ಮೂರು ತಿಂಗಳ ನಂತರ ಮದುವೆಯ ಫೋಟೊ ಹಂಚಿಕೊಂಡ ಸಾಯಿ ಪಲ್ಲವಿ...!
ತಮ್ಮ ಸಹಜ ಅಭಿನಯ ಮತ್ತು ಸಹಜ ಸೌಂದರ್ಯದಿಂದ ಕೇವಲ ದಕ್ಷಿಣದಲ್ಲಿ ಅಷ್ಟೇ ಅಲ್ಲ, ಉತ್ತರದಲ್ಲಿ ಕೂಡ ಅನೇಕರ ಹೃದಯಕ್ಕೆ ಕನ್ನ ಹಾಕಿರುವವರು ಸಾಯಿ ಪಲ್ಲವಿ. ಹಿಂದೊಮ್ಮೆ ಎರಡು ಕೋಟಿ ರೂಪಾಯಿ ಸಂಭಾವನೆಯ ಸೌಂದರ್ಯವರ್ಧಕ ಜಾಹೀರಾತನ್ನು ಸಾರಸಗಟಾಗಿ ತಿರಸ್ಕರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಸಾಯಿ ಪಲ್ಲವಿ ಈಗ ಮೂರು ತಿಂಗಳ ನಂತರ ತಮ್ಮ ತಂಗಿಯ ಮದ್ವೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಭಾವುಕರಾಗಿದ್ದಾರೆ.
ಹೌದು, ಸಾಯಿ ಪಲ್ಲವಿ ಅವರ ಸಹೋದರಿ ಪೂಜಾ ಮೂರು ತಿಂಗಳ ಹಿಂದೆ ವಿನೀತ್ ಅವರ ಜೊತೆ ಸಪ್ತಪದಿಯನ್ನು ತುಳಿದಿದ್ದರು. ಊಟಿಯಲ್ಲಿ ನಡೆದ ಈ ಮದ್ವೆ ಸಮಾರಂಭದಲ್ಲಿ ಸಾಯಿ ಪಲ್ಲವಿ ಅವರ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಭಾಗಿಯಾಗಿದ್ದರು. ಬಡಗ ಸಂಪ್ರದಾಯದಂತೆ ನಡೆದ ಈ ಮದ್ವೆಯ ಸುಂದರವಾದ ಭಾವಚಿತ್ರಗಳನ್ನು ಹಂಚಿಕೊಂಡಿರುವ ಸಾಯಿ ಪಲ್ಲವಿ ತಮ್ಮ ತಂಗಿ ಪೂಜಾ ಕುರಿತು ಕೆಲ ಸಾಲುಗಳನ್ನು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ನನ್ನ ಸಹೋದರಿಯ ಮದುವೆ ನನ್ನ ಬದುಕಿನ ಮುಂದಿನ ದೊಡ್ಡ ಘಟ್ಟ ಎನ್ನುವುದು ನನಗೆ ಮೊದಲಿಂದ ಗೊತ್ತಿತ್ತು. ಆದರೆ ಈ ಮಹತ್ವದ ಹೆಜ್ಜೆಯನ್ನು ಪೂಜಾ ಇಡಲು ಸಿದ್ಧವಾದಾಗ ನಾನು ಇದಕ್ಕೆ ತಯಾರಿರಲಿಲ್ಲ. ಯಾಕೆಂದರೆ ನನಗೆ ಇದೆಲ್ಲ ಹೊಸದು. ಹೀಗಾಗಿ ಸಾಧಕ ಬಾಧಕಗಳ ಕುರಿತು ಅವಳಿಗೆ ಸಲಹೆಯನ್ನು ನೀಡಲು ಸಾಧ್ಯವಾಗಲಿಲ್ಲ. ಆದರೆ ಕೈ ಹಿಡಿಯುತ್ತಿರುವ ಹುಡುಗ ವಿನೀತ್ ಆಕೆಯನ್ನು ಸದಾ ಕಾಲ ಖುಷಿಯಾಗಿ ನೋಡಿಕೊಳ್ಳುತ್ತಾನೆ, ಪ್ರೀತಿಸುತ್ತಾನೆ ಎನ್ನುವ ವಿಚಾರ ನನಗೆ ಗೊತ್ತಿತ್ತು. ಮದ್ವೆಯಾಗಿ ಮೂರು ತಿಂಗಳಾಗಿವೆ. ಸಮಾರಂಭದಲ್ಲಿ ಉಪಸ್ಥಿತರಿದ್ದ ಎಲ್ಲರು ಮನದಾಳದಿಂದ ನವ ಜೋಡಿಗೆ ಶುಭ ಹಾರೈಸಿದ ಕ್ಷಣಕ್ಕೆ, ಕಣ್ಣೀರಾದ ಘಳಿಗೆಗಳಿಗೆ, ನಾನು ಸಾಕ್ಷಿಯಾಗಿದ್ದೇನೆ ಎಂದಿದ್ದಾರೆ.
