Sai Pallavi: ದುಡ್ಡು ಕೊಟ್ಟು ದುಷ್ಪಚಾರ: ಮದುವೆ ಗಾಸಿಪ್ ಬಗ್ಗೆ ಸಾಯಿ ಪಲ್ಲವಿ ಕೆಂಡಾಮಂಡಲ
ಕಳೆದೆರಡು ದಿನಗಳಿಂದ ನಟಿ ಸಾಯಿ ಪಲ್ಲವಿ ರಹಸ್ಯವಾಗಿ ಮದುವೆ ಆಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿತ್ತು. ನಿರ್ದೇಶಕ ರಾಜ್‌ಕುಮಾರ್ ಪೆರಿಯಸ್ವಾಮಿ ಜೊತೆ ರೌಡಿ ಬೇಬಿ ಮದುವೆ ಆಗಿದೆ ಎಂದು ಫೇಕ್ ಫೋಟೊ ವೈರಲ್ ಆಗಿತ್ತು. ಈ ಬಗ್ಗೆ ಕೊನೆಗೂ ಸಾಯಿ ಪಲ್ಲವಿ ಮೌನ ಮುರಿದಿದ್ದಾರೆ. ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
ನಟಿ ತ್ರಿಶಾ ಮದುವೆ ಬಗ್ಗೆ ಕೂಡ ಭಾರೀ ವದಂತಿ ಹಬ್ಬಿತ್ತು. ಮಲಯಾಳಂ ನಿರ್ಮಾಪಕನ ಜೊತೆ ಆಕೆ ಮದುವೆ ಆಗುತ್ತಾರೆ ಎನ್ನಲಾಗಿತ್ತು. ಈ ಬಗ್ಗೆ ಆಕೆಯೇ ಟ್ವೀಟ್ ಮಾಡಿ ಗಾಳಿಸುದ್ದಿಗೆ ಬ್ರೇಕ್ ಹಾಕಿದ್ದರು. ಇದೀಗ ಸಾಯಿ ಪಲ್ಲವಿ ಸರದಿ. ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಇತ್ತೀಚೆಗೆ ಹೆಚ್ಚಾಗ್ತಿದೆ. ಫೇಕ್ ಫೋಟೊ, ವಿಡಿಯೋ ಕ್ರಿಯೇಟ್ ಮಾಡಿ ಸುಳ್ಳನ್ನು ಸತ್ಯ ಎಂದು ನಂಬಿಸುವ ಕಿಡಿಗೇಡಿ ಕೆಲಸ ನಡೆಯುತ್ತಿದೆ. ಅದಕ್ಕೆ ಸೆಲೆಬ್ರೆಟಿಗಳೇ ಹೆಚ್ಚು ಟಾರ್ಗೆಟ್ ಆಗ್ತಿದ್ದಾರೆ.

