Radhika Sarathkumar: ಫ್ರೆಂಚ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಸೌತ್ ಇಂಡಸ್ಟ್ರಿಯ ನಟಿ ರಾಧಿಕಾ ಶರತ್‌ಕುಮಾರ್
ನಟಿ ರಾಧಿಕಾ ಶರತ್ ಕುಮಾರ್ ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ತನಗೊಂದು ವಿಶೇಷ ಸ್ಥಾನ ಪಡೆದವರು. ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ರಾಧಿಕಾ ಶರತ್ ಕುಮಾರ್ ಅವರನ್ನು ಗುರುತಿಸದವರೇ ಇಲ್ಲ. ಕನ್ನಡ, ತೆಲುಗು, ತಮಿಳು ಸೇರಿದಂತೆ ಎಲ್ಲಾ ಭಾಷೆಯ ಸಿನಿಮಾಗಳಲ್ಲಿಯೂ ನಟಿ ತಮ್ಮ ಛಾಪು ಮೂಡಿಸಿದ್ದಾರೆ. ಈಗ ಮತ್ತೊಂದು ಸಾಧನೆ ಮಾಡಲು ಹೊರಟಿದ್ದಾರೆ.
ವಿದೇಶಿ ಸಿನಿಮಾರಂಗಕ್ಕೆ ಕಾಲಿಟ್ಟಿರುವ ನಟಿ ರಾಧಿಕಾ ಶರತ್ ಕುಮಾರ್ ಈಗ ಫ್ರೆಂಚ್ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದಾರೆ. ಜೊತೆಗೆ ತಾವೀಗ ಫ್ರಾನ್ಸ್‌ನಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವುದಾಗಿ ಫೋಟೋಗಳ ಮೂಲಕ ಮಾಹಿತಿ ನೀಡಿದ್ದಾರೆ.

ವಿದೇಶಿ ಸಿನಿಮಾಗಳಲ್ಲಿ ರಾಧಿಕಾ ಶರತ್ ಕುಮಾರ್
ಹಿರಿಯ ನಟಿ ರಾಧಿಕಾ ಶರತ್ ಕುಮಾರ್ ಸಿನಿಮಾಗಳಲ್ಲಿ ನಟಿಸುವ ಜೊತೆಗೆ ಇನ್ನೊಂದೆಡೆ ಧಾರಾವಾಹಿಗಳು, ಕಿರುತೆರೆಯಲ್ಲಿ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಕಷ್ಟು ಬ್ಯುಸಿಯಾಗಿರುವ ಅವರು ನಟಿ ರಾಧಿಕಾ ಈಗ ಫ್ರೆಂಚ್ ಸಿನಿಮಾದಲ್ಲಿ ನಟಿಸುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
ಸದ್ಯ ಫ್ರಾನ್ಸ್ ನಲ್ಲಿರುವ ರಾಧಿಕಾ ಫ್ರೆಂಚ್ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಹೊಸ ಪಯಣ ಶುರುವಾಗಿದೆ ಎಂದು ಹೇಳಿಕೊಂಡಿದ್ದಾರೆ. " ನಾನು ಫ್ರೆಂಚ್ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಮೊದಲ ದಿನ ಶೂಟಿಂಗ್‌ನಲ್ಲಿ ಭಾಗವಹಿಸಿದ್ದೆ. ಮೊದದ ದಿನದ ಹೊಸ ಅನುಭವಗಳು... ಈ ವಿಚಾರದಲ್ಲಿ ನನ್ನ ಪತಿ ಶರತ್‌ಕುಮಾರ್ ನನಗೆ ತುಂಬಾ ಪ್ರೋತ್ಸಾಹ ನೀಡಿದ್ದಾರೆ ಎಂದು ರಾಧಿಕಾ ನಟ ಶರತ್‌ಕುಮಾರ್‌ಗೆ ಧನ್ಯವಾದ ಹೇಳಿದ್ದಾರೆ. ಶೂಟಿಂಗ್ ವೇಳೆ ತೆಗೆದ ಫೋಟೋಗಳನ್ನೂ ಶೇರ್ ಮಾಡಿದ್ದಾರೆ.
