ದಳಪತಿ ವಿಜಯ್ ನಿವಾಸಕ್ಕೆ ಚಪ್ಪಲಿ ಎಸೆದ ಕೇರಳಿಗ; ಆತ ಕೊಟ್ಟ ಕಾರಣ ಏನು?
ತಮಿಳು ನಟ ವಿಜಯ್ ಇದೀಗ ರಾಜಕೀಯರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ತಮಿಳಗ ವೆಟ್ರಿ ಕಳಗಂ ಹೆಸರಿನ ಪ್ರಾದೇಶಿಕ ಪಕ್ಷ ಸ್ಥಾಪಿಸಿದ್ದಾರೆ. 'ಜನ ನಾಯಗನ್' ಕೊನೆಯ ಸಿನಿಮಾ. ಆ ಬಳಿಕ ಚಿತ್ರರಂಗದಿಂದ ದೂರಾಗುತ್ತದೆ ಎಂದು ಹೇಳಲಾಗುತ್ತಿದೆ. ಇದೆಲ್ಲದರ ನಡುವೆ ದಳಪತಿ ನಿವಾಸದ ಮೇಲೆ ಕಿಡಿಗೇಡಿಯೊಬ್ಬ ಚಪ್ಪಲಿ ಎಸೆದ ಘಟನೆ ವರದಿಯಾಗಿದೆ.
ಫೆಬ್ರವರಿ 26ರಂದು ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷದ ದಲ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಚೆನ್ನೈ ಮಹಾಬಲಿಪುರಂ ಬಳಿ ಇರುವ ರೆಸಾರ್ಟ್‌ವೊಂದರಲ್ಲಿ ಕಾರ್ಯಕ್ರಮ ನಡೆಯಿತು. ಸಾವಿರಾರು ಜನ ಈ ಸಭೆಯಲ್ಲಿ ಭಾಗಿ ಆಗಿದ್ದರು. ಅತ್ತ ಟಿವಿಕೆ ಪಕ್ಷದ ಸಭೆ ನಡೆಯುತ್ತಿದ್ದರೆ ಅಭಿಮಾನಿಗಳು ಟಿವಿಯಲ್ಲಿ ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಇತ್ತ ಯುವಕನೊಬ್ಬ ನಟ ವಿಜಯ್ ಮನೆಗೆ ಚಪ್ಪಲಿ ಎಸೆದ ಘಟನೆ ನಡೆದಿದೆ.

ಚೆನ್ನೈನ ನೀಲಂಕರೈನಲ್ಲಿರುವ ವಿಜಯ್ ನಿವಾಸದ ಮೇಲೆ ಕಿಡಿಗೇಟಿ ಚಪ್ಪಲಿ ಎಸೆದಿದ್ದು ಈ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ತಂತಿ ಟಿವಿ ವರದಿ ಪ್ರಕಾರ ಬುಧವಾರ ಬೆಳಗ್ಗೆ ವ್ಯಕ್ತಿಯೊಬ್ಬ ವಿಜಯ್ ನಿವಾಸದ ಗೇಟಿನ ಒಳಕ್ಕೆ ಚಪ್ಪಲಿ ಎಸೆದಿದ್ದಾನೆ. ಆತ ಮಾನಸಿಕ ಅಸ್ವಸ್ಥ ಇರಬಹುದು ಎಂದು ಮನೆಯ ಸೆಕ್ಯುರಿಟಿ ಹೇಳಿದ್ದಾರೆ. ಅದು ಮಗುವಿನ ಚಪ್ಪಲಿ ಎಂದು ಗೊತ್ತಾಗಿದೆ.
ಆತ ಚಪ್ಪಲಿ ಎಸೆದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಳಿಕ ಆ ವ್ಯಕ್ತಿ ಮಾಧ್ಯಮಗಳ ಜೊತೆ ಮಾತನಾಡಿದ್ದಾನೆ. "ನನ್ನ ಹೆಸರು ಮಣಿ, ಊರು ಕೇರಳದ ಮಲಪ್ಪುರಂ. ನಾನು ಎಲ್ಲರ ಗಮನ ಸೆಳೆಯಲು ಹೀಗೆ ಮಾಡಿದೆ. ತಮಿಳುನಾಡಿನಲ್ಲಿ ಸಾಕಷ್ಟು ಮಕ್ಕಳು ಚಪ್ಪಲಿ ಇಲ್ಲದೇ ಓಡಾಡುತ್ತಾರೆ. ಅದರ ಬಗ್ಗೆ ಎಲ್ಲರಿಗೂ ಗೊತ್ತಾಗಬೇಕು ಎನ್ನುವ ಕಾರಣಕ್ಕೆ ಚಪ್ಪಲಿ ಎಸೆದೆ" ಎಂದಿದ್ದಾನೆ.
