ಕಾಡುಗಳ್ಳ ವೀರಪ್ಪನ್ ಪುತ್ರಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ: ಗನ್ ಹಿಡ್ದು ಬಂದ ವಿಜಯಲಕ್ಷ್ಮಿ ವೀರಪ್ಪನ್
ತಮಿಳಿನ 'ಮಾವೀರನ್ ಪಿಳ್ಳೈ' ಸಿನಿಮಾ ಮೂಲಕ ಕಾಡುಗಳ್ಳ ವೀರಪ್ಪನ್ ಪುತ್ರಿ ವಿಜಯಲಕ್ಷ್ಮಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ಧಾರೆ. ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಯುವ ಘಟಕದ ಉಪಾಧ್ಯಕ್ಷೆಯಾಗಿ ಗುರ್ತಿಸಿಕೊಂಡಿರುವ ವಿಜಯಲಕ್ಷ್ಮೀ ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರೋದು ವಿಶೇಷ. ಕಾರಣಾಂತರಗಳಿಂದ 'ಮಾವೀರನ್ ಪಿಳ್ಳೈ' ರಿಲೀಸ್ ತಡವಾಗುತ್ತಿದ್ದು ಸದ್ಯ ಸಿನಿಮಾ ಆಡಿಯೋ ಲಾಂಚ್ ಆಗಿದೆ.
ಚೆನ್ನೈನ ಪ್ರಸಾದ್ ಲ್ಯಾಬ್‌ನಲ್ಲಿ ನಡೆದ 'ಮಾವೀರನ್ ಪಿಳ್ಳೈ' ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ, ಆಲ್ ಪೀಪಲ್ಸ್ ಪೊಲಿಟಿಕಲ್ ಪಾರ್ಟಿ ಅಧ್ಯಕ್ಷೆ ರಾಜೇಶ್ವರಿ ಪ್ರಿಯಾ, ನಟ ಕೂಲ್ ಸುರೇಶ್, ನಿರ್ದೇಶಕ ಪೇರರಸು, ನಿರ್ಮಾಪಕ ಕೆ.ಎನ್.ಆರ್. ರಾಜ ಸೇರಿದಂತೆ ಹಲವರು ಭಾಗಿ ಆಗಿದ್ದರು. 2 ವರ್ಷಗಳ ಹಿಂದೆಯೇ ಸಿನಿಮಾ ಟೀಸರ್ ರಿಲೀಸ್ ಆಗಿತ್ತು. ಸಾಂಗ್ಸ್ ಜೊತೆಗೆ ಈಗ 'ಮಾವೀರನ್ ಪಿಳ್ಳೈ' ಸಿನಿಮಾ ಟ್ರೈಲರ್ ಕೂಡ ಹೊರಬಂದಿದೆ.

'ಮಾವೀರನ್ ಪಿಳ್ಳೈ' ಚಿತ್ರದಲ್ಲಿ ಕುಡಿತದ ಚಟದಿಂದ ಸಮಾಜದಲ್ಲಿ ಏನೆಲ್ಲಾ ಸಮಸ್ಯೆಗಳು ಎದರಾಗುತ್ತಿದೆ. ಇದೇ ಕಾರಣಕ್ಕೆ ಎಷ್ಟೊ ಬಡ ಕುಟುಂಬಗಳ ಬದುಕು ಬೀದಿಗೆ ಬರ್ತಿದೆ ಎನ್ನುವುದನ್ನು ಹೇಳುವ ಪ್ರಯತ್ನ ನಡೀತಿದೆ.ಚಿತ್ರದ ನಿರ್ಮಾಪಕ ರಾಜ ಮಾತನಾಡಿ "ಪ್ರತಿ ಸಂಸಾರದಲ್ಲೂ ಕುಡಿತದಿಂದ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತವೆ. ಕುಡಿತದಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದೇವೆ' ಎಂದು ಹೇಳಿದ್ದಾರೆ.

