'ಕರುಪ್ಪು' ಚಿತ್ರದ ಕೆಲ ದೃಶ್ಯಗಳಿಗೆ ಆ ಎರಡು ಕನ್ನಡ ಚಿತ್ರಗಳೇ ಸ್ಫೂರ್ತಿ; ನಿರ್ದೇಶಕ ಆರ್‌ಜೆ ಬಾಲಾಜಿ
ಯಾವುದೋ ಸಿನಿಮಾ ನೋಡಿ ಫಿಲ್ಮ್ ಮೇಕರ್ಸ್ ಸ್ಫೂರ್ತಿ ಪಡೆಯುವುದು ಸರ್ವೇ ಸಾಮಾನ್ಯ. ಬಹುತೇಕರು ಇದನ್ನು ಒಪ್ಪಿಕೊಳ್ಳುವುದಿಲ್ಲ. ಕೆಲವರು ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಸೂರ್ಯ ನಟನೆಯ 'ಕರುಪ್ಪು' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. 250 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿದೆ. ಚಿತ್ರದ ಕೆಲ ದೃಶ್ಯಗಳಿಗೆ 'ಕಾಂತಾರ -2' ಹಾಗೂ 'ಸಪ್ತಸಾಗರದಾಚೆ ಎಲ್ಲೋ' ಚಿತ್ರಗಳು ಪ್ರೇರಣೆ ಎಂದು ನಿರ್ದೇಶಕ ಆರ್‌ಜೆ ಬಾಲಾಜಿ ಹೇಳಿದ್ದಾರೆ.
ಐಪಿಎಲ್ ಟೂರ್ನಿ ಆರ್ಭಟದ ನಡುವೆ ಕೂಡ 'ಕರುಪ್ಪು' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಫ್ಯಾಂಟಸಿ ಆಕ್ಷನ್ ಚಿತ್ರದಲ್ಲಿ ಸೂರ್ಯ ಜೋಡಿಯಾಗಿ ತ್ರಿಶಾ ನಟಿಸಿದ್ದಾರೆ. 3 ವಿಭಿನ್ನ ಶೇಡ್‌ಗಳಿರೋ ಪಾತ್ರದಲ್ಲಿ ಸೂರ್ಯ ಜಾದೂ ಮಾಡಿದ್ದಾರೆ. ಅದರಲ್ಲೂ ಕ್ಲೈಮ್ಯಾಕ್ಸ್‌ನಲ್ಲಿ ಕರುಪ್ಪುಸ್ವಾಮಿ ಅವತಾರದಲ್ಲಿ ನೃತ್ಯ ಮಾಡುವ ಸೀಕ್ವೆನ್ಸ್ ನೋಡುಗರ ಮೈರೋಮಾಂಚನಗೊಳಿಸುತ್ತದೆ. ಇದಕ್ಕೆ 'ಕಾಂತಾರ- 2' ಎಂದು ನಿರ್ದೇಶಕರು ಹೇಳಿದ್ದಾರೆ. The Hollywood Reporter India ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಬಾಲಾಜಿ ಮಾತನಾಡಿದ್ದಾರೆ.

