'ಅಸುರನ್' ಕನ್ನಡ ರೀಮೆಕ್ ನಿಂತಿದ್ದೇಕೆ? ಶಿವಣ್ಣ ಹೇಳಿದ್ದಿಷ್ಟು
5 ವರ್ಷಗಳ ಹಿಂದೆ ಬಂದ ತಮಿಳಿನ 'ಅಸುರನ್' ಸಿನಿಮಾ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ವೆಟ್ರಿಮಾರನ್ ನಿರ್ದೇಶನದಲ್ಲಿ ಧನುಷ್ ಚಿತ್ರದಲ್ಲಿ ನಟಿಸಿದ್ದರು. ಈ ಪೀರಿಯಡ್ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಧನುಷ್ ನಟನೆಗೆ ರಾಷ್ಟ್ರ ಪ್ರಶಸ್ತಿ ಒಲಿದಿತ್ತು. ಈ ಚಿತ್ರವನ್ನು ಕನ್ನಡದಲ್ಲಿ ರೀಮೆಕ್ ಮಾಡುವ ಮಾತುಗಳು ಹಿಂದೆ ಕೇಳಿಬಂದಿತ್ತು.
ತಮಿಳಿನಲ್ಲಿ ಸೂಪರ್ ಆಗಿದ್ದ ಸಿನಿಮಾ ತೆಲುಗಿಗೆ ರೀಮೆಕ್ ಆಗಿತ್ತು. ವಿಕ್ಟರಿ ವೆಂಕಟೇಶ್ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದರು. ಇದೇ ಕಥೆಯನ್ನು ಒಂದಷ್ಟು ಬದಲಾವಣೆಯೊಂದಿಗೆ ಕನ್ನಡದಲ್ಲಿ ರೀಮೆಕ್ ಮಾಡುವ ಚರ್ಚೆ ನಡೆದಿತ್ತು. ಹೀರೊ ಆಗಿ ನಟಿಸಲು ಶಿವಣ್ಣನನ್ನು ಅಪ್ರೋಚ್ ಮಾಡಲಾಗಿತ್ತು. ಸೆಂಚುರಿ ಸ್ಟಾರ್ ಕೂಡ ಆಸಕ್ತಿ ತೋರಿಸಿದ್ದರು.

ಮೂಲ ಚಿತ್ರವನ್ನು ನಿರ್ದೇಶಿಸಿದ ವೆಟ್ರಿಮಾರನ್ ಕನ್ನಡದಲ್ಲಿ ಚಿತ್ರ ನಿರ್ಮಿಸಲು ಮುಂದಾಗಿದ್ದರು. 'ಸವಾರಿ' ಹಾಗೂ 'ಪೃಥ್ವಿ' ರೀತಿಯ ಸಿನಿಮಾಗಳನ್ನು ಕಟ್ಟಿಕೊಟ್ಟ ಜೇಕಬ್ ವರ್ಗೀಸ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎನ್ನಲಾಗಿತ್ತು. ಈ ಸುದ್ದಿ ಕೇಳಿ ದೊಡ್ಮನೆ ಅಭಿಮಾನಿಗಳು ಖುಷಿಯಾಗಿದ್ದರು. ಆದರೆ ಬಳಿಕ ಇದ್ದಕ್ಕಿದಂತೆ ಈ ಸಿನಿಮಾ ಚರ್ಚೆ ನಿಂತು ಹೋಗಿತ್ತು.
ಇತ್ತೀಚೆಗೆ ತಮಿಳು ಸಂದರ್ಶನದಲ್ಲಿ ಶಿವರಾಜ್‌ಕುಮಾರ್ 'ಅಸುರನ್' ರೀಮೆಕ್ ನಿಂತು ಹೋಗಲು ಕಾರಣ ಏನು ಎನ್ನುವುದನ್ನು ವಿವರಿಸಿದ್ದಾರೆ. ತಮಿಳಿನಲ್ಲಿ ನನಗೆ ಧನುಷ್ ಸಿನಿಮಾಗಳು ಅಂದರೆ ಬಹಳ ಇಷ್ಟ. 'ಅಸುರನ್' ನನ್ನ ಆಲ್‌ಟೈಮ್ ಫೇವರಿಟ್. ಸಾಮಾನ್ಯವಾಗಿ ಸ್ಟಾರ್ ನಟರು ವಯಸ್ಸಾದ ಪಾತ್ರಗಳನ್ನು ಮಾಡುವುದು ಬೇಡ ಎನ್ನುತ್ತಾರೆ. ಆದರೆ ಧನುಷ್ ಅಂತದೊಂದು ಪ್ರಯತ್ನ ಮಾಡಿ ಗೆದ್ದಿದ್ದರು. 'ಅಸುರನ್' ರೀಮೆಕ್ ಮಾಡುವ ಆಸೆ ನನಗಿದೆ.
ಈ ಹಿಂದೆ 'ಅಸುರನ್' ರೀಮೆಕ್ ನನ್ನ ಬಳಿ ಬಂದಿತ್ತು. ಆದರೆ ಕೋವಿಡ್ ಕಾರಣದಿಂದ ಅದು ಮುಂದಕ್ಕೆ ಹೋಗಲಿಲ್ಲ. ಬಳಿಕ ನಾನು 'ವೇದ' ಚಿತ್ರದಲ್ಲಿ ನಟಿಸಿದೆ. ಹೆಚ್ಚು ಕಡಿಮೆ ಅದೇ ರೀತಿ ಎರಡು ಶೇಡ್‌ಗಳಿರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಅದರಲ್ಲಿ ಒಂದು 'ಅಸುರನ್' ರೀತಿ ಅನ್ನಿಸುತ್ತೆ. ಆದರೆ ಅದು ಬೇರೆಯದೇ ಕಥೆ. ಹೆಣ್ಣು ಪಾತ್ರಗಳ ಸುತ್ತಾ ನನ್ನ ಪಾತ್ರ ಇರುತ್ತದೆ. 'ವೇದ' ಮಾಡಿದ ಬಳಿಕ 'ಅಸುರನ್' ರೀಮೆಕ್ ಮಾಡುವ ಬಗ್ಗೆ ಹೆಚ್ಚು ಆಲೋಚಿಸಲಿಲ್ಲ ಎಂದಿದ್ದಾರೆ.

