Jailer: ಸನ್ ಪಿಕ್ಚರ್ಸ್ ಈ ದೊಡ್ಡ ತಪ್ಪು ಮಾಡಬಾರದಿತ್ತು.. ಅಷ್ಟು ಅರ್ಜೆಂಟ್ ಏನ್ ಇತ್ತು ಹೇಳಿ
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಭಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದು ಗೊತ್ತೇಯಿದೆ. ಸಿನಿಮಾ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. ನೆಲ್ಸನ್ ನಿರ್ದೇಶನ, ರಜನಿಕಾಂತ್ ಸ್ಟೈಲ್, ಪರ್ಫಾರ್ಮನ್ಸ್, ಶಿವಣ್ಣ, ಮೋಹನ್ ಲಾಲ್ ಕೆಮಿಯೋ ಚಿತ್ರಕ್ಕೆ ಪ್ಲಸ್ ಆಗಿತ್ತು. ಸದ್ಯ ಸಿನಿಮಾ ಓಟಿಟಿಗೂ ಬಂದು ಸದ್ದು ಮಾಡ್ತಿದೆ.
ಇತ್ತೀಚಿನ ವರ್ಷಗಳಲ್ಲಿ ರಜನಿಕಾಂತ್ ಸಿನಿಮಾಗಳಲ್ಲಿ ಅಷ್ಟಾಗಿ ಆರ್ಭಟ ನಡೆಸಲಿಲ್ಲ. ಹಾಗಾಗಿ 'ಜೈಲರ್' ಸಿನಿಮಾ ಬಗ್ಗೆ ಹೆಚ್ಚೇನು ನಿರೀಕ್ಷೆ ಇರಲಿಲ್ಲ. ಆದರೆ ಆಗಸ್ಟ್ 10ರಂದು ಬೆಳ್ಳಬೆಳ್ಳಗ್ಗೆ ಶುರುವಾದ ಶೋಗಳಲ್ಲಿ ಎಲ್ಲರ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿತ್ತು. ರಜನಿಕಾಂತ್ ಆರ್ಭಟಕ್ಕೆ ಸಿನಿರಸಿಕರು ಫಿದಾ ಆಗಿದ್ದರು. ಹಳೇ ಕತೆಯೇ ಆದರೂ ಸಿಲ್ವರ್ ಸ್ಕ್ರೀನ್ ಮೇಲೆ ಮ್ಯಾಜಿಕ್ ಕ್ರಿಯೇಟ್ ಆಗಿತ್ತು. ಬಳಿಕ 'ಜೈಲರ್' ಯಾರಿಂದಲೂ ತಡೆಯೋಕೆ ಆಗಲಿಲ್ಲ.

ಪ್ರೇಕ್ಷಕರು ಫ್ಯಾಮಿಲಿ ಸಮೇತ ಸಿನಿಮಾ ನೋಡಲು ಮುಗಿಬಿದ್ದರು. ಒಮ್ಮೆ ನೋಡಿದವರು ಮತ್ತೆ ಮತ್ತೆ ನೋಡಿದರು. ಸ್ವಾತಂತ್ರ್ಯ ದಿನೋತ್ಸವ ವೀಕೆಂಡ್ ಕಲೆಕ್ಷನ್‌ಗೆ ಪ್ಲಸ್ ಆಗಿತ್ತು. ನೋಡ ನೋಡುತ್ತಲೇ 'ಜೈಲರ್' 100, 200, 300 ಕೋಟಿ ರೂ. ಹೀಗೆ ಗಳಿಕೆ ಹೆಚ್ಚಿಸಿಕೊಂಡು ಸಾಗಿತು. ಸದ್ಯ ಸಿನಿಮಾ 650 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನುವ ಅಂದಾಜಿದೆ. ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕೂಡ ಚಿತ್ರದ ಸಕ್ಸಸ್‌ಗೆ ಒಂದು ಕಾರಣ ಎನ್ನಬಹುದು.
ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ 'ಜೈಲರ್' ಎನಿಸಿಕೊಂಡಿದೆ. ರಜನಿಕಾಂತ್, ನೆಲ್ಸನ್, ಅನಿರುದ್ದ್ ರವಿಚಂದರೆ ಮೂವರಿಗೂ ಲಾಭದ ಪಾಲಿನ ಚೆಕ್ ಹಾಗೂ ಐಷಾರಾಮಿ ಕಾರುಗಳನ್ನು ನಿರ್ಮಾಪಕರು ಉಡುಗೊರೆ ನೀಡಿದರು. ಇನ್ನು ಇತ್ತೀಚೆಗೆ ಚಿತ್ರಕ್ಕಾಗಿ ಕೆಲಸ ಮಾಡಿದ 300 ಜನರ ತಂತ್ರಜ್ಞರು, ಕಲಾವಿದರಿಗೆ ಚಿನ್ನದ ನಾಣ್ಯವನ್ನು ನಿರ್ಮಾಪಕರು ನೀಡಿದ್ದರು. ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು.

