ಕರುಳು ಹಿಂಡುವ ಕರುಣಾಜನಕ ಕಥೆ ; ಕೇವಲ 44ನೇ ವರ್ಷಕ್ಕೆ ಉಸಿರು ಚೆಲ್ಲಿದ ಖ್ಯಾತ ನಟ-ಅಂತ್ಯಕ್ರಿಯೆ ಮಾಡಲು ಒಬ್ಬರೂ ಇಲ್ಲ
ಜನಸಾಮಾನ್ಯರ ದೃಷ್ಟಿಯಲ್ಲಿ ಸಿನಿಮಾರಂಗ ಅಂದ ತಕ್ಷಣ ಕಣ್ತುಂಬ ಬಣ್ಣಗಳೇ ತುಂಬಿಕೊಳ್ಳುತ್ತವೆ. ಹಾಗೆ ನೋಡಿದರೆ ಬೇರೆಲ್ಲ ಉದ್ಯಮಕ್ಕಿಂತಾ ಅನಿಶ್ಚಿತತೆ, ಅಭದ್ರತೆ ಇಲ್ಲಿ ಸ್ವಲ್ಪ ಹೆಚ್ಚೇ ಇದೆ. ಈ ಕ್ಷೇತ್ರದಲ್ಲಿ ಇವತ್ತಲ್ಲಾ ನಾಳೆ ಗೆಲ್ಲುತ್ತೇವೆ, ಆ ಮೂಲಕ ಬದುಕಲ್ಲಿ ಬೆಳಕು ಮೂಡುತ್ತದೆ ಎಂಬ ಭರವಸೆಯಿಂದ ಕಾದಿರುವ ಅದೆಷ್ಟೋ ಜನ ಕಾರ್ಮಿಕರು, ಕಲಾವಿದರು, ತಂತ್ರಜ್ಞರು ಇಲ್ಲಿದ್ದಾರೆ. ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ.
ಆದರೆ, ಕೆಲ ಒಮ್ಮೆ ಎಲ್ಲವೂ ಕೂಡಿ ಬಂದಾಗ, ಬದುಕು ಒಂದು ಹಂತಕ್ಕೆ ರೂಪಗೊಳ್ಳುತ್ತಿರುವಾಗ. ವಿಧಿಯ ಆಟ ಬೇರೆಯದ್ದೇ ಆಗಿರುತ್ತೆ. ಇದಕ್ಕೆ ತಮಿಳು ಚಿತ್ರರಂಗದ ಖ್ಯಾತ ನಟ ಅಭಿನಯ್ ಅವರ ದುರಂತ ಅಂತ್ಯ ಮತ್ತೊಂದು ಉದಾಹರಣೆ.

ಹೌದು, ಅಭಿನಯ್.. ಕಾಲಿವುಡ್‌ನ ಸುರಸುಂದರಾಂಗ. 2002ರಲ್ಲಿ ತೆರೆಗೆ ಬಂದಿದ್ದ ಕಸ್ತೂರಿ ರಾಜಾ ನಿರ್ದೇಶನದ, ಧನುಷ್ ಅಭಿನಯದ ''ತುಳ್ಳುವಾದೋ ಇಲಮೈ''ಯಲ್ಲಿ ತಮ್ಮ ಅಭಿನಯದಿಂದ ಎಲ್ಲರ ಹೃದಯ ಗೆದ್ದವರು ಇವರು.
ಆ ನಂತರ ''ಜಂಕ್ಷನ್''.. ''ಸಿಂಗಾರ ಚೆನ್ನೈ''..''ಪೊನ್ ಮೇಘಲೈ''.. ಚಿತ್ರಗಳಲ್ಲಿ ಕಾಣಿಸಿಕೊಂಡ ಅಭಿನಯ್ ಜೀವನೋಪಾಯಕ್ಕೆ ಬೇರೆಯವರ ಪಾತ್ರಕ್ಕೆ ತಮ್ಮ ಧ್ವನಿಯನ್ನು ಕೂಡ ನೀಡಿದರು. ''ತುಪ್ಪಕ್ಕಿ'' ಮತ್ತು ''ಅಂಜಾನ್'' ಚಿತ್ರಗಳಲ್ಲಿ ಬಾಲಿವುಡ್ ಸ್ಟಾರ್ ವಿದ್ಯುತ್ ಜಾಮ್ವಾಲ್ ಅವರ ಪಾತ್ರಕ್ಕೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದರು.
ಇಂಥಾ ಅಭಿನಯ್ ಲಿವರ್ ಸಂಬಂಧಿ ಕಾಯಿಲೆಯಿಂದ ಕೆಲ ದಿನಗಳಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯುತ್ತಿದ್ದರು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಅಭಿನಯ್ ನನ್ನನ್ನೂ ಉಳಿಸಿಕೊಳ್ಳಿ ಎಂದು ಅಂಗಲಾಚಿ ಎಲ್ಲರಲ್ಲಿ ಬೇಡಿಕೊಂಡಿದ್ದರು. ತಮಿಳು ಚಿತ್ರರಂಗ ತಮಗೆ ನೆರವಾಗುತ್ತೆ ಎನ್ನುವ ಆಶಾಭಾವನೆಯಲ್ಲಿದ್ದರು.
ಆದರೆ.. ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕೇವಲ 44ನೇ ವರ್ಷದಲ್ಲಿ ನವೆಂಬರ್ 10ರಂದು ಉಸಿರು ಚೆಲ್ಲಿದರು ಅಭಿನಯ್. ದುರಂತ ಅಂದರೆ ಇವರ ಅಂತ್ಯಸಂಸ್ಕಾರವನ್ನು ಮಾಡುವವರು ಕೂಡ ಯಾರೂ ಇಲ್ಲ. ಈ ಹಿನ್ನೆಲೆ ತಮಿಳಿನ ನಾಡಿಗರ್ ಸಂಗಮ್‌ಗೆ (ಕಲಾವಿದರ ಸಂಘ) ಅಭಿನಯ್ ಅವರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುವಂತೆ ಇವರ ತಂಡ ಮನವಿಯನ್ನು ಮಾಡಿಕೊಂಡಿದೆ ಎಂದು ''ಹಿಂದೂಸ್ತಾನ್ ಟೈಮ್ಸ್'' ವರದಿ ಮಾಡಿದೆ.

