2 ರೂಪಾಯಿ ಕೈಗಿಟ್ಟು ಕಾಲೇಜು ಸಹಪಾಠಿ ಅಪಹಾಸ್ಯ ಮಾಡಿದ್ದ.. ಅಂದು ಬಹಳ ಅತ್ತಿದ್ದೆ; ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ವೇದಿಕೆ ಏರಿ ಮಾತನಾಡಿದರೆ ಕೇಳುತ್ತಲೇ ಇರಬೇಕು ಅನ್ನಿಸುತ್ತದೆ. ತಮ್ಮ ನಿರರ್ಗಳ ಮಾತುಗಳ ಮೂಲಕ ಕೇಳುಗರನ್ನು ತಲೈವಾ ಮಂತ್ರಮುಗ್ಧರನ್ನಾಗಿಸುತ್ತಾರೆ. ತಮ್ಮದೇ ಜೀವನದಲ್ಲಿ ನಡೆದ ಘಟನೆಗಳನ್ನು ನೆನಪಿಸಿ ನಗಿಸುತ್ತಾ, ಭಾವುಕರನ್ನಾಗಿಸುತ್ತಾರೆ, ಶಿಳ್ಳೆ ಚಪ್ಪಾಳೆ ಹೊಡೆದು ಎಂಜಾಯ್ ಮಾಡುವಂತೆ ಮಾಡುತ್ತಾರೆ.
ಸದ್ಯ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚೆನ್ನೈನಲ್ಲಿ ಅದ್ಧೂರಿಯಾಗಿ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನಡೀತು. ತಮ್ಮ ಇಷ್ಟದ ಕಪ್ಪು ಬಣ್ಣದ ಕೂರ್ತಾ ಹಾಗೂ ನೀಲಿ ಬಣ್ಣದ ಜೀನ್ಸ್ ಧರಿಸಿ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಬಹಳ ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿ ಆಗಿತ್ತು. ವೇದಿಕೆಯಲ್ಲಿ ರಜನಿಕಾಂತ್ ಅರ್ಧ ಗಂಟೆಗೂ ಹೆಚ್ಚು ಸಮಯ ಮಾತನಾಡಿದರು.

'ಕೂಲಿ' ಸಿನಿಮಾ ಬಗ್ಗೆ ಮಾತ್ರವಲ್ಲ ಸಾಕಷ್ಟು ವಿಚಾರಗಳನ್ನು ರಜನಿಕಾಂತ್ ಹಂಚಿಕೊಂಡಿದ್ದಾರೆ. ಚಿತ್ರರಂಗಕ್ಕೆ ಬಂದು ಗೆಲ್ಲುವ ಮುನ್ನ ಅನುಭವಿಸುವ ಅವಮಾನ, ಅಪಮಾನದ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದ ರಜನಿಕಾಂತ್ ಮುಂದೆ ತಮಿಳು ಚಿತ್ರರಂಗ ಪ್ರವೇಶಿಸಿ ಗೆದ್ದಿದ್ದು ಗೊತ್ತೇಯಿದೆ. ಆದರೆ ಈ ಹಾದಿಯಲ್ಲಿ ಸಾಕಷ್ಟು ಸವಾಲುಗಳನ್ನು ಅವರು ಎದುರಿಸಬೇಕಿತ್ತು.
ಚಿತ್ರರಂಗದ ಹಿನ್ನೆಲೆ ಇಲ್ಲದೇ, ಕೃಷ್ಣವರ್ಣದ ರಜನಿಕಾಂತ್ ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸುವುದು, ಮುಂದೆ ಹೀರೊ ಆಗಿ ಮೆರೆಯುವುದು ಅಷ್ಟು ಸುಲಭವಾಗಿರಲಿಲ್ಲ. ಇನ್ನು ಕಾಲೇಜು ಮುಗಿಸಿ ಕೆಲಸ ಕಾರ್ಯ ಇಲ್ಲದೇ ಓಡಾಡಿಕೊಂಡಿದ್ದ ಸಮಯದಲ್ಲಿ ಕೂಡ ಕೆಲವರು ಮೂದಲಿಸಿದ್ದರು. ನೋಡಿ ನಕ್ಕಿದ್ದರು. ಅದನ್ನೆಲ್ಲಾ ಮೆಟ್ಟಿ ಶಿವಾಜಿ ರಾವ್ ಮುಂದೆ ಹೀರೊ ಆಗಿ ಗೆದ್ದರು. ಆಡಿಕೊಂಡವರು ಮುಂದೆ ಆಡಿ ಹೊಗಳುವಂತೆ ಬೆಳೆದರು. ಒಮ್ಮೆ ಕಾಲೇಜು ಸಹಪಾಠಿ ತಮ್ಮನ್ನು ನೋಡಿ ಅಪಹಾಸ್ಯ ಮಾಡಿದ್ದನ್ನು ರಜನಿಕಾಂತ್ ವಿವರಿಸಿದ್ದಾರೆ. 'ಕೂಲಿ' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ತಾವು ಕೂಲಿಯಾಗಿದ್ದಾಗ ನಡೆದ ಒಂದು ನೋವಿನ ಘಟನೆಯನ್ನು ಅವರು ಮೆಲುಕು ಹಾಕಿದ್ದಾರೆ.
"ಒಮ್ಮೆ ನಾನು ರಸ್ತೆಯಲ್ಲಿ ನಿಂತಿದ್ದೆ. ಒಬ್ಬ ವ್ಯಕ್ತಿ ಕರೆದು ತನ್ನ ಲೆಗೇಜ್ ಅನ್ನು ಟೆಂಪೊವರೆಗೆ ಹೊರಲು ಹೇಳಿದ್ದರು. ಆತನನ್ನು ನೋಡಿದರೆ ಎಲ್ಲೋ ನೋಡಿರುವ ವ್ಯಕ್ತಿ, ಪರಿಚಯದವರು ಅನ್ನಿಸಿದರು. ಸರಿ ಎಂದು ಲಗೇಜ್ ಟೆಂಪೊವರೆಗೆ ತೆಗೆದುಕೊಂಡು ಹೋಗಿ ಸಹಾಯ ಮಾಡಿದೆ. ಬಳಿಕ 2 ರೂಪಾಯಿ ನನ್ನ ಕೈಯಲ್ಲಿಟ್ಟು ಆ ವ್ಯಕ್ತಿ ಒಂದು ಮಾತು ಹೇಳಿದ್ದರು. ಅವತ್ತು ನಿನಗಿದ್ದ ಅಹಂಕಾರ ಅಷ್ಟಿಷ್ಟಲ್ಲ. ನಿನಗೆ ಆ ಕಾಲೇಜು ದಿನಗಳು ನೆನಪಿದ್ಯಾ? ಅಂತ ಹೇಳಿದ್ದರು" ಎಂದು ಆ ದಿನವನ್ನು ರಜನಿಕಾಂತ್ ನೆನಪಿಸಿಕೊಂಡಿದ್ದಾರೆ.