'ಕರುಪ್ಪು' ಸಿನಿಮಾ ನೋಡಿದಾಗಲೇ ಕೆಲವರು ಕ್ಲೈಮ್ಯಾಕ್ಸ್ ಅನ್ನು 'ಕಾಂತಾರ' ಚಿತ್ರಕ್ಕೆ ಹೋಲಿಸಿ ಕಾಮೆಂಟ್ ಮಾಡಿದ್ದರು. ಇದನ್ನು ಒಪ್ಪಿಕೊಳ್ಳಲು ಸೂರ್ಯ ಅಭಿಮಾನಿಗಳು ಸಿದ್ಧರಿರಲಿಲ್ಲ. ಈಗ ಸ್ವತಃ ನಿರ್ದೇಶಕ ಆರ್‌ಜೆ ಬಾಲಾಜಿ ಒಪ್ಪಿಕೊಂಡಿದ್ದಾರೆ. "ಕ್ಲೈಮ್ಯಾಕ್ಸ್ ಚಿತ್ರೀಕರಣ ಆಗಿತ್ತು. ನನಗೆ ಯಾಕೋ ತೃಪ್ತಿ ಕೊಡಲಿಲ್ಲ. ಅದೇ ಸಮಯದಲ್ಲಿ 'ಕಾಂತಾರ- 2' ಸಿನಿಮಾ ನೋಡೊಕೆ ಹೋದೆ. ಇಡೀ ಸಿನಿಮಾ ಓಕೆ, ಆದರೆ ಅದೊಂದು ಸನ್ನಿವೇಶದಲ್ಲಿ ಪ್ರೇಕ್ಷಕರೆಲ್ಲಾ ಭಾವಪರವಶರಾಗಿಬಿಟ್ಟರು. ಅದು ಕೂಡ ಮಲ್ಟಿಪ್ಲೆಕ್ಸ್‌ನಲ್ಲಿ. ನನಗೂ ಅಚ್ಚರಿ ಆಯಿತು. ಅರೇ, ನಾನು ಕರುಪ್ಪುಸ್ವಾಮಿ ಸಿನಿಮಾ ಮಾಡ್ತಿದ್ದೀನಿ. ಇದನ್ನು ಯಾಕೆ ಬಿಟ್ಟೆ ಎಂದು ಆ ಡ್ಯಾನ್ಸ್ ಸೀಕ್ವೆನ್ಸ್ ಸೇರಿಸಿದ್ದು" ಎಂದಿದ್ದಾರೆ.
'ಸಪ್ತಸಾಗರದಾಚೆ ಎಲ್ಲೊ- A' ಸಿನಿಮಾ ನೋಡಿ ಸ್ಫೂರ್ತಿ ಪಡೆದಿದ್ದೆ. ನಿರ್ದೇಶಕ ಹೇಮಂತ್ ರಾವ್ ಅವರಿಗೆ ಫೋನ್ ಮಾಡಿ ಹೀಗೆ ಒಂದು ದೃಶ್ಯ ನೋಡ್ದೆ. ಬಳಸಿಕೊಳ್ಳಬಹುದಾ ಎಂದಿದ್ದಕ್ಕೆ ಖಂಡಿತ ಬಳಸಿಕೊಳ್ಳಿ ಅಂದ್ರು ಎಂದು ಆರ್‌ಜೆ ಬಾಲಾಜಿ ತಿಳಿಸಿದ್ದಾರೆ. "ಕಾಂತಾರ- 2 ನೋಡಿದ ಬಳಿಕ ತಮ್ಮ ತಂಡ, ಸೂರ್ಯ ಸರ್ ಹಾಗೂ ನಿರ್ಮಾಪಕರಿಗೆ ಹೇಳಿದೆ. ಅದಾಗಲೇ ಚಿತ್ರೀಕರಣ ಮುಗಿದುಬಿಟ್ಟಿತ್ತು. ಈಗ ಹೇಗೆ ಸಾಧ್ಯ ಎಂದುಕೊಂಡೆ. ನಿರ್ಮಾಪಕರಿಗೆ ಹೇಳಿದಾಗ ಅವರು ಖುಷಿಯಾಗಿ ಒಪ್ಪಿಕೊಂಡರು. ಸೂರ್ಯ ಸರ್ ಅವರನ್ನು ಒಪ್ಪಿಸಿದೆ. ಆದ್ರೆ ಅವ್ರು ಬೇರೆ ಸಿನಿಮಾಗಳಲ್ಲಿ ನಟಿಸುತ್ತಿದ್ರು. ಹಾಗಾಗಿ 2 ದಿನ ಕಾಲ್‌ಶೀಟ್ ಕೊಟ್ರು. 2 ದಿನದಲ್ಲಿ ಫೈಟ್, ಡ್ಯಾನ್ಸ್ ಹಾಗೂ ಕ್ಲೈಮ್ಯಾಕ್ಸ್ ಸೀಕ್ವೆನ್ಸ್ ಶೂಟ್ ಮಾಡಿದ್ವಿ. ಮೂರ್ನಾಲ್ಕು ಗಂಟೆ ಮೇಕಪ್ ಹಾಕಿಕೊಂಡಿದ್ರು. ಶೋಬಿ ಮಾಸ್ಟರ್ ಹಾಗೂ ವಿಕ್ರಂ ಮೋರ್ ಇಬ್ಬರೂ ಅದನ್ನು ಡಿಸೈನ್ ಮಾಡಿದ್ರು" ಎಂದು ವಿವರಿಸಿದ್ದಾರೆ.

'ಕರುಪ್ಪು' ಸಿನಿಮಾ ಕ್ಲೈಮ್ಯಾಕ್ಸ್ ನೋಡಿ ಪ್ರೇಕ್ಷಕರು ಭಾವಪರವಶರಾಗುತ್ತಿದ್ದಾರೆ. ಒಟ್ಟಾರೆ ಎಲ್ಲವೂ ಕೂಡಿಬಂತು. ಚೆನ್ನಾಗಿ ತೆರೆಮೇಲೆ ಬಂದು ಪ್ರೇಕ್ಷಕರು ಸಿನಿಮಾ ಮೆಚ್ಚಿಕೊಂಡಿದ್ದಾರೆ. ಖುಷಿ ಆಗುತ್ತಿದೆ ಎಂದು ನಿರ್ದೇಶಕರು ಸಂತಸ ವ್ಯಕ್ತಪಡಿಸಿದ್ದಾರೆ. 13 ವರ್ಷಗಳಿಂದ ಸೂರ್ಯ ನಟಿಸಿದ ಯಾವುದೇ ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್ ಆಗಿರಲಿಲ್ಲ. 'ಕಂಗುವ' ಹಾಗೂ 'ರೆಟ್ರೋ' ರೀತಿಯ ದೊಡ್ಡ ಬಜೆಟ್ ಸಿನಿಮಾಗಳು ಸೋತು ಮುಖಭಂಗವಾಗಿತ್ತು. ಕೊನೆಗೂ 'ಕರುಪ್ಪು' ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ್ದಾರೆ.
ನಿರ್ದೇಶಕ ಆರ್‌ಜೆ ಬಾಲಾಜಿ ಈ ಹಿಂದೆ 'ಮೂಕುಟ್ಟಿ ಅಮ್ಮನ್' ಹಾಗೂ 'ವೀಟ್ಲ ವಿಶೇಷಂ' ಚಿತ್ರಗಳನ್ನು ನಿರ್ದೇಶಿಸಿ ನಟಿಸಿದ್ದರು. ಆ ಎರಡೂ ಸಿನಿಮಾಗಳಲ್ಲಿ ಕೂಡ ನಮ್ಮ ಮೂಲ, ದೈವ, ನಂಬಿಕೆ ವಿಚಾರಗಳನ್ನು ತೋರಿಸಿದ್ದರು. ಇದೀಗ 'ಕರುಪ್ಪು' ಸಿನಿಮಾ ಕಟ್ಟಿಕೊಟ್ಟು ಗೆದ್ದಿದ್ದಾರೆ.


Click it and Unblock the Notifications