ಪಹಲ್ಗಾಮ್ ದಾಳಿ ಬಗ್ಗೆ ಸಾಯಿ ಪಲ್ಲವಿ ಪ್ರತಿಕ್ರಿಯೆ; ಹಳೇ ಹೇಳಿಕೆ ನೆನಪಿಸಿ ಟೀಕೆ
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ 26 ಪ್ರವಾಸಿಗರನ್ನು ಕೊಂದಿದ್ದಾರೆ. ಘಟನೆ ಬಗ್ಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಸಿನಿಮಾ ತಾರೆಯರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಬಾಲಿವುಡ್ ಮಾತ್ರವಲ್ಲಾ ಎಲ್ಲಾ ಚಿತ್ರರಂಗದ ತಾರೆಯರು ಘಟನೆ ಬಗ್ಗೆ ಮೌನ ಮುರಿದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿ ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸುತ್ತಿದ್ದಾರೆ. ಜೊತೆಗೆ ಇದಕ್ಕೆ ಕಾರಣರಾದವರಿಗೆ ತಕ್ಕ ಶಾಸ್ತಿ ಆಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಸಲ್ಮಾನ್ ಖಾನ್, ಆಲಿಯಾ ಭಟ್, ಪ್ರಿಯಾಂಕ ಚೋಪ್ರಾ, ಕನ್ನಡ ಕಲಾವಿದರಾದ ಶಿವಣ್ಣ, ಸುದೀಪ್ ಯಶ್ ಸೇರಿದಂತೆ ಹಲವರು ಈ ದಾಳಿಯನ್ನು ಖಂಡಿಸಿದ್ದಾರೆ. ಬಹುಭಾಷಾ ನಟಿ ಸಾಯಿ ಪಲ್ಲವಿ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ತಾರೆಯರು ಇಂತಹ ಸಮಯದಲ್ಲಿ ಪ್ರತಿಕ್ರಿಯಿಸಿದರೆ ಸಹಜವಾಗಿಯೇ ಬೆಂಬಲ ವ್ಯಕ್ತವಾಗುತ್ತಿದೆ. ಆದರೆ ಸಾಯಿ ಪಲ್ಲವಿ ವಿಚಾರದಲ್ಲಿ ಮಾತ್ರ ಇದು ಉಲ್ಟಾ ಆಗಿದೆ. ಆಕೆಯ ಟ್ವೀಟ್ ಬಗ್ಗೆ ಕೆಲವರು ಚಕಾರ ಎತ್ತಿದ್ದಾರೆ. ಅದಕ್ಕೆ ಕಾರಣ ಈ ಹಿಂದೆ ಆಕೆ ಭಾರತದ ಸೇನೆ ಕುರಿತು ನೀಡಿದ್ದ ಹೇಳಿಕೆ. ಅಂದು ಆ ರೀತಿ ಮಾತನಾಡಿ ಈಗ ಹೇಳೋಕೆ ಬಂದುಬಿಟ್ಟಿದ್ದೀಯಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
"ಪಹಲ್ಗಾಮ್ ದಾಳಿಯ ನಷ್ಟ, ನೋವು ಮತ್ತು ಭಯ ನನಗೆ ವೈಯಕ್ತಿಕವಾಗಿ ನಡೆದಂತೆ ಭಾಸವಾಗುತ್ತಿದೆ. ಇತಿಹಾಸದಲ್ಲಿ ನಡೆದ ಭಯಾನಕ ಅಪರಾಧಗಳ ಬಗ್ಗೆ ತಿಳಿದು, ಇನ್ನೂ ಅಂತಹ ಅಮಾನವೀಯ ಕೃತ್ಯಗಳನ್ನು ನೋಡುತ್ತಿರುವಾಗ, ಏನೂ ಬದಲಾಗಿಲ್ಲ ಎನಿಸುತ್ತದೆ. ಆ ಪ್ರಾಣಿಗಳ ಗುಂಪು ಉಳಿದಿರುವ ಸಣ್ಣ ಭರವಸೆಯನ್ನು ಅಳಿಸಿಹಾಕಿದೆ" ಎಂದು ಸಾಯಿ ಪಲ್ಲವಿ ಪ್ರತಿಕ್ರಿಯಿಸಿದ್ದಾರೆ.
