ಕಳೆದ ವರ್ಷ ಈ ವ್ಯಕ್ತಿಯ ಜೊತೆ ನಡೆದಿತ್ತು ಕೆಂಪು ಗಲ್ಲದ ಸುಂದರಿ ಸಾಯಿ ಪಲ್ಲವಿಯ ಮದುವೆ..!
ನಿಜ... ಸಿನಿಮಾ ಕಲಾವಿದರೆಂದಮೇಲೆ ಅವರ ಸುತ್ತ ಬಣ್ಣ ಬಣ್ಣದ ಸುದ್ದಿಗಳು ರೆಕ್ಕೆ ಪುಕ್ಕಗಳ ಸಮೇತ ಸುಳಿದಾಡುವುದು ಸಹಜ. ಹಾಗಂತ ಅದರ ಬಗ್ಗೆ ಮಾತಾಡುತ್ತಾ ಕೂತರೆ ಕೆಲಸದ ಕಡೆ ಗಮನ ಕೊಡಲು ಸಾಧ್ಯವೇ ಆಗುವುದಿಲ್ಲ. ಇದನ್ನ ಮನಗಂಡೇ ತಮ್ಮ ಸುತ್ತ-ಮುತ್ತ ತಮ್ಮ ಬಗ್ಗೆ ಹಲವಾರು ಸುದ್ದಿ ಕೇಳಿ ಬಂದರೂ, ಕೆಲವರು ಆ ಎಲ್ಲ ವಿಚಾರಗಳಿಗೆ ಪ್ರತಿಕ್ರಿಯೆಯನ್ನು ನೀಡಲು ಹೋಗುವುದಿಲ್ಲ. ಉದಾಹರಣೆಗೆ ಸಾಯಿ ಪಲ್ಲವಿ.
ಹೌದು,ತಮ್ಮ ಸಹಜ ಅಭಿನಯ ಮತ್ತು ಸಹಜ ಸೌಂದರ್ಯದಿಂದ ಕೇವಲ ದಕ್ಷಿಣದಲ್ಲಿ ಅಷ್ಟೇ ಅಲ್ಲ, ಉತ್ತರದಲ್ಲಿ ಕೂಡ ಅನೇಕರ ಹೃದಯಕ್ಕೆ ಕನ್ನ ಹಾಕಿರುವ ಸಾಯಿ ಪಲ್ಲವಿ ಹಿಂದೊಮ್ಮೆ ಎರಡು ಕೋಟಿ ರೂಪಾಯಿ ಸಂಭಾವನೆಯ ಸೌಂದರ್ಯವರ್ಧಕ ಜಾಹೀರಾತನ್ನು ಸಾರಸಗಟಾಗಿ ತಿರಸ್ಕರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಮೊನ್ನೆವರೆಗೆ ತಾವಾಯಿತು ತಮ್ಮ ಕೆಲಸವಾಯಿತು ಅಂತ ತಮ್ಮ ಪಾಡಿಗೆ ಇದ್ದರು.

ಇಂಥಾ ಸಾಯಿ ಪಲ್ಲವಿಯ ಬಗ್ಗೆ ಕಳೆದ ಎರಡು ಮೂರು ದಿನಗಳಿಂದ ಸುದ್ದಿಯೊಂದು ಚಾಲ್ತಿಯಲ್ಲಿದೆ. ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿರುವ ಸ್ಟಾರ್ ಜೊತೆ ಈ ಕೆಂಪು ಗಲ್ಲದ ಸುಂದರಿಯ ಹೆಸರು ಥಳುಕು ಹಾಕಿಕೊಂಡಿದೆ.
ಆದರೆ ಸಾಯಿ ಪಲ್ಲವಿ ಮಾತ್ರ ಇಲ್ಲಿಯವರೆಗೆ ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ. ಹಾಗಂಥ ಮೌನಂ ಸಮ್ಮತಿ ಲಕ್ಷಣಂ ಎಂದು ಅಂದುಕೊಳ್ಳುವಂತೆ ಇಲ್ಲ. ಯಾಕೆಂದರೆ.. ಈ ತರಹದ ಸುದ್ದಿಗಳು ಸಾಯಿ ಪಲ್ಲವಿಗೆ ಹೊಸದೇನಲ್ಲ. ಈ ಹಿಂದೆ ಕೂಡ ಸಾಯಿ ಪಲ್ಲವಿಯ ಕುರಿತು ಇದೇ ತರಹದ ಸುದ್ದಿ ಹಬ್ಬಿತ್ತು. ಕೇವಲ ಲವ್ ಅಷ್ಟೇ ಅಲ್ಲ ಸಾಯಿ ಪಲ್ಲವಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ಪುಕಾರು ಹಬ್ಬಿತ್ತು. ಫೋಟೋ ಕೂಡ ವೈರಲ್ ಆಗಿತ್ತು.

