ಈ ಬಾರಿ ಸಂಕ್ರಾಂತಿ ಹಬ್ಬಕ್ಕೆ ವಿಚಿತ್ರ ದಾಖಲೆ ಬರೆಯುತ್ತಿದ್ದಾರೆ ಬೆಂಗಳೂರು ಬೆಡಗಿ ಶ್ರೀಲೀಲಾ
ಸುಗ್ಗಿ ಸಂಭ್ರಮಕ್ಕೆ ದಿನಗಣನೆ ಶುರುವಾಗಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ಸಂ'ಕ್ರಾಂತಿ' ನಡೆಯಲಿದೆ. ಕನ್ನಡದ ಯಾವುದೇ ದೊಡ್ಡ ಸಿನಿಮಾ ಬಿಡುಗಡೆ ಆಗದೇ ಇದ್ದರೂ ತೆಲುಗು, ತಮಿಳಿನ ಬಹುನಿರೀಕ್ಷಿತ ಸಿನಿಮಾಗಳು ಈ ವಾರವೇ ಬಿಡುಗಡೆ ಆಗ್ತಿದೆ.
ಕನ್ನಡ ನಟಿಯರು ಪರಭಾಷೆ ಸಿನಿಮಾಗಳಲ್ಲಿ ಕಮಾಲ್ ಮಾಡ್ತಿದ್ದಾರೆ. ಸಂಕ್ರಾಂತಿಗೆ ಬಿಡುಗಡೆ ಆಗುತ್ತಿರುವ ಸಿನಿಮಾಗಳಲ್ಲಿ ಇಬ್ಬರು ಕನ್ನಡ ನಟಿಯರು ಬಣ್ಣ ಹಚ್ಚಿದ್ದಾರೆ. ತಮಿಳಿನ 'ಪರಾಶಕ್ತಿ' ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಮಿಂಚಿದ್ದಾರೆ. ಸುಧಾ ಕೊಂಗರ ನಿರ್ದೇಶನದ ಚಿತ್ರದಲ್ಲಿ ಶಿವಕಾರ್ತಿಕೇಯನ್, ಜಯಂ ರವಿ, ಡಾಲಿ ಧನಂಜಯ್ ಸೇರಿ ದೊಡ್ಡ ತಾರಾಗಣವಿದೆ. 60ರ ದಶಕದ ಕತೆಯನ್ನು ಚಿತ್ರದಲ್ಲಿ ಹೇಳಲಾಗ್ತಿದೆ.

ಶ್ರೀಲೀಲಾ ಮತ್ತೊಂದು ಕತೆ ಕೂಡ ಸುಗ್ಗಿ ಸಂಭ್ರಮದಲ್ಲಿ ತೆರೆಗೆ ಬರಲಿದೆ. ಹೌದು ತಮಿಳಿನ 'ಜನ ನಾಯಗನ್' ಸಿನಿಮಾ ಕೂಡ ಈ ವಾರವೇ ಬಿಡುಗಡೆ ಆಗಲಿದೆ. ಇದು ತೆಲುಗಿನ 'ಭಗವಂತ್ ಕೇಸರಿ' ಸಿನಿಮಾ ರೀಮೆಕ್ ಎನ್ನುವುದು ವಿಶೇಷ. ಬಾಲಕೃಷ್ಣ ಹಾಗೂ ಶ್ರೀಲೀಲಾ ಮಾಡಿದ್ದ ಪಾತ್ರಗಳನ್ನು ದಳಪತಿ ವಿಜಯ್ ಹಾಗೂ ಮಮಿಯಾ ಬೈಜು ನಿಭಾಯಿಸಿದ್ದಾರೆ. ಹಾಗಾಗಿ ಶ್ರೀಲೀಲಾ ನಟಿಸಿದ್ದ ಸಿನಿಮಾ ಕತೆ ಮತ್ತೆ ತೆರೆಮೇಲೆ ಬರಲಿದೆ.
ಜನವರಿ 9ರಂದು 'ಜನ ನಾಯಗನ್' ಬಿಡುಗಡೆಯಾದರೆ ಮರುದಿನ 'ಪರಾಶಕ್ತಿ' ಸಿನಿಮಾ ತೆರೆಗಪ್ಪಳಿಸಲಿದೆ. ಈಗಾಗಲೇ 'ಜನ ನಾಯಗನ್' ಚಿತ್ರದ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಟ್ರೈಲರ್ ನೋಡಿದರೆ ಇದು 'ಭಗವಂತ್ ಕೇಸರಿ' ರೀಮೆಕ್ ಎನ್ನುವುದು ಖಚಿತವಾಗ್ತಿದೆ. ಮಗಳ ಸಮಾನ ವಿಜಯಲಕ್ಷ್ಮಿ(ಶ್ರೀಲೀಲಾ)ಯನ್ನು ಭಾರತೀಯ ಸೇನೆಗೆ ಸೇರಿಸಲು ಹೋರಾಟ ಮಾಡುವ ನಾಯಕ ಭಗವಂತ್ ಕೇಸರಿ(ಬಾಲಕೃಷ್ಣ) ಕತೆ ಚಿತ್ರದಲ್ಲಿದೆ.
