ಕನ್ನಡದ ಈ ನಟಿಯ ಚಿತ್ರಕ್ಕೆ ಕ್ಲೀನ್ ಬೋಲ್ಡ್ ಆದ ಸಚಿನ್ ತೆಂಡೂಲ್ಕರ್, ಹೇಳಿದ್ದೇನು ಕ್ರಿಕೆಟ್ ದೇವರು ?
ಚಿತ್ರರಂಗದ ಸೆಳೆತವೇ ಅಂಥಹದ್ದು. ಸಿನಿಮಾ ಎಂಬ ಮಾಯೆಯಿಂದ ಯಾರು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಬಿಲ್ಡರ್ ಇರಬಹುದು.. ಡಾಕ್ಟರ್ ಇರಬಹುದು.. ಬ್ಯುಸಿನೆಸ್ ಮ್ಯಾನ್ ಇರಬಹುದು ಅಥವಾ ಸಾಫ್ಟ್‌ವೇರ್ ಉದ್ಯೋಗಿ ಇರಬಹುದು. ಎಲ್ಲರೂ ಸಿನಿಮಾದ ಆಕರ್ಷಣೆಗೆ ಒಳಗಾದವರೇ. ಹೀಗಿರುವಾಗ ಕ್ರಿಕೆಟ್ ಆಟಗಾರರು ಈ ಮೋಹದಿಂದ ಹೇಗೆ ಪಾರಾಗಲು ಸಾಧ್ಯ..? ದೇಶಕ್ಕಾಗಿ ಆಡುವ.. ಎದುರಾಳಿಗಳ ಬೆವರಿಳಿಸುವ.. ಭಾರತ ಕ್ರಿಕೆಟ್ ತಂಡದ..
ಅನೇಕ ಸ್ಟಾರ್ ಪ್ಲೇಯರ್ಸ್ ಮೈದಾನದಲ್ಲಿಯೇ ಹಾಡುಗಳನ್ನು ಗುನುಗುತ್ತಿರುತ್ತಾರೆ. ಸಮಯ ಸಿಕ್ಕಾಗ ಚಿತ್ರಗಳನ್ನು ನೋಡುತ್ತಾರೆ. ನೋಡುತ್ತಾ.. ನೋಡುತ್ತಾ.. ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಇವರೇ ಯಾರಾದರೂ ಒಬ್ಬ ಹೀರೋಗೆ ಅಥವಾ ನಾಯಕಿಗೆ ಅಥವಾ ನಿರ್ದೇಶಕರಿಗೆ ಅಭಿಮಾನಿಯಾಗುತ್ತಾರೆ. ಯಾವುದೋ ಒಂದು ಚಿತ್ರ ನೋಡಿ ಕಣ್ಣೀರಾಗಿಬಿಡುತ್ತಾರೆ.

ಆದರೆ.. ಹಿಂದೆ ಹೀಗೆಲ್ಲಾ ಬಹುತೇಕ ಬಾರಿ ಕ್ರಿಕೆಟ್ ಆಟಗಾರರು ನಿಮ್ಮ ಇಷ್ಟದ ಚಿತ್ರ ಯಾವುದು ಅಂದರೆ ಮುಲಾಜಿಲ್ಲದೇ ಯಾವುದಾದರೂ ಒಂದು ಹಿಂದಿ ಚಿತ್ರದ ಹೆಸರನ್ನು ತೆಗೆದುಕೊಂಡು ಬಿಡುತ್ತಿದ್ದರು. ಯಾಕೆಂದರೆ.. ಸಿನಿಮಾ ಅಂದರೆ ಆಗ ಕೇವಲ ಬಾಲಿವುಡ್ ಮಾತ್ರ ಎಂದು ಬಿಂಬಿಸಲಾಗಿತ್ತು. ಈ ಕಾರಣಕ್ಕೆ ಅವರನ್ನು ದೂಷಿಸುವುದು ತಪ್ಪು.
ಆದರೆ ಈಗ ಕಾಲ ಬದಲಾಗಿದೆ. ಬದಲಾದ ಕಾಲದಲ್ಲಿ ಎಲ್ಲಾ ಭಾಷೆಯ ಚಿತ್ರಗಳನ್ನು ಎಲ್ಲರು ನೋಡುತ್ತಿದ್ದಾರೆ. ಪ್ರಾದೇಶಿಕ ಭಾಷೆಗಳ ಚಿತ್ರಕ್ಕೆ ಮನಸೋಲುತ್ತಿದ್ದಾರೆ. ಮುಚ್ಚುಮರೆಯಿಲ್ಲದೇ ಆ ಚಿತ್ರದ ಕುರಿತು ಮನಸಾರೆ ಮಾತನಾಡುತ್ತಿದ್ದಾರೆ. ಉದಾಹರಣೆಗೆ ಸಚಿನ್ ತೆಂಡೂಲ್ಕರ್.
ಹೌದು, ಸಚಿನ್ ತೆಂಡೂಲ್ಕರ್.. ಭಾರತೀಯ ಕ್ರಿಕೆಟ್‌ನ ದಂತಕತೆ. ಹತ್ತು ಹಲವು ದಾಖಲೆಗಳನ್ನು ಬರೆದ ಸಚಿನ್ ಇತ್ತೀಚೆಗೆ ''ರೆಡಿಟ್''ನಲ್ಲಿ ಪ್ರಶ್ನೋತ್ತರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಿಮ್ಮ ಮನದಲ್ಲಿರುವ ಪ್ರಶ್ನೆಗಳನ್ನು ಕೇಳಿ ಎಂದು ಹೇಳಿದ್ದರು.
ಈ ಸುವರ್ಣ ಅವಕಾಶವನ್ನು ಬಳಸಿಕೊಂಡ ಅಭಿಮಾನಿಯೊಬ್ಬರು ನೀವು ಸಿನಿಮಾಗಳನ್ನು ಯಾವಾಗ ನೋಡ್ತೀರಾ ? ನಿಮ್ಮ ನೆಚ್ಚಿನ ಚಿತ್ರ ಯಾವುದಾದರೂ ಇದೆಯಾ ? ಎಂದು ಕೇಳಿದ್ದರು. ಅಭಿಮಾನಿಯ ಈ ಪ್ರಶ್ನೆಗೆ ಉತ್ತರವನ್ನು ನೀಡಿರುವ ಸಚಿನ್ ಸಮಯ ಸಿಕ್ಕಾಗೆಲ್ಲಾ ನಾನು ಸಿನಿಮಾ ನೋಡುತ್ತೇನೆ ಎಂದು ಹೇಳಿದ್ದಾರೆ. ಇತ್ತೀಚೆಗೆ ನಾನು ನೋಡಿದ ಚಿತ್ರಗಳಲ್ಲಿ ನನಗೆ ''3BHK'' ಮತ್ತು ''ಅತಾ ತಾಂಬಯಾಚಾ ನಹಿ'' (ಮರಾಠಿ) ತುಂಬಾನೇ ಇಷ್ಟವಾದವು ಎಂದು ಉತ್ತರಿಸಿದ್ದಾರೆ.

