ಗಾನ ಗಂಧರ್ವಗೆ ಕೊರಳು ಬೇನೆ: ಕೊರೊನಾ ಪಾಸಿಟಿವ್
ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಗೆ ಕೊರೊನಾ ಪಾಸಿಟಿವ್ ಆಗಿದ್ದು, ಅವರು ಆಸ್ಪತ್ರಗೆ ದಾಖಲಾಗಿದ್ದಾರೆ.
Recommended Video
ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಆಸ್ಪತ್ರೆಯಿಂದಲೇ ವಿಡಿಯೋ ಬಿಡುಗಡೆ ಮಾಡಿದ್ದು, 'ನನಗೆ ಕೊರೊನಾ ಪಾಸಿಟಿವ್ ಆಗಿದೆ. ಹಾಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ' ಎಂದಿದ್ದಾರೆ.
ಬಾಲಸುಬ್ರಹ್ಮಣ್ಯಂ ಅವರಿಗೆ ಕೆಮ್ಮು, ಗಂಟಲು ನೋವು ಜೊತೆಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತಂತೆ. ಹಾಗಾಗಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಕೊರೊನಾ ಸೋಂಕು ತಗುಲಿರುವುದು ಗೊತ್ತಾಗಿದೆ.
ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಬಾಲಸುಬ್ರಹ್ಮಣ್ಯಂ ಅವರಿಗೆ ಸಲಹೆ ನೀಡಿದ್ದರಂತೆ. ಆದರೆ ಎಸ್‌ಪಿಬಿ ಅವರ ಕುಟುಂಬ ಸದಸ್ಯರ ಒತ್ತಾಯದ ಮೇರೆಗೆ ಆಸ್ಪತ್ರೆಗೆ ದಾಖಲಾಗಿರವುದಾಗಿ ಹೇಳಿದ್ದಾರೆ.

ಜ್ವರ ಕಡಿಮೆಯಾಗಿದೆ, ಶೀತವಿದೆ
ಎಸ್‌ಪಿಬಿ ಅವರಿಗೆ ಜ್ವರವಿತ್ತಂತೆ ಅದು ತುಸು ಕಡಿಮೆಯಾಗಿದೆ. ಆದರೆ ನೆಗಡಿ ಮತ್ತು ಗಂಟಲು ನೋವಿದೆಯಂತೆ. ಇನ್ನೆರಡು ದಿನದಲ್ಲಿ ಈ ರೋಗಲಕ್ಷ್ಣಗಳು ಸಹ ಹೊರಟು ಹೋಗುತ್ತವೆ ಎಂಬ ವಿಶ್ವಾಸವನ್ನು ಎಸ್‌ಪಿಬಿ ವ್ಯಕ್ತಪಡಿಸಿದ್ದಾರೆ. 'ನಾನು ಒಳ್ಳೆಯ ವೈದ್ಯರ ಆರೈಕೆಯಲ್ಲಿದ್ದೇನೆ' ಎಂದಿದ್ದಾರೆ ಎಸ್‌ಪಿಬಿ.

ಯಾರೂ ಆತಂಕಪಡುವ ಅಗತ್ಯವಿಲ್ಲ: ಎಸ್‌ಪಿಬಿ
ನಾನು ಚೆನ್ನಾಗಿಯೇ ಇದ್ದೇನೆ, ಕೆಲವೇ ದಿನಗಳಲ್ಲಿ ಗುಣಮುಖವಾಗುತ್ತೇನೆ, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದಿರುವ ಎಸ್‌ಪಿಬಿ. 'ನನ್ನ ಸಿನಿಮಾ ಗೆಳೆಯರು ಸಹ ನನಗೆ ಕರೆ ಮಾಡಿ ವಿಚಾರಿಸುವ ಅಗತ್ಯವಿಲ್ಲ, ನಾನು ಚೆನ್ನಾಗಿಯೇ ಇದ್ದೇನೆ ಎಂದು ಹೇಳಿದ್ದಾರೆ.

ಮೊದಲು ಎದೆನೋವು ಕಾಣಿಸಿಕೊಂಡಿತು: ಎಸ್‌ಪಿಬಿ
ಗಾಯಕರಿಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಎದೆ ನೋವು ನನಗೆ ಕಾಣಿಸಿಕೊಂಡಿತು. ನಂತರ ಶೀತ ಹಾಗೂ ಜ್ವರ ಕಾಣಿಸಿಕೊಂಡಿತು. ಅದನ್ನು ಉಡಾಫೆ ಮಾಡದೆ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡೆ, ವರದಿಯಲ್ಲಿ ಪಾಸಿಟಿವ್ ಇರುವುದು ಗೊತ್ತಾಯಿತು, ಕುಟುಂಬದವರ ಒತ್ತಾಯದಂತೆ ಆಸ್ಪತ್ರೆಗೆ ದಾಖಲಾದೆ ಎಂದಿದ್ದಾರೆ ಎಸ್‌ಪಿಬಿ.

ಯಾರೂ ಕರೆ ಮಾಡುವುದು ಬೇಡ: ಎಸ್‌ಪಿಬಿ
ನನ್ನ ಸ್ನೇಹಿತರೆಲ್ಲಾ ಕರೆ ಮಾಡುತ್ತಿದ್ದಾರೆ. ಆದರೆ ಯಾರೂ ಕರೆ ಮಾಡುವುದು ಬೇಡ. ನಾನು ಆರಾಮವಾಗಲೆಂದು ಆಸ್ಪತ್ರೆಗೆ ಬಂದಿದ್ದೇನೆ. ಆರೋಗ್ಯದ ಕಡೆ ಗಮನ ಕೊಡಲೆಂದು ಇಲ್ಲಿಗೆ ಬಂದಿದ್ದೇನೆ. ಎಲ್ಲರ ಕರೆಗಳನ್ನು ಸ್ವೀಕರಿಸಲು ನನಗೆ ಸಾಧ್ಯವಾಗದೇ ಇರಬಹುದು. ನಾನು ಇನ್ನೆರಡು ದಿನಗಳಲ್ಲಿ ಆರೋಗ್ಯವಾಗುತ್ತೇನೆ ಎಂದು ಎಸ್‌ಪಿಬಿ ಹೇಳಿದ್ದಾರೆ.


Click it and Unblock the Notifications











