"ಆಕೆ ನನ್ನ ಮಗಳಲ್ಲ, ಮದುವೆಯಾದ ವರ್ಷದೊಳಗೆ ನಮ್ಮ ಡಿವೋರ್ಸ್ ಆಯ್ತು"; ಸುಕನ್ಯಾ
ತಮಿಳು ನಟಿ ಸುಕನ್ಯಾ ದಕ್ಷಿಣದ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಕಮಲ್ ಹಾಸನ್, ವಿಜಯ್‌ಕಾಂತ್, ರವಿಚಂದ್ರನ್ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ಆಕೆ ನಟಿಸಿದ್ದಾರೆ. ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ.
2002ರಲ್ಲಿ ಶ್ರೀಧರ್ ರಾಜಗೋಪಾಲ್ ಎಂಬುವವರ ಕೈ ಹಿಡಿದ ನಟಿ ಸುಕನ್ಯಾ ಕೆಲವೇ ದಿನಗಳಲ್ಲಿ ಡಿವೋರ್ಸ್ ಪಡೆದಿದ್ದರು. ಬಹಳ ದಿನಗಳ ಕಾಲ ಇಬ್ಬರ ಡಿವೋರ್ಸ್ ಅರ್ಜಿ ವಿಚಾರಣೆ ನಡೆಯಿತು. ಇದೆಲ್ಲದರ ನಡುವೆ ಸುಕನ್ಯಾ ಮಗಳು ಎಂದು ಹೇಳಿ ಫೋಟೊವೊಂದು ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೆ ಈ ವಿಚಾರದ ಬಗ್ಗೆ ಸುದ್ದಿ ಆಗುತ್ತದೆ. ಆ ಬಗ್ಗೆ ಖುದ್ದು ಸುಕನ್ಯಾ ಪ್ರತಿಕ್ರಿಯಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳಿಂದ ನನ್ನ ಮಗಳು ಎಂದು ಹೇಳಿ ಹರಿದಾಡುತ್ತಿರುವ ಫೋಟೊ ನಿಜವಲ್ಲ ಎಂದು ಸುಕನ್ಯಾ ಹೇಳಿದ್ದಾರೆ. "ನಾನು ಕೂಡ ಆ ಫೋಟೊ ನೋಡಿದ್ದೀನಿ. ಆದರೆ ಆಕೆ ನನ್ನ ಮಗಳಲ್ಲ. ಅದು ನನ್ನ ಸಹೋದರಿ ಮಗಳು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿವರಣೆ ನೀಡಿದ್ದೀನಿ. ಆಕೆ ನನ್ನ ಸಹೋದರಿ ಮಗಳು ಎಂದು ಟ್ವಿಟರ್‌ನಲ್ಲಿ ಕೂಡ ಫೋಟೊಗಳನ್ನು ಹಾಕಿದ್ದೇನೆ. ಅದೊಂದೇ ಫೋಟೊ ಅಲ್ಲ ಹಲವು ಫೋಟೊಗಳನ್ನು ಹಾಕಿದ್ದೀನಿ"
"ನನಗೆ ಮದುವೆಯಾದ ಕೆಲವೇ ದಿನಗಳಲ್ಲಿ ಡಿವೋರ್ಸ್ ಆಯಿತು. ಒಂದು ವರ್ಷ ಕೂಡ ನಾವು ಒಟ್ಟಿಗೆ ಇರಲಿಲ್ಲ. ಅದು ಮುಗಿದ ಅಧ್ಯಾಯ. ಕೆಲ ತಿಂಗಳ ಬಳಿಕ ನಾವು ವಿಚ್ಛೇದನಕ್ಕಾಗಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೆವು. ಆದರೆ ವಿಚ್ಛೇದನ ಪಡೆಯಲು ಬಹಳ ಸಮಯವಾಯಿತು. ಆದರೆ ನನ್ನ ಸಹೋದರಿ ಮಗಳ ಫೋಟೊ ಹಾಕಿ ನನ್ನ ಮಗಳು ಎಂದು ಪ್ರಚಾರ ಮಾಡುತ್ತಿದ್ದಾರೆ. ಕೆಲವೊಮ್ಮೆ ಇದನ್ನು ನೋಡಿ ಆಕೆ, ದೊಡ್ಡಮ್ಮ ನಿಮ್ಮಿಂದ ನಾನು ಫುಲ್ ಫೇಮಸ್ ಆಗ್ಬಿಟ್ಟಿದ್ದೀನಿ ಎಂದು ಹೇಳಿಕೊಳ್ಳುತ್ತಾಳೆ" ಎಂದಿದ್ದಾರೆ.