"ಕುಟುಂಬದೊಂದಿಗೆ ಒಳ್ಳೆ ನೆನಪುಗಳನ್ನು ಸೃಷ್ಟಿಸಲು ಬಯಸುವ ಮನಸ್ಥಿತಿಯಿಂದ, ನಿಮ್ಮ ಎಮೋಷನ್ಸ್, ನಿಮ್ಮ ಕುಟುಂಬವು ನಿಮ್ಮ ಮುಂದೆ ಕಣ್ಮರೆಯಾಗುವುದನ್ನು ನೋಡುವವರೆಗೆ, ಅದು ನಾನು ನಮ್ಮ ಮೂಲವನ್ನು ಪ್ರಶ್ನಿಸುವಂತೆ ಮಾಡುತ್ತದೆ. ಜೀವ ಕಳೆದುಹೋದ ಅಸಹಾಯಕ, ಶಕ್ತಿಹೀನ, ಮುಗ್ಧ ಜೀವಗಳು ಮತ್ತು ದುಃಖದಲ್ಲಿರುವ ಕುಟುಂಬಗಳಿಗೆ ನಾನು ನನ್ನ ಹೃತ್ಪೂರ್ವಕ ಸಂತಾಪ ಮತ್ತು ಪ್ರಾರ್ಥನೆಗಳನ್ನು ಅರ್ಪಿಸುತ್ತೇನೆ." ಎಂದು ಸಾಯಿ ಪಲ್ಲವಿ ಟ್ವೀಟ್ ಮಾಡಿದ್ದಾರೆ.
ತೆಲುಗಿನ 'ವಿರಾಟಪರ್ವಂ' ಚಿತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದರು. ಆ ಚಿತ್ರದ ಪ್ರಚಾರದ ವೇಳೆ ತೆಲುಗು ಸಂದರ್ಶನವೊಂದರಲ್ಲಿ ಆಕೆ ಮಾತನಾಡಿದ್ದರು. "ಪಾಕಿಸ್ತಾನದವರು ಭಾರತೀಯ ಸೇನೆಯನ್ನು ಅದೇ ರೀತಿ ಭಾರತೀಯರು ಪಾಕಿಸ್ತಾನಿ ಸೇನೆಯನ್ನು ಭಯೋತ್ಪಾದಕರ ರೀತಿ ಭಾವಿಸುತ್ತಾರೆ. ಜನರ ಆಲೋಚನೆಯಲ್ಲಿ ಬದಲಾವಣೆ ಆಗಬೇಕು ಎಂದು ಹೇಳಿದ್ದರು" ಸಾಯಿ ಪಲ್ಲವಿ ಹೇಳಿಕೆ ನೀಡಿದ್ದರು. ಅದೇ ವಿಚಾರವನ್ನು ಪ್ರಸ್ತಾಪಿಸಿ ಆಕೆಯನ್ನು ಟೀಕಿಸಲಾಗುತ್ತಿದೆ.
ಅದಕ್ಕೂ ಮುನ್ನ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋ ಸಾಕಾಣಿಕೆ ಮಾಡುವ ಮುಸ್ಲಿಂ ಡ್ರೈವರ್ ಮೇಲೆ ಹಲ್ಲೆ ಮಾಡಲಾಗಿತ್ತು. ಜೈ ಶ್ರೀರಾಮ್ ಎಂದು ಹೇಳುವಂತೆ ಬಲವಂತ ಮಾಡಲಾಯಿತು. ಈ ಎರಡು ಘಟನೆಗಳ ನಡುವೆ ವ್ಯತ್ಯಾಸ ಎಲ್ಲಿದೆ? ಎಂದು ಸಾಯಿ ಪಲ್ಲವಿ ನೀಡಿದ್ದ ಹೇಳಿಕೆ ಕೂಡ ವಿವಾದಕ್ಕೆ ಕಾರಣವಾಗಿತ್ತು. ಆ ಬಳಿಕ ಈ ಬಗ್ಗೆ ಆಕೆ ಕ್ಷಮೆ ಕೂಡ ಕೇಳಿದ್ದರು.
ಸದ್ಯ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿ ವಿಚಾರವಾಗಿ ಸಾಯಿ ಪಲ್ಲವಿ ಟ್ವೀಟ್ ಮಾಡುತ್ತಿದ್ದಂತೆ ಆಕೆಯ ಹಳೇ ಹೇಳಿಕೆಗಳು ಚರ್ಚೆಗೆ ಬಂದಿದೆ. ಆ ರೀತಿ ಹೇಳಿಕೆಗಳು ನೀಡಿದ ಬಳಿಕ ಸಾಯಿಪಲ್ಲವಿ ಸಿನಿಮಾಗಳನ್ನು ಬಾಯ್ಕಾಟ್ ಮಾಡಬೇಕು ಎನ್ನುವ ಮಾತುಗಳು ಕೇಳಿಬಂದಿತ್ತು. ಆಕೆ ನಟಿಸಿದ ಒಂದೆರಡು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಾಗ ಆಕೆಯ ಹೇಳಿಕೆಗಳೇ ಅದಕ್ಕೆ ಕಾರಣ ಎನ್ನಲಾಗ್ತಿತ್ತು.
'ಅಮರನ್' ಹಾಗೂ 'ತಂಡೇಲ್' ಚಿತ್ರಗಳ ಮೂಲಕ ಸಾಯಿ ಪಲ್ಲವಿ ಮತ್ತೆ ಗೆದ್ದು ಬೀಗಿದ್ದಾರೆ. ಸದ್ಯ 'ರಾಮಾಯಣ' ಚಿತ್ರದಲ್ಲಿ ಸೀತಾದೇವಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











