ವೇದಿಕೆ ಮೇಲೆ ಕುಸಿದು ಬಿದ್ದ ತಮಿಳು ನಟ ವಿಶಾಲ್, ನೆಚ್ಚಿನ ನಟನ ಸ್ಥಿತಿ ನೋಡಿ ಶಾಕ್ ಆದ ಫ್ಯಾನ್ಸ್..!
ಆರೋಗ್ಯವೇ ಭಾಗ್ಯ ಎನ್ನುವ ನಾಣ್ಣುಡಿ ಇದೆ. ಆರೋಗ್ಯ ಒಂದಿದ್ದರೆ ಆಗ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು. ಆದರೆ ಅನಾರೋಗ್ಯ ದೇಹವನ್ನು ಕಾಡುತ್ತಿದ್ದರೆ ಆಗ ಯಾವ ಕೆಲಸ ಮಾಡಲು ಕೂಡ ಮನಸು ಬರುವುದಿಲ್ಲ. ಹೀಗಾಗಿ ಆರೋಗ್ಯಕ್ಕೆ ಮೊದಲ ಆದ್ಯತೆಯನ್ನು ನೀಡಬೇಕೆನ್ನುವ ಮಾತುಗಳನ್ನು ಹಿರಿಯರು ಆಗಾಗ ಹೇಳುತ್ತಲಿರುತ್ತಾರೆ. ಆದರೆ ಬದಲಾದ ಈ ಕಾಲದಲ್ಲಿ ಮನುಷ್ಯ ದುಡ್ಡಿನ ಹಿಂದೆ..
ಓಡುತ್ತಾ ಓಡುತ್ತಾ ತನಗೇನು ಬೇಕೆನ್ನುವುದನ್ನೇ ಮರೆಯುತ್ತಿದ್ದಾನೆ. ಹಣ ಇದ್ದರೆ ನೆಮ್ಮದಿ ಇಲ್ಲ, ನೆಮ್ಮದಿ ಇದ್ದರೆ ಹಣ ಇಲ್ಲ ಎಂಬಂತಾಗಿದೆ. ಇದರ ನಡುವೆ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯದ ಕಡೆ ಕೂಡ ಅನೇಕರು ಗಮನ ನೀಡುತ್ತಿಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ಕಾಲಿವುಡ್‌ನ ಸೂಪರ್ ಸ್ಟಾರ್ ವಿಶಾಲ್ ವೇದಿಕೆ ಮೇಲೆಯೇ ಏಕಾಏಕಿ ಕುಸಿದು ಬಿದ್ದಿದ್ದಾರೆ.

ಹೌದು, ಅಸಲಿಗೆ ಈ ವರ್ಷದ ಆರಂಭದಲ್ಲಿ ತಮ್ಮ ಹಳೆಯ ಚಿತ್ರದ ಬಿಡುಗಡೆಯ ಸಮಯದಲ್ಲಿ ವಿಶಾಲ್ ಅವರನ್ನು ಕಂಡು ಅನೇಕರು ಬೆಚ್ಚಿ ಬಿದ್ದಿದ್ದರು. ಯಾಕೆಂದರೆ ತಮ್ಮ ಚಿತ್ರಗಳಲ್ಲಿ ಮೈ ನವಿರೇಳಿಸುವ ಸಾಹಸ ಸನ್ನಿವೇಶಗಳನ್ನು ಸಲೀಸಾಗಿ ಮಾಡುವ ವಿಶಾಲ್ ತುಂಬಾನೇ ಸೊರಗಿ ಹೋಗಿದ್ದರು. ಮೈಕ್ ಹಿಡಿಯಲು ಕೂಡ ಕಷ್ಟ ಪಡುತ್ತಿದ್ದರು. ಮಾತನಾಡಲು ಕೂಡ ಸಾಧ್ಯವಾಗಿರಲಿಲ್ಲ.
ಹೀಗಾಗಿ ಅನೇಕರು ವಿಶಾಲ್ ಆರೋಗ್ಯದ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಗಂಭೀರವಾದ ಕಾಯಿಲೆಯಿಂದ ವಿಶಾಲ್ ಬಳುತ್ತಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದರು. ನಡೆಯುತ್ತಿದ್ದ ಈ ಚರ್ಚೆಯನ್ನು ಗಮನಿಸಿದ ವಿಶಾಲ್ ಆ ನಂತರ ಹಾಗೇನು ಇಲ್ಲ ನನಗೆ ತೀವೃವಾದ ಜ್ವರ ಬಂದರೆ ಆಗಾಗ ಹೀಗೆ ಆಗುತ್ತೆ ಎಂದು ಹೇಳಿದ್ದರು. ವೈದ್ಯರು ಕೂಡ ವಿಶಾಲ್ ವೈರಲ್ ಫೀವರ್‌ನಿಂದ ಬಳಲುತ್ತಿದ್ದಾರೆ. ಅವರಿಗೆ ಸಂಪೂರ್ಣ ಬೆಡ್ ರೆಸ್ಟ್ ತೆಗೆದುಕೊಳ್ಳುವುದಕ್ಕೆ ಸೂಚಿಸಲಾಗಿದೆ ಎಂದಿದ್ದರು.