ಸಿಂಗಲ್ ಪೇರೆಂಟ್ ಆಗಿ ಸುಕನ್ಯಾ ಮಗಳನ್ನು ಬೆಳೆಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ ಎಂದು ನಿರೂಪಕಿ ಕೇಳಿದ್ದಾರೆ. ಅದಕ್ಕೆ ಸುಕನ್ಯಾ "ಎಷ್ಟೇ ಹೇಳಿದರೂ ಸುಳ್ಳು ಸುದ್ದಿ ಹಬ್ಬಿಸುವುದು ನಿಲ್ಲಿಸುತ್ತಿಲ್ಲ. ನನಗೂ ಹೇಳಿ ಹೇಳಿ ಸಾಕಾಗಿದೆ. ಇದಕ್ಕಿಂತ ಮೇಲೆ ಏನು ಹೇಳೋಕೆ ಸಾಧ್ಯವಿಲ್ಲ" ಎಂದು ವಿವರಿಸಿದ್ದಾರೆ.

ತಮಿಳುನಾಡಿನ ಮಧುರೆಯಲ್ಲಿ ಹುಟ್ಟಿ ಬೆಳೆದ ಸುಕನ್ಯಾ, 'ಪುದು ನೆಲ್ಲು ಪುದು ನಾಟು' ಎನ್ನುವ ಚಿತ್ರದಲ್ಲಿ ಮೊದಲಿಗೆ ನಟಿಸಿದರು. ಬಳಿಕ ಬಂದ 'ಚಿನ್ನ ಗೌಂಡರ್' ಸಿನಿಮಾ ಹಿಟ್ ಆಗಿತ್ತು. ಮುಂದೆ 'ಇಂಡಿಯನ್' ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಆಕೆ ಬಣ್ಣ ಹಚ್ಚಿದ್ದರು. ಕನ್ನಡದಲ್ಲಿ 'ಗುರು-ಬ್ರಹ್ಮ' ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟಿಸಿದ್ದರು. ಉಮಾ, ಸುಮಾ ಆಗಿ ಡಬಲ್ ರೋಲ್ ಪ್ಲೇ ಮಾಡಿದ್ದರು.
ಕನ್ನಡದಲ್ಲಿ 'ಗುರು-ಬ್ರಹ್ಮ' ಬಳಿಕ ರೂಪಾ ಅಯ್ಯರ್ ನಿರ್ದೇಶನದ 'ಚಂದ್ರ' ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ನಟಿಯಾಗಿ ಮಾತ್ರವಲ್ಲದೇ ಸುಕನ್ಯಾ ಗಾಯಕಿಯಾಗಿ ಕಂಠದಾನ ಕಲಾವಿದೆಯಾಗಿಯೂ ಗುರ್ತಿಸಿಕೊಂಡಿದ್ದಾರೆ. ಕಿರುತೆರೆ ಕಾರ್ಯಕ್ರಮಗಳಲ್ಲಿ ಕೂಡ ಆಕೆ ಮಿಂಚಿ ಮೋಡಿ ಮಾಡಿದ್ದಾರೆ. ಕೊನೆಯದಾಗಿ ಕಳೆದ ವರ್ಷ ತಮಿಳಿನ 'ಥೀ ಇವನ್' ಚಿತ್ರದಲ್ಲಿ ಸುಕನ್ಯಾ ಕಾಣಿಸಿಕೊಂಡಿದ್ದರು.


Click it and Unblock the Notifications











