ತಮಿಳು ನಟ ಸೂರ್ಯ ಭೇಟಿ ಬಗ್ಗೆ ತಮಿಳಿನಲ್ಲಿಯೇ ಬರೆದುಕೊಂಡ ಸಚಿನ್ ತೆಂಡೂಲ್ಕರ್
ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಕಂಟೆಂಟ್ ಇರುವ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ತಮಿಳಿನ ನಟ ಸೂರ್ಯ ದಿನದಿಂದ ದಿನಕ್ಕೆ ತನ್ನ ಮಾರುಕಟ್ಟೆಯ ವಿಶಾಲತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸೂರರೈ ಪೊಟ್ರು ಸಿನಿಮಾ ಮೂಲಕ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಮಿಂಚಿದ ಸೂರ್ಯ ಕಳೆದ ವರ್ಷ ಬಿಡುಗಡೆಗೊಂಡ ಕಮಲ್ ಹಾಸನ್ ನಟನೆಯ ವಿಕ್ರಮ್ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಅಬ್ಬರಿಸಿ ಕ್ರೇಜ್ ಹೆಚ್ಚಿಸಿದ್ದರು.
ಹೀಗೆ ಭಿನ್ನ ವಿಭಿನ್ನ ಸಿನಿಮಾಗಳಲ್ಲಿ ನಟಿಸಿ ದೇಶವ್ಯಾಪಿ ಅಭಿಮಾನಿಗಳನ್ನು ಸಂಪಾದಿಸುತ್ತಿರುವ ಸೂರ್ಯ ಸದ್ಯ ತಮ್ಮ ಫ್ಯಾಮಿಲಿ ಜತೆ ಮುಂಬೈಗೆ ಫಲಾಯನಗೊಳ್ಳಲಿದ್ದಾರೆ ಎಂಬ ಸುದ್ದಿ ಇದ್ದು, ಸೂರ್ಯ ಆಗಾಗ ಮುಂಬೈಗೆ ಪ್ರಯಾಣ ಬೆಳೆಸುತ್ತಾ ಇದ್ದಾರೆ. ಇದೇ ರೀತಿ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೂರ್ಯ ಕ್ರಿಕೆಟ್ ದೇವರು ಎಂದೇ ಖ್ಯಾತಿಯನ್ನು ಪಡೆದಿರುವ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ಹೌದು, ಸೂರ್ಯ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿ ಮಾಡಿದ ಸಂದರ್ಭದ ಫೋಟೊವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು 'ರೆಸ್ಪೆಕ್ಟ್ ಅಂಡ್ ಲವ್' ಎಂದು ಬರೆದುಕೊಂಡಿದ್ದಾರೆ. ಇನ್ನು ಇದೇ ಫೋಟೊವನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಹ ಹಂಚಿಕೊಂಡು 'ಈವತ್ತಿನ ಬೆಳಗಿನ ಸೂರ್ಯೋದಯ ವಿಶೇಷವಾಗಿತ್ತು. ಸೂರ್ಯ ನಿಮ್ಮನ್ನು ಭೇಟಿಯಾಗಿದ್ದು ಅದ್ಭುತವಾಗಿತ್ತು' ಎಂದು ತಮಿಳಿನಲ್ಲೇ ಬರೆದುಕೊಂಡಿದ್ದಾರೆ. ಇನ್ನು ಈ ಇಬ್ಬರೂ ಸಹ ಯಾವ ಸ್ಥಳದಲ್ಲಿ ಭೇಟಿಯಾಗಿದ್ದು ಎಂಬುದನ್ನು ಬಹಿರಂಗಪಡಿಸಿಲ್ಲ.

ಸದ್ಯ ಸೂರ್ಯ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜತೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಇರುವ ಫೋಟೊವನ್ನು ಹೆಮ್ಮೆಯಿಂದ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಈ ಫೋಟೊ ಸದ್ಯ ಟ್ರೆಂಡಿಂಗ್ ಪಟ್ಟಿ ಸೇರಿದೆ.


Click it and Unblock the Notifications