ಹೌದು, ನಿಮಗೆ ನೆನಪಿದ್ದರೆ.. ಕಳೆದ ವರ್ಷ ಹೆಚ್ಚು ಕಡಿಮೆ ಇದೇ ಸಮಯದಲ್ಲಿ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಜೊತೆ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು.ಇಬ್ಬರಿಗೂ ಮದುವೆ ಆಗಿದೆ ಎನ್ನುವಂತೆ ಫೋಟೋವನ್ನು ವೈರಲ್ ಮಾಡಲಾಗಿತ್ತು. ವೈರಲ್ ಫೋಟೋ ಸತ್ಯಾಸತ್ಯತೆ ತಿಳಿಯದೇ ಅನೇಕರು ''ಪ್ರೀತಿಗೆ ಬಣ್ಣ ಅಡ್ಡಿ ಬರುವುದಿಲ್ಲವೆಂದು ಸಾಯಿ ಪಲ್ಲವಿ ಸಾಬೀತು ಮಾಡಿದ್ದಾರೆ'' ಎಂದು ಮಾತನಾಡಿಕೊಂಡಿದ್ದರು. ಸಾಯಿ ಪಲ್ಲವಿ ಅಭಿಮಾನಿಗಳು ಕೂಡಾ ಇದನ್ನು ನಿಜ ಎಂದು ನಂಬಿದ್ದರು.
ಆದರೆ, ವಾಸ್ತವದಲ್ಲಿ ಚಿತ್ರದ ಮುಹೂರ್ತ ಸಮಾರಂಭದಲ್ಲಿ ತೆಗೆದ ಭಾವಚಿತ್ರವಾಗಿತ್ತು. ಶಿವಕಾರ್ತಿಕೇಯನ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಚಿತ್ರತಂಡದ ಎಲ್ಲರಿಗೂ ಹಾರ ಹಾಕಲಾಗಿತ್ತು. ಆದರೆ ಯಾರೋ ಬೇಕಂತಲೇ ಸಾಯಿ ಪಲ್ಲವಿ ಹಾಗೂ ಆಕೆಯ ಪಕ್ಕ ನಿಂತಿದ್ದ ನಿರ್ದೇಶಕ ರಾಜ್‌ಕುಮಾರ್ ಪೆರಿಯಾಸಾಮಿ ಫೋಟೋವನ್ನು ಮಾತ್ರ ಕ್ರಾಪ್ ಮಾಡಿ ಇಬ್ಬರೂ ಮದುವೆ ಆಗಿರುವಂತೆ ಸುಳ್ಳು ಸುದ್ದಿ ಹಬ್ಬಿಸಿದ್ದರು.

