ಉದಯನಿಧಿ ತಲೆ ಕಡಿದರೆ 10 ಕೋಟಿ ಬಹುಮಾನ ಎಂದ ಸ್ವಾಮಿಜಿ, ಬಾಚಣಿಗೆ ತೆಗೆದುಕೊಳ್ಳುವೆ 10 ರೂ.ಕೊಡು ಎಂದ ನಟ!
ಸನಾತನ ಧರ್ಮ ನಿರ್ಮೂಲನೆಯಾಗಬೇಕು ಎಂದು ನಟ, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ದೇಶದಲ್ಲಿ ಭಾರೀ ವಿವಾದವನ್ನು ಎಬ್ಬಿಸಿದೆ. ನಟನ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಅಯೋಧ್ಯೆಯ ಸ್ವಾಮಿಜಿಯೊಬ್ಬರು ಉದಯನಿಧಿ ಶಿರಚ್ಛೇದನ ಮಾಡಿದರೆ ಕೋಟ್ಯಾಂತರ ರೂಪಾಯಿ ಹಣ ನೀಡುವುದಾಗಿ ಘೋಷಿಸಿದ್ದಾರೆ.
ಉದಯನಿಧಿ ಸ್ಟಾಲಿನ್ ಅವರ ಶಿರಚ್ಛೇದ ಮಾಡಿದರೇ 10 ಕೋಟಿ ರೂಪಾಯಿ ಬಹುಮಾನ ನೀಡುತ್ತೇನೆ ಎಂದು ಅಯೋಧ್ಯೆಯ ಧರ್ಮದರ್ಶಿ ಪರಮಹಂಸ ಆಚಾರ್ಯ ಘೋಷಿಸಿದ್ದಾರೆ. ಅಯೋಧ್ಯೆಯ ತಪಸ್ವಿ ಚಾವ್ನಿ ದೇವಸ್ಥಾನದ ಪ್ರಧಾನ ಅರ್ಚಕ ಪರಮಹಂಸ ಆಚಾರ್ಯ, "ಸ್ಟಾಲಿನ್ ಶಿರಚ್ಛೇದ ಮಾಡಿ ಅವನ ತಲೆಯನ್ನು ನನ್ನ ಬಳಿಗೆ ತರುವವರಿಗೆ 10 ಕೋಟಿ ನಗದು ಬಹುಮಾನ ನೀಡುತ್ತೇನೆ. ಯಾರೂ ಸ್ಟಾಲಿನ್ ಅವರನ್ನು ಕೊಲ್ಲಲು ಧೈರ್ಯ ಮಾಡದಿದ್ದರೆ, ನಾನೇ ಅವನನ್ನು ಹುಡುಕಿ ಕೊಲ್ಲುತ್ತೇನೆ" ಎಂದು ಜೀವ ಬೆದರಿಕೆ ಹಾಕಿದ್ದಾರೆ.

ಸನಾತನ ಧರ್ಮವು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಹೀಗಾಗಿ ಅದು ನಿರ್ಮೂಲನೆಯಾಗಬೇಕು ಎಂದು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಹೇಳಿದ್ದರು. ಜೊತೆಗೆ ಸನಾತನ ಧರ್ಮವನ್ನು ಕೊರೊನಾವೈರಸ್, ಮಲೇರಿಯಾ ಮತ್ತು ಡೆಂಗ್ಯೂಗೆ ಹೋಲಿಸಿದ್ದರು. ಇದು ದೇಶದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ಇಂತಹ ಬೆದರಿಕೆಗೆ ಹೆದರುವುದಿಲ್ಲ: ಉದಯನಿಧಿ
ಪರಮಹಂಸ ಆಚಾರ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಉದಯನಿಧಿ, "ಇಂತಹ ಹೇಳಿಕೆಗಳಿಗೆ ನಾನು ಹೆದರುವುದಿಲ್ಲ. ಇದೇ ರೀತಿಯ ಕೊಲೆ ಬೆದರಿಕೆಗಳನ್ನು ಹೊಂದಿದ್ದ ನನ್ನ ಅಜ್ಜ ಕರುಣಾನಿಧಿ ಅವರ ದಾರಿಯಲ್ಲಿ ನಾನು ಸಾಗುತ್ತಿದ್ದೇನೆ. ಸಮ್ಮೇಳನದಲ್ಲಿ ಆ ಮಾತು ಹೇಳಿದ ನಂತರ, ಜನರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತವೆ ಎಂದು ನನಗೆ ತಿಳಿದಿತ್ತು. ಅದೇ ನಡೆಯುತ್ತಿದೆ" ಎಂದು ಹೇಳಿದ್ದಾರೆ.
"ಕಳೆದ ಎರಡು ದಿನಗಳಿಂದ ತಮಿಳುನಾಡಿನಲ್ಲಿ ಏನಾಗುತ್ತಿದೆ ಎಂಬುದು ನಿಮಗೆಲ್ಲರಿಗೂ ಗೊತ್ತು. ತಮಿಳುನಾಡಿನಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಜನರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ನಿನ್ನೆ ಮೊನ್ನೆ ಕಾರ್ಯಕ್ರಮಕ್ಕೆ ಚೆನ್ನೈನಲ್ಲಿ ಸನಾತನ ಧರ್ಮ ನಿರ್ಮೂಲನಾ ಸಮಾವೇಶ ಎಂದು ಹೆಸರಿಡಲಾಗಿದೆ. ನಾನು ಅದರಲ್ಲಿ ಹೇಳಿದ್ದು, ಸೊಳ್ಳೆ, ಮಲೇರಿಯಾ, ಡೆಂಗ್ಯೂ, ಕಾಲರಾ, ಕೋವಿಡ್ ನಿರ್ಮೂಲನೆ ಮಾಡಿದಂತೆ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು. ಆ ವೇದಿಕೆಯಲ್ಲಿಯೇ ನಾನು ಹೇಳಿದ್ದು ಎಷ್ಟೋ ಜನರ ಹೊಟ್ಟೆಗೆ ಉರಿಬಿದ್ದಿದೆ" ಎಂದು ವ್ಯಂಗ್ಯವಾಡಿದ್ದಾರೆ.