ಇನ್ನೂ ಆಗಲೇ ಹೇಳಿದಂತೆ ಅಭಿನಯ್ ಆರ್ಥಿಕ ಸಂಕಷ್ಟದಲ್ಲಿದ್ದರು. ಈ ಹಿನ್ನೆಲೆ ಚಿಕ್ಕ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು. ಆದರೆ.. ಅಭಿನಯ್ ಕೊನೆಯುಸಿರೆಳೆದ ಸುದ್ದಿ ಕೇಳಿದ ನಂತರ ಕೊಡಂಬಾಕ್ಕಂನ ರಂಗರಾಜಪುರಂನಲ್ಲಿ ಅಭಿನಯ್ ಅವರಿಗೆ ಮನೆ ನೀಡಿದ್ದ ಮಾಲೀಕ ಮನೆಯಲ್ಲಿ ಅಭಿನಯ್ ಪಾರ್ಥಿವ ಶರೀರ ಇಡಲು ಕೂಡ ಬಿಡಲಿಲ್ಲ. ಮೃತದೇಹವನ್ನು ಯಾವುದೇ ಕಾರಣಕ್ಕೂ ನನ್ನ ಮನೆಯಲ್ಲಿ ಇಡಬಾರದು ಎಂದು ಕಿರಿಕ್ ಮಾಡಿದ್ದ ಮಾನವೀಯತೆ ಇಲ್ಲದ ಮನೆ ಮಾಲೀಕ.
ಈ ಹಿನ್ನೆಲೆ ಮಾಧ್ಯಮದವರು.. ಪೊಲೀಸ್ ಇಲಾಖೆ ಮತ್ತು ಹೌಸಿಂಗ್ ಬೋರ್ಡ್ ಮಧ್ಯಪ್ರವೇಶ ಮಾಡಬೇಕಾಗಿ ಬಂತು. ಆ ನಂತರ ಅಭಿನಯ್ ವಾಸ ಇದ್ದ ಮನೆಯಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯ್ತು. ಅಂತ್ಯಕ್ರಿಯೆ ಎಲ್ಲಿ ನಡೆಯಲಿದೆ ಅಥವಾ ನಡೆದಿದೆ ಎನ್ನುವ ಮಾಹಿತಿಯನ್ನು ಅಭಿನಯ್ ತಂಡ ಇನ್ನೂ ಹಂಚಿಕೊಂಡಿಲ್ಲ. ಅಂತ್ಯಕ್ರಿಯೆ ನೆರವೇರಿಸಲು ನಾಡಿಗರ್ ಸಂಗಮ್ ಮತ್ತು ಇತರ ಸಂಘಟನೆಗಳಿಗೆ ಮನವಿಯನ್ನು ಈ ತಂಡ ಮಾಡಿಕೊಂಡಿದೆ.
ಅಂದ್ಹಾಗೇ ಅಭಿನಯ್ ಅವರಿಗೆ ಮದುವೆಯಾಗಿರಲಿಲ್ಲ. 2019 ರಲ್ಲಿ ಇವರ ತಾಯಿ, ಟಿ.ಪಿ. ರಾಧಾಮಣಿ ನಿಧನರಾದರು. ಇದರ ನಡುವೆ ಆರ್ಥಿಕ ಪರಿಸ್ಥಿತಿ ಕೂಡ ಹದಗೆಟ್ಟಿತ್ತು. ಇನ್ನೂ ''ಹಿಂದೂಸ್ತಾನ್ ಟೈಮ್ಸ್'' ವರದಿಯ ಪ್ರಕಾರ ಅಭಿನಯ್ ಅವರ ಕುಟುಂಬದ ಬೇರೆ ಸದಸ್ಯರಾಗಲಿ ಸಂಬಂಧಿಕರಾಗಲಿ ಯಾರು ಇಲ್ಲ.


Click it and Unblock the Notifications











