ಮಗುವಿಗೆ ಜನ್ಮ ನೀಡಿದ ಬಳಿಕ ಮೊದಲ ಬಾರಿಗೆ ಕಾಣಿಸಿಕೊಂಡ 'ಯುವರತ್ನ' ನಟಿ ಸಯೇಶಾ
ಬಹುಭಾಷಾ ನಟಿ, ನಟ ಆರ್ಯ ಪತ್ನಿ ಸಯೇಶಾ ಸೈಗಲ್ ಇತ್ತೀಚಿಗಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತಾಯಿಯಾದ ಸಂಭ್ರಮದಲ್ಲಿರುವ ನಟಿ ಸಯೇಶಾ ತನ್ನ ಮುದ್ದಾದ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಹೆಣ್ಣು ಮಗುವಿನ ತಂದೆ ಆಗಿರುವ ಬಗ್ಗೆ ನಟ ಆರ್ಯ ಘೋಷಣೆ ಮಾಡಿಕೊಂಡಿದ್ದರು. ಗರ್ಭಿಣಿ ಆದ ನಂತರದಲ್ಲಿ ಸಯೇಶಾ ಅಭಿಮಾನಿಗಳ ಕಣ್ಣಿಗೆ ಬಿದ್ದಿರಲಿಲ್ಲ. ಮಗು ಜನಿಸಿದ ನಂತರ ಇದೇ ಮೊದಲ ಬಾರಿಗೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅವರನ್ನು ನೋಡಿ ಅಭಿಮಾನಿಗಳು ಸಖತ್ ಖುಷಿ ಆಗಿದ್ದಾರೆ.
ಅಂದಹಾಗೆ ಮಗು ಜನಿಸಿದ ನಂತರ ಸಯೇಶಾ ಕೊಂಚ ದಪ್ಪ ಆಗಿದ್ದಾರೆ. ಮತ್ತೆ ದೇಹ ಮೊದಲಿನ ಸ್ಥಿತಿಗೆ ಮರಳೋಕೆ ಸ್ವಲ್ಪ ಸಮಯಬೇಕು. ಅನೇಕ ಹೀರೋಯಿನ್ಗಳು ಮಗು ಜನಿಸಿದ ಕೆಲ ಸಮಯದ ನಂತರ ಮತ್ತೆ ಜಿಮ್‌ನಲ್ಲಿ ಬೆವರು ಹರಿಸುತ್ತಾರೆ. ತೆಳ್ಳಗಾಗಿ ಮತ್ತೆ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಸಯೇಶಾ ಹೇಗಾಗಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳನ್ನು ಕಾಡಿತ್ತು. ಇದೀಗ ಫೋಟೋ ಶೇರ್ ಮಾಡುವ ಮೂಲಕ ಉತ್ತರ ಸಿಕ್ಕಿದೆ.
ಇತ್ತೀಚಿಗಷ್ಟೆ ನಿರ್ದೇಶಕ ಅಟ್ಲೀ (ಸೆಪ್ಟೆಂಬರ್ 21) 35ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಅದ್ದೂರಿಯಾಗಿ ಅಟ್ಲೀ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಸಾಕಷ್ಟು ಸೆಲೆಬ್ರಿಟಿಗಳಿಗೆ ಆಹ್ವಾನ ಇತ್ತು. ಅದೇ ರೀತಿ ಆರ್ಯ ಹಾಗೂ ಸಯೇಶಾ ಕೂಡ ಈ ಸೆಲಬ್ರೇಷನ್ನಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ಫೋಟೋ ಪೋಸ್ಟ್ ಮಾಡಿರುವ ಆರ್ಯ, "ಹುಟ್ಟುಹಬ್ಬದ ಶುಭಾಶಯಗಳು ಅಟ್ಲೀ. ನಿಮಗೆ ಶುಭವಾಗಲಿ. ನನ್ನ ಜೀವನದ ಅತ್ಯಂತ ಸ್ಮರಣೀಯ ರಾತ್ರಿಗೆ ತುಂಬಾ ಧನ್ಯವಾದಗಳು. ಲವ್ ಯು ಬೇಬಿ" ಎಂದು ಬರೆದುಕೊಂಡಿದ್ದಾರೆ.

