Madharasi Trailer: 'ಮದರಾಸಿ' ಜೊತೆ ಕಾಣಿಸಿಕೊಂಡ ರುಕ್ಮಿಣಿ ವಸಂತ್; ಮಾಸ್ ಸಿನಿಮಾದಲ್ಲಿ ಕಾಸ್ ಲುಕ್
'ಸಿಕಂದರ್' ಹೀನಾಯ ಸೋಲಿನ ಬಳಿಕ 'ಮದರಾಸಿ' ಕೈ ಹಿಡಿದ ನಿರ್ದೇಶಕ ಎ.ಆರ್. ಮುರುಗದಾಸ್. ಶಿವಕಾರ್ತಿಕೇಯನ್ ನಾಯಕನಾಗಿ ನಟಿಸಿರುವ ತಮಿಳಿನ ಈ ಬಹು ನಿರೀಕ್ಷಿತ ಸಿನಿಮಾ 'ಮದ್ರಾಸಿ' ಸೆಪ್ಟೆಂಬರ್ 5 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. 'ಅಮರನ್' ಅಂತಹ ಮೆಗಾಬ್ಲಾಕ್‌ಬಸ್ಟರ್ ಸಿನಿಮಾದ ಬಳಿಕ ಶಿವಕಾರ್ತಿಕೇಯನ್ 'ಮದರಾಸಿ'ಯಾಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ.
ಶಿವಕಾರ್ತಿಕಯೇನ್‌ಗೆ ನಾಯಕಿಯಾಗಿ ಕನ್ನಡದ ನಟಿ ರುಕ್ಮಿಣಿ ವಸಂತ್ ನಟಿಸಿರೋದು ವಿಶೇಷ. ಇವರೊಂದಿಗೆ ವಿಕ್ರಾಂತ್, ವಿದ್ಯುತ್ ಜಮ್ವಾಲ್, ಬಿಜು ಮೆನನ್ ಮತ್ತು ಡ್ಯಾನ್ಸಿಂಗ್ ರೋಸ್ ಶಬೀರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ಈಗ ರಿಲೀಸ್ ಆಗಿದ್ದು, ಮಾಸ್ ಪ್ರಿಯರ ಮನಗೆದ್ದಿದೆ.

ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ 'ದರ್ಬಾರ್' ಸಿನಿಮಾ ಆಕ್ಷನ್ ಕಟ್ ಹೇಳಿದ ಬಳಿಕ ಎ.ಆರ್. ಮುರುಗದಾಸ್ ಮೂರು ವರ್ಷಗಳ ವಿರಾಮ ತೆಗೆದುಕೊಂಡಿದ್ದರು. ಬಳಿಕ ಇತ್ತೀಚೆಗೆ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದ 'ಸಿಕಂದರ್' ಸಿನಿಮಾವನ್ನು ನಿರ್ದೇಶಿಸಿದ್ದರು. ಹಿಂದಿ ಮತ್ತು ತಮಿಳು ಎರಡರಲ್ಲೂ ಬಿಡುಗಡೆಯಾದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲು ಕಂಡಿತ್ತು. 'ಸಿಕಂದರ್' ಸಿನಿಮಾ ವೈಫಲ್ಯಕ್ಕೆ ಎ.ಆರ್. ಮುರುಗದಾಸ್ ಕೆಲವು ಗಂಭೀರ ಕಾರಣಗಳನ್ನು ಹೊರ ಹಾಕಿದ್ದರು.
"ಸಿಕಂದರ್ ವೈಫಲ್ಯಕ್ಕೆ ನಾನು ಮಾತ್ರ ಕಾರಣನಲ್ಲ. ಸಲ್ಮಾನ್ ಖಾನ್ ಅವರೊಂದಿಗೆ ಶೂಟಿಂಗ್ ಮಾಡುವುದು ಸುಲಭವಲ್ಲ. ಅವರ ಜೀವಕ್ಕೆ ಬೆದರಿಕೆಯಿದ್ದ ಕಾರಣ, ಹಗಲಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲು ಸಾಧ್ಯವಾಗಲಿಲ್ಲ. ಅವರು ರಾತ್ರಿ 8 ಗಂಟೆಗೆ ಮಾತ್ರ ಸೆಟ್‌ಗೆ ಬರುತ್ತಿದ್ದರು. ನಾವು ಬೆಳಗಿನಿಂದ ಅವರ ಆಗಮನಕ್ಕಾಗಿ ಕಾಯಬೇಕಾಗಿತ್ತು. ರಾತ್ರಿಯಲ್ಲೂ ಹಗಲಿನಂತೆ ಸೆಟ್‌ಗಳನ್ನು ಸೃಷ್ಟಿಸಿ ಶೂಟಿಂಗ್ ನಡೆಸಲಾಯಿತು. ಎಲ್ಲಾ ದೃಶ್ಯಗಳನ್ನು ಗ್ರೀನ್ ಮ್ಯಾಟ್ ಮತ್ತು ಗ್ರಾಫಿಕ್ಸ್‌ನಲ್ಲಿ ಚಿತ್ರೀಕರಿಸಿದರೆ, ಸಿನಿಮಾ ಹೇಗಿರುತ್ತೆ? ಆದರೂ, ಆ ಕಥೆಯು ನನಗೆ ಬಹಳ ಹತ್ತಿರವಾಗಿತ್ತು" ಎಂದು ಎ.ಆರ್ ಮುರುಗದಾಸ್ ಹೇಳಿಕೊಂಡಿದ್ದರು.
'ಸಿಕಂದರ್' ನಂತರ ಮುರುಗದಾಸ್ ನಿರ್ದೇಶನದ ಎರಡನೇ ಚಿತ್ರ 'ಮದರಾಸಿ'. ಶಿವಕಾರ್ತಿಕೇಯನ್ ಅವರ ಬ್ಲಾಕ್‌ಬಸ್ಟರ್ 'ಅಮರನ್' ಬಳಿಕ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಇದು 'ಮದರಾಸಿ' ಸಿನಿಮಾದ ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಸಿನಿಮಾ ಬಿಡುಗಡೆಗೆ ಕೆಲವು ದಿನಗಳು ಬಾಕಿ ಇರುವಾಗಲೇ, ಚೆನ್ನೈನ ಸಾಯಿ ರಾಮ್ ಕಾಲೇಜಿನಲ್ಲಿ ಸಿನಿಮಾದ ಸಂಗೀತ ಮತ್ತು ಟ್ರೈಲರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು.