ಇದೆಲ್ಲವೂ ಆಗಿ ಈಗ ನಾಲ್ಕು ತಿಂಗಳಾಗಿದೆ. ಈ ನಾಲ್ಕು ತಿಂಗಳಿನಲ್ಲಿ ವಿಶಾಲ್ ಆರೋಗ್ಯದಲ್ಲಿ ಚೇತರಿಕೆಯಾಗಿರಬಹುದು ಎಂದೇ ಅನೇಕರು ಅಂದುಕೊಂಡಿದ್ದರು. ಹೀಗಿರುವಾಗ ಇದೀಗ ವಿಶಾಲ್ ವೇದಿಕೆಯ ಮೇಲೆಯೇ ಕುಸಿದು ಬಿದ್ದಿದ್ದಾರೆ.
ಹೌದು, ವಿಶಾಲ್ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಕೂವಾಗಮ್‌ನಲ್ಲಿರುವ ಕೂತಾಂಡವರ್ ನಲ್ಲಿ ತೃತೀಯ ಲಿಂಗಿಗಳ ಸೌಂದರ್ಯ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು. ತಮಿಳು ತಿಂಗಳ ಆಚರಣೆಯ ಭಾಗವಾಗಿ ಈ ಮಿಸ್ ಕೂವಾಗಮ್ 2025 ಸೌಂದರ್ಯ ಸ್ಫರ್ಧೆಯನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಶಾಲ್ ವೇದಿಕೆ ಮೇಲೆ ಎಲ್ಲರಿಗೆ ಶುಭಾಶಯವನ್ನು ಕೋರುತ್ತಿದ್ದರು.
ಇದೇ ಸಮಯದಲ್ಲಿ ಮೂರ್ಛೆ ಹೋದಂತಾದ ವಿಶಾಲ್ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಆ ನಂತರ ವಿಶಾಲ್ ಅವರಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿ ಅಲ್ಲಿಯೇ ಇದ್ದ ಮಾಜಿ ಸಚಿವ ಕೆ.ಪೊನ್ನುಡಿ ವಿಶಾಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಸದ್ಯ ಕಾರ್ಯಕ್ರಮದ ಸ್ಥಳದಿಂದ ವಿಶಾಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ದೃಶ್ಯಗಳು ವೈರಲ್ ಆಗಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸ್ಥಿತಿಯನ್ನು ನೋಡಿ ಆತಂಕಕ್ಕೆ ಒಳಗಾಗಿದ್ದಾರೆ. ಆರೋಗ್ಯದ ಕುರಿತು ಸರಿಯಾದ ಮಾಹಿತಿಯನ್ನು ನೀಡುವಂತೆ ಆಗ್ರಹಿಸುತ್ತಿದ್ದಾರೆ. ತಮಿಳು ಚಿತ್ರರಂಗದಲ್ಲಿ ಕೂಡ ಆತಂಕ ಮನೆ ಮಾಡಿದೆ.
ಇನ್ನು ವಿಶಾಲ್ ಆರೋಗ್ಯದ ಕುರಿತು ಅವರ ಮ್ಯಾನೇಜರ್ ಹರಿ ಪ್ರತಿಕ್ರಿಯೆಯನ್ನು ನೀಡಿದ್ದು, ಭಾನುವಾರ ಮಧ್ಯಾಹ್ನ ವಿಶಾಲ್ ಊಟ ಮಾಡಿರಲಿಲ್ಲ ಕೇವಲ ಜ್ಯೂಸ್ ಮಾತ್ರ ಕುಡಿದಿದ್ದರು, ಇದರಿಂದ ಆಯಾಸಗೊಂಡು ಅವರು ಪ್ರಜ್ಞೆ ಕಳೆದುಕೊಂಡಿದ್ದರು ಎಂದು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆಯನ್ನು ನೀಡಿದ್ದಾರೆ, ಸದ್ಯ ವಿಶಾಲ್ ಆರೋಗ್ಯವಾಗಿದ್ದು ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿರುವ ಹರಿ ಸರಿಯಾದ ಸಮಯಕ್ಕೆ ಊಟ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಹೇಳಿದ್ದಾರೆ.


Click it and Unblock the Notifications