ಮದುವೆ ಸಮಾರಂಭದಲ್ಲಿ ಸರಳವಾಗಿ ರೆಡಿಯಾಗಿದ್ದ ಸಾಯಿ ಪಲ್ಲವಿ ಬಿಳಿ ಬಣ್ಣದ ಸೀರೆಯನ್ನು ಧರಿಸಿದ್ದರು. ಮುತ್ತಿನ ಹಾರವನ್ನು ಹಾಕಿದ್ದರು. ಹಣೆಯ ಮೇಲೆ ಕೆಂಪು ಬಣ್ಣದ ಬಿಂದಿಯನ್ನು ಇಟ್ಟುಕೊಂಡಿದ್ದರು. ಇನ್ನು ಮತ್ತೊಂದು ಸಮಾರಂಭದಲ್ಲಿ ಕೆಂಪು ಸೀರೆಯಲ್ಲಿ ಮಿಂಚಿರುವ ಸಾಯಿ ಪಲ್ಲವಿ ಮದುವೆ ಸಮಾರಂಭದಲ್ಲಿ ಹಾಡುಗಳಿಗೆ ಡ್ಯಾನ್ಸ್ ಮಾಡಿ ಕೂಡ ಸಂಭ್ರಮಿಸಿದ್ದಾರೆ. ಅರಿಶಿಣ ಶಾಸ್ತ್ರದ ಫೋಟೊಗಳನ್ನು ಕೂಡ ಸಾಯಿ ಪಲ್ಲವಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಇನ್ನುಳಿದಂತೆ ಅಮರನ್ ಚಿತ್ರದ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಸಾಯಿ ಪಲ್ಲವಿ ನಾಗಚೈತನ್ಯ ಅಭಿನಯದ 'ತಾಂಡೇಲ್' ಚಿತ್ರದಲ್ಲಿ ನಾಯಕಿ ಪಾತ್ರವನ್ನು ನಿರ್ವಹಿಸಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಚಿತ್ರವನ್ನು ಹೊರತು ಪಡಿಸಿದರೆ ರಾಕಿಂಗ್ ಸ್ಟಾರ್ ಯಶ್ ನಿರ್ಮಾಣದಲ್ಲಿ ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ 'ರಾಮಾಯಣ' ಚಿತ್ರದಲ್ಲಿ ಸೀತೆಯ ಪಾತ್ರವನ್ನು ಕೂಡ ಸಾಯಿ ಪಲ್ಲವಿ ನಿರ್ವಹಿಸುತ್ತಿದ್ದಾರೆ.
ಈ ಚಿತ್ರಕ್ಕೆ ಮಾಂಸಾಹಾರ ಸೇವನೆಯನ್ನು ಸಾಯಿ ಪಲ್ಲವಿ ತ್ಯಜಿಸಿದ್ದಾರೆ ಎಂದು ಸುದ್ದಿಯನ್ನು ಕೆಲ ದಿನಗಳ ಹಿಂದೆ ಕೆಲವರು ಹಬ್ಬಿಸಿದ್ದ ಹಿನ್ನೆಲೆ ಸಿಟ್ಟಾಗಿದ್ದ ಸಾಯಿ ಪಲ್ಲವಿ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಸುದ್ದಿಯನ್ನು ತೇಲಿ ಬಿಟ್ಟಿದ್ದವರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದರು. ಈ ಎರಡು ಚಿತ್ರಗಳನ್ನು ಹೊರತು ಪಡಿಸಿದರೆ ಅಮೀರ್ ಖಾನ್ ಮಗ ಜುನೈದ್ ಖಾನ್ ಅಭಿನಯದ ಎರಡನೇ ಚಿತ್ರದಲ್ಲಿ ಸಾಯಿ ಪಲ್ಲವಿ ಅಭಿನಯಿಸುತ್ತಿದ್ದಾರೆ. ಅಂದ್ಹಾಗೇ ಮದುವೆಯ ಬಂಧನಕ್ಕೊಳಗಾಗಿ ಹೊಸ ಬದುಕಿಗೆ ಮುನ್ನುಡಿ ಬರೆದಿರುವ ಸಾಯಿ ಪಲ್ಲವಿ ಅವರ ಸಹೋದರಿ ಪೂಜಾ ಈ ಅಕ್ಕನಂತೆ ಚಿತ್ರರಂಗವನ್ನು ಪ್ರವೇಶಿಸಿದ್ದರು. 2021ರಲ್ಲಿ ಚಿತ್ತಿರೈ ಸೆವ್ವಾನಂ ಎಂಬ ಚಿತ್ರವನ್ನು ಮಾಡಿದ್ದರು. ಆದರೆ ಸಾಯಿ ಪಲ್ಲವಿ ಅವರಿಗೆ ಸಿಕ್ಕ ಗೆಲುವು ಖ್ಯಾತಿ ಪೂಜಾ ಅವರಿಗೆ ಸಿಗಲಿಲ್ಲ.


Click it and Unblock the Notifications











