ಸಹೋದರಿ ಜೊತೆ ಬೀಚ್‌ನಲ್ಲಿ ಮೋಜು-ಮಸ್ತಿ, ಬಿಕಿನಿ ವಿವಾದ ; ಕಾಲೆಳೆದವರಿಗೆ ಉತ್ತರ ನೀಡಿದ ಸಾಯಿ ಪಲ್ಲವಿ
ಸಾಮಾಜಿಕ ಜಾಲತಾಣದಲ್ಲಿ ದಿನಾ ಬೆಳಗಾದರೆ ಆ ಸೆಲೆಬ್ರೆಟಿಗಳು ಹಂಗೆ, ಈ ಸೆಲೆಬ್ರೆಟಿಗಳು ಹಿಂಗೇ ಎನ್ನುವಂತಹ ಪೋಸ್ಟುಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರೋದು ಕಾಮನ್ನು. ಸೆಲೆಬ್ರೆಟಿಗಳೆಂದ ಮೇಲೆ ನಾವು ಅಷ್ಟೂ ಮಾಡದೇ ಇದ್ದರೆ ಹೇಗೆ ಎನ್ನುವುದು ಬಹುತೇಕರ ಆಲೋಚನೆ ? ಆದರೆ ಇಂತಹ ಸಾಕಷ್ಟು ವಿವಾದಾತ್ಮಕ ವಿಚಾರಗಳಿಗೆ ಬಹುತೇಕ ಸೆಲೆಬ್ರೆಟಿಗಳು ಉರಿದು ಬೀಳುತ್ತಾರೆ. ಪ್ರತಿಕ್ರಿಯೆ ನೀಡುತ್ತಾರೆ.
ಮತ್ತೂ ಕೆಲವರು ಸಹಿಸಿಕೊಳ್ಳಲು ಸಾಧ್ಯವಾಗದೇ ತಮ್ಮ ಕಾಲೆಳೆಯಲು ಬಂದವರಿಗೆ ಪರೋಕ್ಷವಾಗಿ ತಿರುಗೇಟನ್ನು ಕೂಡ ನೀಡುತ್ತಾರೆ. ಉದಾಹರಣೆಗೆ ಸಾಯಿ ಪಲ್ಲವಿ. ಹೌದು, ತಮ್ಮ ಸಹಜ ಅಭಿನಯ ಮತ್ತು ಸಹಜ ಸೌಂದರ್ಯದಿಂದ ಕೇವಲ ದಕ್ಷಿಣದಲ್ಲಿ ಅಷ್ಟೇ ಅಲ್ಲ, ಉತ್ತರದಲ್ಲಿ ಕೂಡ ಅನೇಕರ ಹೃದಯಕ್ಕೆ ಕನ್ನ ಹಾಕಿರುವವರು ಸಾಯಿ ಪಲ್ಲವಿ.

ಹಿಂದೊಮ್ಮೆ ಎರಡು ಕೋಟಿ ರೂಪಾಯಿ ಸಂಭಾವನೆಯ ಸೌಂದರ್ಯವರ್ಧಕ ಜಾಹೀರಾತನ್ನು ಸಾರಸಗಟಾಗಿ ತಿರಸ್ಕರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಸಾಯಿ ಪಲ್ಲವಿ ಕಳೆದ ಕೆಲ ದಿನಗಳ ಹಿಂದೆ ತಮ್ಮ ಸಹೋದರಿ ಪೂಜಾ ಜೊತೆ ಸಪ್ತಸಾಗರದಾಚೆ ಪ್ರವಾಸಕ್ಕೆ ಹೋಗಿದ್ದರು. ಮೋಜು ಮಸ್ತಿ ಮಾಡಿದ್ದರು.
ಇದೇ ಸಮಯದಲ್ಲಿ ತಮ್ಮ ಪ್ರವಾಸದ ಫೋಟೊಗಳನ್ನು ಸಾಯಿ ಪಲ್ಲವಿ ಅವರ ಸಹೋದರಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಹೀಗೆ ಹಂಚಿಕೊಳ್ಳಲಾದ ಫೋಟೊ ನೋಡಿ ಕೆಲವರು ಕೆರಳಿ ಕೆಂಡವಾಗಿದ್ದರು.
ತೆರೆಯ ಮೇಲೆ ಗೌರಮ್ಮನಂತೆ ಕಾಣುವ ಸಾಯಿ ಪಲ್ಲವಿ ಸಮುದ್ರದ ತೀರದಲ್ಲಿ ಬಿಕಿನಿ ಹಾಕಿಕೊಂಡು ಓಡಾಡುತ್ತಿದ್ದಾರೆ ಎಂದೆಲ್ಲಾ ಮಾತನಾಡಲು ಶುರು ಮಾಡಿದ ಕೆಲವರು ಸಾಯಿ ಪಲ್ಲವಿ ಸ್ಲಿವ್ ಲೆಸ್ ಕೂಡ ಹಾಕಲ್ಲ ಎನ್ನುತ್ತಿದ್ದವರು ಈಗ ಎಲ್ಲಿದೀರಪ್ಪಾ? ಎಂದು ವ್ಯಂಗ್ಯವಾಡಿದರು. ಸಾಯಿ ಪಲ್ಲವಿ ಅವರನ್ನು ಟ್ರೋಲ್ ಮಾಡಲೆಂದೇ ಕಾಯುವ ಟ್ರೋಲಿಗರಿಗೆ ಈ ವಿಷಯ ಆಹಾರವು ಆಗಿತ್ತು. ಸಾಯಿ ಪಲ್ಲವಿ ಅವರನ್ನು ಟ್ರೋಲ್ ಕೂಡ ಮಾಡಲಾಗಿತ್ತು.
