Jailer in Malaysia: ಮಲೇಷ್ಯಾದಲ್ಲಿ ಇತಿಹಾಸ ಸೃಷ್ಟಿಸಿದ ರಜನಿಕಾಂತ್ ಅಭಿನಯದ ಜೈಲರ್!
ಅನ್ನಾತೆ ಸಿನಿಮಾದಲ್ಲಿ ಸೋಲು ಕಂಡಿದ್ದ ತಲೈವರ್ ರಜನಿಕಾಂತ್ ಜೈಲರ್ ಚಿತ್ರದ ಮೂಲಕ ತಾನೇ ಬಾಕ್ಸ್ ಆಫೀಸ್ ಕಿಂಗ್ ಎಂದು ಸಾಬೀತುಪಡಿಸಿದ್ದಾರೆ. ಜೈಲರ್ ಮೊದಲು ಸಿನಿಮಾ ರಜನಿಕಾಂತ್ ಒಬ್ಬರಿಗೆ ಮಾತ್ರವಲ್ಲ, ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರಿಗೂ ಮತ್ತೆ ಪುಟಿದೇಳುವ ಶಕ್ತಿ ನೀಡಿದೆ.
ಜೈಲರ್ ವಿಶ್ವದಾದ್ಯಂತ ಭರ್ಜರಿ ಹಿಟ್ ಆಗಿದ್ದು, ಸೂಪರ್‌ಸ್ಟಾರ್ ರಜನಿಕಾಂತ್ ಅವರ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರ ಜನರಿಗೆ ಇಷ್ಟವಾಗಿದೆ. ಆಗಸ್ಟ್ 10 ರಂದು ಥಿಯೇಟರ್‌ಗಳಿಗೆ ಎಂಟ್ರಿ ಕೊಟ್ಟ ಜೈಲರ್, ವಿಶ್ವಾದ್ಯಂತ 620 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ಈ ವರ್ಷದಲ್ಲಿ ಕಮಲ್ ಹಾಸನ್ ಅವರ ವಿಕ್ರಮ್ ಬಳಿಕ ತಮಿಳಿನ ಬ್ಲಾಕ್‌ಬಸ್ಟರ್ ಸಿನಿಮಾವಾಗಿದೆ.

ಮಲೇಷ್ಯಾದಲ್ಲಿಇತಿಹಾಸ ಬರೆದ ಜೈಲರ್
ಹಲವು ದಾಖಲೆಗಳನ್ನು ಪುಡಿ ಪುಡಿ ಮಾಡಿರುವ ಜೈಲರ್ ಈಗ ಮತ್ತೊಂದು ದಾಖಲೆ ಬರೆದು ಇತಿಹಾಸ ಸೃಷ್ಟಿಸಿದೆ. ತನ್ನ ಹೆಸರಿಗೆ ಮತ್ತೊಂದು ದಾಖಲೆಯನ್ನು ಸೇರಿಸಿಕೊಂಡಿದೆ. ಈವರೆಗೆ ಮಲೇಷ್ಯಾದಲ್ಲಿ ಭಾರತೀಯ ಚಿತ್ರರಂಗದ ಸಿನಿಮಾಗಳಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಅಗ್ರಸ್ಥಾನದಲ್ಲಿದೆ.
ಹೀಗಾಗಿ ಮಲೇಷ್ಯಾದಲ್ಲಿ ಭಾರತೀಯ ಸಿನಿಮಾಗಳಲ್ಲಿ ನಂಬರ್ 1 ಸ್ಥಾನಕ್ಕೆ ಏರಿದೆ. ಮಲೇಷ್ಯಾದಲ್ಲಿ ಈವರೆಗೆ 1 ಗಳಿಕೆಯ ಹಿಂದಿನ ದಾಖಲೆಯು ಶಾರುಖ್ ಖಾನ್ ಅವರ ದಿಲ್ವಾಲೆ ಸಿನಿಮಾದ ಹೆಸರಿನಲ್ಲಿತ್ತು. ಅದು ಈಗ ಜೈಲರ್ ಪಾಲಾಗಿದೆ. ರಜನಿಕಾಂತ್ ಅವರ ಜೈಲರ್ ಮಲೇಷ್ಯಾದಲ್ಲಿ 25 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ವಿತರಕರು ಇದನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಜೈಲರ್‌ನ ವಿತರಕರೊಬ್ಬರು ಈ ಚಿತ್ರವು ಮಲೇಷಿಯಾದ ಗಲ್ಲಾಪೆಟ್ಟಿಗೆಯಲ್ಲಿ ಹಿಂದಿನ ಭಾರತೀಯ ಚಲನಚಿತ್ರಗಳನ್ನು ಗಣನೀಯ ಅಂತರದಲ್ಲಿ ಹಿಂದಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ. ಐಂಗರಾನ್ ಇಂಟರ್ನ್ಯಾಷನಲ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಜೈಲರ್ ಸಿನಿಮಾ ಮಲೇಷ್ಯಾದಲ್ಲಿ ಎಲ್ಲಾ ಭಾರತೀಯ ಚಲನಚಿತ್ರಗಳಲ್ಲಿ ಭಾರಿ ಅಂತರದಿಂದ ಅತಿ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಘೋಷಿಸಲು ಹೆಮ್ಮೆಪಡುತ್ತೇವೆ ಎಂದು ಹೇಳಿದ್ದಾರೆ. ಇದು ಇತಿಹಾಸದಲ್ಲಿ ಹಿಂದೆಂದೂ ಸಿಗದ ಕ್ಷಣ ಎಂದೂ ಸೇರಿಸಿದ್ದಾರೆ.
