"ಹೊರಗೆ ಕರೆದುಕೊಂಡು ಹೋಗ್ತೀರಾ.. 4 ಗೋಡೆ ಮಧ್ಯೆ ಇಟ್ಟುಕೊಳ್ಳಬೇಕಿತ್ತು"- ವಿಜಯ್ ವಿರುದ್ಧ ಸಮುದ್ರಖನಿ ಆಕ್ರೋಶ
ತಮಿಳು ನಟ ವಿಜಯ್ ಹಾಗೂ ನಟಿ ತ್ರಿಶಾ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರಿದೆ. ಈಗಾಗಲೇ ವಿಜಯ್ ಪತ್ನಿ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಪತಿಗೆ ನಟಿಯೊಬ್ಬಳ ಜೊತೆಗಿನ ಸಂಬಂಧವೇ ಇದಕ್ಕೆಲ್ಲಾ ಕಾರಣ ಎಂದು ಆರೋಪಿಸಿದ್ದಾರೆ. ಡಿವೋರ್ಸ್, ಜೀವನಾಂಶ ಕೇಳಿ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದು ಕಡೆ ನಟಿ ತ್ರಿಶಾ ಜೊತೆ ವಿಜಯ್ ಬಹಿರಂಗವಾಗಿ ಸುತ್ತಾಡುತ್ತಿದ್ದಾರೆ.
ವಾರದ ಹಿಂದೆ ಸಂಗೀತಾ ಡಿವೋರ್ಸ್ ಕೋರಿ ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಎರಡು ದಿನಗಳ ಹಿಂದೆ ನಿರ್ಮಾಪಕ ಕಲ್ಪತ್ತಿ ಸುರೇಶ್ ಕುಟಂಬದ ಮದುವೆ ಸಮಾರಂಭಕ್ಕೆ ತ್ರಿಶಾ ಜೊತೆ ವಿಜಯ್ ಬಂದು ಹೋಗಿದ್ದರು. ಮ್ಯಾಚಿಂಗ್ ಡ್ರೆಸ್‌ನಲ್ಲಿ ಕಂಡ ಜೋಡಿ ಒಂದೇ ಕಾರಿನಲ್ಲಿ ಬಂದು ನವ ಜೋಡಿಗೆ ಶುಭ ಹಾರೈಸಿ ಹೋಗಿದ್ದರು. ಈ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ಇದೀಗ ತಮಿಳು ನಿರ್ದೇಶಕ ಸಮುದ್ರಖನಿ ಕೂಡ ವಿಜಯ್ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯ್ ಈಗ ನಟ ಮಾತ್ರವಲ್ಲ. ಟಿವಿಕೆ ಪಕ್ಷ ಸ್ಥಾಪಿಸಿ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ. ಈ ಬಾರಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ತಮ್ಮ ಸಿನಿಮಾಗಳನ್ನು ನೋಡಿ ಹಾರೈಸಿದ ತಮಿಳುನಾಡಿನ ಜನರ ಸೇವೆ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಸಿನಿಜೀವನ ಬಿಟ್ಟು ಬರಲು ಮುಂದಾಗಿದ್ದಾರೆ. ಸಮಾವೇಶ, ರ್ಯಾಲಿಗಳನ್ನು ನಡೆಸಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಅವರ ವೈಯಕ್ತಿಕ ವಿಚಾರ ಚರ್ಚೆ ಹುಟ್ಟಾಕ್ಕಿದೆ.