ಈ ಬಗ್ಗೆ ಗಲಾಟ ಪ್ಲಸ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಶ್ರೀಲೀಲಾ ಮಾತನಾಡಿದ್ದಾರೆ. "ಈ ರೀತಿ ಆಗುತ್ತದೆ ಎಂದು ನನಗೆ ಗೊತ್ತಿರಲಿಲ್ಲ. 'ಜನ ನಾಯಗನ್' ಯಥಾವತ್ ರೀಮೇಕಾ ಎನ್ನುವುದು ನನಗೆ ಗೊತ್ತಿಲ್ಲ. ಒಟ್ಟಾರೆ ಮತ್ತೆ 'ಭಗವಂತ್ ಕೇಸರಿ' ತೆರೆಮೇಲೆ ಬರುತ್ತಿರುವುದು ವಿಶೇಷ. ಅದು ಕೂಡ ನನ್ನ ನೆಚ್ಚಿನ ನಟ ವಿಜಯ್ ಸರ್, ಆ ಚಿತ್ರದಲ್ಲಿ ನಟಿಸುತ್ತಿರುವುದು ಸಂತಸ ತಂದಿದೆ" ಎಂದಿದ್ದಾರೆ.
ವಿಜಯ್ ತಮ್ಮ ಕೊನೆಯ ಚಿತ್ರಕ್ಕೆ ರೀಮೆಕ್ ಕಥೆ ಯಾಕೆ ಆಯ್ಕೆ ಮಾಡಿಕೊಂಡ್ರು ಎನ್ನುವ ಚರ್ಚೆ ಶುರುವಾಗಿದೆ. ಸದ್ಯ ರಾಜಕೀಯರಂಗ ಪ್ರವೇಶಿಸಿದ್ದಾರೆ. 'ಜನ ನಾಯಗನ್' ಚಿತ್ರವನ್ನು ಅದಕ್ಕೆ ವೇದಿಕೆ ಮಾಡಿಕೊಳ್ಳುತ್ತಿದ್ದಾರೆ. ಚಿತ್ರದ ಟ್ರೈಲರ್ ಗಮನಿಸಿದರೆ ತಮ್ಮ ರಾಜಕೀಯ ಎದುರಾಳಿಗಳಿಗೆ ಕೌಂಟರ್ ಕೊಡುವ ಪ್ರಯತ್ನ ಮಾಡಿರುವುದು ಗೊತ್ತಾಗುತ್ತಿದೆ.
ಬೆಂಗಳೂರು ಬೆಡಗಿ ಶ್ರೀಲೀಲಾ ತೆಲುಗು, ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. 'ಪರಾಶಕ್ತಿ' ಚಿತ್ರದಲ್ಲಿ ಶ್ರೀಲೀಲಾಗೆ ಒಳ್ಳೆ ಅವಕಾಶ ಸಿಕ್ಕಿದೆ. ಹಿಂದಿ ಹೇರಿಕೆಯ ಹಿನ್ನೆಲೆಯಲ್ಲಿ ಈ ಸಿನಿಮಾ ಮೂಡಿ ಬರ್ತಿದೆ.
ವಿನೋದ್ ನಿರ್ದೇಶನದ 'ಜನ ನಾಯಗನ್' ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ತಯಾರಾಗಿದೆ. ಆದರೆ ಸೆನ್ಸಾರ್ ಸಮಸ್ಯೆಯಿಂದ ಸಿನಿಮಾ ಬಿಡುಗಡೆ ಅನುಮಾನ ಎನ್ನುವಂತಾಗಿದೆ. ಸಿನಿಮಾ ತೆರೆಗಪ್ಪಳಿಸಲು 3 ದಿನ ಬಾಕಿ ಇರುವಾಗ ಚಿತ್ರತಂಡಕ್ಕೆ ಶಾಕ್ ಎದುರಾಗಿದೆ.
ಚಿತ್ರದ ಕೆಲ ದೃಶ್ಯಗಳು ಹಾಗೂ ಡೈಲಾಗ್ಸ್ ಬಗ್ಗೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿರುವುದು ಇದೀ ಚಿತ್ರತಂಡಕ್ಕೆ ಆತಂಕ ತಂದಿದೆ. ಅಂತಹ ದೃಶ್ಯಗಳನ್ನು ಕತ್ತರಿಸಿ, ಡೈಲಾಗ್ಸ್ ಮ್ಯೂಟ್ ಮಾಡಿದರೆ ಸಿನಿಮಾ ಫೀಲ್ ಮಿಸ್ ಆಗುತ್ತದೆ ಎಂದು ಚಿತ್ರತಂಡ ಗೊಂದಲಕ್ಕೀಡಾಗಿದೆ.


Click it and Unblock the Notifications











