ತಮಿಳು ಸಿನಿಮಾ ಸೆಟ್‌ನಲ್ಲಿ ಶಿವಣ್ಣ ಸಖತ್ ಫನ್; ಅಲ್ಲೇ ವೆಡ್ಡಿಂಗ್ ಆನಿವರ್ಸರಿ ಸೆಲೆಬ್ರೇಷನ್
ಕನ್ನಡ ನಟ ಶಿವರಾಜ್‌ಕುಮಾರ್ ಸದ್ಯ ತೆಲುಗು, ತಮಿಳು ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಬರೀ ಅತಿಥಿ ಪಾತ್ರ ಮಾತ್ರವಲ್ಲ ಹೀರೊ ಆಗಿ ಬಣ್ಣ ಹಚ್ಚಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಕೂಡ ಮಿಂಚುತ್ತಿದ್ದಾರೆ. ಸದ್ಯ ತಮಿಳಿನಲ್ಲಿ ಇನ್ನು ಹೆಸರಿಡದ ಚಿತ್ರದಲ್ಲಿ ಶಿವಣ್ಣ ನಟಿಸುತ್ತಿದ್ದು ಮೇಕಿಂಗ್ ವೀಡಿಯೋ ರಿಲೀಸ್ ಆಗಿದೆ. ಸೆಟ್‌ನಲ್ಲಿ ಸೆಂಚುರಿ ಸ್ಟಾರ್ ಸಿಕ್ಕಾಪಟ್ಟೆ ಫನ್ ಮಾಡ್ತಾ ಎಂಜಾಯ್ ಮಾಡಿದ್ದಾರೆ.
ಸೂಪರ್ ಹಿಟ್ 'ಟೂರಿಸ್ಟ್ ಫ್ಯಾಮಿಲಿ' ಸಿನಿಮಾ ನಿರ್ದೇಶಕ ಅಬಿಶಾನ್ ಜೀವಿಂತ್ ಹೀರೊ ಆಗಿ ನಟಿಸುತ್ತಿರುವ ಸಿನಿಮಾ ಇದು. ಅವರ ಶಿಷ್ಯ ಗೌತಮ್ ಶಿವರಾಮನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಂದೆ ಮಗನ ಬಾಂಧವ್ಯದ ಕಥೆ ಚಿತ್ರದಲ್ಲಿದೆ. ಅಬಿಶಾನ್‌ಗೆ ತಂದೆಯಾಗಿ ಶಿವರಾಜ್‌ಕುಮಾರ್ ನಟಿಸುತ್ತಿರುವುದು ವಿಶೇಷ. ಡ್ರಾಮಾ ಕಂಪನಿ ಬ್ಯಾನರ್ ಅಡಿಯಲ್ಲಿ ಬಾಲಮುರುಗನ್ ಎಂಬುವವರು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸೆಟ್‌ನಲ್ಲಿ ಶಿವಣ್ಣ ಎನರ್ಜಿ ಹೇಗಿರುತ್ತೆ ಎನ್ನುವುದನ್ನು ತೋರಿಸಲು ಸ್ಪೆಷಲ್ ಮೇಕಿಂಗ್ ವಿಡಿಯೋ ಹಂಚಿಕೊಂಡಿದೆ ಚಿತ್ರತಂಡ.

ಸೆಟ್‌ನಲ್ಲಿ ಕನ್ನಡ ಹಾಡುಗಳನ್ನು ಹಾಡುತ್ತಾ ಡ್ಯಾನ್ಸ್ ಮಾಡುತ್ತಾ ಎಲ್ಲರನ್ನೂ ಹುರಿದುಂಬಿಸುತ್ತಾ ಶಿವಣ್ಣ ಚಿತ್ರೀಕರಣದಲ್ಲಿ ಭಾಗಿ ಆಗಿರುವುದನ್ನು ನೋಡಬಹುದು. ಬನಿಯನ್, ಪಂಚೆಯಲ್ಲಿ ಬಹುತೇಕ ದೃಶ್ಯಗಳಲ್ಲಿ ಸೆಂಚುರಿ ಸ್ಟಾರ್ ಕಾಣಿಸಿಕೊಂಡಿದ್ದಾರೆ. ಚೆನ್ನೈನಲ್ಲೇ ಹುಟ್ಟಿ ಅಲ್ಲೇ ಓದಿ ಬೆಳೆದವರು ಶಿವಣ್ಣ. ಹಾಗಾಗಿ ಬಹಳ ಚೆನ್ನಾಗಿ ತಮಿಳು ಮಾತನಾಡುತ್ತಾರೆ. ಸೆಟ್‌ನಲ್ಲಿ ಎಲ್ಲರ ಜೊತೆ ಬೆರೆತು ತಮಾಷೆ ಮಾಡುತ್ತಾ ಎಂಜಾಯ್ ಮಾಡಿದ್ದಾರೆ. ಕನ್ನಡ ಹಾಡುಗಳನ್ನು ಹಾಡುವುದು ಮಾತ್ರವಲ್ಲ ಬೇರೆಯವರಿಗೂ ಹೇಳಿಕೊಟ್ಟಿದ್ದಾರೆ.
