Jailer: 'ಬ್ರೇಕಿಂಗ್ ಬ್ಯಾಡ್' ಅಲ್ಲ 'ಜೈಲರ್' ಕಥೆಗೆ ಆ ಚಿತ್ರವೇ ಪ್ರೇರಣೆ ಎಂದ ನೆಲ್ಸನ್!
ರಜನಿಕಾಂತ್, ಶಿವರಾಜ್‌ಕುಮಾರ್ ನಟನೆಯ 'ಜೈಲರ್' ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. 3 ದಿನಕ್ಕೆ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಹುಬ್ಬೇರಿಸಿದೆ. ನೆಲ್ಸನ್ ಟೇಕಿಂಗ್, ರಜನಿಕಾಂತ್- ಶಿವಣ್ಣ ಪರ್ಫಾರ್ಮನ್ಸ್‌ಗೆ ಸಿನಿರಸಿಕರು ಫಿದಾ ಆಗಿದ್ದಾರೆ. ಅಂದಹಾಗೆ ಈ ಸಿನಿಮಾ ಕಥೆ ಹಾಲಿವುಡ್ ಸಿನಿಮಾದಿಂದ ಪ್ರೇರಣೆ ಪಡೆದಂತಿದೆ ಎನ್ನುವ ಪ್ರಶ್ನೆಗೆ ನಿರ್ದೇಶಕ ನೆಲ್ಸನ್ ಪ್ರತಿಕ್ರಿಯಿಸಿದ್ದಾರೆ.
'ಜೈಲರ್' ಟ್ರೈಲರ್ ರಿಲೀಸ್ ಆದಾಗಲೇ ಇದು ಹಾಲಿವುಡ್‌ನ 'ನೊಬಡಿ' ಸಿನಿಮಾ ಕಾಪಿ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದರು. ಆದರೆ ಚಿತ್ರತಂಡ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸಿನಿಮಾ ರಿಲೀಸ್ ಆಗಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದಂತೆ ನಿರ್ದೇಶಕ ನೆಲ್ಸನ್ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. 'ಜೈಲರ್' ಆರ್ಭಟ ಹಾಗೂ ಸಿನಿಮಾ ಮೇಕಿಂಗ್ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

