ಜೈಲರ್: ರಜನಿಕಾಂತ್, ಶಿವರಾಜ್‌ಕುಮಾರ್ ಮೋಹನ್‌ಲಾಲ್, ತಮನ್ನಾ ಪಡೆದ ಸಂಭಾವನೆ ಎಷ್ಟು?
ತಮಿಳು ಸಿನಿಮಾ ರಂಗಕ್ಕೆ ಜೈಲರ್ ಭರ್ಜರಿ ಯಶಸ್ಸು ನೀಡಿದೆ. ನೆಲ್ಸನ್ ದಿಲೀಪ್‌ಕುಮಾರ್ ಮತ್ತು ರಜನಿಕಾಂತ್ ಅವರು ಪ್ರತಿಭಾವಂತ ಕಲಾವಿದರ ತಂಡದೊಂದಿಗೆ ಜೈಲರ್ ಸಿನಿಮಾಕ್ಕೆ ದುಡಿದಿದ್ದು, ಇದು ಚಿತ್ರತಂಡಕ್ಕೆ ಸಾರ್ಥಕ ಭಾವ ಮೂಡಿಸಿದೆ.
ಬಿಡುಗಡೆಯಾಗಿ ವಾರವಾಗುತ್ತಾ ಬಂದರು ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಚಿತ್ರವು ಪ್ರೇಕ್ಷಕರ ಮನಗೆದ್ದಿದೆ. ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್‌ನಲ್ಲಿ ಸಂಚಲನವನ್ನು ಸೃಷ್ಟಿಸಿದೆ. ರಜನಿಕಾಂತ್, ರಮ್ಯಾ ಕೃಷ್ಣನ್, ಮೋಹನ್ ಲಾಲ್, ಶಿವರಾಜಕುಮಾರ್, ಜಾಕಿ ಶ್ರಾಫ್, ವಿನಾಯಕ್ ರಂತಹ ಕಲಾವಿದರ ದಂಡು ಸಿನಿಮಾದಲ್ಲಿದೆ. ಇದು ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಎಲ್ಲಾ ಚಿತ್ರಗಳಿಗಿಂತ ವಿಭಿನ್ನವಾಗಿ ಹಲವು ಭಾಷೆಗಳ ಕಲಾವಿದರನ್ನು ಒಳಗೊಂಡಿದೆ.

ಚಿತ್ರದ ದೊಡ್ಡ ಬಜೆಟ್ ಮತ್ತು ಸಿನಿಮಾದಲ್ಲಿ ಕೆಲಸ ಮಾಡಲು ಎಲ್ಲಾ ನಟರು ತೆಗೆದುಕೊಂಡ ಸಂಭಾವನೆ ಬಗ್ಗೆ ಅಭಿಮಾನಿಗಳಲ್ಲಿ ತೀವ್ರವಾದ ಕುತೂಹಲವಿದೆ. ಮುಖ್ಯ ಪಾತ್ರಗಳ ಜೊತೆಗೆ ಜನಪ್ರಿಯ ನಟರಾದ ಸುನಿಲ್, ತಮನ್ನಾ ಭಾಟಿಯಾ ಮತ್ತು ಯೋಗಿ ಬಾಬು ಕೂಡ ಸಿನಿಮಾದ ಭಾಗವಾಗಿದ್ದಾರೆ.
ಜೈಲರ್‌ಗೆ ನಟರ ಸಂಭಾವನೆ
ಟೈಮ್ಸ್ ಆಫ್ ಇಂಡಿಯಾ ವರದಿಯ ಆಧಾರದ ಮೇಲೆ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದಲ್ಲಿ ಜೈಲರ್ ಅನ್ನು 225 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ರಜನಿಕಾಂತ್ ತಮ್ಮ ನಾಯಕನ ಪಾತ್ರಕ್ಕಾಗಿ 110 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಅಂದರೆ ಚಿತ್ರದ ಒಟ್ಟು ಬಜೆಟ್‌ನ 48% ಅನ್ನು ರಜನಿಕಾಂತ್ ತೆಗೆದುಕೊಂಡಿದ್ದಾರೆ.

