Rashmika Mandanna: ಗನ್ ಹಿಡಿದು ಬಂದ ರಶ್ಮಿಕಾ: ಹೊಡೆದರು ಡಬಲ್ ಧಮಾಕಾ!
ನಟಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ ಇಂದು. ಇದೇ ದಿನ ಅವರ ನಟನೆಯ ಕೆಲವು ಹೊಸ ಸಿನಿಮಾಗಳ ಪೋಸ್ಟರ್‌ಗಳು ಪೋಸ್ಟರ್‌ಗಳು ಬಿಡುಗಡೆ ಆಗಿದೆ.
ರಶ್ಮಿಕಾ ಮಂದಣ್ಣ ಈವರೆಗೆ ನಟಿಸಿರುವ ಸಿನಿಮಾಗಳಲ್ಲಿ 'ಪಕ್ಕದ ಮನೆ ಹುಡ್ಗಿ' ರೀತಿಯ ಬಬ್ಲಿ ಪಾತ್ರಗಳನ್ನಷ್ಟೆ ನಿರ್ವಹಿಸಿದ್ದಾರೆ. ಹಾಡು, ಹಾಸ್ಯ ತುಸು ರೊಮಾನ್ಸ್‌ಗಷ್ಟೆ ಸೀಮಿತವಾದ ನಾಯಕಿ ಪಾತ್ರಗಳಲ್ಲಿ ರಶ್ಮಿಕಾ ನಟಿಸಿದ್ದಾರೆ (ಡಿಯರ್ ಕಾಮ್ರೆಡ್ ಹೊರತುಪಡಿಸಿ) ಆದರೆ ಇದೀಗ ರಶ್ಮಿಕಾ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ತಮ್ಮ ಗೆಟಪ್ ಅನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ.
ಇಂದು ರಶ್ಮಿಕಾ ಹುಟ್ಟುಹಬ್ಬದ ಪ್ರಯುಕ್ತ ರಶ್ಮಿಕಾರ ಹೊಸ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಊರಿಗೆಲ್ಲ ಬೆಂಕಿ ಬಿದ್ದು ಹೊತ್ತಿ ಉರಿವಾಗ ಗನ್ ಹಿಡಿದು ರಸ್ತೆಯಲ್ಲಿ ರಶ್ಮಿಕಾ ನಡೆದುಕೊಂಡು ಬರುತ್ತಿರುವ ಟೀಸರ್ ಸೂಪರ್ ಆಗಿದೆ. ತಲೆಗೆ ಹಿಜಾಬ್ ಧರಿಸಿ ಖಡಕ್ ಲುಕ್‌ನಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾಕ್ಕೆ ಇನ್ನೂ ಹೆಸರಿಡಲಾಗಿಲ್ಲ, ಆದರೆ ಸಿನಿಮಾಕ್ಕೆ 'ಯುದ್ಧ ಪೀಡಿತ ಪ್ರೀತಿಯ ಕತೆ' ಎಂಬ ಕ್ಯಾಪ್ಷನ್ ನೀಡಲಾಗಿದೆ. ಸಿನಿಮಾದಲ್ಲಿ ಅಫ್ರೀನ್ ಎಂಬ ಕಾಶ್ಮೀರಿ ಮುಸ್ಲಿಂ ಯುವತಿಯ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ಸಿನಿಮಾದ ನಾಯಕ ಮಲಯಾಳಂ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್. ಸಿನಿಮಾಕ್ಕೆ ಸಂಗೀತವನ್ನು ವಿಶಾಲ್ ಚಂದ್ರಶೇಖರ್ ನೀಡಿದ್ದಾರೆ.
Recommended Video

ಈ ಸಿನಿಮಾವನ್ನು ವೈಜಯಂತಿ ಮೂವೀಸ್‌ನವರು ಅರ್ಪಿಸುತ್ತಿದ್ದು, ಸ್ವಪ್ನ ಮೂವೀಸ್ ಕಡೆಯಿಂದ ನಿರ್ಮಾಣವಾಗುತ್ತಿದೆ. ಸಿನಿಮಾವನ್ನು ಹನು ರಾಘವಪುಡಿ ನಿರ್ದೇಶನ ಮಾಡಿದ್ದಾರೆ.
ಇದರ ಬಳಿಕ ಮತ್ತೊಂದು ದೊಡ್ಡ ಸಿನಿಮಾವನ್ನೇ ರಶ್ಮಿಕಾ ತಮ್ಮ ತೆಕ್ಕೆಗೆ ಬಾಚಿಕೊಂಡಿದ್ದಾರೆ. ತಮಿಳಿನ ಸ್ಟಾರ್ ನಟ ವಿಜಯ್‌ರ 66 ನೇ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ವಿಷಯ ಇಂದಷ್ಟೆ ಅಧಿಕೃತವಾಗಿ ಘೋಷಣೆಗೊಂಡಿದೆ. ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಅತಿ ಕಡಿಮೆ ಅವಧಿಯಲ್ಲಿಯೇ ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಹಿಂದಿ, ಕನ್ನಡದ ದೊಡ್ಡ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಪಡೆದುಕೊಂಡಿದ್ದಾರೆ.
ವಿಜಯ್‌ರ 66ನೇ ಸಿನಿಮಾವನ್ನು ತೆಲುಗಿನ ದಿಲ್ ರಾಜು ನಿರ್ಮಾಣ ಮಾಡುತ್ತಿದ್ದು, ತೆಲುಗಿನ ವಂಶಿ ಪೈಡಪಲ್ಲಿ ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್‌ರ 'ಬೀಸ್ಟ್' ಸಿನಿಮಾ ಬಿಡುಗಡೆ ಆದ ಬಳಿಕ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.
ರಶ್ಮಿಕಾ ಮಂದಣ್ಣ ನಟನೆಯ ಎರಡು ಹಿಂದಿ ಸಿನಿಮಾಗಳಾದ 'ಮಿಷನ್ ಮಜ್ನು' ಹಾಗೂ 'ಗುಡ್ ಬೈ' ಸಿನಿಮಾದ ಚಿತ್ರೀಕರಣ ಮುಗಿದಿದೆ. ಆದರೆ ಸಿನಿಮಾ ಇನ್ನೂ ಬಿಡುಗಡೆ ಆಗಬೇಕಿದೆ. ಇದರ ಜೊತೆಗೆ ತೆಲುಗಿನ 'ಪುಷ್ಪ 2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಬಳಿಕ ತೆಲುಗಿನ ಮತ್ತೊಬ್ಬ ಸೂಪರ್ ಸ್ಟಾರ್ ಜೊತೆಯೂ ನಟಿಸುತ್ತಿದ್ದಾರೆ.


Click it and Unblock the Notifications











