ಶಂಕರ್ ಮುಂದಿನ ಚಿತ್ರದಲ್ಲಿರುವ ಜೋಡಿ ಗುಟ್ಟು ರಟ್ಟು
ಖ್ಯಾತ ನಿರ್ದೇಶಕ ಶಂಕರ್ ತಮ್ಮ ಮುಂದಿನ ಚಿತ್ರದ ಗುಟ್ಟನ್ನು ರಟ್ಟುಮಾಡಿದ್ದಾರೆ. ವಿಕ್ರಮ್ ಹಾಗೂ ಸಮಂತಾ ಜೋಡಿಯನ್ನು ತಮ್ಮ ಹೊಸ ಚಿತ್ರಕ್ಕೆ ಆಯ್ದುಕೊಂಡಿರುವ ಶಂಕರ್, ಸದ್ಯದಲ್ಲೇ ಆ ಚಿತ್ರವನ್ನು ಪ್ರಾರಂಭಿಸಲಿದ್ದಾರೆ. ಈ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ತಮ್ಮ 'ಬ್ಲಾಗ್'ನಲ್ಲಿ ಹೊರಹಾಕಿದ್ದಾರೆ. ಇದೊಮದು ರೊಮ್ಯಾಂಟಿಕ್ ಥ್ರಿಲ್ಲರ್ ಎಂಬುದು ತೀರಾ ವಿಶೇಷ.
ಬರುವ ತಿಂಗಳು ಜುಲೈ- 2012 ರಲ್ಲಿ ಸೆಟ್ಟೇರಲಿರುವ ಈ ಚಿತ್ರದ ಹೆಸರು 'ஐ' (ಕನ್ನಡದಲ್ಲಿ ಐ). ತಮಿಳಿನಲ್ಲಿ 'ಐ' ಅಂದರೆ ಬ್ಯೂಟಿ, ಸೌಂದರ್ಯ, ಕಿಂಗ್, ಗುರು, ಮೃದು, ಸೂಕ್ಷ್ಮ, ಮುಂತಾದ ಅರ್ಥಗಳಿವೆ. ಶಂಕರ್ ಚಿತ್ರದ ಕಥೆ ಸ್ಪಷ್ಟವಾಗಿ ಯಾವ ಅರ್ಥ ಕೊಡುತ್ತಿದೆ ಎಂಬುದನ್ನು ಚಿತ್ರ ನೋಡಿದ ಮೇಲೆ ಅರ್ಥೈಸಿಕೊಳ್ಳಬಹುದು.
ಅಂದಹಾಗೆ, ಈ ಚಿತ್ರದಲ್ಲಿ ಹಾಸ್ಯನಟ ಸಂತಾನಂ, ಮಲಯಾಳಂ ನಟ ಸುರೇಶ್ ಗೋಪಿ, ರಾಮ್ ಕುಮಾರ್ ಮುಂತಾದವರೂ ಕೂಡ ನಟಿಸಲಿದ್ದಾರೆ ಎಂದು ತಮ್ಮ 'ಬ್ಲಾಗ್' ನಲ್ಲಿ ಮಾಹಿತಿ ಬಹಿರಂಗಗೊಳಿಸಿದ್ದಾರೆ ನಿರ್ದೇಶಕ ಶಂಕರ್. ವಿಶೇಷವೆಂದರೆ ಈ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಸಂಗೀತ ಸಂಯೋಜಿಸಲಿದ್ದಾರೆ.
ಖ್ಯಾತ ಕ್ಯಾಮರಾಮನ್ ಪಿಸಿ ಶ್ರೀರಾಮ್ ಕ್ಯಾಮರಾ ಕೆಲಸ ನೋಡಿಕೊಳ್ಳಲಿದ್ದು ಹಾಲಿವುಡ್ ಘಟಾನುಘಟಿಗಳಲ್ಲಿ ಕೆಲವರು ಈ ಚಿತ್ರದಲ್ಲಿ ತಂತ್ರಜ್ಞರಾಗಿ ಕೆಲಸ ಮಾಡಲಿದ್ದಾರೆ. ಸಿಕ್ಕ ಮಾಹಿತಿಯಂತೆ ಈ ಚಿತ್ರದ ಕಾಸ್ಟ್ಯೂಮ್ ಡಿಸೈನರ್ ಆಗಿ ಮೆನ್ ಇನ್ ಬ್ಲಾಕ್ ಖ್ಯಾತಿಯ 'ಮೇರಿ ವಾಟ್' ಇದ್ದಾರೆ. ಜೊತೆಗೆ ಪೀಟರ್ ಮಿಂಗ್ ಹಾಗೂ ಅನಲ್ ಅರಸು ಸ್ಟಂಟ್ ನಿರ್ವಹಿಸಲಿದ್ದಾರೆ.
ಇಷ್ಟೇ ಅಲ್ಲ, ಪ್ರಸಿದ್ಧ ಎಡಿಟರ್ ಅಂತೋನಿ ಹಾಗೂ ಕಲಾನಿರ್ದೇಶಕ ಮುತ್ತುರಾಜ್ ಕೂಡ ಈ ಚಿತ್ರದಲ್ಲಿ ಕೈಜೋಡಿಸಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ, ಹ್ಯಾರಿ ಪೋಟರ್ ಸಿರೀಸ್ ಗೆ 'VFX' ನಿರ್ವಹಿಸಿದ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡಲಿದೆ. ಇಷ್ಟೆಲ್ಲಾ ಇದೆ ಅಂದಮೇಲೆ ಬರಲಿರುವ ಶಂಕರ್ ಚಿತ್ರ ಹೇಗಿರಬಹುದೆಂದು ಊಹಿಸಿಕೊಳ್ಳುವುದು ಕಷ್ಟವೇನಲ್ಲ. ಒಟ್ಟಿನಲ್ಲಿ, ವಿಕ್ರಮ್ ಹಾಗೂ ಸಮಂತಾ ಜೋಡಿ ಲಕ್ಕಿ ಎನ್ನಬಹುದು. (ಏಜೆನ್ಸೀಸ್)


Click it and Unblock the Notifications