'ಜೈಲರ್' ಕಲೆಕ್ಷನ್ ಲಾಭದಲ್ಲಿ ಬಂದ ಹಣದಲ್ಲಿ ಬಡರೋಗಿಗಳ ಚಿಕಿತ್ಸೆಗಾಗಿ ಒಂದೂವರೆ ಕೋಟಿ ರೂ.ಗೂ ಅಧಿಕ ಮೊತ್ತವನ್ನು ನಿರ್ಮಾಪಕರು ನೀಡಿದ್ದರು. ಇನ್ನು ಆಗಸ್ಟ್ 10ರಂದು ತೆರೆಗಪ್ಪಳಿಸಿದ 'ಜೈಲರ್' ಸಿನಿಮಾ ಸೆಪ್ಟೆಂಬರ್ 4ರಂದು ಓಟಿಟಿಗೆ ಬಂದಬಿಡ್ತು. ಅಮೇಜಾನ್ ಪ್ರೈಮ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ ಥಿಯೇಟರ್‌ಗಳಲ್ಲಿ ಸಿನಿಮಾ ಇನ್ನು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದನ್ನು ನೋಡಿ 'ಜೈಲರ್' ಚಿತ್ರವನ್ನು ಇಷ್ಟು ಬೇಗ ಯಾಕೆ ಓಟಿಟಿಯಲ್ಲಿ ರಿಲೀಸ್ ಮಾಡಿದ್ರಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.
ಸಾಮಾನ್ಯವಾಗಿ ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ನಿಂತ ಬಳಿಕ ಓಟಿಟಿಗೆ ಬರುತ್ತದೆ. ಓಟಿಟಿಗೆ ಬಂದ ಬಂದ ಮೇಲೆ ಪ್ರೇಕ್ಷಕರು ಸಹಜವಾಗಿಯೇ ಥಿಯೇಟರ್‌ಗೆ ಹೋಗುವುದಿಲ್ಲ. ಆದರೆ 'ಜೈಲರ್' ವಿಚಾರದಲ್ಲಿ ಆ ಮಾತು ಸುಳ್ಳಾಗಿದೆ. ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಸಿನಿಮಾ ಓಟಿಟಿಗೆ ಬಂದಮೇಲೂ ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚೆನ್ನೈನಲ್ಲಿ ಹೌಸ್‌ಫುಲ್ ಆಗುತ್ತಿದೆ. ಇದನ್ನು ನೋಡಿ ಇಷ್ಟು ಬೇಗ ಚಿತ್ರವನ್ನು ಓಟಿಟಿಗೆ ತರಬಾರದಿತ್ತು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಸಾಮಾನ್ಯವಾಗಿ ಯಾವುದೇ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾದ 45 ದಿನಗಳ ಬಳಿಕ ಓಟಿಟಿಗೆ ಬರುವಂತೆ ಒಪ್ಪಂದವಾಗಿರುತ್ತದೆ. ಆದರೆ ಕೆಲ ಸಿನಿಮಾ ತಿಂಗಳಿಗೂ ಮೊದ್ಲೆ ಬರ್ತಿವೆ. 'ಜೈಲರ್' ಸಿನಿಮಾ ಥಿಯೇಟರ್‌ಗಳಲ್ಲಿ ಸದ್ದು ಮಾಡುತ್ತಿರುವಾಗದೇ ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡಬಾರದಿತ್ತು ಎನ್ನುವುದು ಕೆಲವರ ವಾದ. ಇದು ನಿಜವಾಗಿಯೂ ಥಿಯೇಟರ್‌ನಲ್ಲೇ ನೋಡಬೇಕಾದ ಸಿನಿಮಾ. ಹಾಗಾಗಿ ಓಟಿಟಿಗೆ ಬಂದರೂ ಜನ ಥಿಯೇಟರ್‌ಗೆ ಹೋಗ್ತಿದ್ದಾರೆ. ಇನ್ನು 20 ದಿನ ತಡ ಮಾಡಿದ್ದರೆ ಇನ್ನೊಂದು 50 ಕೋಟಿ ರೂ. ಕಲೆಕ್ಷನ್ ಆಗುತ್ತಿತ್ತು ಎನ್ನುತ್ತಿದ್ದಾರೆ. ಸಿನಿಮಾ ಓಟಿಟಿಗೆ ಬರೋಕು ಮೊದ್ಲೆ HD ಪ್ರಿಂಟ್ ಲೀಕ್ ಆಗಿದ್ದಕ್ಕೆ ದಿಢೀರನೆ ಓಟಿಟಿಯಲ್ಲಿ ರಿಲೀಸ್ ಮಾಡಲಾಯಿತು ಎಂದು ಕೆಲವರು ಹೇಳುತ್ತಿದ್ದಾರೆ.


Click it and Unblock the Notifications