ಹುಟ್ಟುಹಬ್ಬದ ಪಾರ್ಟಿಯ ಫೋಟೋಗಳು ವೈರಲ್ ಆಗಿವೆ. ಸಯೇಶಾ ಪತಿಯ ಜತೆ ನಿಂತಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಶೀಘ್ರವೇ ಅವರು ನಟನೆಗೆ ಮರಳಲಿ ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.
ಇನ್ನು ನಟಿ ಸಯೇಶಾಗೆ ಮಗು ಜನಿಸಿದ ನಂತರ ಪತಿ ಆರ್ಯ ವಿರುದ್ಧ ಆರೋಪವೊಂದು ಕೇಳಿ ಬಂದಿತ್ತು. ಜರ್ಮನಿಯಲ್ಲಿ ನೆಲೆಸಿರುವ ಶ್ರೀಲಂಕಾ ಮೂಲದ ತಮಿಳು ಮಹಿಳೆಗೆ ನಟ ಆರ್ಯ ಮೋಸ ಮಾಡಿದ್ದಾರೆ ಎನ್ನುವ ಗಂಭೀರವಾದ ಆರೋಪ ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಚೆನ್ನೈ ಪೊಲೀಸರಿಗೆ ದೂರು ನೀಡಿಲಾಗಿತ್ತು. ಈ ಪ್ರಕರಣದಲ್ಲಿ ನಿಜವಾದ ಆರೋಪಿಗಳನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ಆ ಮೂಲಕ ನಟ ಆರ್ಯ ನಿಟ್ಟುಸಿರು ಬಿಟ್ಟಿದ್ದರು.
ಇನ್ನು ಸಯೇಶಾ ಸಿನಿಮಾ ವಿಚಾರಕ್ಕೆ ಬರವುದಾದರೇ ತೆಲುಗು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಯೇಶಾ ಬಳಿಕ ಹಿಂದಿ, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಹಿಂದಿಯಲ್ಲಿ ಅಜಯ್ ದೇವಗನ್ ಜೊತೆ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ 'ಯುವರತ್ನ' ಸಿನಿಮಾದಲ್ಲಿ ಬಣ್ಣಹಚ್ಚುವ ಮೂಲಕ ಮೊದಲ ಬಾರಿಗೆ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಬಳಿಕ ಸಯೇಶಾ ಮತ್ತೆ ತೆರೆಮೇಲೆ ಮಿಂಚಿಲ್ಲ.
ಇನ್ನು ನಟ ಆರ್ಯ ಇತ್ತೀಚಿಗಷ್ಟೆ ಸರ್ಪಟ್ಟ ಪರಂಬರೈ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾದಲ್ಲಿ ಆರ್ಯ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಒಟಿಟಿಯಲ್ಲಿ ಬಿಡುಗಡೆಯಾಗಿರುವ ಸರ್ಪಟ್ಟ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆರ್ಯ ಮತ್ತು ಸಯೇಶಾ 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರ ಮದುವೆ ಸಮಾರಂಭದಲ್ಲಿ ಸ್ನೇಹಿತರು, ಕುಟುಂಬದರು ಮತ್ತು ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು. ಮದುವೆಯಾಗಿ 2 ವರ್ಷದ ಬಳಿಕ ಮೊದಲ ಮಗುವನ್ನು ಸ್ವಾಗತಿಸಿರುವ ಸಯೇಶಾ ಸದ್ಯದಲ್ಲೇ ಮತ್ತೆ ಬಣ್ಣ ಹಚ್ಚುವ ಸಾಧ್ಯತೆ ಇದೆ.


Click it and Unblock the Notifications