ಇತ್ತೀಚೆಗೆ ನಟ ರಜಿನಿಕಾಂತ್ ಮಲೇಷ್ಯಾಗೆ ಭೇಟಿ ನೀಡಿದ್ದರು. ಈ ವೇಳೆ ಸೂಪರ್‌ಸ್ಟಾರ್ ಅಲ್ಲಿ ಪ್ರಧಾನ ಮಂತ್ರಿ ಅನ್ವರ್ ಇಬ್ರಾಹಿಂ ಅವರನ್ನು ಭೇಟಿ ಮಾಡಿ ಕೆಲವು ಕಾಲ ಚರ್ಚೆ ಮಾಡಿದ್ದರು. ಭೇಟಿ ಬಳಿಕ ಮಾತನಾಡಿದ್ದ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, " ಫಿಲ್ಮ್ ಸ್ಟಾರ್ ರಜನಿಕಾಂತ್ ಏಷ್ಯಾ ಹಾಗೂ ಅಂತರಾಷ್ಟ್ರೀಯ ಕಲಾ ಪ್ರಪಂಚದಲ್ಲಿ ಜನಪ್ರಿಯ ಹೆಸರು. ಇವರು ಮಲೇಷ್ಯಾಗೆ ಭೇಟಿ ಕೊಟ್ಟಿದ್ದರು. ಜನರ ಕಷ್ಟ ಮತ್ತು ಸಂಕಟಗಳಿಗೆ ನಾನು ಮಾಡಿದ ಹೋರಾಟವನ್ನು ಅವರು ಗೌರವಿಸಿದ್ದನ್ನು ನಾನು ಪ್ರಶಂಸಿಸುತ್ತೇನೆ" ಎಂದಿದ್ದರು.
ಈ ಆಕ್ಷನ್ ಡ್ರಾಮಾ ಸದ್ಯ ಅಮೇಜಾನ್ ಪ್ರೈಮ್‌ನಲ್ಲಿ ಪ್ರಸಾರವಾಗುತ್ತಿದೆ. ನೆಲ್ಸನ್ ದಿಲೀಪ್‌ಕುಮಾರ್ ಬರೆದು ಆಕ್ಷನ್ ಕಟ್ ಹೇಳಿರುವ 'ಜೈಲರ್' ಒಂದು ಕಮರ್ಷಿಯಲ್ ಆಕ್ಷನ್ ಎಂಟರ್‌ಟೈನರ್ ಆಗಿದ್ದು, ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಖಳನಾಯಕನಾಗಿ ವಿನಾಯಕನ್ ಅಬ್ಬರಿಸಿದ್ದಾರೆ.
ರಜನಿಕಾಂತ್ ಜೊತೆಗೆ ರಮ್ಯಾ ಕೃಷ್ಣನ್ ಮತ್ತು ವಸಂತ ರವಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದಲ್ಲಿ ತಮನ್ನಾ ಭಾಟಿಯಾ, ಮೋಹನ್‌ಲಾಲ್, ಶಿವ ರಾಜ್‌ಕುಮಾರ್ ಮತ್ತು ಜಾಕಿ ಶ್ರಾಫ್, ಸುನೀಲ್, ನಾಗ ಬಾಬು, ಯೋಗಿ ಬಾಬು ಕಾಣಿಸಿಕೊಂಡಿದ್ದಾರೆ. ಜೈಲರ್ ಚಿತ್ರವನ್ನು ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿತಿ ಮಾರನ್ ನಿರ್ಮಿಸಿದ್ದಾರೆ. ಅನಿರುದ್ಧ್ ರವಿಚಂದರ್ ಭರ್ಜರಿ ಸಂಗೀತ ನೀಡಿದ್ದಾರೆ.


Click it and Unblock the Notifications