ರಜನಿಕಾಂತ್ ಮಾತ್ರವಲ್ಲ, ಮೋಹನ್‌ಲಾಲ್ ಮತ್ತು ಶಿವರಾಜಕುಮಾರ್ ಕೂಡ ಚಿತ್ರದಲ್ಲಿ ತಮ್ಮ ಚಿಕ್ಕವಾದ ಮತ್ತು ಚೊಕ್ಕವಾದ ಪರಿಣಾಮಕಾರಿ ವಿಶೇಷ ಪಾತ್ರಗಳ ಮೂಲಕ ಹೆಚ್ಚಿನ ಪ್ರಭಾವ ಬೀರಿದ್ದಾರೆ. ಅವರ ಸಂಭಾವನೆ ವಿಷಯಕ್ಕೆ ಬಂದರೆ, ಮೋಹನ್ ಲಾಲ್ ಮ್ಯಾಥ್ಯೂ ಪಾತ್ರಕ್ಕಾಗಿ 8 ಕೋಟಿ ರೂ. ಪಡೆದಿದ್ದಾರೆ. ಶಿವರಾಜ್ ಕುಮಾರ್ 4 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಕನ್ನಡ ಮತ್ತು ಮಲಯಾಳಂ ಚಿತ್ರರಂಗದ ಜೊತೆಗೆ ಜೈಲರ್ ಸಿನಿಮಾದಲ್ಲಿ ಬಾಲಿವುಡ್ ನಟ ಜಾಕಿ ಶ್ರಾಫ್ ಅತಿಥಿ ಪಾತ್ರ ಮಾಡಿದ್ದರು. ಅವರಿಗೆ 4 ಕೋಟಿ ರೂ. ನೀಡಲಾಗಿದೆ. ಇದರ ಜೊತೆಗೆ ಒಂದು ಹಾಡು ಮತ್ತು ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ ನಟಿ ತಮನ್ನಾ ಭಾಟಿಯಾ ಅವರ ಪಾತ್ರಕ್ಕಾಗಿ 3 ಕೋಟಿ ರೂ. ಸಂಭಾವನೆ ನೀಡಲಾಗಿದೆ. ಆದರೆ ಈ ಎಲ್ಲಾ ಸ್ಟಾರ್ ಕ್ಯಾಮಿಯೋಗಳು ಚಿತ್ರದಲ್ಲಿ ಕೇವಲ ಅತಿಥಿ ಪಾತ್ರಕ್ಕಾಗಿ ಮಾತ್ರವಲ್ಲದೇ ಸಿನಿಮಾಗೆ ಬೇಕಾದ ಪಾತ್ರಗಳಾಗಿದ್ದವು.
ಪಡೆಯಪ್ಪ ಚಿತ್ರದ ನಂತರ ಮೊದಲ ಬಾರಿಗೆ ರಮ್ಯಾ ಕೃಷ್ಣನ್ ಮತ್ತು ರಜನಿಕಾಂತ್ ಮತ್ತೆ ಒಟ್ಟಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಜೈಲರ್‌ನಲ್ಲಿ ರಜನಿಕಾಂತ್ ಅವರ ಪತ್ನಿಯ ಪಾತ್ರದಲ್ಲಿ ನಟಿಸಲು ರಮ್ಯಾ ಕೃಷ್ಣನ್ ಅವರಿಗೆ 80 ಲಕ್ಷ ಸಂಭಾವನೆ ನೀಡಲಾಗಿದೆ ಎಂದು ಹೇಳಲಾಗಿದೆ.
ಸಿನಿಮಾದಲ್ಲಿ ಯೋಗಿ ಬಾಬುಗೆ 1 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ. ತಮಿಳು ನಟ ಸುನೀಲ್ ಅವರು ತಮ್ಮ ಪಾತ್ರಕ್ಕೆ 60 ಲಕ್ಷ ರೂ. ಪಡೆದಿದ್ದಾರೆ. ಉದಯೋನ್ಮುಖ ಪ್ರತಿಭೆ ವಸಂತ ರವಿ ರೂ. 30 ಲಕ್ಷ, ರೆಡಿನ್ ಕಿಂಗ್ಸ್ಲಿ ರೂ. 25 ಲಕ್ಷ ಮತ್ತು ರಜನಿಕಾಂತ್ ಎದುರು ಅಬ್ಬರಿಸಿದ ಖಳನಾಯಕ ವಿನಾಯಕನ್ 35 ಲಕ್ಷ ರೂಪಾಯಿ ಪಡೆದಿದ್ದಾರೆ.


Click it and Unblock the Notifications