ಪದೇ ಪದೇ ವಿಜಯ್ ಸಿನಿಮಾ ಹಾಡುಗಳು, ಡೈಲಾಗ್ ಅನ್ನು ಆತ ಹೇಳುತ್ತಿದ್ದ. ಮಣಿ ವಿಜಯ್ ಅಭಿಮಾನಿ ಆಗಿರಬಹುದು. ಸ್ವಲ್ಪ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವಂತೆ ಕಾಣುತ್ತಿದೆ. ಪೊಲೀಸರು ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಮತ್ತೊಂದು ಕಡೆ ಮುಂದಿನ ವರ್ಷ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ವಿಜಯ್ ಸಿದ್ಧತೆ ನಡೆಸಿದ್ದಾರೆ. ತಮಿಳುನಾಡಿನ ಎಲ್ಲಾ ಕ್ಷೇತ್ರಗಳಿಂದ ತಮ್ಮ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ದಳಪತಿ ಮುಂದಾಗಿದ್ದಾರೆ. ಅದಕ್ಕೂ ಮುನ್ನ ಪಕ್ಷ ಸಂಘಟನೆ ಮಾಡಲು ಹೊರಟಿದ್ದಾರೆ. ಶೀಘ್ರದಲ್ಲೇ ಪಾದಯಾತ್ರೆ ನಡೆಸಿ ತಮ್ಮ ಪಕ್ಷವನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಲೆಕ್ಕಾಚಾರದಲ್ಲಿದ್ದಾರೆ.
ಇನ್ನು ತಮಿಳಗ ವೆಟ್ರಿ ಕಳಗಂ ಪಕ್ಷದ ವಾರ್ಷಿಕೋತ್ಸವ ಸಮಾರಂಭದಕ್ಕೆ ಚುನಾವಣಾ ನಿಪುಣ ಪ್ರಶಾಂತ್ ಕಿಶೋರ್ ಹಾಜರಾಗಿದ್ದರು. ದಳಪತಿ ವಿಜಯ್ ಜೊತೆ ವೇದಿಕೆ ಹಂಚಿಕೊಂಡಿದ್ದರು. ಹೇಗಾದರೂ ಮಾಡಿ ಈ ಬಾರಿ ತಮಿಳುನಾಡು ರಾಜಕೀಯರಂಗದಲ್ಲಿ ಕ್ರಾಂತಿ ಮಾಡಬೇಕು ಎಂದು ವಿಜಯ್ ಮನಸ್ಸು ಮಾಡಿದ್ದಾರೆ. ಅದಕ್ಕಾಗಿ ಪ್ರಶಾಂತ್ ಕಿಶೋರ್ ಸಹಾಯ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ.
ವಿನೋದ್ ನಿರ್ದೇಶನದ 'ಜನ ನಾಯಗನ್' ಚಿತ್ರದಲ್ಲಿ ವಿಜಯ್ ನಟಿಸುತ್ತಿದ್ದಾರೆ. ಇದೇ ಅವರ ಕೊನೆಯ ಸಿನಿಮಾ ಎನ್ನಲಾಗ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರವನ್ನು ವಿಜಯ್ ತಮ್ಮ ಪೊಲಿಟಿಕಲ್ ಎಂಟ್ರಿಗೆ ಬಳಿಸಿಕೊಳ್ಳುತ್ತಿದ್ದಾರೆ. ಪೂಜಾ ಹೆಗ್ಡೆ, ಪ್ರಿಯಾಮಣಿ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ದಳಪತಿ ವಿಜಯ್ ಅಂದಾಜು 250 ಕೋಟಿ ರೂ, ಸಂಭಾವನೆ ಪಡೆಯುತ್ತಾರೆ ಎನ್ನಲಾಗ್ತಿದೆ. ಈ ವರ್ಷವೇ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.


Click it and Unblock the Notifications











