ಉಪೇಂದ್ರ ಬಗ್ಗೆ ಕಮಲ್ ಪುತ್ರಿ ಶ್ರುತಿ ಹಾಸನ್ ಹೇಳಿಕೆ ವೈರಲ್
ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದ್ದು ಮೊದಲ ದಿನವೇ ಭಾರೀ ಕಲೆಕ್ಷನ್ ನಿರೀಕ್ಷಿಸಲಾಗುತ್ತಿದೆ. ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ಉಪೇಂದ್ರ, ನಾಗಾರ್ಜುನ, ಆಮೀರ್ ಖಾನ್ ಹಾಗೂ ಶ್ರುತಿ ಹಾಸನ್ ಸೇರಿ ಹಲವರು ನಟಿಸಿದ್ದಾರೆ. ಉಪೇಂದ್ರ ನಟನೆ, ಸಿಂಪ್ಲಿಸಿಟಿ ಬಗ್ಗೆ ಶ್ರುತಿ ಹಾಸನ್ ಹೇಳಿಕೆ ಸದ್ದು ಮಾಡ್ತಿದೆ.
'ಕೂಲಿ' ಚಿತ್ರದಲ್ಲಿ ಉಪೇಂದ್ರ ಹಾಗೂ ಶ್ರುತಿ ತಂದೆ ಮಗಳ ಪಾತ್ರಗಳಲ್ಲಿ ನಟಿಸಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇನ್ನು ಟ್ರೈಲರ್ ನೋಡಿದರೆ ಸತ್ಯರಾಜ್ ಮಗಳ ಪಾತ್ರದಲ್ಲಿ ಶ್ರುತಿ ನಟಿಸಿರುವಂತೆ ಕಾಣುತ್ತದೆ ಎನ್ನುವುದು ಕೆಲವರ ವಾದ. ಒಟ್ಟಾರೆ ಚಿತ್ರದಲ್ಲಿ ಆಕೆಯ ಪಾತ್ರಕ್ಕೆ ಬಹಳ ಮಹತ್ವ ಇದೆ ಎಂದು ಸ್ವತಃ ರಜನಿಕಾಂತ್ ಹೇಳಿದ್ದಾರೆ. ಗ್ಲಾಮರಸ್ ಪಾತ್ರಗಳಲ್ಲೇ ಆಕೆ ಹೆಚ್ಚು ನಟಿಸಿದ್ದಾರೆ, ಆದರೆ ಈ ಚಿತ್ರದಲ್ಲಿ ಬಹಳ ಅದ್ಭುತ ಪಾತ್ರ ಸಿಕ್ಕಿದೆ ಎಂದಿದ್ದಾರೆ.

ಇನ್ನು 'ಕೂಲಿ' ಆಡಿಯೋ ವೇದಿಕೆಯಲ್ಲಿ ಶ್ರುತಿ ಹಾಸನ್ ಮಾತನಾಡುತ್ತಾ ಉಪೇಂದ್ರ ಅವರನ್ನು ಹಾಡಿ ಹೊಗಳಿದ್ದಾರೆ. "ಕೆಲವರ ಮುಖ, ಅವರ ಪ್ರಭಾವಳಿ ಬಹಳ ಪವರ್‌ಫುಲ್. ನೀವು ಸ್ಕ್ರೀನ್‌ನಲ್ಲಿ ಬಂದು ನಿಂತ್ರೆ ಸಾಕು. ತೆರೆಮೇಲೆ ನಿಮ್ಮ ಪ್ರಸೆನ್ಸ್ ಅದ್ಭುತ. ನೀವು ಒಬ್ಬ ಕ್ರಿಯೇಟಿವ್ ಜೀನಿಯಸ್ ಎನ್ನುವುದು ಎಲ್ಲರಿಗೂ ಗೊತ್ತು. ಬಹಳ ಯಶಸ್ಸು, ಅಭಿಮಾನಿಗಳ ಪ್ರೀತಿ ಮರೆಯೋಕೆ ಸಾಧ್ಯವಿಲ್ಲ. ಆದರೆ ನಿಮ್ಮ ಬಳಿ ಒಂದು ಅದ್ಭುತ ವಿಚಾರ ಕಲಿತೆ. ರಜನಿಕಾಂತ್ ಎದುರು ನೀವು ಅಭಿಮಾನಿಯಂತೆ ಇದ್ದುಬಿಟ್ರಿ. ಆಗ ಅರ್ಥ ಆಯ್ತು ಜೀವನದಲ್ಲಿ ಏನು ಸಾಧಿಸಿದ್ದೀವಿ ಎನ್ನುವುದಕ್ಕಿಂತ ನಾವು ಯಾರನ್ನು ಪ್ರೀತಿಸಿದ್ವಿ, ಯಾರನ್ನು ನೋಡಿ ಬೆಳೆದೆವು ಎನ್ನುವುದನ್ನು ಮರೆಯಬಾರದು. ಆ ಗುಣ ನಿಮ್ಮನ್ನು ನೋಡಿ ಕಲಿತೆ" ಎಂದಿದ್ದಾರೆ.