ಕಳೆದ ನಾಲ್ಕೈದು ವರ್ಷಗಳಿಂದ ನಟಿಯ ಜೊತೆಗೆ ಪತಿ ವಿಜಯ್‌ಗೆ ಸಂಬಂಧವಿದೆ. ಆಕೆಯಿಂದ ದೂರಾಗುವುದಾಗಿ ಹೇಳಿ ಭರವಸೆ ಕೊಟ್ಟಿದ್ದರು. ಆದರೆ ಹಳೇ ಚಾಳಿ ಮುಂದುವರೆಸಿದ್ದಾರೆ. ಇದರಿಂದ ತಮಗೂ ತಮ್ಮ ಮಕ್ಕಳಿಗೆ ಅವಮಾನವಾಗುತ್ತಿದೆ ಎಂದು ಸಂಗೀತಾ ಅರ್ಜಿಯಲ್ಲಿ ತಿಳಿಸಿದ್ದಾರೆ. ಇನ್ನು ವಿಜಯ್ ಹಾಗೂ ತ್ರಿಶಾ ಮದುವೆ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬೆನ್ನಲ್ಲೇ ಮತ್ತೆ ಸಂಗೀತಾ ಕೋರ್ಟ್ ಮೆಟ್ಟಿಲೇರಿದ್ದಾರೆ. ನೀಲಾಂಕರೈನಲ್ಲಿರುವ ತಮ್ಮ ಮನೆಗೆ ಪ್ರವೇಶಿಸಲು ವಿಜಯ್ ತಮ್ಮನ್ನು ಅನುಮತಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದು ಡಿವೋರ್ಸ್ ಪ್ರಕ್ರಿಯೆ ಮುಗಿಯುವವರೆಗೂ ಅದೇ ಮನೆಯಲ್ಲಿ ವಾಸಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ವಿಜಯ್ ನಡೆ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ಕೆಲ ಅಭಿಮಾನಿಗಳು ಆತನ ನಡೆಯನ್ನು ಬೆಂಬಲಿಸುತ್ತಿದ್ದಾರೆ. ಕದ್ದು ಮುಚ್ಚಿ ಓಡಾಡುವ ಬದಲು ಬಹಿರಂಗವಾಗಿ ತಾನು ಇರುವುದೇ ಹೀಗೆ ಎಂದು ವಿಜಯ್ ತೋರಿಸಿಕೊಳ್ಳುತ್ತಿದ್ದಾರೆ. ವಿಜಯ್ ದರೋಡೆ, ಮೋಸ, ಲಂಚ ಸ್ವೀಕಾರದಂತ ತಪ್ಪು ಮಾಡಿಲ್ಲ. ಡಿವೋರ್ಸ್ ಎನ್ನುವುದು ಅವರ ವೈಯಕ್ತಿಕ ವಿಚಾರ. ದಳಪತಿ ರಾಜಕೀಯರಂಗ ಪ್ರವೇಶಕ್ಕೂ ಕೌಟುಂಬಿಕ ಕಲಹಕ್ಕೂ ಸಂಬಂಧ ಇಲ್ಲ ಎಂದು ವಾದಿಸುತ್ತಿದ್ದಾರೆ.
ವಿಜಯ್ ಮಾಡುತ್ತಿರುವುದು ತಪ್ಪು ಎಂದು ಸಾಕಷ್ಟು ಜನ ವಾದಿಸುತ್ತಿಲ್ಲ. ರಾಜಕೀಯ ನಾಯಕನೊಬ್ಬ ತಮ್ಮ ವೈಯಕ್ತಿಕ ಜೀವನದಲ್ಲೇ ತಪ್ಪು ಮಾಡಿ ಜನರ ಮುಂದೆ ಹೋಗಿ ನಿಮಗೆ ಸೇವೆ ಮಾಡ್ತೀನಿ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ರಾಜಕೀಯ ಪ್ರವೇಶದ ಸಮಯದಲ್ಲಿ ಇದೆಲ್ಲಾ ಬೇಕಿರಲಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಎದುರಾಳಿ ಪಕ್ಷದ ನಾಯಕರು, ಬೇರೆ ನಟರ ಅಭಿಮಾನಿಗಳು ಟೀಕೆಗಳ ಸುರಿಮಳೆ ಸುರಿಸುತ್ತಿದ್ದಾರೆ. ನಿಧಾನವಾಗಿ ಚಿತ್ರರಂಗದ ಮಂದಿ ಕೂಡ ಈ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ.