ಬಳಿಕ ಮಾತು ಮುಂದುವರೆಸಿದ ರಜನಿಕಾಂತ್ "ಆತ ಆ ದಿನ ಆಡಿದ ಆ ಮಾತು ಕೇಳಿ ನನಗೆ ಬಹಳ ನೋವಾಯಿತು, ಒಬ್ಬನೇ ಕೂತು ಬಹಳ ಅತ್ತುಬಿಟ್ಟೆ. ಅದೇ ನಾನು ನನ್ನ ಜೀವನದಲ್ಲಿ ಬಹಳ ನೋವುಂಡು ಕಣ್ಣೀರು ಹಾಕಿದ್ದ ದಿನ ಎಂದು ರಜನಿಕಾಂತ್ ಹೇಳಿದ್ದಾರೆ.
ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಸಿನಿಮಾ ಆಗಸ್ಟ್ 14ರಂದು ತೆರೆಗೆ ಬರಲಿದೆ. ಸನ್ ಪಿಕ್ಚರ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಚಿತ್ರವನ್ನು ನಿರ್ಮಾಣ ಮಾಡಿದೆ. ಚಿತ್ರದಲ್ಲಿ ರಜನಿಕಾಂತ್ ಸ್ನೇಹಿತನ ಪಾತ್ರದಲ್ಲಿ ಉಪೇಂದ್ರ ನಟಿಸಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಬಣ್ಣ ಹಚ್ಚಿದ್ದಾರೆ. ವಿಲನ್ ಆಗಿ ತೆಲುಗು ನಟ ನಾಗಾರ್ಜುನ ಅಬ್ಬರಿಸಿದ್ದಾರೆ.
ಆಮೀರ್ ಖಾನ್ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಸತ್ಯರಾಜ್, ಶ್ರುತಿ ಹಾಸನ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅನಿರುದ್ಧ್ ಸಂಗೀತದಲ್ಲಿ ಚಿತ್ರದ ಸಾಂಗ್ಸ್ ಹಿಟ್ ಆಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. 'ಕೂಲಿ' ಸಿನಿಮಾ ಭಾರೀ ಓಪನಿಂಗ್ ಪಡೆದುಕೊಳ್ಳುವ ಸುಳಿವು ಸಿಕ್ಕಿದೆ.


Click it and Unblock the Notifications











