Cauvery dispute: "ಸರ್ ಕರ್ನಾಟಕದವ್ರು ನೀರು ಬಿಡಲ್ಲ ಅಂತಿದ್ದಾರೆ": ಉತ್ತರಿಸಲು ನಿರಾಕರಿಸಿದ ರಜನಿಕಾಂತ್
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ನಡುವೆ ಹಗ್ಗ ಜಗ್ಗಾಟ ಮುಂದುವರೆದಿದೆ. ಈ ವರ್ಷ ರಾಜ್ಯಕ್ಕೆ ನೀರಿನ ಅಭಾವ ಇದ್ದು ಇಂತಹ ಸಮಯದಲ್ಲಿ ಕಾವೇರಿ ಪ್ರಾಧಿಕಾರದ ಮೂಲಕ ಆದೇಶ ತಂದು ತಮಿಳುನಾಡು ಬಕಾವೇರಿ ನೀರು ಪಡೆದುಕೊಂಡಿದೆ. ಅನ್ಯ ಮಾರ್ಗವಿಲ್ಲದೇ ಪಕ್ಕದ ರಾಜ್ಯಕ್ಕೆ ನೀರು ಬಿಡುವಂತಾಗಿದೆ.
ಬೆಂಗಳೂರು ಬಂದ್ ಹಾಗೂ ಕರ್ನಾಟಕ ಬಂದ್ ಮಾಡಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಅಕ್ಟೋಬರ್ 15ರವರೆಗೆ ತಮಿಳುನಾಡಿಗೆ ಪ್ರತಿದಿನ 3 ಕ್ಯೂಸೆಕ್ ನೀರು ಹರಿಸುವಂತಾಗಿದೆ. ಕಾವೇರಿ ನೀರು ನಿರ್ವಹಣಾ ಸಮಿತಿಯ ತೀರ್ಪನ್ನು ಸರ್ಕಾರ ಪಾಲಿಸುವಂತಾಗಿದೆ. ಇನ್ನು ಪ್ರತಿ ಬಾರಿ ಕಾವೇರಿ ನೀರಿನ ಕಿರಿಕ್ ಶುರುವಾದಾಗಲೂ ಸಿನಿಮಾ ಕಲಾವಿದರು ಹೋರಾಟಕ್ಕೆ ಬರಬೇಕು ಎನ್ನುವ ಕೂಗು ಶುರುವಾಗುತ್ತದೆ. ಅತ್ತ ತಮಿಳುನಾಡಿನಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಕಾವೇರಿ ವಿಚಾರದಲ್ಲಿ ತಮಿಳುನಾಡನ್ನು ವಿರೋಧಿಸುವ ಜನರು, ತಮಿಳು ಸಿನಿಮಾಗಳನ್ನು ಪ್ರೋತ್ಸಾಹಿಸುವ ಬಗ್ಗೆ ನಟ ದರ್ಶನ್ ಮಾತನಾಡಿ ಟಾಂಗ್ ಕೊಟ್ಟಿದ್ದರು. "ಕಾವೇರಿ ಹೋರಾಟಕ್ಕೆ ಆ ಹೀರೋ ಬರ್ಲಿಲ್ಲ, ಈ ಹೀರೋ ಬರ್ಲಿಲ್ಲ ಅಂತೀರಾ, ಇತ್ತೀಚೆಗೆ ಕರ್ನಾಟಕದಲ್ಲಿ ಒಂದು ತಮಿಳು ಸಿನಿಮಾ ರಿಲೀಸ್ ಆಗಿತ್ತು. ನಮ್ಮ ಡಿಸ್ಟ್ರಿಬ್ಯೂಟರ್ 6 ಕೋಟಿ ರೂ.ಗೆ ರೈಟ್ಸ್ ತಂದಿದ್ರು. ಸಿನಿಮಾ, ಕರ್ನಾಟಕದಲ್ಲಿ 37 ಕೋಟಿ ರೂ. ಲಾಭ ಮಾಡಿತು. ಆಗ ಯಾಕೆ ನೀವು ಯಾರೂ ಮಾತನಾಡಲಿಲ್ಲ? ಈಗ ದರ್ಶನ್, ಸುದೀಪ್, ಶಿವಣ್ಣ, ಯಶ್ ಮಾತ್ರ ಕಾಣಿಸೋದಾ? ಅವರು ಯಾರು ಕಾಣಿಸಲ್ವಾ? ಅವರನ್ನು ಬರೋಕೆ ಹೇಳಿ ಎಂದಿದ್ದರು.