ಉಪೇಂದ್ರ ಸರಳತೆ, ರಜನಿಕಾಂತ್ ಮೇಲಿನ ಅಭಿಮಾನದ ಬಗ್ಗೆ ಶ್ರುತಿ ಹಾಸನ್ ಮಾತು ಕೇಳಿ ಅಭಿಮಾನಿಗಳು ಫಿದಾ ಆಗಿದ್ದಾರೆ. ರಜನಿಕಾಂತ್ ಕೂಡ ಮಾತನಾಡುತ್ತಾ "ಉಪೇಂದ್ರ ಅದ್ಭುತ ನಿರ್ದೇಶಕ. ಅವರ 'ಓಂ' ಸಿನಿಮಾ ಕನ್ನಡದಲ್ಲಿ ನನ್ನ 10 'ಬಾಷಾ' ಸಿನಿಮಾಗಳಿಗೆ ಸಮ. ಲೋಕೇಶ್ ಕನಕರಾಜ್ ಈಗ ನಾನ್ ಲೀನಿಯರ್ ಸಿನಿಮಾ ಮಾಡ್ತಾರೆ ಅದನ್ನು 30 ವರ್ಷಗಳ ಹಿಂದೆಯೇ ಉಪೇಂದ್ರ ಮಾಡಿಬಿಟ್ಟಿದ್ದರು" ಎಂದು ರಜನಿಕಾಂತ್ ಹೇಳಿದ್ದು ವೈರಲ್ ಆಗುತ್ತಿದೆ.
ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ 'ಕೂಲಿ' ಸಿನಿಮಾ ಈ ವಾರ ವಿಶ್ವದಾದ್ಯಂತ ತೆರೆಗೆ ಬರ್ತಿದೆ. ಬೆಂಗಳೂರಿನಲ್ಲಿ ಸಿನಿಮಾ ಟಿಕೆಟ್ 2000 ರೂ.ಗೆ ಬಿಕರಿಯಾಗಿದೆ. ಅಷ್ಟರಮಟ್ಟಿಗೆ ಸಿನಿಮಾ ಕ್ರೇಜ್ ಹುಟ್ಟಾಕ್ಕಿದೆ. ಮೊದಲ ದಿನ ಬೆಂಗಳೂರಿನಲ್ಲಿ ಎಲ್ಲಾ ಅರ್ಲಿ ಮಾರ್ನಿಂಗ್ ಶೋಗಳ ಟಿಕೆಟ್ ಸೋಲ್ಡ್‌ಔಟ್ ಆಗಿದೆ. ಟಿಕೆಟ್ ದರ 5 ಪಟ್ಟು ಹೆಚ್ಚಾಗಿದೆ. ಈ ಬಗ್ಗೆ ಪ್ರೇಕ್ಷಕರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಉಪೇಂದ್ರ ಮಾತ್ರವಲ್ಲ ಕನ್ನಡ ನಟಿ ರಚಿತಾ ರಾಮ್ ಕೂಡ 'ಕೂಲಿ' ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದಾರೆ.
ಮೊದಲ ದಿನವೇ ಭಾರೀ ಓಪನಿಂಗ್ ನಿರೀಕ್ಷಿಸಲಾಗುತ್ತಿದೆ. ಈ ವಾರವೇ ಬಾಲಿವುಡ್ ಸಿನಿಮಾ 'ವಾರ್- 2' ಕೂಡ ತೆರೆಗೆ ಬರ್ತಿದೆ. ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡುತ್ತಿದೆ. ಇನ್ನು ಚಿತ್ರಕ್ಕಾಗಿ ರಜನಿಕಾಂತ್, ಆಮೀರ್ ಖಾನ್, ನಾಗಾರ್ಜುನ ಎಲ್ಲರೂ ಭಾರೀ ಸಂಭಾವನೆ ಪಡೆಯುತ್ತಿದ್ದಾರೆ.


Click it and Unblock the Notifications