ತಮಿಳು ನಟ, ನಿರ್ದೇಶಕ ಸಮುದ್ರಖನಿ ಇದೇ ವಿಚಾರವಾಗಿ ಮಾತನಾಡಿರುವ ವೀಡಿಯೋ ಈಗ ವೈರಲ್ ಆಗ್ತಿದೆ. ನಿರ್ದೇಶಕರಾದ ಬಾಲಾ ಮತ್ತು ಆರ್.ವಿ. ಉದಯಕುಮಾರ್ ಜೊತೆ ಸಮುದ್ರಖನಿ ಮಾತನಾಡುತ್ತಿರುವ ವೀಡಿಯೋ ಹರಿದಾಡುತ್ತಿದೆ. ವಿಜಯ್ ನಡೆಯ ಬಗ್ಗೆ ಸಮುದ್ರಖನಿ ಮಾತನಾಡಿರುವುದು ಗೊತ್ತಾಗುತ್ತಿದೆ. "ಇದೇನು ಆಟನಾ? ಇಷ್ಟೆಲ್ಲಾ ಆಗಿರುವಾಗ ಅವರನ್ನು(ತ್ರಿಶಾ) ಹೊರಗೆ ಕರೆದುಕೊಂಡು ಹೋಗ್ತೀರಾ. ನಾಲ್ಕು ಗೋಡೆಗಳ ಮಧ್ಯೆ ಇಟ್ಟುಕೊಳ್ಳಬೇಕಿತ್ತು. ಯಾರ ಮೇಲೆ ಹೀಗೆ ಸೇಡು ತೀರಿಸಿಕೊಳ್ಳುತ್ತಿದ್ದೀಯಾ?" ಎಂದು ಸಮುದ್ರಖನಿ ಮಾತನಾಡುತ್ತಾ ನಿಂತಿರುವುದನ್ನು ನೋಡಬಹುದು.
ತಮಿಳುನಾಡಿನ ಎರಡು ರಾಜಕೀಯ ಪಕ್ಷಗಳನ್ನು ಹಿಂದಿಕ್ಕಿ ವಿಜಯ್ ಈ ಬಾರಿ ಗೆಲ್ಲುವ ಲೆಕ್ಕಾಚಾರದಲ್ಲಿದ್ದಾರೆ. ದಳಪತಿಗೆ ಅಭಿಮಾನಿಗಳ ಬೆಂಬಲ ಚೆನ್ನಾಗಿದೆ. ಆದರೆ ಅಂತಹ ಅಭಿಮಾನಿಗಳು ಕೂಡ ಕಳೆದೊಂದು ವಾರದಿಂದ ನಡೆಯುತ್ತಿರುವ ಬೆಳವಣಿಗೆ ಕಂಡು ಬೇಸರಗೊಂಡಿದ್ದಾರೆ. ಇದೇ ಮಾತನ್ನು ಸಮುದ್ರಖನಿ ಕೂಡ ಹೇಳಿದ್ದಾರೆ. "ಎಲ್ಲಾ ಚೆನ್ನಾಗಿ ನಡೀತ್ತಿತ್ತು. ಆದರೆ ಈಗ ಪಕ್ಷದ ಕಾರ್ಯಕರ್ತರೂ ಕೂಡ ಇನ್ನು ನಮ್ಮಿಂದ ಇದನ್ನೆಲ್ಲಾ ಸಹಿಸಲು ಸಾಧ್ಯವಿಲ್ಲ" ಎಂದು ಹೇಳುತ್ತಿದ್ದಾರೆ" ಎಂದು ವಿವರಿಸಿದ್ದಾರೆ. ಈ ವೀಡಿಯೋ ವೈರಲ್ ಆಗಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ವಿಜಯ್ ರಾಜಕೀಯ ಪ್ರವೇಶವನ್ನು ನಿರ್ದೇಶಕ ಸಮುದ್ರಖನಿ ಸ್ವಾಗತಿಸಿದ್ದರು. ಕೆಲ ಸಿನಿಮಾಗಳನ್ನು ನಿರ್ದೇಶಿಸಿ ಗೆದ್ದ ಅವರು ಈಗ ನಟರಾಗಿ ಹೆಚ್ಚು ಗಮನ ಸೆಳೆದಿದ್ದಾರೆ. ಪುನೀತ್ ರಾಜ್‌ಕುಮಾರ್ ನಟನೆಯ 'ಯಾರೇ ಕೂಗಾಡಲಿ' ಕನ್ನಡ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.


Click it and Unblock the Notifications











