ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್‌ಗೆ ತಮಿಳು ನಟ ಸೂರ್ಯ ಸವಾಲ್?
ಒಂದು ಸಿನಿಮಾ ಮುಹೂರ್ತ ಮಾಡಿ, ಒಂದು ತಂಡವನ್ನು ಒಟ್ಟುಗೂಡಿಸಿ ಚಿತ್ರ ಸೆರೆ ಹಿಡಿದು ಪ್ರಚಾರ ಮಾಡಿ ತೆರೆಗೆ ತರುವುದು ಸವಾಲಿನ ಕೆಲಸ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ದೊಡ್ಡ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಹೆಚ್ಚು ಚಿತ್ರಮಂದಿರಕ್ಕೆ ಬರ್ತಿದ್ದಾರೆ. ಸಣ್ಣ ಚಿತ್ರಗಳ ವಿಚಾರದಲ್ಲಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
ಸ್ಟಾರ್ ನಟರೆಲ್ಲಾ ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಹಿಂದೆ ಬಿದ್ದಿದ್ದಾರೆ. ಯೂನಿವರ್ಸಲ್ ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡು ದೊಡ್ಡದಾಗಿ ಚಿತ್ರೀಕರಿಸಿ ಬೇರೆ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡುವ ಪ್ರಯತ್ನ ಜೋರಾಗಿದೆ. ಈಗಾಗಲೇ ಶಿವಣ್ಣನ ಸಿನಿಮಾಗಳು ಪರಭಾಷೆಗಳಲ್ಲಿ ಸದ್ದು ಮಾಡಲು ಶುರು ಮಾಡಿದೆ.

ತಮಿಳು ನಟ ಸೂರ್ಯ ಹಾಗೂ ಶಿವಣ್ಣ ಬಾಕ್ಸಾಫೀಸ್‌ನಲ್ಲಿ ಎದುರು ಬದಿರಾಗುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಇಬ್ಬರೂ ಒಟ್ಟೊಟ್ಟಿಗೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸೂರ್ಯ ನಟನೆಯ 'ಕಂಗುವ' ಸಿನಿಮಾ ಬಹಳ ಹಿಂದೆಯೇ ಬರಬೇಕಿತ್ತು. ಪದೇ ಪದೆ ರಿಲೀಸ್ ಡೇಟ್ ಬದಲಾಗುತ್ತಿದೆ. ಅಕ್ಟೋಬರ್ 10ಕ್ಕೆ ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡಲಾಗಿತ್ತು. ರಜನಿಕಾಂತ್ ಕಾರಣಕ್ಕೆ ರಿಲೀಸ್ ಡೇಟ್ ಬದಲಾಗಿದೆ.
ದಸರಾ ಸಂಭ್ರಮದಲ್ಲಿ ದೇಶ ವಿದೇಶದ ಭಾಷೆಗಳಲ್ಲಿ 'ಕಂಗುವ' ಸಿನಿಮಾ ತೆರೆಗೆ ತರಲು ಚಿತ್ರತಂಡ ಮುಂದಾಗಿತ್ತು. ಆದರೆ ಅದೇ ದಿನ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿದೆ. ಹಾಗಾಗಿ ಒಂದು ತಿಂಗಳು ತಡವಾಗಿ 'ಕಂಗುವ' ತೆರೆಗೆ ಬರಲಿದ್ದಾರೆ. ನವೆಂಬರ್ 15ಕ್ಕೆ ಸಿನಿಮಾ ರಿಲೀಸ್ ಮಾಡುವ ಮಾತುಗಳು ಕೇಳಿಬರ್ತಿದೆ.
ಕೆಲವೇ ಗಂಟೆಗಳಲ್ಲಿ ಅಧಿಕೃತವಾಗಿ 'ಕಂಗುವ' ಚಿತ್ರದ ಹೊಸ ರಿಲೀಸ್ ಡೇಟ್ ಘೋಷಣೆ ಆಗಲಿದೆ. ನವೆಂಬರ್ 15ಕ್ಕೆ ಸಿನಿಮಾ ರಿಲೀಸ್ ಬಹುತೇಕ ಖಚಿತ ಎನ್ನಲಾಗ್ತಿದೆ. ಆದರೆ ಅದೇ ದಿನ ಶಿವಣ್ಣ ನಟನೆಯ 'ಭೈರತಿ ರಣಗಲ್' ಸಿನಿಮಾ ತೆರೆಗೆ ಬರುವುದು ಪಕ್ಕಾ ಆಗಿದೆ. ಈಗಾಗಲೇ ಚಿತ್ರತಂಡ ರಿಲೀಸ್ ಡೇಟ್ ಘೋಷಣೆ ಮಾಡಿದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 15ಕ್ಕೆ 'ಭೈರತಿ ರಣಗಲ್' ಬರಬೇಕಿತ್ತು. ಚಿತ್ರೀಕರಣ ಕೊಂಚ ತಡವಾಗಿ ಪೋಸ್ಟ್‌ಪೋನ್ ಆಗಿತ್ತು. ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಸ್ವತಃ ಶಿವಣ್ಣ ಚಿತ್ರ ನಿರ್ಮಿಸಿದ್ದಾರೆ. 'ಮಫ್ತಿ' ಚಿತ್ರದ ಪ್ರೀಕ್ವೆಲ್ ಇದಾಗಿದ್ದು ನರ್ತನ್ ಆಕ್ಷನ್ ಕಟ್ ಹೇಳಿದ್ದಾರೆ. ಮಾಫಿಯಾ ಡಾನ್ ಭೈರತಿ ರಣಗಲ್ ಹಿನ್ನೆಲೆ ಏನು ಎನ್ನುವುದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ.

