ಮದ್ವೆ ಆಗ್ದೇ ಒಟ್ಟಿಗಿರಬಹುದು, ಮದ್ವೆ ಆಗ್ದೇ ಮಕ್ಕಳು ಮಾಡಿಕೊಳ್ಳಬಹುದು; ಸತ್ಯರಾಜ್ ಮಗಳ ಹೇಳಿಕೆ ವೈರಲ್
ತಮಿಳು ನಟ ಸತ್ಯರಾಜ್ 'ಶಭಾಷ್ ವಿಕ್ರಂ' ಎಂಬ ಕನ್ನಡ ಚಿತ್ರದಲ್ಲಿ ಕೂಡ ನಟಿಸಿದ್ದರು. 'ಬಾಹುಬಲಿ' ಚಿತ್ರದ ಕಟ್ಟಪ್ಪ ಪಾತ್ರದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದಿದ್ದರು. ತಮಿಳು ಬಿಟ್ಟರೆ ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಅವರು ಹೆಚ್ಚು ನಟಿಸಿದ್ದಾರೆ.
ವಿಲನ್ ಪಾತ್ರಗಳಲ್ಲಿ ನಟಿಸುವ ಮೂಲಕ ತಮಿಳು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದ ಸತ್ಯರಾಜ್ ಬಳಿಕ ಹೀರೊ ಆಗಿದ್ದರು. ಒಂದಷ್ಟು ಸಿನಿಮಾಗಳಲ್ಲಿ ಲೀಡ್ ರೋಲ್‌ನಲ್ಲಿ ಮಿಂಚಿ ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು. ಸತ್ಯರಾಜ್ ಅವರಿಗೆ ಸಿಬಿ ಸತ್ಯರಾಜ್ ಎಂಬ ಮಗ ಹಾಗೂ ದಿವ್ಯಾ ಸತ್ಯರಾಜ್ ಎಂಬ ಮಗಳು ಇದ್ದಾರೆ. ವೃತ್ತಿಯಲ್ಲಿ ನ್ಯೂಟ್ರಿಷಿಯನಿಸ್ಟ್ ಆಗಿರುವ ದಿವ್ಯಾ ರಾಜಕೀಯರಂಗದಲ್ಲಿ ಕೂಡ ಗುರ್ತಿಸಿಕೊಂಡಿದ್ದಾರೆ. ಡಿಎಂಕೆ ಪಕ್ಷದ ಐಟಿ ವಿಭಾಗದ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ದಿವ್ಯಾ ಸತ್ಯರಾಜ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ Rednool ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅದರಲ್ಲೂ ಪ್ರೀತಿ, ಮದುವೆ, ಧಾರ್ಮಿಕ ನಂಬಿಕೆಗಳ ಬಗ್ಗೆ ಆಕೆ ಆಡಿರುವ ಮಾತುಗಳು ಸಖತ್ ವೈರಲ್ ಆಗ್ತಿದೆ. ನನಗೆ ಮದುವೆ ಅಲ್ಲಿ ನಂಬಿಕೆ ಇಲ್ಲ. ಒಬ್ಬರ ವ್ಯಕ್ತಿ ಇಷ್ಟವಾದರೆ ಅವರೊಟ್ಟಿಗೆ ಜೀವನ ಸಾಗಿಸಬಹುದು. ಅದಕ್ಕಾಗಿ ಮದುವೆ ಯಾಕೆ ಎಂದು ದಿವ್ಯಾ ಪ್ರಶ್ನಿಸಿದ್ದಾರೆ.
ಮದುವೆ ಎನ್ನುವ ಕಲ್ಪನೆ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದು ದಿವ್ಯಾ ಹೇಳಿದ್ದಾರೆ. "ಇಬ್ಬರು ವ್ಯಕ್ತಿಗಳು ಒಟ್ಟಿಗೆ ಇದ್ದಾರೆ ಅಂದ್ರೆ ನಡುವೆ ಪ್ರೀತಿ ಇರಬೇಕು. ಮದುವೆ ಆಗಿದ್ದೀವಿ ಎಂದು ಒಟ್ಟಿಗೆ ಇರಬಾರದು. ಒಬ್ಬರ ಬಗ್ಗೆ ಮತ್ತೊಬ್ಬರಿಗೆ ಕ್ರೇಜ್ ಇರಬೇಕು. ಮದುವೆ ಎನ್ನುವುದೇ ಈಗ ಕಾರ್ಪೋರೇಟ್ ಆಗಿಬಿಟ್ಟಿದೆ. ಒಂದೇ ಧರ್ಮ, ಜಾತಿ ಆಗಿರಬೇಕು, ಜಾತಕ ಕೂಡಿ ಬರಬೇಕು ಅಂತಾರೆ. ನನಗೆ ಜಾತಕವೇ ಇಲ್ಲ ಎಂದು ಹೆಮ್ಮೆಯಿಂದ ಹೇಳ್ತೀನಿ. ಜಾತಕ ಇಲ್ಲದ ಹುಡುಗಿ ನಾನು. ನಮ್ಮ ತಂದೆ ಜ್ಯೋತಿಷ್ಯ ನಂಬಲ್ಲ. ನನ್ನ ಪ್ರಕಾರ ಜಾತಕ ಅನ್ನುವುದು ಇಲ್ಲ" ಎಂದು ತಿಳಿಸಿದ್ದಾರೆ.

