮಾನ್ಯವಾಗಿ ಫ್ಯಾಮಿಲಿ ಫೋಟೊಗೆ ನಿಂತಾಗ ಫ್ಯಾಮಿಲಿ ಸದಸ್ಯರು ಮಾತ್ರ ಇರುವಂತೆ ನೋಡಿಕೊಳ್ಳುತ್ತಾರೆ. ನಾವು, ನೀವು ಎಲ್ಲರೂ ಹಾಗೆ ಅಲ್ಲವೇ? ನಾವು ಕೂಡ ಫೋಟೋಗೆ ನಿಂತಾಗ ಮೂರನೆಯವರು ಅಡ್ಡ ಬಂದರೆ ದೂರ ಕಳುಹಿಸುತ್ತೇವೆ ಅಲ್ವಾ? ರಜನಿಕಾಂತ್ ಕೂಡ ಅದೇ ರೀತಿ ಮಾಡಿದಂತೆ ಕಾಣುತ್ತಿದೆ. ಇದರಲ್ಲಿ ತಪ್ಪು ಹುಡುಕುವುದು, ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ ಎನ್ನುತ್ತಿದ್ದಾರೆ. ಒಟ್ನಲ್ಲಿ ಈ ವಿಡಿಯೋ ಮಾತ್ರ ಭಾರೀ ವೈರಲ್ ಆಗ್ತಿದೆ.
ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ ರಜನಿಕಾಂತ್ 'ವೆಟ್ಟೈಯಾನ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಬಳಿಕ ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


Click it and Unblock the Notifications