'ಕಂಗುವ' ಹಾಗೂ 'ಭೈರತಿ ರಣಗಲ್' ಎರಡೂ ಚಿತ್ರಗಳು ಭಾರೀ ಕುತೂಹಲ ಮೂಡಿಸಿದೆ. 'ಮಫ್ತಿ' ಕನ್ನಡದಲ್ಲಿ ಮಾತ್ರ ತೆರೆಗೆ ಬಂದು ಗೆದ್ದಿತ್ತು. ಆದರೆ ಪ್ರೀಕ್ವೆಲ್ ಅನ್ನು 5 ಆ ಭಾಷೆಗಳಲ್ಲಿ ಕಟ್ಟಿಕೊಡುತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್, ಟೀಸರ್, ಸಾಂಗ್ಸ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ವಕೀಲನಾಗಿದ್ದ ರಣಗಲ್ ದೊಡ್ಡ ಮಾಫಿಯಾ ಡಾನ್ ಆಗಲು ಕಾರಣ ಏನು? ಎನ್ನುವ ಕಥೆ ಚಿತ್ರದಲ್ಲಿದೆ.
ಶಿವ ನಿರ್ದೇಶನದ ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಕಂಗುವ'. ಇದೊಂದು ಕಾಸ್ಟ್ಯೂಮ್ ಡ್ರಾಮಾ ಆಗಿದ್ದು ನಟ ಸೂರ್ಯ ಟೈಟಲ್ ರೋಲ್‌ನಲ್ಲಿ ಅಬ್ಬರಿಸಿದ್ದಾರೆ. ಬುಡಕಟ್ಟು ಜನಾಂಗಗಳ ಕಥೆ ಚಿತ್ರದಲ್ಲಿದೆ. ಉಧಿರನ್ ಆಗಿ ಕಂಗುವ ಸೂರ್ಯ ಎದುರು ಬಾಬಿ ಡಿಯೋಲ್ ಅಬ್ಬರಿಸಿದ್ದಾರೆ. ಚಿತ್ರವಿಚಿತ್ರ ವೇಷಭೂಷಣಗಳಲ್ಲಿ ಇಬ್ಬರೂ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ.
ಕೆ.ಇ.ಜ್ಞಾನವೇಲ್ ರಾಜ, ವಿ.ವಂಶಿ ಕೃಷ್ಣಾ ರೆಡ್ಡಿ ಹಾಗೂ ಪ್ರಮೋದ್ ಉಪ್ಪಲಪಾಟಿ 'ಕಂಗುವ' ಚಿತ್ರಕ್ಕೆ ಹಣ ಹೂಡಿದ್ದಾರೆ. ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ.


Click it and Unblock the Notifications