ಇನ್ನು ತಾವು ಧನುಷ್ ಮಾಡಿದ 'ಅಸುರನ್' ರೀಮೆಕ್ ಮಾಡುವ ಆಸೆ ವ್ಯಕ್ತಪಡಿಸಿದ ಶಿವಣ್ಣ, ತಮ್ಮ ಎರಡು ಸಿನಿಮಾಗಳು ಧನುಷ್ ರೀಮೆಕ್ ಮಾಡಿದರೆ ಚೆಂದ ಎಂದು ಹೇಳಿದ್ದಾರೆ. 'ಟಗರು' ಸಿನಿಮಾ ಮಾಡಿದೆ. ಬಹಳ ರಿಯಲಿಸ್ಟಿಕ್ ಆಗಿರುವ ಸಿನಿಮಾ. ಅದನ್ನು ತಮಿಳಿನಲ್ಲಿ ವಿಕ್ರಂ ಪ್ರಭು ಮಾಡಿದ್ದರು. ಆ ಚಿತ್ರದಲ್ಲಿ ಧನುಷ್ ನಟಿಸಿದ್ದರೆ ಚೆನ್ನಾಗಿರುತ್ತಿತ್ತು. ಅದೇ ರೀತಿ ನಾನು ಮಾಡಿದ್ದ 'ರಾಕ್ಷಸ' ಚಿತ್ರ ಧನುಷ್ ಮಾಡಿದರೆ ಚೆಂದ ಎಂದಿದ್ದಾರೆ.
ಸದ್ಯ ಶಿವಣ್ಣ ತಮಿಳಿನಲ್ಲಿ ಧನುಷ್ ಜೊತೆ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಕನ್ನಡಕ್ಕೂ ಚಿತ್ರ ಡಬ್ ಆಗಿ ತೆರೆಗೆ ಬರಲಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಆದರೆ ಟ್ರೈಲರ್‌ನಲ್ಲಿ ಶಿವಣ್ಣ ಹೆಚ್ಚು ಕಾಣಿಸಿಕೊಂಡಿಲ್ಲ. ಒಂದೇ ಒಂದು ಫ್ರೇಮ್‌ನಲ್ಲಿ ಬಂದು ಹೋಗುತ್ತಾರೆ. ಇದು ಕನ್ನಡ ಪ್ರೇಕ್ಷಕರಿಗೆ ಬೇಸರ ತಂದಿದೆ.
'ಜೈಲರ್' ಚಿತ್ರದ ಮೂಲಕ ಕಾಲಿವುಡ್ ಪ್ರವೇಶಿಸಿದ ಶಿವಣ್ಣ ಮ್ಯಾಜಿಕ್ ಮಾಡಿದ್ದರು. ನರಸಿಂಹ ಪಾತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ಒಳ್ಳೆ ಪಾತ್ರ ಸಿಕ್ಕಿದೆ. ನೇರವಾಗಿ ತಮಿಳು ಸಿನಿಮಾಗಳಲ್ಲಿ ನಟಿಸುವ ಬಗ್ಗೆಯೂ ಚರ್ಚೆ ನಡೀತಿದೆ. ಈಗಾಗಲೇ 2 ಸಿನಿಮಾಗಳು ಮಾತುಕತೆ ಹಂತದಲ್ಲಿದೆ. ತೆಲುಗಿನಲ್ಲಿ ರಾಮ್‌ಚರಣ್ ಜೊತೆಗೂ ನಟಿಸೋಕೆ ಮುಂದಾಗಿದ್ದಾರೆ.


Click it and Unblock the Notifications