ನನಗೆ ಯಾರಾದರೂ ಒಬ್ಬ ವ್ಯಕ್ತಿ ಸರಿ ಎನಿಸಿದರೆ ಅವರೊಟ್ಟಿಗೆ ಹೋಗಿ ಬದುಕುತ್ತೀನಿ. ಉಂಗುರ ಹಾಕೋದು, ತಾಳಿ ಕಟ್ಟೋದನ್ನು ನಂಬಲ್ಲ ಎಂದು ದಿವ್ಯಾ ಸತ್ಯರಾಜ್ ಹೇಳಿದ್ದಾರೆ. "ನನಗೆ ಅವ್ರು ಇಷ್ಟ ಆದ್ರು, ಅವ್ರಿಗೆ ನಾನು ಇಷ್ಟ ಅಂದ್ರೆ ಅಷ್ಟು ಸಾಕಲ್ಲ. ಒಟ್ಟಿಗೆ ಕೂಡಿ ಬಾಳುತ್ತೇವೆ. ಒಟ್ಟಿಗೆ ಬದುಕಬೇಕು ಅಂತ ಕೂಡ ಇಲ್ಲ. ಒಬ್ಬರ ಮನೆಯಲ್ಲಿ ಒಬ್ಬರು ಉಳಿದುಕೊಳ್ಳಬಹುದು. ಒಟ್ಟಿಗೆ ಮಕ್ಕಳನ್ನು ಮಾಡಿಕೊಳ್ಳಬಹುದು. ಅದಕ್ಕೆ ಮದುವೆ ಆಗಬೇಕು ಅಂತಿಲ್ಲ" ಎಂದಿದ್ದಾರೆ.
ಮದುವೆಯಾಗದೇ ಮಕ್ಕಳು ಮಾಡಿಕೊಂಡ್ರೆ ಪರವಾಗಿಲ್ಲ. ಲಿವಿಂಗ್ ಟುಗೆದರ್, ನಾಟ್ ಲಿವಿಂಗ್ ಟುಗೆದರ್, ಮಕ್ಕಳು ಮಾಡಿಕೊಳ್ಳುವುದು, ಮಾಡಿಕೊಳ್ಳದೇ ಇರುವುದು ಎಲ್ಲವೂ ನನಗೆ ಓಕೆ ಎಂದು ದಿವ್ಯಾ ಸತ್ಯರಾಜ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಳಿಕ ತಮ್ಮ ಪ್ರೀತಿ ವಿಚಾರವನ್ನು ಕೂಡ ಆಕೆ ಬಹಿರಂಗ ಪಡಿಸಿದ್ದಾರೆ. "ನನಗೂ ಲವ್ ಆಗಿತ್ತು, ಬ್ರೇಕಪ್ ಆಯ್ತು ಎಂದು ತಿಳಿಸಿದ್ದಾರೆ. ನಾನು ಬ್ರೇಕಪ್ ವಿಚಾರ ಯಾರಿಗೂ ಹೇಳಲಿಲ್ಲ, ಅಪ್ಪನಿಗೂ ಹೇಳಲಿಲ್ಲ. ನಾನೊಬ್ಬಳೆ ಸಾಕಷ್ಟು ಅತ್ತಿದ್ದೀನಿ" ಎಂದು ವಿವರಿಸಿದ್ದಾರೆ.
ನಾನು ಖುಷಿಯಾಗಿರುವುದು ಮಾತ್ರ ಅಪ್ಪನಿಗೆ ಇಷ್ಟ. ನಾನು ಒಂಟಿಯಾಗಿಯೇ ಖುಷಿಯಾಗಿದ್ರು ಅವರಿಗೆ ಖುಷಿ, ಒಂದು ವೇಳೆ ನಾನು ಮತ್ತೊಬ್ಬರ ಜೊತೆ ಖುಷಿಯಾಗಿದ್ದರೂ ಅವರಿಗೆ ಖುಷಿ. ಸದ್ಯಕ್ಕೆ ನಾನು ಒಬ್ಬೊಂಟಿಯಾಗಿ ಬಹಳ ಖುಷಿಯಾಗಿ ಇದ್ದೀನಿ ಎಂದು ದಿವ್ಯಾ ಸತ್ಯರಾಜ್ ಹೇಳಿದ್ದಾರೆ. ಸತ್ಯರಾಜ್ ಹಾಗೂ ಮಗಳು ದಿವ್ಯಾ ಡಿಎಂಕೆ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದಾರೆ. ಆದರೆ ಸತ್ಯರಾಜ್ ಮಗ ಸಿಬಿ ಮಾತ್ರ ವಿಜಯ್ ನೇತೃತ್ವದ ಡಿವಿಕೆ ಪಕ್ಷವನ್ನು ಬೆಂಬಲಿಸಿ ಅಚ್ಚರಿ ಮೂಡಿಸಿದ್ದಾರೆ.


Click it and Unblock the Notifications