ಸಾಯಿ ಪಲ್ಲವಿ ಹಾಗೂ ನಿರ್ದೇಶಕ ರಾಜ್‌ಕುಮಾರ್ ಪೆರಿಯಸ್ವಾಮಿ ಹಾರ ಹಾಕಿಕೊಂಡು ಒಟ್ಟಿಗೆ ನಿಂತಿರುವಂತೆ ಫೋಟೊ ಮಾರ್ಪ್ ಮಾಡಿ ವೈರಲ್ ಮಾಡಲಾಗಿತ್ತು. ಇದನ್ನು ನೋಡಿದ ಕೆಲವರು ನಿಜಕ್ಕೂ ರಹಸ್ಯವಾಗಿ ಸಾಯಿ ಪಲ್ಲವಿ ನಡೆದಿದೆ ಎನ್ನುವ ನಿರ್ಧಾರಕ್ಕೆ ಬಂದುಬಿಟ್ಟಿದ್ದರು.
ಇದೀಗ ಸ್ವತಃ ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಸಾಯಿ ಪಲ್ಲವಿ, ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. "ನಿಜ ಹೇಳಬೇಕು ಅಂದ್ರೆ, ನಾನು ವದಂತಿಗಳಿಗೆ ಹೆದರುವುದಿಲ್ಲ. ಆದರೆ ನನ್ನ ಕುಟುಂಬ ಸದಸ್ಯರನ್ನು ಸ್ನೇಹಿತರನ್ನು ಇದರಲ್ಲಿ ಸಿಲುಕಿಸುತ್ತಿರುವುದನ್ನು ನೋಡಿದಮೇಲೆ ಪ್ರತಿಕ್ರಿಯಿಸಲೇಬೇಕಾಗಿದೆ. ನಾನು ಮಾತನಾಡಬೇಕಿದೆ."
"ನನ್ನ ಮುಂದಿನ ಸಿನಿಮಾ ಮುಹೂರ್ತ ಸಮಾರಂಭದ ಫೋಟೊಗಳನ್ನು ಕ್ರಾಪ್ ಮಾಡಿ ಈ ರೀರಿ ಉದ್ದೇಶಪೂರ್ವಕವಾಗಿ ಹಣ ಕೊಟ್ಟು ಕೆಟ್ಟ ಅರ್ಥ ತೇಲಿ ಬಿಟ್ಟಿದ್ದಾರೆ. ಇದು ಬಹಳ ಅಹಸ್ಯಕರ ಸಂಗತಿ. ನನ್ನ ಸಿನಿಮಾ ಅಪ್‌ಡೇಟ್‌ಗಾಗಿ ಬಿಟ್ಟ ಫೋಟೊಗಳನ್ನು ಬಳಸಿ ಈ ರೀತಿ ಸುದ್ದಿ ಹಬ್ಬಿಸಿರುವುದು ಬಹಳ ಬೇಸರ ತಂದಿದೆ. ಸಂತೋಷವಾಗಿ ಸಿನಿಮಾ ಶುರು ಮಾಡುವಾಗ ಇಂತದ್ದನ್ನು ಕ್ರಿಯೇಟ್ ಮಾಡುವುದು ನಮಗೆ ನಿರುತ್ಸಾಹ ತರುವಂತಿದೆ. " ಎಂದು ಸಾಯಿ ಪಲ್ಲವಿ ಅಸಮಾಧಾನ ಹೊರ ಹಾಕಿದ್ದಾರೆ.
ಸದ್ಯ ಸಾಯಿ ಪಲ್ಲವಿ ಟ್ವೀಟ್ ವೈರಲ್ ಆಗ್ತಿದೆ. ಯಾರಪ್ಪಾ ಬೇಕಂತಲೇ ಆಕೆಯ ಮದುವೆ ವದಂತಿ ಹಬ್ಬಿಸಿದ್ದು ಎಂದು ಚರ್ಚೆ ನಡೀತಿದೆ. ಅಂದಹಾಗೆ ಇದು ಸಾಯಿ ಪಲ್ಲವಿ ನಟನೆಯ ಹೊಸ ಸಿನಿಮಾ ಮುಹೂರ್ತ ಸಮಾರಂಭದ ಫೋಟೊಗಳು. ಚಿತ್ರದಲ್ಲಿ ಶಿವಕಾರ್ತಿಕೇಯನ್ ಜೋಡಿಯಾಗಿ ಆಕೆ ನಟಿಸುತ್ತಿದ್ದಾರೆ. ಕಮಲ್ ಹಾಸನ್ ಚಿತ್ರ ನಿರ್ಮಾಣ ಮಾಡುತ್ತಿದ್ದು ರಾಜ್‌ಕುಮಾರ್ ಪೆರಿಯಸಾಮಿ ಆಕ್ಷನ ಕಟ್ ಹೇಳುತ್ತಿದ್ದಾರೆ.

ಮುಹೂರ್ತ ಸಮಾರಂಭದಲ್ಲಿ ಎಲ್ಲರೂ ಒಟ್ಟಿಗೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ಆದರೆ ನಿರ್ದೇಶಕ ಹಾಗೂ ಸಾಯಿ ಪಲ್ಲವಿ ಇಬ್ಬರು ಹಾರ ಹಾಕಿಕೊಂಡು ಅಕ್ಕ ಪಕ್ಕ ನಿಂತಂತೆ ಫೋಟೊಗಳನ್ನು ಮಾರ್ಪ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿತ್ತು.
ಇತ್ತೀಚೆಗೆ ಸಾಯಿ ಪಲ್ಲವಿ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿತ್ತು. ಕಾಶ್ಮೀರಿ ಪಂಡಿತರ ಕುರಿತು ಆಕೆ ನೀಡಿದ ವಿವಾದಾತ್ಮಕ ಹೇಳಿಕೆ ಭಾರೀ ಸದ್ದು ಮಾಡಿತ್ತು. ಆಕೆಯ ಬಗ್ಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಲೇಡಿ ಪವರ್ ಸ್ಟಾರ್ ಸ್ಪಷ್ಟನೆಯನ್ನು ನೀಡಿದ್ದರು. ಆ ಬಳಿಕ ನಟಿಸಿದ 'ಗಾರ್ಗಿ' ಹಾಗೂ 'ವಿರಾಟಪರ್ವಂ' ಸಿನಿಮಾಗಳು ರಿಲೀಸ್ ಆಗಿತ್ತು.
ಎರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗಿರಿಸಿದ್ದವು. ಸಾಯಿ ಪಲ್ಲವಿ ವಿವಾದಾತ್ಮಕ ಹೇಳಿಕೆಯೇ ಇದಕ್ಕೆ ಕಾರಣ ಎನ್ನುವ ಮಾತುಗಳು ಕೇಳಿಬಂದಿತ್ತು. ಆ ಬಳಿಕ ಆಕೆ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಇದನ್ನು ನೋಡಿ ರೌಡಿ ಬೇಬಿ ಚಿತ್ರರಂಗಕ್ಕೆ ಬೈ ಹೇಳಿದ್ದಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಶಿವಕಾರ್ತಿಕೇಯನ್ ಜೊತೆ ಸಿನಿಮಾ ಒಪ್ಪಿಕೊಂಡು ಅದಕ್ಕೆ ಬ್ರೇಕ್ ಹಾಕಿದ್ದರು.


Click it and Unblock the Notifications











