ಕ್ಯಾಮರಾ ಕಂಡು ಎದ್ದು ಬಿದ್ದು ಓಡಿ ಹೋದ ಸರಳ ಸುಂದರಿ ಸಾಯಿ ಪಲ್ಲವಿ- ವಿಡಿಯೋ ವೈರಲ್
ಕಲೆ-ಕಾಸು ಬೆರೆತ ಉದ್ಯಮ ಸಿನಿಮಾ. ಕಾಸಿದ್ದರೆ ಇಲ್ಲಿ ಕೈಲಾಸವನ್ನೇ ಸೃಷ್ಟಿಸಬಹುದು. ಸದಾ ಕಾಲ ಸುದ್ದಿಯಲ್ಲಿಯೂ ಇರಬಹುದು. ಲೈಮ್ ಲೈಟಿನಲ್ಲಿ ಕೂಡ ಮಿಂಚಬಹುದು. ಬಾಲಿವುಡ್‌ನಲ್ಲಿ ಬಹುತೇಕರು ಈ ಫಾರ್ಮುಲಾವನ್ನೇ ಅನುಸರಿಸುತ್ತಾರೆ. ಅಣಬೆಯಂತೆ ಹುಟ್ಟಿಕೊಂಡಿರುವ ಏಜೆನ್ಸಿಗಳ ಜೊತೆ ಬಾಲಿವುಡ್‌ನ ಅನೇಕ ಸ್ಟಾರ್‌ಗಳು ಕೈ ಜೋಡಿಸುತ್ತಾರೆ.
ತಾವು ಹೋದಲ್ಲಿ ಬಂದಲ್ಲಿ ತಮ್ಮ ಹಿಂದೆ ಕ್ಯಾಮರಾ ಇರಬೇಕೆಂದು ಹಣ ನೀಡಿ ಪಾಪರಾಜಿಗಳನ್ನು ಕರೆಸಿಕೊಳ್ಳುತ್ತಾರೆ. ಈ ಮೂಲಕ ವರ್ಷದ 365 ದಿನ ಕೂಡ ಈ ತಾರೆಯರು ಚರ್ಚೆಯಲ್ಲಿರುತ್ತಾರೆ. ಪ್ರೇಕ್ಷಕರ ಕಣ್ಣಿಗೆ ಈ ಮೂಲಕ ಬೀಳುತ್ತಿರುತ್ತಾರೆ. ಆದರೆ, ಎಲ್ಲರೂ ಈ ಬದುಕು ಬದುಕಲು ಇಷ್ಟ ಪಡುವುದಿಲ್ಲ. ವೈಯಕ್ತಿಕ ಬದುಕು ಮೂರಾಬಟ್ಟೆ ಮಾಡಿಕೊಳ್ಳಲು ಬಯಸುವುದಿಲ್ಲ. ಅದರಲ್ಲಿಯೂ ದಕ್ಷಿಣದಿಂದ ಉತ್ತರಕ್ಕೆ ವಲಸೆ ಹೋದವರು ಈ ಸಂಸ್ಕ್ರತಿಯಿಂದ ದೂರು ಉಳಿಯುವ ಪ್ರಯತ್ನವನ್ನು ಮಾಡುತ್ತಾರೆ. ಉದಾಹರಣೆಗೆ ಸಾಯಿ ಪಲ್ಲವಿ.

ಹೌದು, ಮಾತು, ಹಾವ ಭಾವಗಳಿಂದ್ಲೇ ಹೃದಯಕ್ಕೆ ಹತ್ತಿರವಾಗಬಲ್ಲ ಸೌಂದರ್ಯ ಸಾಯಿ ಪಲ್ಲವಿ ಅವರದ್ದು. ಆ ಮುಗ್ದ ನಗು ಪಡ್ಡೆ ಹೈಕ್ಳ ನಿದ್ದೆ ಕೆಡ್ಸೋ 'ನಾಕೌಟ್' ಇದ್ದಂಗೆ. ಹೆಚ್ಚು ಕಡಿಮೆ ಕಳೆದ ಎರಡು ದಶಕಗಳಿಂದ ಸಿನಿ ಜಗತ್ತಿನಲ್ಲಿ ತನ್ನದೇ ಆದ ಕ್ರೇಝ್ ಹುಟ್ಟು ಹಾಕಿರುವ 'ಮಾಯಾಂಗನೆ' ಇವರು. ತಮ್ಮ ಮೋಹಕ ಅಭಿನಯದಿಂದ ಸಿನಿಪ್ರಿಯರ ಹೃದಯಕ್ಕೆ ಲಗ್ಗೆ ಇಟ್ಟಿರುವ ಸಾಯಿ ಪಲ್ಲವಿ ಹಿಂದೊಮ್ಮೆ ಎರಡು ಕೋಟಿ ರೂಪಾಯಿ ಸಂಭಾವನೆಯ ಸೌಂದರ್ಯವರ್ಧಕ ಜಾಹೀರಾತನ್ನು ಸಾರಸಗಟಾಗಿ ತಿರಸ್ಕರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು.
ಇಂಥಾ ಸಾಯಿ ಪಲ್ಲವಿ ಕೇರಳದಲ್ಲಿ ನಡೆಯುತ್ತಿರುವ 70ನೇ ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ (ಸೌತ್ ) ಬಂದಿಳಿದಿದ್ದರು. ಆದರೆ, ಸಾಯಿ ಪಲ್ಲವಿ ಯಾವ ಸಮಯಕ್ಕೆ ಬರುತ್ತಿದ್ದಾರೆ ಎನ್ನುವ ವಿಚಾರ ಪಾಪರಾಜಿಗಳಿಗೆ ಗೊತ್ತಿತ್ತು. ಪಾಪರಾಜಿಗಳು ತನಗೋಸ್ಕರ ರಣಹದ್ದುಗಳಂತೆ ಕಾಯುತ್ತಿದ್ದಾರೆ ಎನ್ನುವ ವಿಚಾರ ಸಾಯಿ ಪಲ್ಲವಿಗೆ ಗೊತ್ತಿರಲಿಲ್ಲ.
ಹೀಗಾಗಿಯೇ ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ತಮ್ಮನ್ನು ಸುತ್ತುವರೆದ ಕ್ಯಾಮರಾಗಳನ್ನು ಕಂಡು ಸಾಯಿ ಪಲ್ಲವಿ ಅರೆಕ್ಷಣ ಬೆಚ್ಚಿ ಬಿದ್ದರು. ಫೋಟೊ ತೆಗೆಯದಂತೆ ಮನವಿ ಮಾಡಿದರು. ಆದರೆ ಇವರ ಮನವಿಗೆ ಮನ್ನಣೆ ಸಿಗಲಿಲ್ಲ.

