ತಮಿಳು ಸ್ಟಾರ್ ನಟನೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ನಾಗಾಲೋಟದಲ್ಲಿದ್ದಾರೆ. ತೆಲುಗು, ತಮಿಳಿನಲ್ಲಿ ಬೇಡಿಕೆಯಲ್ಲಿದ್ದಾಗಲೇ ಹಿಂದಿಗೆ ಹಾರಿ ಅಲ್ಲಿಯೂ ಸ್ಟಾರ್ ನಟರೊಂದಿಗೆ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ ರಶ್ಮಿಕಾ.
ಇದೀಗ ತಮಿಳಿನ ಸ್ಟಾರ್ ನಟ ವಿಜಯ್ ಜೊತೆ ನಾಯಕಿಯಾಗಿ ರಶ್ಮಿಕಾ ನಟಿಸಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಈ ಬಗ್ಗೆ ರಶ್ಮಿಕಾ ಅವರೇ ಸುಳಿವು ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರಶ್ಮಿಕಾ ಮಂದಣ್ಣ ಆಗಾಗ್ಗೆ ಅಭಿಮಾನಿಗಳೊಟ್ಟಿಗೆ ಸಂವಾದ ನಡೆಸುತ್ತಿರುತ್ತಾರೆ. ಇಂಥಹುದೇ ಒಂದು ಸಂವಾದದ ಸಮಯದಲ್ಲಿ ವಿಜಯ್ ಅಭಿಮಾನಿಯೊಬ್ಬ ''ನೀವು ವಿಜಯ್ ಜೊತೆ ಯಾವಾಗ ನಟಿಸುತ್ತೀರಿ'' ಎಂದು ಕೇಳಿದ್ದಾನೆ. ಇದಕ್ಕೆ ಉತ್ತರಿಸಿರುವ ರಶ್ಮಿಕಾ. ಯಾವುದೇ ಅನುಮಾನವಿಲ್ಲದೆ ''ಶೀಘ್ರದಲ್ಲಿ'' ಎಂದು ಉತ್ತರಿಸಿದ್ದಾರೆ.

ಮೂಲಗಳ ಪ್ರಕಾರ ರಶ್ಮಿಕಾ ಈಗಾಗಲೇ ವಿಜಯ್ ಜೊತೆ ಸಿನಿಮಾದಲ್ಲಿ ನಟಿಸಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಆದರೆ ಅಧಿಕೃತ ಘೋಷಣೆ ಆಗಿಲ್ಲವಷ್ಟೆ ಎನ್ನಲಾಗುತ್ತಿದೆ. ಹಾಗಾಗಿಯೇ ರಶ್ಮಿಕಾ ಅಷ್ಟು ಖಚಿತವಾಗಿ ಶೀಘ್ರವಾಗಿ ವಿಜಯ್ ಜೊತೆ ನಟಿಸುತ್ತೇನೆ ಎಂದಿದ್ದಾರೆ.
ವಿಜಯ್ ಪ್ರಸ್ತುತ 'ಬೀಸ್ಟ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಆಗಲಿದ್ದಾರೆ ಎನ್ನಲಾಗುತ್ತಿದೆ.
Recommended Video
ರಶ್ಮಿಕಾ ಮಂದಣ್ಣ ಪ್ರಸ್ತುತ ಹಿಂದಿಯ 'ಮಿಷನ್ ಮಜ್ನು', ಅಮಿತಾಬ್ ಬಚ್ಚನ್ ಜೊತೆಗೆ 'ಗುಡ್ ಬೈ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆಗೆ 'ಪುಷ್ಪ' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಇನ್ನಷ್ಟು ಅವಕಾಶಗಳು ರಶ್ಮಿಕಾಗೆ ಸಿಗುತ್ತಿವೆ ಎನ್ನಲಾಗುತ್ತಿದ್ದು, ಬಾಲಿವುಡ್‌ನಲ್ಲಿ ಸೆಟಲ್ ಆಗಲೆಂದೇ ವಾಸ್ತವ್ಯವನ್ನು ಮುಂಬೈಗೆ ಬದಲಾಯಿಸಿದ್ದಾರೆ ಈ ನಟಿ.


Click it and Unblock the Notifications