ಜೂನ್ 1ರಂದು ಸಿನಿಮಾ ಸೆಟ್ಟೇರಿತ್ತು. ಮೇ 19ರಂದು ಶಿವಣ್ಣ ಹಾಗೂ ಗೀತಾ ದಂಪತಿ ತಮ್ಮ 40ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಸೆಟ್‌ನಲ್ಲಿ ಚಿತ್ರತಂಡ ಕೇಕ್ ಕಟ್ ಮಾಡಿಸಿ ಈ ಸಂಭ್ರಮವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಅದನ್ನು ಮೇಕಿಂಗ್ ವೀಡಿಯೋದಲ್ಲಿ ನೋಡಬಹುದು. ಜೂನ್ 1ರಂದು ನಟ, ನಿರ್ದೇಶಕ ಅಬಿಶಾನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಶಿವಣ್ಣ ವಿಶ್ ಮಾಡಿರುವುದನ್ನು ನೋಡಬಹುದು. ಇಡೀ ತಂಡದ ಜೊತೆ ಬೆರೆತು ಮಗುವಾಗಿದ್ದಾರೆ.
ತಂದೆ- ಮಗನಾಗಿ ಶಿವರಾಜ್‌ಕುಮಾರ್ ಹಾಗೂ ಅಬಿಶಾನ್ ನಡುವಿನ ಅನುಬಂಧ, ಪೈಪೋಟಿಯೇ ಸಿನಿಮಾ ಕಥೆ ಎನ್ನುವುದು ಗೊತ್ತಾಗುತ್ತಿದೆ. ಅಂದಹಾಗೆ ತಮಿಳಿನಲ್ಲಿ ಶಿವಣ್ಣ ನಟನೆಯ 4ನೇ ಸಿನಿಮಾ ಇದು. 'ಜೈಲರ್' ಚಿತ್ರದ ನರಸಿಂಹ ಪಾತ್ರದ ಮೂಲಕ ಅವರು ಕಾಲಿವುಡ್ ಪ್ರವೇಶಿಸಿದ್ದರು. ಬಳಿಕ ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ಮಿಂಚಿದ್ದರು. 'ಜೈಲರ್'- 2 ಸಿನಿಮಾ ಚಿತ್ರೀಕರಣ ಕೂಡ ಮುಗಿಸಿದ್ದಾರೆ. ಈಗಾಗಲೇ ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸೆಂಚುರಿ ಸ್ಟಾರ್ ಮತ್ತೊಂದು ಸಿನಿಮಾ ಘೋಷಿಸಿದ್ದಾರೆ.
ತೆಲುಗಿನ 'ಪೆದ್ದಿ' ಚಿತ್ರದಲ್ಲಿ ಗೌರ್ನಾಯ್ಡು ಆಗಿ ಶಿವಣ್ಣನ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. ತೆಲುಗು ಪ್ರೇಕ್ಷಕರು ಸಹ ಬಹುಪರಾಕ್ ಎಂದಿದ್ದಾರೆ. ಚಿರಂಜೀವಿ ಪ್ರತಿಕ್ರಿಯಿಸಿ ಸೆಂಚುರಿ ಸ್ಟಾರ್ ನಟನೆಯನ್ನು ಮೆಚ್ಚಿದ್ದಾರೆ. 'ಗುಮ್ಮಡಿ ನರಸಯ್ಯ' ಎಂಬ ತೆಲುಗು ಬಯೋಪಿಕ್ ಚಿತ್ರದಲ್ಲಿ ಹೀರೊ ಆಗಿ ಅವರು ಬಣ್ಣ ಹಚ್ಚಿದ್ದಾರೆ. ಕನ್ನಡದಲ್ಲಿ 'ಡ್ಯಾಡ್', 'ಎ ಫಾರ್ ಆನಂದ್', 'ಬೇಲ್', '666 ಆಪರೇಷನ್ ಡ್ರೀಮ್ ಥಿಯೇಟರ್' ಹೀಗೆ ಶಿವಣ್ಣ ನಟಿಸುತ್ತಿರುವ ಸಿನಿಮಾಗಳ ಲಿಸ್ಟ್ ಬೆಳೆಯುತ್ತಲೇ ಇದೆ. ಪವನ್ ಒಡೆಯರ್ ನಿರ್ದೇಶನದ 'ಬೇಲ್' ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.


Click it and Unblock the Notifications