ಈ ಫೋಟೋಗಳು ಮತ್ತು ಪೋಸ್ಟ್‌ಗಳನ್ನು ನೋಡಿದ ನೆಟಿಜನ್‌ಗಳು ಶೂಭಾಶಯಗಳನ್ನು ಹೇಳುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರಂತಹ ಯುವ ನಾಯಕಿಯರಷ್ಟೇ ಅಲ್ಲ. ರಾಧಿಕಾ ಅವರಂತಹ ಹಿರಿಯ ನಾಯಕಿಯರೂ ಜಾಗತಿಕ ಮಟ್ಟದಲ್ಲಿ ಸಿನಿಮಾ ಮಾಡುತ್ತಿರುವುದು ಸಂತಸ ತಂದಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ನಟಿ ರಾಧಿಕಾ ಶರತ್ ಕುಮಾರ್
ರಾಧಿಕಾ ಶರತ್ ಕುಮಾರ್ ಅವರು 1978 ರಲ್ಲಿ ಭಾರತಿರಾಜ ನಿರ್ದೇಶನದ ಕಿಝಕ್ಕೆ ಪೋಗುಂ ರೈಲ್ ಚಿತ್ರದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ಚಿತ್ರದ ಯಶಸ್ಸಿನ ನಂತರ ನಟಿ ಮತ್ತೆ ಹಿಂತಿರುಗಿ ನೋಡಿಯೇ ಇಲ್ಲ. ಕಿಝಕ್ಕೆ ಪೋಗುಮ್ ರೈಲ್ ರೋಮ್ಯಾಂಟಿಕ್ ಚಲನಚಿತ್ರವಾಗಿದ್ದು, ಸಿನಿಮಾದಲ್ಲಿ ಹೊಸಬರಾದ ಸುಧಾಕರ್ ಮತ್ತು ರಾಧಿಕಾ ನಟಿಸಿದ್ದರು. ಆಗಸ್ಟ್ 10, 1978 ರಲ್ಲಿ ಬಿಡುಗಡೆಯಾದ ಈ ಸಿನಿಮಾ ಚಿತ್ರಮಂದಿರಗಳಲ್ಲಿ 365 ದಿನಗಳ ಕಾಲ ಭರ್ಜರಿಯಾಗಿ ಓಡಿತ್ತು. ಈ ಚಲನಚಿತ್ರವನ್ನು ತೆಲುಗಿನಲ್ಲಿ ತೂರ್ಪು ವೆಲ್ಲೆ ರೈಲು (1979) ಎಂದು, ಹಿಂದಿಯಲ್ಲಿ ಭಾರತಿರಾಜ ಅವರೇ ಸವೇರೇ ವಾಲಿ ಗಾಡಿ (1986) ಎಂದು ರಿಮೇಕ್ ಮಾಡಿದ್ದರು.
ರಾಧಿಕಾ ಶರತ್ ಕುಮಾರ್ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಖ್ಯಾತ ನಾಯಕರ ಎದುರು ನಾಯಕಿಯಾಗಿ ನಟಿಸಿ ಬಹುಭಾಷಾ ನಟಿಯಾಗಿ ಮಿಂಚಿದ್ದಾರೆ. ಅದಾದ ನಂತರವೂ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ವಿವಿಧ ಪಾತ್ರಗಳಲ್ಲಿ ನಟಿಸುತ್ತಲೇ ಇದ್ದಾರೆ. ಅವರು 2001 ರಲ್ಲಿ ನಟ ಶರತ್ ಕುಮಾರ್ ಅವರನ್ನು ವಿವಾಹವಾದರು.
ತಮ್ಮ 45 ವರ್ಷಗಳ ವೃತ್ತಿ ಜೀವನದಲ್ಲಿ ಹಲವು ಯಶಸ್ಸನ್ನು ಕಂಡಿರುವ ರಾಧಿಕಾ ಶರತ್ ಕುಮಾರ್ ಕೆಲವು ಚಿತ್ರಗಳನ್ನೂ ನಿರ್ಮಿಸಿದ್ದಾರೆ. ದೇಶಿ ಭಾಷೆಗಳನ್ನು ಮೀರಿಸಿ ಫ್ರೆಂಚ್ ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷ. ಸದ್ಯ ರಾಧಿಕಾ ಶರತ್ ಕುಮಾರ್ ಚಿತ್ರದಲ್ಲಿ ನಟಿಸಲು ಫ್ರಾನ್ಸ್ ಗೆ ತೆರಳಿದ್ದಾರೆ.


Click it and Unblock the Notifications