ಹೀಗಾಗಿ ಬೇರೆ ದಾರಿ ಇಲ್ಲದೇ ಸಾಯಿ ಪಲ್ಲವಿ ಅಲ್ಲಿಂದ ಪೇರಿ ಕಿತ್ತರು. ಪಾಪರಾಜಿಗಳು ಎಷ್ಟೇ ಕೂಗಿದರೂ, ಬೇಡಿದರೂ, ಅಲ್ಲಿ ಅರೆಕ್ಷಣ ಕೂಡ ನಿಲ್ಲದ ಸಾಯಿ ಪಲ್ಲವಿ ಸೀದಾ ಓಡಿಕೊಂಡು ಹೋಗಿ ತಮ್ಮ ಕಾರು ಹತ್ತಿದರು.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಹಲವರು ಸಾಯಿ ಪಲ್ಲವಿ ಅವರ ಈ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸೆಲೆಬ್ರಿಟಿಗಳನ್ನು ಅವರ ಪಾಡಿಗೆ ಇರಲು ಬಿಡದ ಪಾಪರಾಜಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅವರ ಖಾಸಗಿತನ ಗೌರವಿಸಿ ಎನ್ನುತ್ತಿದ್ದಾರೆ.
ಮತ್ತೂ ಕೆಲವರು ರಾಜಕಾರಣಿ ಕೆ ಎಲ್ ಪೌಲ್ ಮಾಧ್ಯಮಗಳಿಂದ ತಪ್ಪಿಸಿಕೊಳ್ಳಲು ಓಡಿದ್ದ ದಿನವನ್ನು ನೆನಪು ಮಾಡಿಕೊಳ್ತಿದ್ದಾರೆ. ಕೆಎಲ್ ಪೌಲ್ ಮತ್ತು ಸಾಯಿ ಪಲ್ಲವಿ ಅವರ ವಿಡಿಯೋ ಮತ್ತು ಫೋಟೊಗಳನ್ನು ಎಡಿಟ್ ಮಾಡ ಹಂಚಿಕೊಂಡು ಮಜಾ ತೆಗೆದುಕೊಳ್ತಿದ್ದಾರೆ.
ಇನ್ನುಳಿದಂತೆ ಸಾಯಿ ಪಲ್ಲವಿ ಸದ್ಯ ಯಶ್ ಸಹ ನಿರ್ಮಾಣದ "ರಾಮಾಯಣ" ಚಿತ್ರದಲ್ಲಿ ಸೀತೆಯ ಪಾತ್ರ ನಿರ್ವಹಿಸಿದ್ದಾರೆ. "ಕಲ್ಕಿ 2" ಚಿತ್ರದಲ್ಲಿ ಸಾಯಿ ಪಲ್ಲವಿ ಇದ್ದಾರೆ ಎನ್ನುವ ಸುದ್ದಿ ಇದೆ. ಈ ಚಿತ್ರಗಳನ್ನು ಹೊರತು ಪಡಿಸಿದರೆ ಆಮಿರ್ ಖಾನ್ ಮಗ ಝೈದ್ ಖಾನ್ ಜೊತೆ ಸಾಯಿ ಪಲ್ಲವಿ "ಏಕ್ ದಿನ್ " ಎಂಬ ಚಿತ್ರ ಮಾಡಿದ್ದು ಈ ಚಿತ್ರ ಜೂನ್ ಒಳಗೆ ತೆರೆಗೆ ಬರುವ ನಿರೀಕ್ಷೆ ಇದೆ.


Click it and Unblock the Notifications