ರಜನಿಕಾಂತ್ ನಟನೆಯ 'ಜೈಲರ್' ಚಿತ್ರದ ಬಗ್ಗೆಯೇ ನಟ ದರ್ಶನ್ ಪರೋಕ್ಷವಾಗಿ ಮಾತನಾಡಿದ್ದರು. ಆದರೆ ಯಾರ ಹೆಸರನ್ನು ಹೇಳಲಿಲ್ಲ. ಅಷ್ಟು ಇಷ್ಟಪಟ್ಟು ಆ ಸಿನಿಮಾ ಗೆಲ್ಲಿಸಿದ್ರಿ ಅಲ್ವಾ? ಈಗ ಕಾವೇರಿ ವಿಚಾರದಲ್ಲಿ ರಜನಿಕಾಂತ್ ತಮಿಳುನಾಡಿನ ಪರ ನಿಲ್ಲುತ್ತಾರಾ? ಅಥವಾ ಕರ್ನಾಟಕದ ಪರ ನಿಲ್ಲುತ್ತಾರಾ? ಎನ್ನುವ ಅರ್ಥದಲ್ಲಿ ಪ್ರಶ್ನಿಸಿದ್ದಂತೆ ಕಾಣುತ್ತಿತ್ತು. ಇತ್ತೀಚೆಗೆ ತಮಿಳು ಮಾಧ್ಯಮಗಳು ರಜನಿಕಾಂತ್ ಎದುರು ಕಾವೇರಿ ವಿಚಾರವಾಗಿ ಪ್ರಶ್ನೆ ಇಟ್ಟಿವೆ. ಆದರೆ ರಜನಿಕಾಂತ್ ಮಾತನಾಡದೇ ನುಣುಚಿಕೊಂಡಿದ್ದಾರೆ.
ತಲೈವಾ170ನೇ ಸಿನಿಮಾ ಚಿತ್ರೀಕರಣಕ್ಕಾಗಿ ಇತ್ತೀಚೆಗೆ ರಜನಿಕಾಂತ್ ಚೆನ್ನೈಯಿಂದ ಕೊಚ್ಚಿನ್‌ಗೆ ತೆರಳಿದರು. ಈ ವೇಳೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ್ದರು. "ಮುಂದಿನ ಸಿನಿಮಾ ಚಿತ್ರೀಕರಣಕ್ಕಾಗಿ ಕೊಚ್ಚಿನ್‌ಗೆ ಹೋಗುತ್ತಿದ್ದೀನಿ. ಇನ್ನು ಸಿನಿಮಾ ಟೈಟಲ್ ಫಿಕ್ಸ್ ಆಗಿಲ್ಲ. ಇನ್ನು ಟೈಟಲ್ ಕನ್ಫರ್ಮ್ ಆಗಿಲ್ಲ" ಎಂದಿದ್ದಾರೆ.
ಜೈಲರ್ ಸಿನಿಮಾ ಸಕ್ಸಸ್ ಬಗ್ಗೆ ಮಾತನಾಡಿದ ತಲೈವಾ "ನಾವು ಊಹಿಸಿದ್ದಕ್ಕಿಂತ ದೊಡ್ಡ ಸಕ್ಸಸ್ ಸಿಕ್ತು. ಈಗ ಮಾಡುತ್ತಿರುವುದು 170ನೇ ಸಿನಿಮಾ. ಒಂದೊಳ್ಳೆ ಸಿನಿಮಾ ಆಗುತ್ತದೆ" ಎಂದರು. ನಂತರ ಪತ್ರಕರ್ತರು ಕಾವೇರಿ ವಿಚಾರದ ಬಗ್ಗೆ ಪ್ರಶ್ನೆ ಕೇಳಲು ಮುಂದಾದರೂ ಆದರೆ ರಜನಿಕಾಂತ್ ಉತ್ತರಿಸದೇ ಮುಂದೆ ಹೊರಟರು. ಈ ವೇಲೆ ಪತ್ರಕರ್ತರೊಬ್ಬರು "ಸರ್ ಕರ್ನಾಟಕದವ್ರು ನೀರು ಬಿಡಲ್ಲ ಅಂತಿದ್ದಾರೆ. ಏನು ಹೇಳ್ತೀರಾ?" ಎಂದರು. ಆದರೆ ರಜನಿಕಾಂತ್ ಮಾತನಾಡದೇ ಏರ್‌ಪೋರ್ಟ್ ಒಳಗೆ ಧಾವಿಸಿದರು.
ಕರ್ನಾಟಕ ಹಾಗೂ ತಮಿಳುನಾಡು ನಡುವೆ ಯಾವುದೇ ವಿಚಾರಕ್ಕೆ ತಿಕ್ಕಾಟ ಶುರುವಾದಾಗಲೂ ರಜನಿಕಾಂತ್ ಹೆಸರು ಪ್ರಸ್ತಾಪವಾಗುತ್ತದೆ. ಇದಕ್ಕೂ ಮುನ್ನ ಕೂಡ ಕರ್ನಾಟಕದಲ್ಲಿ ರಜನಿ ಸಿನಿಮಾಗಳು ರಿಲೀಸ್ ಆಗಬಾರದು ಎನ್ನುವ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಹೋರಾಟ ನಡೆದಾಗಲೂ ರಜನಿ ಹೆಸರು ಕೇಳಿಬಂದಿತ್ತು. "ರಜನಿಕಾಂತ್ ಕರ್ನಾಟಕಕ್ಕೆ ಬರಕೂಡದು.. ಕಾಲಿಡಬೇಡಿ.. ನಾಟಕ ಆಡಬೇಡಿ.. ರಜನಿಕಾಂತ್ ಈಗ ಏನು ಹೇಳುತ್ತೀರಾ ಹೇಳಿ. ತಮಿಳುನಾಡಿನಲ್ಲಿ ಕರ್ನಾಟಕದ ಪರ ನಿಲ್ತೀರಾ? ತಮಿಳುನಾಡು ಪರ ನಿಲ್ತೀರಾ?" ಕನ್ನಡ ಚಳುವಳಿ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಪ್ರಶ್ನಿಸಿದ್ದರು.


Click it and Unblock the Notifications