ಸಂತನ ಬಳಿ ಕೋಟ್ಯಾಂತರ ರೂಪಾಯಿ ಹೇಗೆ ಬರುತ್ತೆ?
ಮುಂದುವರಿದು ಮಾತನಾಡಿರುವ ಅವರು, "ಅಮಿತ್ ಶಾ ಅವರಿಂದ ನಡ್ಡಾವರೆಗೆ ಎಲ್ಲರೂ ಈಗ ಉದಯನಿಧಿ ಬಗ್ಗೆ ಮಾತನಾಡುತ್ತಿದ್ದಾರೆ. ಭಾರತದಾದ್ಯಂತ ನನ್ನನ್ನು ಬಂಧಿಸಲು ದೂರು ದಾಖಲಾಗಿದೆ. ಇಂದು ನನ್ನ ತಲೆಗೆ ಸಂತನೊಬ್ಬ ಬಹುಮಾನ ಇಟ್ಟಿದ್ದಾನೆ. ಉದಯನಿಧಿಯ ತಲೆಯನ್ನು ಕತ್ತರಿಸುವವರಿಗೆ ಬಹುಮಾನ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಅದು 10 ಕೋಟಿ ರುಪಾಯಿ" ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
"ಇವರನ್ನು ಸಂತ ಎಂದು ಹೇಳುತ್ತಾರೆ. ಅಯ್ಯೋ ಪುಣ್ಯಾತ್ಮ, ನನ್ನ ತಲೆಯ ಮೇಲೆ ನಿನಗೇಕೆ ಅಷ್ಟೊಂದು ಕಾಳಜಿ?, ನೀನು ಸಂತನಲ್ಲವೇ, ನಿನ್ನ ಬಳಿ 1 ಕೋಟಿ ರೂಪಾಯಿ ಹೇಗೆ ಬರುತ್ತದೆ?. ನೀನು ನಿಜವಾದ ಸಂತನೋ ಅಥವಾ ನಕಲಿ ಸಂತನೋ? ನನ್ನ ತಲೆ ಕಡಿಯಲು 10 ಕೋಟಿ ಏಕೆ..? ಒಂದು ಬಾಚಣಿಗೆ ತೆಗೆದುಕೊಳ್ಳಲು 10 ರೂಪಾಯಿ ಕೊಟ್ಟರೆ ನಾನೇ ನನ್ನ ಕೂದಲನ್ನು ಬಾಚಿಕೊಳ್ಳಬಲ್ಲೆ" ಎಂದು ಬೆದರಿಕೆ ಹಾಕಿದವರನ್ನು ಕೀಟಲೆ ಮಾಡಿದ್ದಾರೆ.
"ಕರುಣಾನಿಧಿಯವರ ತಲೆಯನ್ನು ಯಾರಾದರೂ ಕತ್ತರಿಸಿದರೆ ಅವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ಎಂದು ಈ ಹಿಂದೆಯೂ ಸಂತರು ಹೇಳಿದ್ದರು. ನಾನು ಕರುಣಾನಿಧಿ ಮತ್ತು ಅಂಬೇಡ್ಕರ್ ಅವರ ಹಾದಿಯಲ್ಲಿದ್ದೇನೆ. ಪೆರಿಯಾರ್, ಅನ್ಬಳಗನ್ ಮತ್ತು ನಮ್ಮ ನಾಯಕ (ಸ್ಟಾಲಿನ್) ಅವರು ಸನಾತನ ಧರ್ಮವನ್ನು ತೊಡೆದುಹಾಕಲು ಹೋರಾಡುತ್ತಿದ್ದಾರೆ. ಡಿಎಂಕೆ ಕೂಡ ಇದಕ್ಕಾಗಿ ಹೋರಾಡುತ್ತದೆ" ಎಂದು ಹೇಳಿದ್ದಾರೆ.


Click it and Unblock the Notifications