ಇನ್ನೂ ಕೆಲವರು ಸಾಯಿ ಪಲ್ಲವಿ ಪರ ವಕಾಲತ್ತು ವಹಿಸಿದ್ದರು. ಸಾಯಿ ಪಲ್ಲವಿ ಸ್ವಿಮ್ ಸೂಟ್ ಧರಿಸಿರುವ ಫೋಟೊಗಳನ್ನು ಕೆಲವರು ಮಾರ್ಪ್ ಮಾಡಿ ವೈರಲ್ ಮಾಡುತ್ತಿದ್ದಾರ ಎಂದು ಕಿಡಿ ಕಾರಿದ್ದರು. ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಯಿ ಪಲ್ಲವಿ ಉತ್ತರ ನೀಡಿದ್ದಾರೆ. ತಮ್ಮ ಕಾಲೆಳೆದವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಸಹೋದರಿ ಜೊತೆಗಿನ ತಮ್ಮ ಪ್ರವಾಸದ ವಿಡಿಯೋವನ್ನು ಹಂಚಿಕೊಂಡಿರುವ ಸಾಯಿ ಪಲ್ಲವಿ,ಮೇಲೆ ಕಾಣಿಸುವ ಫೋಟೊಗಳು ನಿಜವಾದವು, ಎಐ ತಂತ್ರಜ್ಞಾನದ ಮೂಲಕ ಸೃಷ್ಟಿಸಲಾದ ಚಿತ್ರಗಳಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಬಿಕಿನಿ..ಬಿಕಿನಿ..ಎಂದು ವಾದ ಮಾಡುತ್ತಿರುವವರ ಬಾಯಿಯನ್ನು ಸಾಯಿ ಪಲ್ಲವಿ ಸದ್ಯ ಮುಚ್ಚಿಸುವ ಪ್ರಯತ್ನವನ್ನು ಮಾಡಿದ್ದಾರೆ.
ಸದ್ಯ ಸಾಯಿ ಪಲ್ಲವಿ ಹಂಚಿಕೊಂಡ ಈ ವಿಡಿಯೋ ಅಭಿಮಾನಿಗಳ ಕಣ್ಮನ ಸೆಳೆದಿದ್ದು, ಹಲವರು ಸಾಯಿ ಪಲ್ಲವಿ ಪರ ಮತ್ತೆ ಬ್ಯಾಟ್ ಬೀಸುತ್ತಿದ್ದಾರೆ. ನೀವೇನು ಎನ್ನುವುದು ನಮಗೆ ಗೊತ್ತು, ಸ್ಪಷ್ಟೀಕರಣ ಕೊಡುವ ಅವಶ್ಯಕತೆ ಇಲ್ಲ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಸರಿಯಾಗಿ ತಿರುಗೇಟು ನೀಡಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ 16 ಗಂಟೆಗಳಲ್ಲಿ 694,365 ಜನರ ಮೆಚ್ಚುಗೆಗೆ ಸಾಯಿ ಪಲ್ಲವಿ ಹಂಚಿಕೊಂಡ ಈ ವಿಡಿಯೋ ಪಾತ್ರವಾಗಿದೆ.
ಇನ್ನುಳಿದಂತೆ ಸದ್ಯ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ರಾವಣನಾಗಿ ಯಶ್ ಅಬ್ಬರಿಸಲಿದ್ದಾರೆ. ನಿಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 4000 ಕೋಟಿ ರೂ. ಬಜೆಟ್ ಸಿನಿಮಾ ಇದು ಎಂದು ನಿರ್ಮಾಪಕರೇ ಹೇಳಿದ್ದಾರೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರ ಹೊರತು ಪಡಿಸಿದರೆ ಆಮಿರ್ ಖಾನ್ ಮಗ ಜುನೈದ್ ಖಾನ್ ಜೊತೆ ಕೂಡ ಸಾಯಿ ಪಲ್ಲವಿ ಚಿತ್ರವೊಂದನ್ನು ಮಾಡಿದ್ದಾರೆ. ಈ ಚಿತ್ರಕ್ಕೆ ''ಮೇರೆ ರಹೋ'' ಎಂದು ಹೆಸರಿಡಲಾಗಿದೆ ಎನ್ನುವ ಸುದ್ದಿ ಇದೆ.


Click it and Unblock the Notifications