ಕಾಲೇಜು ಆವರಣದುದ್ದಕ್ಕೂ ಶಿವಕಾರ್ತಿಕೇಯನ್ ಅವರ ಪೋಸ್ಟರ್‌ಗಳು ರಾರಾಜಿಸುತ್ತಿದ್ದವು. ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿದ 'ಎದಿರ್ ನೀಚಲ್' ಚಿತ್ರದ 'ಎದಿರ್ ನೀಚಲ್ ಅಡಿ' ಹಾಡನ್ನು ಅಭಿಮಾನಿಗಳು ಹಾಡುವುದರ ಮೂಲಕ ಮೊಬೈಲ್ ಲೈಟ್ ಬೆಳಗಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ 'ಮದರಾಸಿ' ಚಿತ್ರದ ರೋಮಾಂಚಕಾರಿ ಟ್ರೈಲರ್ ಸಹ ಬಿಡುಗಡೆಯಾಯಿತು.
'ಮದರಾಸಿ' ಟ್ರೈಲರ್ "ನಿನ್ನಂತೆ ಇತರರನ್ನು ಪ್ರೀತಿಸು.. ಎಲ್ಲರನ್ನೂ ನಿನ್ನ ಕುಟುಂಬದಂತೆ ಭಾವಿಸು.. ಎಲ್ಲಾ ಧರ್ಮಗಳು, ಎಲ್ಲಾ ದೇವರುಗಳು ಇದನ್ನೇ ಹೇಳುತ್ತವೆ" ಎಂಬ ಸಂಭಾಷಣೆಯೊಂದಿಗೆ ಪ್ರಾರಂಭವಾಗುತ್ತದೆ. ಬಳಿಕ ಟ್ರೈಲರ್ ಉದ್ದಕ್ಕೂ ಬಂದೂಕುಗಳ ಸದ್ದು ಮತ್ತು ಸ್ಫೋಟ ಹೆಚ್ಚು ಸದ್ದು ಮಾಡುತ್ತಾ ಮುಂದೆ ಸಾಗುತ್ತೆ. "ಗನ್ ಯಾರ ಕೈಯಲ್ಲಿ ಇದ್ದರೆ ಏನಂತೆ.. ವಿಲನ್ ನಾನೇ" ಎಂಬ ಡೈಲಾಗ್ ವಿಶೇಷವಾಗಿ ಗಮನ ಸೆಳೆದಿದೆ.
'ಮದರಾಸಿ' ಸಿನಿಮಾವು ಎ.ಆರ್. ಮುರುಗದಾಸ್ ಈ ಹಿಂದೆ ನಿರ್ದೇಶಿಸಿದ 'ಘಜಿನಿ'ಯಂತೆಯೇ ಪ್ರೀತಿ ಮತ್ತು ಪ್ರತೀಕಾರದ ಅಂಶಗಳನ್ನು ಒಳಗೊಂಡಿರುತ್ತದೆ. ಈ ವಿಷಯವನ್ನು ಅವರೇ ಸ್ವತ: ಹೇಳಿಕೊಂಡಿದ್ದಾರೆ. ಟ್ರೈಲರ್‌ನಲ್ಲಿ, ಶಿವಕಾರ್ತಿಕೇಯನ್ ಕೈಯಲ್ಲಿ ಬಂದೂಕು ಹಿಡಿದು ಆಕ್ಷನ್ ಸೀನ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಮಾಸ್ ಲುಕ್ ಅವತಾರವನ್ನು ಹೊರ ಹಾಕುತ್ತಿದೆ.


Click it and Unblock the Notifications