ವಿಜಯಲಕ್ಷ್ಮೀ ಅವರಿಗೆ ಬಾಲ್ಯದಿಂದಲೂ ನಟಿಸುವ ಆಸಕ್ತಿ ಇತ್ತಂತೆ. "ಮೊದಲಿನಿಂದಲೂ ನಟಿಸುವ ತುಡಿತ ಇತ್ತು. ಈಗ ಅವಕಾಶ ಸಿಕ್ಕಿದೆ. ಕುಡಿತದಿಂದಾಗಿ ಪ್ರತಿ ಮನೆಯಲ್ಲೂ ಸಾಕಷ್ಟು ಮಹಿಳೆಯರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅಂಥ ಮಹಿಳೆಯರ ಕುರಿತು ಈ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. ಅದೇ ಕಾರಣಕ್ಕೆ ಈ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ' ಎಂದಿದ್ದಾರೆ.
ಒಂದು ಚಿತ್ರದಲ್ಲಿ ಯಾರು ನಟಿಸಿದ್ದಾರೆ ಅಥವಾ ಚಿತ್ರವನ್ನು ಯಾರು ನಿರ್ದೇಶಿಸಿದ್ದಾರೆ ಅನ್ನೋದು ಮುಖ್ಯ ಅಲ್ಲ, ಚಿತ್ರದ ಕಥಾವಸ್ತು ಮುಖ್ಯ ಎಂದು ಚಿತ್ರದ ನಿರ್ದೇಶಕ ಪೇರರಸು ಹೇಳಿದ್ದಾರೆ. "ನಮ್ಮ ಚಿತ್ರರಂಗದಲ್ಲಿ ಮುಖ್ಯಮಂತ್ರಿಗಳ ಮಗನೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ, ವೀರಪ್ಪನ್ ಮಗಳು ಸಹ ಇದೀಗ ಚಿತ್ರರಂಗಕ್ಕೆ ಬಂದಿದ್ದಾರೆ. ಚಿತ್ರರಂಗ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ನಾವು ಸಹ ವಿಜಯಲಕ್ಷ್ಮೀ ಅವರನ್ನು ಬಹಳ ಪ್ರೀತಿಯಿಂದ ಚಿತ್ರರಂಗಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ' ಎಂದು ವಿಜಯಲಕ್ಷ್ಮೀ ಅವರನ್ನು ನಿರ್ದೇಶಕರು ಚಿತ್ರರಂಗಕ್ಕೆ ಸ್ವಾಗತಿಸಿದ್ದಾರೆ.
"ಇಂದು ದೊಡ್ಡವರಷ್ಟೇ ಅಲ್ಲ, ಸಣ್ಣ ಮಕ್ಕಳು ಸಹ ಕುಡಿಯುವ ವೀಡಿಯೋಗಳು ಬಿಡುಗಡೆಯಾಗಿ ಎಲ್ಲರಿಗೂ ಆಘಾತ ತಂದಿದೆ. ಈ ಚಿತ್ರದಲ್ಲಿ 'ಸಾರಾಯಂ ಅಭಯಂ' ಎಂಬ ಹಾಡಿದ್ದು, ಕುಡಿತದ ವಿರುದ್ಧದ ಅಭಿಯಾನದಲ್ಲಿ ಬಳಸಿಕೊಳ್ಳಬಹುದು. ಜನ ಮತ ಚಲಾಯಿಸುತ್ತಾರೋ, ಇಲ್ಲವೋ ಎಂಬ ಭಯದಿಂದ ಯಾವ ರಾಜಕಾರಿಣಿಯೂ ಕುಡಿತವನ್ನು ನಿಷೇಧಿಸುವ ಮಾತಾಡುವುದಿಲ್ಲ. ಅವರ ಭಾಷಣಗಳಲ್ಲಿ, ಮಾತುಗಳಲ್ಲಿ ಕುಡಿತ ಕುರಿತು ಪ್ರಸ್ತಾಪವೇ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಸಾರಾಯಿ ತರಹ ಗಾಂಜ ಅಂಗಡಿಗಳು ಪ್ರಾರಂಭವಾದರೂ ಆಶ್ಚರ್ಯವಿಲ್ಲ. ಆಗಾಗ ಆನ್‌ಲೈನ್ ರಮ್ಮಿಯಿಂದ ಜನ ಸಾಯುವ ಬಗ್ಗೆ ಕೇಳುತ್ತಿರುತ್ತೇವೆ. ಆದರೆ, ಕುಡಿತದಿಂದ ಪ್ರತಿ ದಿನ ನೂರಾರು ಜನ ಸಾಯುತ್ತಿದ್ದಾರೆ."
"ಆನ್‌ಲೈನ್ ರಮ್ಮಿಯನ್ನು ನಿಷೇಧಿಸಬೇಕು ಎನ್ನುವವರು ಕುಡಿತವನ್ನು ನಿಷೇಧಿಸಬೇಕು ಎಂದು ಆಗ್ರಹಿಸುವುದಿಲ್ಲ. ಮಹಿಳೆಯರಿಗೆ ಸಾವಿರಾರು ರೂಪಾಯಿ ಬೇಕಿಲ್ಲ. ಅವರಿಗೆ ಎಸಿ ಬಸ್ ಬೇಕಿಲ್ಲ. ನೀಟ್ ಪರೀಕ್ಷೆಗಳು ಮುಖ್ಯವಲ್ಲ. ಜನಸಾಮಾನ್ಯರಿಗೆ ಸಮಸ್ಯೆ ಆಗಿರುವ ಸಾರಾಯಿಯನ್ನು ಮೊದಲು ನಿಷೇಧಿಸಿ" ಎಂದು ನಿರ್ದೇಶಕರು ಆಗ್ರಹಿಸಿದ್ದಾರೆ. ಈ ಚಿತ್ರಕ್ಕೆ ಮಂಜುನಾಥ ಅವರ ಛಾಯಾಗ್ರಹಣ ಮತ್ತು ರವಿವರ್ಮ ಸಂಗೀತವಿದೆ.


Click it and Unblock the Notifications