ಸದ್ಯ ಸಚಿನ್ ಅವರ ಈ ಉತ್ತರ ಬಳಕೆದಾರರೊಬ್ಬರ ಸಹಾಯದಿಂದ ''ಎಕ್ಸ್'' ಮೂಲಕ ''3BHK'' ನಿರ್ದೇಶಕ ಶ್ರೀಗಣೇಶ್ ಅವರ ಗಮನಕ್ಕೆ ಬಂದಿದ್ದು ಲಿಟಲ್ ಮಾಸ್ಟರ್ ಮಾತುಗಳನ್ನು ಕೇಳಿ ನಿರ್ದೇಶಕ ಶ್ರೀಗಣೇಶ್ ಖುಷಿಯಾಗಿದ್ಧಾರೆ. ತುಂಬಾ ಧನ್ಯವಾದಗಳು ಸರ್ ನೀವು ನಮ್ಮ ಬಾಲ್ಯದ ಹೀರೋ ಎಂದು ಹೇಳಿದ್ದಾರೆ.
ಇನ್ನು ಇದೇ ವಿಚಾರ ತಿಳಿದು ''3BHK''ಯಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸಿರುವ ಕನ್ನಡತಿ ''ಚೈತ್ರಾ ಆಚಾರ್'' ಕೂಡ ಕುಣಿದು ಕುಪ್ಪಳಿಸಿದ್ದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನಮ್ಮ ಚಿತ್ರವನ್ನು ನೋಡಿದ್ಧಾರೆ, ಖುಷಿ ಪಟ್ಟಿರುವುದಾಗಿ ಹೇಳಿದ್ಧಾರೆ, ಲವ್ ಯೂ ಸರ್ ಎಂದು ಹೇಳಿರುವ ಚೈತ್ರಾ ಈ ಚಿತ್ರ ಮಾಡಿದ್ದಕ್ಕೆ ನಾನು ಈಗ ಹೆಮ್ಮೆ ಪಡಬಹುದು ಎಂದು ಕೂಡ ಹೇಳಿದ್ದಾರೆ.

ಅಂದ್ಹಾಗೇ ''3BHK'' ಚೈತ್ರಾ ಆಚಾರ್ ಅಭಿನಯದ ಮೊದಲ ತಮಿಳು ಸಿನಿಮಾ. ಸಿದ್ಧಾರ್ಥ್ ನಾಯಕನಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಐಶ್ವರ್ಯ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಸಿದ್ದಾರ್ಥ್ ಮತ್ತು ಚೈತ್ರಾ ಜೊತೆ ಚಿತ್ರದಲ್ಲಿ ಹಿರಿಯ ನಟ ಶರತ್ ಕುಮಾರ್, ಯೋಗಿ ಬಾಬು, ದೇವಯಾನಿ, ಮೀತಾ ರಘುನಾಥ್ ಇದ್ದಾರೆ. ಶ್ರೀ ಗಣೇಶ್ ಈ ಚಿತ್ರವನ್ನು ನಿರ್ದೇಶಿಸಿದ್ದು ಅರುಣ್ ವಿಶ್ವ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.


Click it and Unblock the Notifications