ಈಗ ಸಾಯಿ ಪಲ್ಲವಿ ವಿವಾಹಿತ ಪುರುಷನೊಬ್ಬನ ಜೊತೆ ಪ್ರೇಮದ ಸುಳಿಯಲ್ಲಿ ಸಿಲುಕಿದ್ದಾರೆ. ಇನ್ನೂ.. ಮದುವೆಯಾಗಿರುವ ಆ ವ್ಯಕ್ತಿಗೆ ಈಗಾಗಲೇ ಎರಡು ಮಕ್ಕಳಿದ್ದಾರೆ ಎನ್ನುವ ಬಾಂಬ್‌ನ್ನೂ 'ಸಿನಿಜೋಶ್' ವೆಬ್ ಸೈಟ್ ಸಿಡಿಸಿದೆ. ಹೀಗಾಗಿಯೇ ಕಳೆದ ಬಾರಿಯಂತೆ ಈ ಬಾರಿ ಹಬ್ಬಿರುವ ಈ ಸುದ್ದಿ ಕೂಡ ಸುಳ್ಳು ಅನ್ನುವ ವಾದವನ್ನೂ ಅನೇಕರು ಮಾಡುತ್ತಿದ್ದಾರೆ.ನೋ ವೇ ಚಾನ್ಸೇ ಇಲ್ಲ ಎನ್ನುತ್ತಿದ್ದಾರೆ. ಬೇರೆಯವರ ಸಂಸಾರದಲ್ಲಿ ಹುಳಿ ಹಿಂಡುವವರ ಸಾಲಿಗೆ ಸಾಯಿ ಪಲ್ಲವಿ ಯಾವತ್ತೂ ಸೇರಲಾರರು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ಧಾರೆ. ಹರಿಡಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು ಎನ್ನುತ್ತಿದ್ದಾರೆ.
ಇನ್ನೂ.. ವೈವಾಹಿಕ ಸಂಬಂಧಗಳು ನೂಲಿನಷ್ಟೇ ಸೂಕ್ಷ್ಮ ಎನ್ನುವುದು ಸಾಯಿ ಪಲ್ಲವಿಗೆ ಗೊತ್ತಿದ್ದೇ ಇರುತ್ತೆ. ಆದರೂ ಇಂತಹದ್ದೊಂದು ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿರುವ ಹಿನ್ನೆಲೆ ಈ ವಿಚಾರದಲ್ಲಿ ಕೂಡಲೇ ಸ್ಪಷ್ಟೀಕರಣವನ್ನೂ ಕೊಡಿ ಎಂಬ ಮನವಿಯನ್ನೂ ಸಾಯಿ ಪಲ್ಲವಿ ಬಳಿ ಅವರ ಅಭಿಮಾನಿಗಳು ಮಾಡುತ್ತಿದ್ಧಾರೆ.

ಅಂದ್ಹಾಗೇ ಸಾಯಿ ಪಲ್ಲವಿ ಸದ್ಯಕ್ಕೆ ನಾಗಚೈತನ್ಯ ಅಭಿನಯದ 'ತಾಂಡೇಲ್' ಚಿತ್ರದಲ್ಲಿ ನಾಯಕಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಶಿವಕಾರ್ತಿಕೆಯನ್ ಅವರ 'ಅಮರನ್' ಚಿತ್ರಕ್ಕೂ ಸಾಯಿ ಪಲ್ಲವಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದರ ನಡುವೆ.. ಯಶ್ ನಿರ್ಮಾಣದ ಅದ್ಧೂರಿ ಸಿನಿಮಾ 'ರಾಮಾಯಣ'ದಲ್ಲಿ ಸೀತೆಯ ಪಾತ್ರಕ್ಕೂ ಸಾಯಿ ಪಲ್ಲವಿ ಜೀವ ತುಂಬುತ್ತಿದ್ದಾರೆ. ಹೀಗಾಗಿಯೇ ಈ ಸುದ್ದಿ ಕೇಳಿ ವಿಚಲಿತಗೊಂಡ ಇನ್ನೊಂದು ವರ್ಗ, ಸುಖವಾಗಿ ಸಂಸಾರ ನಡೆಸುತ್ತಿರುವವರ ಜೀವನಕ್ಕೆ ಕೊಳ್ಳಿ ಇಡಲು ಸಿದ್ಧವಾದ ಸಾಯಿ ಪಲ್ಲವಿ ಯಾವುದೇ ಕಾರಣಕ್ಕೂ ಸೀತೆಯ ಪಾತ್ರವನ್ನೂ ಮಾಡಬಾರದು ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸುತ್ತಿದೆ. ಹಬ್ಬಿರುವ ಈ ಸುದ್ದಿ ನಿಜಾನಾ.. ? ಸುಳ್ಳಾ..? ಉತ್ತರ ಖುದ್ದು ಸಾಯಿ ಪಲ್ಲವಿ ಅವರೇ ನೀಡಬೇಕು


Click it and Unblock the Notifications