'ಜೈಲರ್' ಚಿತ್ರದಲ್ಲಿ ತಂದೆ ಮಗನ ಬಾಂಧವ್ಯದ ಕಥೆಯಿದೆ. ನಿಷ್ಟಾವಂತ ಪೊಲೀಸ್ ಅಧಿಕಾರಿ ಹಾಗೂ ಹಾದಿ ತಪ್ಪಿದ ಮಗನ ಸುತ್ತಾ ಚಿತ್ರದ ಕಥೆ ಸುತ್ತುತ್ತದೆ. ನಿವೃತ್ತ ಜೈಲರ್ ಮುತ್ತುವೇಲ್ ಪಾಂಡಿಯನ್ ಪತ್ನಿ, ಮಗ, ಸೊಸೆ, ಮೊಮ್ಮಗನ ಜೊತೆ ಜೀವನ ಸಾಗಿಸುತ್ತಿರುತ್ತಾನೆ. ಮಗನನ್ನು ಪ್ರಾಮಾಣಿಕನಾಗಿ, ಕರ್ತವ್ಯನಿಷ್ಠನಾಗಿ ಬೆಳೆಸಿರುತ್ತಾನೆ. ಮಗ ಅರ್ಜುನ್ ಕೂಡ ಪೊಲೀಸ್ ಇಲಾಖೆ ಸೇರಿರುತ್ತಾನೆ. ಆದರೆ ಹಣಕ್ಕಾಗಿ ತಪ್ಪು ದಾರಿ ಹಿಡಿಯುತ್ತಾನೆ.
ದಿಢೀರನೇ ಕಾಣೆಯಾಗುವ ಮಗನಿಗಾಗಿ ಮುತ್ತುವೇಲ್ ಹವಣಿಸುತ್ತಾನೆ. ಆತ ಕಾಣೆಯಾಗಲು ಕಾರಣರಾದವರ ವಿರುದ್ಧ ಸಮರ ಸಾರುತ್ತಾನೆ. ಆದರೆ ಪ್ರೀ ಕ್ಲೈಮ್ಯಾಕ್ಸ್‌ನಲ್ಲಿ ಮುತ್ತುವೇಲ್ ಒಂದು ಕಟು ಸತ್ಯ ಗೊತ್ತಾಗುತ್ತದೆ. ಈ ಟ್ವಿಸ್ಟ್ ಇಡೀ ಕಥೆಗೆ ತಿರುವು ಕೊಡುತ್ತದೆ. 'ಜೈಲರ್' ಸಿನಿಮಾ ನೋಡಿದವರು 'ಬ್ರೇಕಿಂಗ್ ಬ್ಯಾಡ್' ವೆಬ್ ಸೀರಿಸ್‌ನಿಂದ ನೆಲ್ಸನ್ ಪ್ರೇರಣೆಗೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಇದೇ ವಿಚಾರದ ಬಗ್ಗೆ ನೆಲ್ಸನ್ ಪ್ರತಿಕ್ರಿಯಿಸಿದ್ದಾರೆ.
'ತಂಗ ಪದಕಂ' ನೋಡಿದ್ದೀರಾ?
"ಅಯ್ಯೋ ಈ ಕಥೆಗಳೆಲ್ಲಾ ನಮ್ಮಲ್ಲೇ ಸಾಕಷ್ಟು ಸಿನಿಮಾಗಳಲ್ಲಿ ಬಂದು ಹೋಗಿದೆ. 'ತಂಗ ಪದಕಂ' ಸಿನಿಮಾ ನೋಡಿದ್ದೀರಾ? ಈ ಸ್ಟೋರಿಲೈನ್ ಬಹಳ ವರ್ಷಗಳಿಂದ ಇದೆ. ಇದೊಂದು ಸಿನಿಮಾ ಕಥೆ ಫಾರ್ಮೆಟ್. ಆ ಟೆಂಪ್‌ಲೆಟ್‌ನಲ್ಲೇ ಎಲ್ಲವೂ ಬರುತ್ತದೆ. ಮೂಲ ಕಥೆ ಆ ರೀತಿ ಎಲ್ಲೋ ಒಂದು ಕಡೆ ಮತ್ತೊಂದು ಚಿತ್ರಕ್ಕೆ ಹೋಲಿಕೆ ಎನ್ನಿಸಬಹುದು. ಆದರೆ ಪಾತ್ರಗಳು, ಅದನ್ನು ತೋರಿಸುವ ಪರಿ ಮಾತ್ರ ಬದಲಾಗುತ್ತಿದೆ"
ಅಪ್ಪ- ಮಗನ ಕಥೆ
"ಈಗ ಜೈಲರ್ ಸಿನಿಮಾ ನೋಡಿದರೆ. ಅರೇ ಆ ಸಿನಿಮಾ ರೀತಿ ಇದೆ, ಈ ಸಿನಿಮಾ ತರ ಕಾಣಿಸ್ತಿದೆ ಅನ್ನಿಸಬಹುದು. ನಾವು ಮಕ್ಕಿಕಾಮಕ್ಕಿ ಮಾಡಿದ್ದೇವೆ ಅಂತ ಹೇಳಲ್ಲ. ಒಟ್ನಲ್ಲಿ ಅಪ್ಪ, ಮಗನ ನಡುವಿನ ಕತೆ ಅಂದಾಗ ಎಲ್ಲೋ ಒಂದುಕಡೆ ಈ ರೀತಿ ಕನೆಕ್ಟ್ ಆಗಬಹುದು. ಆದರೆ ಈ ಕಥೆಗಳು 1940ರಿಂದಲೂ ಇದೆ. ಕ್ಲಾಸಿಕ್ ಇಂಗ್ಲೀಷ್ ಸಿನಿಮಾಗಳನ್ನು ನೋಡಿದಾಗ ಇಂತಹ ಕಥೆ ಆಗಲೇ ಆರಂಭವಾಗಿತ್ತು. ನೀವೆಲ್ಲಾ ಇತ್ತೀಚೆಗೆ ಬಂದ ಸಿನಿಮಾ, ವೆಬ್‌ಸೀರಿಸ್‌ಗೆ ಹೋಲಿಕೆ ಮಾಡುತ್ತಿದ್ದೀರಾ ಅಷ್ಟೇ, 'ತಂಗ ಪದಕಂ' ಸರ್ವಕಾಲಕ್ಕೂ ಅದ್ಭುತ ಎನಿಸುವ ಸ್ಟ್ರಿಪ್ಟ್" ಎಂದಿದ್ದಾರೆ.
'ತಂಗ ಪದಕಂ' ಸೂಪರ್ ಹಿಟ್
ಮಹೇಂದ್ರನ್ ಬರೆದ 'ತಂಗ ಪದಕಂ' ನಾಟಕ ಆಧರಿಸಿ 1974ರಲ್ಲಿ ತಮಿಳು ಸಿನಿಮಾ ಬಂದಿತ್ತು. ಚಿತ್ರದಲ್ಲಿ ಶಿವಾಜಿ ಗಣೇಶನ್ ನಾಯಕನಾಗಿ ನಟಿಸಿದ್ದರು. ನಿಷ್ಠಾವಂತ ಪೊಲೀಸ್ ಆಫೀಸರ್ ಎಸ್.ಪಿ ಚೌಧರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಂದೆ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿದ್ದರೆ ಆತನ ಮಗನೇ ದೊಡ್ಡ ಖದೀಮನಾಗಿರುತ್ತಾನೆ. 'ತಂಗ ಪದಕಂ' ಸಿಲ್ವರ್ ಜುಬಿಲಿ ಆಚರಿಸಿಕೊಂಡಿತ್ತು. ಮುಂದೆ ಈ ಸಿನಿಮಾ ತೆಲುಗು, ಕನ್ನಡ, ಹಿಂದಿಗೆ ರೀಮೆಕ್ ಆಗಿತ್ತು.

'ತಂಗ ಪದಕಂ'ನಿಂದ 'ಕದಂಬ' ಪ್ರೇರಣೆ
30 ವರ್ಷಗಳ ಬಳಿಕ 'ತಂಗ ಪದಕಂ'ನಿಂದ ಪ್ರೇರಣೆಗೊಂಡು ಕನ್ನಡದಲ್ಲಿ 'ಕದಂಬ' ಸಿನಿಮಾ ನಿರ್ಮಾಣವಾಗಿತ್ತು. ತಮಿಳಿನ ಸುರೇಶ್ ಕೃಷ್ಣ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ನವೀನ್ ಕೃಷ್ಣ ತಂದೆ- ಮಗನಾಗಿ ನಟಿಸಿದ್ದರು. ಸಿನಿಮಾ ಒಂದು ಹಂತಕ್ಕೆ ಸಕ್ಸಸ್ ಕಂಡಿತ್ತು. 'ದೇವ' ಸಂಗೀತದಲ್ಲಿ ಚಿತ್ರದ ಹಾಡುಗಳು ಹಿಟ್ ಆಗಿತ್ತು.


Click it and Unblock the Notifications











